ಕಾವ್ಯ ಸಂಗಾತಿ
ಎ. ಹೇಮಗಂಗಾ
ತನಗಗಳು

ಮರೆಯಾಗಿ ಹೋದೆಯಾ
ವೃಕ್ಷ ಮಾತೆ ತಿಮ್ಮಕ್ಕ
ಮರುಜನ್ಮದಲೂ ನೀ
ಇಲ್ಲೇ ಹುಟ್ಟಬೇಕಕ್ಕ
ನೆಟ್ಟ ಮರಗಳೆಷ್ಟೋ
ಲೆಕ್ಕವಿಡಲೇ ಇಲ್ಲ
ಪಟ್ಟ ಶ್ರಮವು ಎಷ್ಟೋ
ಮಾಯಿ ತೋರಲೇ ಇಲ್ಲ
ನೊಸಲಲಿ ವಿಭೂತಿ
ಕಾಸಗಲ ಕುಂಕುಮ
ಕಳೆ ತುಂಬಿದ ಮುಖ
ಅವಳೆಮ್ಮ ತಿಮ್ಮಕ್ಕ
ಬೆವರನ್ನು ಬಸಿದು
ನೀರ ಉಣಿಸಿದಳು
ಮಗುವಂತೆ ಕಾಪಿಟ್ಟು
ಮರ ಬೆಳೆಸಿದಳು
ಆಕಾಶದೆತ್ತರಕೆ
ಚಾಚಿವೆ ಕೊಂಬೆಗಳು
ಎಲ್ಲವೂ ಆ ತಾಯಿಯ
ಶ್ರಮದ ಫಲಗಳು
ಈ ಧರೆ ಮರೆಯದು
ತಿಮ್ಮಕ್ಕಳ ಕೊಡುಗೆ
ಗೂಡು ಕಟ್ಟಿದ ಹಕ್ಕಿ
ಋಣಿಯು ಆ ಕಾಡಿಗೆ
ರಸ್ತೆ ಇಕ್ಕೆಲದಲ್ಲೂ
ಹಸಿರು ಮರಗಳು
ಪೋಷಿಸಿದವಳಿಗೆ
ಅವುಗಳೇ ಮಕ್ಕಳು
ಸಂತತಿ ಇಲ್ಲವೆಂದು
ಸತತ ನೋಯಲಿಲ್ಲ
ತರುವಿನಾರೈಕೆಯ
ಎಂದೂ ನಿಲ್ಲಿಸಲಿಲ್ಲ
ತಿಮ್ಮಕ್ಕ ಹೆರದೇ ತಾ
ಆಗಿಹಳು ಜನನಿ
ಹಸಿರ ಸಿರಿಯಿಂದ
ತುಂಬಿಹಳು ಅವನಿ
ಸಂತಾನಹೀನತೆಯು
ಕೊರೆ ಎನಿಸಲಿಲ್ಲ
ಸಸಿಗಳ ಪೋಷಣೆ
ಹೊರೆ ಎನಿಸಲಿಲ್ಲ
ಬುವಿಯ ಬಸಿರಲ್ಲಿ
ಸಸಿಗಳ ನೆಟ್ಟಳು
ಬೆಳೆಸಿ ಮರಗಳ
ಮಹಾಮಾತೆ ಆದಳು
ತರುಗಳೇ ಮಕ್ಕಳು
ತಾಯಿ ತಿಮ್ಮಕ್ಕನಿಗೆ
ಶ್ರೇಷ್ಠ ಕೊಡುಗೆಯದು
ನಮನ ಅವಳಿಗೆ
ವೃಕ್ಷಗಳ ಮಾತೆಗೆ
ಇರಲಿಲ್ಲ ಸಂತತಿ
ಮರಗಳೇ ಆದವು
ಅವಳಿಗೆ ಸಂಗಾತಿ
‘ ಹಸಿರೇ ಉಸಿರೆಂ’ದು
ಆದೆ ನೀ ಮಹಾತಾಯಿ
ನಿನ್ನ ಹೆಸರು ಎಂದೂ
ಎಂದೆಂದೂ ಚಿರಸ್ಥಾಯಿ

ಎ. ಹೇಮಗಂಗಾ




ಸಾಂದರ್ಭಿಕ, ಅರ್ಥಪೂರ್ಣ
– ವಿಜಯ ಅಮೃತರಾಜ್