ಶರಣ ಸಂಗಾತಿ
ʼಸಾವಿಲ್ಲದ ಶರಣರುʼ
ಕನ್ನಡದ ಕುಲುಗುರು
ಪ್ರೊ ಶಿ ಶಿ ಬಸವನಾಳರು-
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ ವಿದ್ಯಾಲಯದ ಕಾರಣಿ ಪುರುಷ ಹೀಗೆ ಹೇಳುತ್ತಾ ಹೋದರೆ ಪ್ರೊ ಬಸವನಾಳರು ಮತ್ತು ಅವರ ಕೊಡುಗೆ ಬಗ್ಗೆ ಸುದೀರ್ಘ ಅಧ್ಯಯನ ಸಂಶೋಧನೆ ಅತ್ಯಗತ್ಯ ಬದುಕಿದ್ದ 58 ವರ್ಷ ವಯಸ್ಸಿನಲ್ಲಿ ವಚನ ಸಾಹಿತ್ಯ ಮತ್ತು ಲಿಂಗಾಯತ ಧಾರ್ಮ ದರ್ಶನದ ಗಂಭೀರ ಅಧ್ಯಯನಕ್ಕೆ ಚಾಲನೆ ನೀಡಿದರು .
ಹಳಕಟ್ಟಿ ಅವರು ಹಾಕಿದ ಭದ್ರ ಬುನಾದಿಗೆ ಕಳಶವಿತ್ತರು ಪ್ರೊ ಬಸವನಾಳರು. ವಚನಗಳು ಗದ್ಯವೂ ಹೌದು ಪದ್ಯವು ಹೌದು ಎಂದು ಪದ್ಯಗಳ ರೂಪದಲ್ಲಿ ಸಂಪಾದಿಸಿದ ಹೆಗ್ಗಳಿಕೆ ಪ್ರೊ ಶಿ ಶಿ ಬಸವನಾಳರಿಗೆ ಸಲ್ಲಬೇಕು.
*ಜನನ ಮತ್ತು ಶಿಕ್ಷಣ
ಎಸ್.ಎಸ್.ಬಸವನಾಳ ಅಂದರೆ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ೧೮೯೩ ನವೆಂಬರ ೭ ರಂದು ಹಾವೇರಿಯಲ್ಲಿ ಜನಿಸಿದರು. ಇವರ ತಂದೆ ರೇಲ್ವೆ ಸ್ಟೇಶನ್ ಮಾಸ್ತರ ಆಗಿದ್ದು ಬಳ್ಳಾರಿಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರ ಪ್ರಾಥಮಿಕ ವಿದ್ಯಾಭ್ಯಾಸ ತೆಲುಗು ಮಾಧ್ಯಮದಲ್ಲಿ ಆಯಿತು. ಗದಗ ಮತ್ತು ಧಾರವಾಡಗಳಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ಅಭ್ಯಸಿಸಿ, ಕ್ರಿ.ಶ.೧೯೧೪ರಲ್ಲಿ ಬಿ.ಏ. ಪದವಿ ಪಡೆದರು.ಇದೆ ವರ್ಷ ಇವರ ತಂದೆ ಹಾಗು ತಾಯಿ ನಿಧನರಾದರು. ಧೃತಿಗೆಡದ ಬಸವನಾಳರು ಮುಂಬಯಿಯಲ್ಲಿ ‘ವೀರಶೈವ ಆಶ್ರಮ’ದಲ್ಲಿಇದ್ದುಕೊಂಡು ೧೯೧೬ರಲ್ಲಿ ಎಮ್.ಏ.ಪದವಿ ಪಡೆದರು.
*ಶಿಕ್ಷಣ ಪ್ರಸಾರ ಹಾಗು ಉದ್ಯೋಗ*
ಶಿಕ್ಷಣಪ್ರಸಾರದಲ್ಲಿ ಆಸಕ್ತರಾದ ಬಸವನಾಳರು ಉತ್ಸಾಹಿ ಮಿತ್ರರ ಜೊತೆಗೂಡಿ ೧೯೧೬ ಅಕ್ಟೋಬರ ೧೧ ರಂದು ಬೆಳಗಾವಿಯಲ್ಲಿ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸಾಯಿಟಿಯನ್ನು ಸ್ಥಾಪಿಸಿದರು. ಅದರ ಅಂಗವಾಗಿ ೧೯೧೬ ನವೆಂಬರ ೧೧ ರಂದು ಗಿಲಗಂಚಿ-ಅರಟಾಳ ಹೈಸ್ಕೂಲನ್ನು ಸ್ಥಾಪಿಸಿದರು. ಸಂಸ್ಥೆಯ ಸ್ಥಾಪನೆಗೆ ನೆರವು ನೀಡಿದ ರಾವಬಹಾದ್ದೂರ ಆರ್.ಸಿ.ಅರಟಾಳ ಮತ್ತು ರಾವಬಹಾದ್ದೂರ ಗಿಲಗಂಚಿಯವರ ಸಂಯುಕ್ತ ಹೆಸರನ್ನೆ ಈ ಹೈಸ್ಕೂಲಿಗೆ ಇಡಲಾಗಿದೆ. ಬಸವನಾಳರು ಸೊಲ್ಲಾಪುರ,ಅಕ್ಕಲಕೋಟೆ, ಮಂಗ್ರೋಳಿ ಹಾಗು ಬಾರ್ಸಿಗಳಲ್ಲಿ ಸಹ ಕನ್ನಡ ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿದರು.( ಬೆಳಗಾವಿ, ಸೊಲ್ಲಾಪುರ ಮೊದಲಾದ ಈ ಎಲ್ಲ ಊರುಗಳು ಆಗ ಮುಂಬಯಿ ಪ್ರಾಂತದಲ್ಲಿದ್ದವು).ಬೆಳಗಾವಿಯ ಹೈಸ್ಕೂಲಿನಲ್ಲಿ ಹಾಗು ಲಿಂಗರಾಜ ಕಾಲೇಜಿನಲ್ಲಿ ಬಸವನಾಳರು ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಬಸವನಾಳರು ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಕಾರಿ ಮಂಡಳದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗು ಕಾರ್ಯಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ೧೯೩೦ರಲ್ಲಿ ಈ ಸಂಸ್ಥೆಯ ಅಂಗವಾಗಿ ‘ಸಾಹಿತ್ಯ ಸಮಿತಿ’ಯನ್ನು ಪ್ರಾರಂಭಿಸಿ, ಅದರ ಕಾರ್ಯಾಧ್ಯಕ್ಷರಾಗಿ ಅನೇಕ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
೧೯೨೩ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾದರು. ಈ ಸಂಸ್ಥೆಯ ಪರವಾಗಿ ಬಸವನಾಳರು ನಾಗವರ್ಮನ ಕಾವ್ಯಾವಲೋಕನ ಹಾಗು ಭಟ್ಟಾಕಲಂಕದೇವನ ಶಬ್ದಾನುಶಾಸನ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು.
೧೯೨೯ ರಿಂದ ೧೯೩೮ ರವರೆಗೆ ಬಸವನಾಳರು ಮುಂಬಯಿ ವಿಶ್ವವಿದ್ಯಾಲಯದ ಫೆಲೊ ಆಗಿದ್ದರು. ಅಲ್ಲದೆ ಸುಮಾರು ೨೦ ವರ್ಷ ಕಾಲ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ.
೧೯೧೮ ರಿಂದ ೧೯೨೭ ರವರೆಗೆ ಬೆಳಗಾವಿಯಲ್ಲಿ ಪ್ರಬೋಧ ಎಂಬ ಮಾಸಿಕವನ್ನು ನಡೆಯಿಸಿದರು. ಧಾರವಾಡದ ಜಯಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿ ಸಹ ಬಸವನಾಳರು ಸೇವೆ ಸಲ್ಲಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿಯೂ ಸಹ ಬಸವನಾಳರು ತಮ್ಮ ಕಾಣಿಕೆ ನೀಡಿದ್ದಾರೆ. ಧಾರವಾಡದ ಕರ್ನಾಟಕ ಸೆಂಟ್ರಲ್ ಕೊಆಪರೇಟಿವ್ ಬ್ಯಾಂಕ ಇದರ ಪ್ರಥಮ ಮ್ಯಾನೇಜಿಂಗ ಡೈರೆಕ್ಟರ್ ಆಗಿದ್ದರು.
ಬಸವನಾಳಾಗಿ ದುಡಿದ ಬಸವನಾಳರು ಕನ್ನಡವ ಕಟ್ಟಿದ ಧೀಮಂತ ಯೋಧರು ಅಪ್ಪಟ ಬಸವ ಭಕ್ತರು
ಡಾ ಶಶಿಕಾಂತ ಪಟ್ಟಣ ರಾಮದುರ್ಗ





ಇಂತಹ ಶ್ರೇಷ್ಠ ವ್ಯಕ್ತಿಗಳ ಪರಿಚಯ ಮಾಡುವ ಮೂಲಕ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರು ವಿಶಿಷ್ಟ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ
ಅವತ್ತು ಪ್ರಾಮಾಣಿಕವಾಗಿ ದುಡಿದು ಕೆ ಎಲ್ ಇ ಸಂಸ್ಥೆ ಇಂದು ಜಗತ್ತಿನ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿದೆ
ಪ್ರೊ ಎಸ್ ಎಸ್ ಬಸವನಾಳ ಅವರ ಜೀವನ ಸಾಧನೆಯ ಸಾರ್ಥಕತೆ ಯಶೋಗಾಥೆ ಅಪಾರವಾಗಿದೆ
ಅಂದು KLE ಸಂಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದರು. ಅವರ ಅಮೂಲ್ಯ ಸೇವೆಯನ್ನು ಪರಿಚಯಿಸಿದಕ್ಕೆ ಡಾಕ್ಟರ್ ಶಶಿಕಾಂತ ಪಟ್ಟಣ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಾವಿಲ್ಲದ ಶರಣರು ಮಾಲಿಕೆಯ ಮೂಲಕ ನಾವೆಲ್ಲರೂ ಹಲವಾರು ವಿಶಿಷ್ಟ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುವ ಹಾಗಾಯ್ತು. ನಮ್ಮ ನಾಡು – ನುಡಿಯ ಎಷ್ಟೊಂದು ವಿಷಯಗಳು ನಮಗೆ ಗೊತ್ತಿರುವುದಿಲ್ಲ. ನೀವು ಬರೆಯುತ್ತಿರುವ ಈ ಅಂಕಣ ಮಾಲೆ ಬಹಳಷ್ಟು ಜನರಿಗೆ ಉಪಯೋಗವಾಗಿದೆ ಮತ್ತು ಇದೊಂದು ಅತ್ಯುತ್ತಮವಾದ ಕಾರ್ಯ.
ಸುಧಾ ಪಾಟೀಲ್
ಬೆಳಗಾವಿ
ನಿಜಕ್ಕೂ ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರು
ಪ್ರೊ ಎಸ್ ಎಸ್ ಬಸವನಾಳ ಅವರ ಸಮಗ್ರ ಜೀವನ ಚರಿತ್ರೆ ಬರೆದು ಪ್ರಕಟ ಮಾಡಿದ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಇವರಿಗೆ ಅನಂತ ಧನ್ಯವಾದಗಳು
ನಿಮ್ಮ ಅಧ್ಯಯನದ ತುಡಿತ ನಮಗೆಲ್ಲ ಮಾದರಿ ಸರ್
ಸಾವಿಲ್ಲದ ಶರಣರ ಮಾಲಿಕೆಯಲ್ಲಿ,ಶರಣರ ಮಾನವೀಯ ಮೌಲ್ಯಗಳನ್ನು ಎಷ್ಟು ಸೊಗಸಾಗಿ ಬಿತ್ತುತ್ತಿದ್ದೀರಿ..ನಿಜಕ್ಕೂ ಇಂಥ ಶರಣರ ತತ್ವಗಳು,ಆದರ್ಶ ,ಜೀವನ ಚರಿತ್ರೆ ಬದುಕಿಗೆ ಪ್ರೇರಣೆ.. ತಮಗೆ ಅನಂತ ವಂದನೆಗಳು ಸರ್
“ಬಸವನಾಳಾಗಿ ದುಡಿದ ಬಸವನಾಳರು”, ಬಹಳ ಸುಂದರ ಉಪಮೆ