ಗಜಲ್ ಸಂಗಾತಿ
ಶಮಾ ಜಮಾದಾರ
ಗಜಲ್


ಮೋಹದಂಗಿಯನು ಇಳಿಸಿ ಸ್ವಾತಂತ್ರ್ಯದತ್ತ ನಡೆದೆ
ಹಿಂಸೆಯನು ಬದಿಗೆ ಸರಿಸಿ ಸ್ವಾತಂತ್ರ್ಯದತ್ತ ನಡೆದೆ
ಕ್ರಮಿಸಿದ ದಾರಿ ನಿಚ್ಚಳವಾಗಿತ್ತು ದಪ್ಪ ಕನ್ನಡಕದಲ್ಲಿ
ಸುಳ್ಳು ಕಪಟಗಳನು ತ್ಯಜಿಸಿ ಸ್ವಾತಂತ್ರ್ಯದತ್ತ ನಡೆದೆ
ಸತ್ಯವನು ಆಗ್ರಹಿಸಿ ಎಣಿಸಿದೆ ಜೈಲು ಕಂಬಿಗಳನು
ಉಪವಾಸದ ಕತ್ತಿ ಝಳಪಿಸಿ ಸ್ವಾತಂತ್ರ್ಯದತ್ತ ನಡೆದೆ
ಕೆಂಪುಮೂತಿ ಕುನ್ನಿಗಳಿಗೆ ನೀ ಸಿಂಹ ಸ್ವಪ್ನವಾಗಿದ್ದೆ
ತುಂಡುಡುಗೆಯಲಿ ಜೀವಿಸಿ ಸ್ವಾತಂತ್ರ್ಯದತ್ತ ನಡೆದೆ
ರಾಮ ರಾಮನೆನುತ ಉಸಿರು ಚೆಲ್ಲಿದ ಸಂತ ನೀನು
ನಮ್ಮ ಗುಂಡಿಗೆ ಜೀವ ಸಲ್ಲಿಸಿ ಸ್ವಾತಂತ್ರ್ಯದತ್ತ ನಡೆದೆ
ಶಮಾ ಜಮಾದಾರ
.



