ಗಜಲ್ ಸಂಗಾತಿ
ವಾಣಿ ಯಡಹಳ್ಳಿಮಠ

ಗಜಲ್
(ಅರುಣಾ ಮೇಡಂ ಅವರ ಗಜಲೊಂದರಿಂದ ಪ್ರೇರಿತ)
ಪ್ರೀತಿಯ ಬಗ್ಗೆ ಕವಿತೆ ಬರೆಯುವುದ ಬಿಟ್ಟಿದ್ದೇನೆ
ಅವನೊಳಗಿಲ್ಲದ ಭಾವ ಕೊರೆಯುವುದ ಬಿಟ್ಟಿದ್ದೇನೆ
ಕಲ್ಲೆದೆಯ ಜಗವಿದು ಕಣ್ಣೀರ ಕಡಲಿಂದ ಕರಗೀತೇ
ಮೊಗೆ ಮೊಗೆದು ಮೊಹಬ್ಬತ್ತನು ಎರೆಯುವುದ ಬಿಟ್ಟಿದ್ದೇನೆ
ಭಾವನೆಗಳು ನೆಲೆಕಾಣದೆ ನೇಣಿಗೇರಿದವೋ ಏನೋ
ತರ್ಕಿಸುವವರೆದುರು ಪ್ರೇಮಕ್ಕಾಗಿ ಪೊರೆಯುವುದ ಬಿಟ್ಟಿದ್ದೇನೆ
ಬಂಜರಾಗಿರಬೇಕು ಅವನೆದೆಯ ಗೂಡು ಸಖಿ
ನೇಹದ ನೀರಿಗಾಗಿ ಹಾತೊರೆಯುವುದ ಬಿಟ್ಟಿದ್ದೇನೆ
ಖಾಲಿಯಾಯಿತು ವಾಣಿಯೊಳಗಿನ ಪ್ರೇಮಾಮೃತವೀಗ
ನಿನ್ನ ಖಯಾಲಿಗೂ ನಾನೀಗ ದೊರೆಯುವುದ ಬಿಟ್ಟಿದ್ದೇನೆ
—————————————-
ವಾಣಿ ಯಡಹಳ್ಳಿಮಠ




