ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಂದೂ ಇಲ್ದ ಮಳಿ ಈ ವರ್ಷ ನಮ್ಮ ಕಲ್ಯಾಣದ ಕಡಿ ಒಂದೇ ಸಮ ಬಡಿಲತದ. ಎಲ್ಲಾ ಕಡಿ ರಸ್ತೆಗಳು ಬಂದ್ ಆಗಿ್ಬಿಟ್ಟಾವ. ಹೋಲಗಳದಾಗ ಎಲ್ಲಾ ಪಾದ ಮುಳುಗೋ ಅಷ್ಟು ನೀರು ನಿಂತು ಉದ್ದು ಹೆಸರು ಹತ್ತಿ ಸೋಯಾ ಎಲ್ಲಾ ನೀರಪಾಲ ಆಗೀ ಹೋದ್ವು.

ಇಂತಾ ರಣ ಮಳಿದಾಗ ದಸರಿ ಹಬ್ಬ ಒಂದು , ನಮ್ಮ ಕಲ್ಯಾಣ ಭಾಗದಾಗ ಮತ್ತ ಮಹಾರಾಷ್ಟ್ರದ ಕಡಿ ದಸರಿ ಹಬ್ಬ ಅಂದ್ರ ಒಂದು ರೀತಿ ಹೆಣ್ಣಮಕ್ಕಳಿಗಿ ಮೈಯಾಗ ದೇವ್ರೋ ಇಲ್ಲ ದೆವ್ವನೋ ಹೊಕ್ಕಂಗ ಒಂದೇ ಸಮ ಧಾವಂತ. ಮಡಿ ಮಡಿ ಅಂತ ಮನ್ಯಾಗ ಒಗದ ಇಟ್ಟ ಬಟ್ಟಿ ಎಲ್ಲಾ ಮತ್ತ ಒಗದ ಮಡಿ ಅಂತ ಮಾಡತಾರ.

ಒಂದು ಕಡಿ ಮಳಿ , ಸೂರ್ಯ ಅಂತೂ ಮಾರಿನೇ ತೋರಸ್ತಿಲ್ಲ , ದೇವರ ಕೂಡಸೋ ದಿನ ಸನಿ ಬರಲತಿದ್ವು , ಮಳಿ ಅಂತೋ ಬಿಡೊ ಮಾತೆ ಇಲ್ಲ. ಮುಂಜಾನಿ ಸ್ವಲ್ಪ ಉಗಾಡ ಅದ ಅಂತ ಮನ್ಯಗಿನ ಹಾಸಿಗಿ ಹಚ್ಚಗಿ ಎಲ್ಲಾ ತಂದು ರಪ ರಪ ಓಗದು ಮಾಳಗಿ ಮ್ಯಾಲ ಒಯ್ದು ಹಾಕಿ ಹೀಂಗ್ ಕೆಳಗ ಬರೊದರಾಗ ಹಿಂದ ಮಳಿ ಬಡಿಲಕ ಶುರು. ಮತ್ತ ಮಾಳ್ಗಿ ಮ್ಯಾಲ ದೌಡ. ಎಲ್ಲಾ ಅರಿವಿ ತಂದು ಮತ್ತ ಮನ್ಯಾಗ ಅಲ್ಲಿ ಇಲ್ಲಿ ಒಣಗಸಲಕ ಹಾಕೋದು. ಹಸಿ ಅರವಿಗಳು ಒಣಗಲಾರದ ಮನಿ ಎಲ್ಲಾ ಒಂದು ನಮೂನಿ ಇಲಿ ಸತ್ತ ವಾಸನಿ , ಮತ್ತ ಅರವಿಗಳದಾಗೆಲ್ಲ ಕಮುಟ ಘಾಣ.

ಅಲ್ಲ , ಚಂದ ಒಗದು ಬಿಸಲಿಗಿ ಒಣಗಿಸಿ ಇಟ್ಟ ಅರವಿಗಳೆಲ್ಲ ಮಡಿ ಮಡಿ ಅಂತ ಮಳಿದಾಗ ಒಗದು ಅವು ಒಣಗಲಾರದ ಸತ್ತ ಹೆಣದ ವಾಸನಿ ಹೊಡೆಯೋದಕ್ಕ ಮಡಿ ಮಾಡೊದು ಅಂದ್ರ… ಆದ್ರೂ ನಮ್ಮ ಹೆಂಗಸ್ರು ಮಳಿದಾಗೆ ಒಗೇದು , ಮನಿ ಸ್ವಚ್ಚ ಮಾಡ್ಕೋಳ್ಳೊದು ಮಾಡುದ್ರೂ ನೋಡ್ರಿ , ವರ್ಷಿಗೊಮ್ಮ ದಸರ ಹಬ್ಬದ ನೆವದಾಗ ನಮ್ಮ ಕಡಿ ಬಾಳ ಮಂದಿ ಮನಿ ಸ್ವಚ್ಛ ಮಾಡತಾರ. ಸುಣ್ಣ ಬಣ್ಣ ಮಾಡಿ ಮನಿ ಎಲ್ಲ ಥಳ ಥಳ ಅಂತ ಮಾಡೋದು ಒಳ್ಳೆದೇ , ಆದ್ರ ಇದ್ರ ಜೋಡಿ ಈ ಹಬ್ಬದ ಮಡಿ ಮೈಲಿಗಿ ಅಂತ ಮಾಡ್ತಾರಲ್ಲ ಅವರ ಪಾಡು ಕೇಳಬ್ಯಾಡ್ರೀ.

ಎಂಟು ದಿನಗಳಿಂದ ನೋಡಲತಿನಿ ನಮ್ಮ ಬಾಜು ಮನಿ ಅಕ್ಜೋರು ಮಾಳಗಿ ಮ್ಯಾಲೆ ಹರಾ. ಮನ್ಯಾಗಿನ ಒಂದು ಅರವಿ ಬಿಡದಂಗ ಚಿಂದಿ ಗೊಂದಿ ಎಲ್ಲಾ ನೀರಾಗ ಎದ್ದದೂ ಒಣಗಾಕಾದು. ಅವರು ಮಾಳಗಿ ಮ್ಯಾಲ ಮಳಿದಾಗ ತೊಯದು , ಬಿಸಲಿಗಿ ಒಣಗೊದು ನೋಡಿ ನೋಡಿ  ನನಗ ಸಾಕಾಯ್ತು. ಯಾರಿಗಿ ಏನ್ ಹೇಳದ್ರೂ ಉಪಯೋಗ ಇಲ್ಲ ಅಂತ ಗೊತ್ತಾಗ್ಯಾದ ನನಗ. ಅದ್ರಾಗಂತೂ ಈ ಪೂಜಾ ಪಾಠದ ಬಗ್ಗೆ ಅಂತೂ ನಾನು ಗಪ್ ಚುಪ್ ಇರತಿನಿ. ಹಿಂಗಲ್ ಹೀಂಗ ಅಂತ ಯಾರಿಗರ ಹೇಳಕ್ಕ ಹೋದ್ರ ನನಗ ಬ್ಯಾರೆ ಲೋಕದ ಜೀವಿಗಿ ನೋಡ್ದಂಗ ನೋಡತಾರ.

ಆದ್ರೂ ಅಕ್ಕೋರು ಇಷ್ಟ ಕಷ್ಟ ಪಡೊದನ್ನ ನೋಡಲಾರದೆ. ಅಕ್ಕೋರೇ ಯಾಕಿಷ್ಟು ಹೈರಾಣ ಆಗಲತಿರಿ. ಮೊದಲೇ ನಿಮಗ ಥಂಡಿ ಆಗಲ್ಲ , ಇಂತಾ ಮಳಿದಾಗ ಒಗ್ಯಾದಂದ್ರ ಸುಮ್ನ ಎನು….ಎಲ್ಲಾ ಅರವಿ ನೀರಾಗ ಹಾಕೊದಂದ್ರ ಎಷ್ಟ ಹೈರಾಣ. ಚಂದ ಒಣಗಿಸಿ ಇಸ್ತ್ರಿ ಮಾಡಿದ ಅರವಿಗಳೆಲ್ಲ ತಂದು ತೋಯಸಲತಿರಿ..ಹೊಲಸಾಗಿದ್ದ ಬಟ್ಟಿ ಒಗೇದು ಬ್ಯಾರೆ , ಸ್ವಚ್ಚರ ಆಗತಾವ . ಸ್ವಚ್ಚ ಇದ್ದ ಬಟ್ಟಿ ಎಲ್ಲ ಮತ್ತ ಮತ್ತ ಒಗದು ಸುಮ್ನ ಹೈರಾಣ ಆಗಲತೀರಲ್ಲ , ನಿಮಗ ಚಂದ ಅನಸಲ್ಲ ಅಂದ್ರ ಒಂದು ಒಂಬತ್ತ ದಿನ ಹೋಸ ಬಟ್ಟಿ ಹಾಕ್ಕೊಂಡು ಪೂಜಾ ಮಾಡ್ರಿ , ಅಂದ.

ಐ , ಹಾಂಗಹ್ಯಾಂಗ್ ಆಗ್ತದರ್ರೀ , ತಾಯಿ (ದೇವಿ) ಕೆಂಢದಂಗ ಹಳಾ.ಎಷ್ಟು ಮಡಿ ಮಾಡ್ದರೂ ಕಮ್ಮೀನೇ ಅದ. ನೀವು ಅದೆಲ್ಲ ಮಾಡಲ್ಲ , ನಿಮಗ ಗೊತ್ತಿಲ್ಲ. ಈ ದಸರಿ ಹಬ್ಬ ಅಂದ್ರ ಸುಮ್ನ ಅಂದೀರೇನು.. ಒಂದೀಡು ಚುಕ್ಕ ಆದ್ರ ಬೆಂಕಿ ಹಂಥಕಿ ತಾಯಿ ಸುಮ್ನ ಇರತಾಳೆನು.ಅಂತ ಗಲ್ಲ ಗಲ್ಲ ಬಡಕೊಂಡ್ರು.

ಈ ಹಬ್ಬದಾಗ ಸೋಸಿ ಬ್ಯಾರೆ ಹೊರಗಾಗ್ಯಾಳ , ನಾ ಒಬ್ಬಕಿನೆ ಸಾಯಲತೀನಿ.ನನಗೂ ವಾತ ಅದ.ಸಂಜಿತನ ನೀರಾಗ ಕೈಯಾಡ್ಸಿ ರಾತ್ರಿ ಕೈ ಕಾಲೆಲ್ಲ ವಂಕ್ ಆಗಲತಾವ.ದೀನಾ ಒಂದು ಝಂಡುಬಾಮ್ ಸೀಸಿ ಸಾಕಾಗಲ ಹೋಗ್ಯಾದ. ಈ ಹಬ್ಬ ಯಾಕಾರ ಬರತಾವೋ ನಮ್ಮ ಜೀವಾ ತಿನ್ನಲಕ್ಕ ಅಂತ ಒಟ ಒಟ ಅನ್ನಕೊಂತ ಒಣಗಾಕಿದ ಬಟ್ಟಿಗೋಳ ಕೆಳಗ ಮ್ಯಾಲ್ ಮಾಡಕೋತಾ..

ನೀವು ಒಗ್ಯಾದು ಮಾಡಿಲ್ಲ..ನೀವು ದೇವರು ಕೂಡಸಲ್ಲ , ಅದಕ್ಕ ನಿಮಗ ಮಡಿ ಮೈಲಿಗಿ ಗೊತ್ತಿಲ್ಲ.  ಅಂದ್ರೂ ನನ್ನ ಕಡಿ ಒಂದು ನಮೂನಿ ನೊಡ್ಕೋಂತ..

ಯಾಕ ಒಗೆಲ್ಲ..ದಿನದ ಬಟ್ಟಿ ದೀನಾ ಒಗೀತೀವಿ. .ಹತ್ತ ಹದಿನೈದು ದಿನಕೊಮ್ಮ ಬೆಡಶಿಟ್ ಗಳೆಲ್ಲಾ ಒಗಿತಿರತೀವಿ. ದಿನಾ ಮನಿ ಸ್ವಚ್ಚ ಮಾಡತಿವಿ ,  ನಿಮ್ಮಂಗ ಒಗದಿದ್ದೆಲ್ಲ ಮಳ್ಯಾಗ ಒಗ್ದು ಮಡಿ ಗಿಡಿ ಮಾಡಲ್ಲ..ಅಂದೆ..ಅಕ್ಕೊರು ನನ್ನ ಕಡಿ ನೋಡಿ ಮತ್ತ ಬಟ್ಟಿಗಳದಾಗ ಮುಳಗಿ ಹೋದ್ರು.

ದೇವಿ ಸ್ಥಾಪನೆ ಅಂತ ಹೊಲದ ಮಣ್ಣು ತಂದು ಅದರಲ್ಲಿ ಒಂಬತ್ತು ನಮೂನೆ ಧಾನ್ಯ ಗಳು ಹಾಕಿ ಅದರಲ್ಲಿ ಒಂದು ದೀಪ ಹಚ್ಚಿಟ್ಟು ಒಂಬತ್ತು ದಿನ ಅದು ಆರದಂಗ ನಿಗರಾನಿ ಮಾಡತಾರ.ಒಂಬತ್ತು ದಿನ ದಿನಾ ನೀರ ಹಾಕೊದರಿಂದ ಸಸಿಗಳು ಚಂದ ಸೋಂಪಾಗಿ ಬೆಳದಿರತಾವ. ಹಬ್ಬದ ಮರುದಿನಾನೇ ಒಂಬತ್ತು ದಿನಾ ಜೋಪಾನ ಮಾಡಿದ ಸಸಿಗಳನ್ನು ಒಂದು ಗಂಟೆ ಮನ್ಯಾಗ ಇಟ್ಟಕೊಳ್ಳಲಾರದೆ ಕೆರ್ಯಾಗೋ , ಇಲ್ಲ ಯಾವದರ ದೇವರ ಗುಡಿ ಹಿಂದ ಬಿಸಾಡಿ ಬರತಾರ. ನಮ್ಮ ಹಬ್ಬಗಳೆಲ್ಕ ಹಂಗೆ ಇರತಾವ , ಪೂಜಾ ಅಲಂಕಾರ ಮಾಡೋದು.ಮತ್ತ ಬೀಸಾಡೋದು.ಇರಲಿ , ಭಕ್ತಿಯ ಬಗ್ಗೆ ಹೆಚ್ಚು ಚರ್ಚೆ ಮಾಡಿದಷ್ಟು ವಿವಾದಗಳು ಹೆಚ್ಚಿಗೆ ಆಗತಾವ.

ಆದ್ರ ಇಷ್ಟ ಹಸಿರಾಗಿ ಬೆಳದ ಸಸಿ ಬಿಸಾಡೋ ಬದಲು ದನಕ್ಕ ಕೊಟ್ರ ಅದರ ಹೊಟ್ಟಿನಾರ ತುಂಬತದ.ಮತ್ತಿಷ್ಟು ಹೆಚ್ಚು ಹಾಲ ಕೊಡತಾದ.

ಉಹೂಂ , ದೇವ್ರಿಗ್ಯಾರಾದ್ರೂ ದನಕ್ಕ ತಿನ್ನಲಕ್ಕ ಕೋಡತಾರೇನು..!

ನೀರಾಗ ಬೀಸಾಡಬೇಕು.

ಇಲ್ಲಂದ್ರ ಗುಡಿದಾಗರ ಗುಡಿ ಹಿಂದರ ಒಯ್ದ ಬಿಡಬೇಕು.

ಆಗ ಮಾತ್ರ ಮಾಡಿದ ಪೂಜಾ ಸಾರ್ಥಕ ಅಂಬೋ ಭಾವನೆ.

ಹೂ ಒಯಲಕ್ಕ ಬಂದ ಬಾಜೂ ಮನಿ ಅಕ್ಕೊರಿಗಿ ಬರ್ರಿ ಅಕ್ಕೋರೇ ನಾಷ್ಟಾ ಮಾಡರಿ ಅಂದ.

ಇಲ್ರೀ ದೇವ್ರು ಕೂಡಸಿವಿ.ಒಂಬತ್ತ ದಿನ ಪೂರಾ ನಿರಾರ ಅಂದ್ರು.

 ಮತ್ತ ಶಾಬದಾನಿ , ಶ್ಯಾವಿ ಅಕ್ಕಿ ಅನ್ನ ತಗೋತ್ರೇನೋ ಅಂದ.

ಹೂಂ ಮತ್ತ , ಪೂರಾ ಉಪಾಸೆ ಇರದ ಎಲ್ಲಿ ಆಗತದರಿ..ಎಸಿಡಿಟಿ ಪ್ರಾಬ್ಲಂ ಅದ.

ಹೋದ ವರ್ಷ ನಮ್ಮ ಅಕ್ಕ ಒಂಬತ್ತ ದಿನ ಉಪಾಸೆ ಉಳದು ಚಕ್ಜರ ಬಂದ ಬಿದ್ದು ದಾವಾಖಾನ್ಯಾಗ ಅಡ್ಮೀಟ್ ಆಗೀಳು. ಈ ಉಪಾಸೆ ವನವಾಸೆ ಎಲ್ಲಾ ಕೈಲಿ ಆಗಲ್ರೀ ಈಗ.

ಆದ್ರೂ ಬಿಡಲಕ್ಕ ಬರಲ್ಲ ನೋಡ್ರಿ , ಹಿಂದಿನೋರು ಹಚ್ಚಿ ಇಟ್ಟಾರ ಮಾಡಬೇಕಾಗತದ.. ಅಂದಕೋತ ಹೋದ್ರು.

ಹಿಂದಿನ ಮನಿ ಆಂಟೀ ಯಾರಿಗೋ ಜೋರು ಅವಾಜದಾಗ ಬೈಲತೀರು.ನನಗ ನೋಡಿ ಫಿರ್ಯಾದಿ ಶುರು ಮಾಡ್ದರು.

ಈ ಕೆಲಸದೋರು ಒಂದು ಐನ್ ಟೈಮ್ ದಾಗ ಕೈ ಕೊಡತಾರ ನೋಡ್ರಿ. ಹಬ್ಬ ಒಂದು. ಹೋಳಗಿ ಮಾಡಬೇಕು , ದೇವ್ರಿಗಿ ಕರಕುಣಿ (ಗೋಧಿ ಹಿಟ್ಟಿನಲ್ಲಿ ಬೆಲ್ಲದ ಪಾಕ ಕಲೆಸಿ ಪೂರಿ ಮಾಡಿ ಕರೆಯುವ ಖಾದ್ಯ ) ಮಾಡಿ ಕಟ್ಟಬೇಕು.ಸೂಟಿಗಿ ಮಕ್ಳು ಬಂದಾರ.ಅವು ಒಂದ ಕೆಲಸಾ ಮಾಡಲ್ಲ. ಹತ್ತ ಆಗ್ಯದ ಇನ್ನ ಮಲಕ್ಕೊಂಡಾವ ನೋಡ್ರಿ.ನಾ ಒಬ್ಬಾಕೀನೆ ಎಷ್ಟು ಮಾಡಿ ಸಾಯ್ಲಿ ಅಂತ ಅಳು ಮಾರಿಗೆ ಬಂದ್ರು.ನಮಗ ಸಹಾಯ ಮಾಡ್ಲಿಕ್ಕ ಬರೋ ಸಹಾಯಕಿಗೂ ಮನ್ಯಾಗ ಹಬ್ಬ ಇರತದ .

ಆದ್ರ ನಮ್ಮ ಕೆಲಸದ ಒತ್ತಡದಾಗ ನಮಗ ಬ್ಯಾರೆಯವರ ಬಗ್ಗೆ ವಿಚಾರ ಮಾಡಲ್ಕಕ್ಕ ಸಮಯ ಎಲ್ಲಿರತದ.

ನಮ್ಮ ಗ್ರಾಮೀಣ ಭಾಗದ ಹೆಣ್ಣಮಕ್ಕಳಿಗಿ ಈ ಪೂಜಾ ಹಬ್ಬ ಮಡಿ ಉಪವಾಸ ಎಲ್ಲಾ ಸಂಪ್ರದಾಯಗಳು ಎಷ್ಟೆ ಹೈರಾಣಾದ್ರೂ ಮುಂದವರೆಸಿಕೊಂಡು ಹೋಗುವ ಒಂದು ಜವಾಬ್ದರಿ. ಮನಸ್ಸಿಲೆ ಮಾಡತಾರೋ , ಮಾಡಬೇಕಲ್ಲ ಅಂತ ಜಬರದಸ್ತಿಲೆ ಮಾಡತಾರೋ ಅದು ಅವರಿಗೆ ಗೊತ್ತು.ಯಾವದರಿಂದಲಾದ್ರೂ ಆಗ್ಲಿ ಒಟ್ಟು ಒಳ್ಳೆದಾಗ್ಲಿ ಅಂಬೋ ಹಂಬಲ.

ಆದ್ರ ಈಗ ಕೆಲಸಗಳು ಮೊದಲಿನಂಗ ಉತ್ಸಾಹದಾಯಕವಲ್ಲ. ಸ್ವಲ್ಪ ಕೆಲಸ ಹೆಚ್ಚಾದ್ರ ದೇಹ ದಣಿತದ. ಮಾಡ್ಲೇಬೇಕು ಅಂತ ಒತ್ತಾಯದಿಂದ ಆಚರಣೆಗಳು ಪದ್ದತಿಗಳು ಮಾಡಲಕ್ಕ ದೇಹ ಸ್ಪಂದಿಸಲ್ಲ.ಮತ್ತ ಅದಕ್ಕ (ದೇಹಕ್ಕ) ಆರೈಕ ಮಾಡಕೊಂತ ಕೂಡಬೇಕು.

ಈಗ ಉತ್ಸಾಹ ಉಳಿದಿರೊದು ಅಂದ್ರ ಏನೆ ಮಾಡ್ಲಿ ಪೋಟೋ ಇಳಸಿಕೊಂಡು ಪೋನ್ ದಾಗ ಫೋಟೋ ಹಾಕೋದು.ಹಬ್ಬ ಪೂಜೆ ಎಲ್ಲ ತೋರಸಿಕೊಳ್ಳೊಕ ಮಾಡಿದಂಗ..ಇರಲಿ , ಇದರಾಗೂ ಒಂದು ಸಕಾರಾತ್ಮಕ ಕಾರಣ ಹುಡುಕಿದ್ರಾಯಿತು.ಹ್ಯಾಂಗರ  ಒಟ್ಟನಾಗ ನಮ್ಮಲ್ಲಿ ಉತ್ಸಾಹ ಉಳಿಲಿ.ಅಷ್ಟೆ.


About The Author

2 thoughts on “”

  1. ಉತ್ತಮ ಪ್ರಬಂಧ,ನೆಲದ ಭಾಷೆ, ಓದಿಸಿಕೊಂಡು ಹೋಗುವದು.ಬರೆಹ ಮುಂದುವರಿಸಿರಿ ಮೇಡಮ್.

Leave a Reply

You cannot copy content of this page

Scroll to Top