ಕಥಾ ಸಂಗಾತಿ
ಶಂಕರರಾವ ಉಭಾಳೆ
“ಮಂಜಿನ ಲಿಂಗಕ್ಕೆ ಬಿಸಿಲ ಕಳಸ”

ಅಂಗಳದಲ್ಲಿ ಬೆಳೆದ ಪೇರಲಹಣ್ಣಿನ ಗಿಡದ ಎಲೆಗಳನ್ನು ಹಾಗೂ ಅಲ್ಲೇ ಗೋಡೆಯುದ್ದಕ್ಕೂ ಚಾಚಿದ ಅಮೃತ ಬಳ್ಳಿಯ ಎಲೆಗಳನ್ನು ಮೂಲೆಯಲ್ಲಿ ಬೆಳೆದ ತುಳಸಿಯನ್ನು ಕೂಡ ಬಿಡದೆ ಕಂಪೌಂಡ್ ವಾಲ್‌ನ ಮೇಲೆ ನಿಂತು ಗಬಗಬನೇ ತಿನ್ನುತ್ತಿದ್ದ ಆಡನ್ನು ‘ಹೇ ಉಶೊ ಉಶೋ…..’ ಎನ್ನುತ್ತ ಓಡಿಸಿದೆ. ಅದಾಗಲೇ ಗಿಡದ ಹಲವು ಭಾಗಗಳನ್ನೆಲ್ಲಾ ತಿಂದು ತೇಗಿತ್ತು. ಅಲ್ಲಿಂದ ಓಡಿಹೋದರೂ ಮನಸ್ಸಿಗೆ ಗುಂಗು ಹಿಡಿಸಿತ್ತು. ‘ಆಡು ಮುಟ್ಟದ ಸೊಪ್ಪಿಲ್ಲ’ವೆಂಬ ಇದಕ್ಕೇ ಹೇಳಿರಬೇಕು. ಸಸ್ಯಮೂಲವೆಲ್ಲವನ್ನು ಕಚಕಚನೆ ತಿನ್ನುತ್ತ, ಜಿಂಕೆಯತೆ ಓಡುತ್ತ ಸಸ್ಯಹಾರಿಯಾಗಿ ಚೆನ್ನಾಗಿ ಜೀವಿಸುತ್ತ ಇನ್ನೊಬ್ಬರಿಗೆ ಆಹಾರವಾಗಿ ತನ್ನನ್ನು ತಾನು ತ್ಯಾಗ ಮಾಡಿಕೊಳ್ಳುತ್ತೆ. ಆದರೆ ಮನುಷ್ಯ ಬದುಕು……! ಮುಗ್ಧನಾಗಿ ಹುಟ್ಟಿ ಸ್ವಾರ್ಥಿಯಾಗಿ ಬೆಳೆದು ಅಳಿದು ಹೋಗುವುದನು ಕಂಡಾಗ ನಮಗಿಂತ ಮಾತು ಬಾರದ ಮೂಕ ಪಶು-ಪಕ್ಷಿಗಳೇ ಶ್ರೇಷ್ಠವೆನಿಸುತ್ತವೆ.
ಭಾಗ-೧
ಹಠಾತ್ತನೇ ಜ್ವರ, ಕೆಮ್ಮಿನಿಂದ ರಾತ್ರಿಯೆಲ್ಲ ನರಳಿದ ಅಪ್ಪನನ್ನು ದವಾಖಾನೆಗೆ ಒಯ್ಯಬೇಕೆಂದರೆ ಊರೆಲ್ಲಾ ಸಾವಿನ ಮನೆ ಮಾಡಿದ ಈ ಕೊರೋನಾದ ಭರಾಟೆಯಲಿ ಯಾವುದೇ ಪ್ರೈವೆಟ್ ಆಸ್ಪತ್ರೆ ತೆಗೆದಿರಲಿಲ್ಲ. ಮೆಡಿಕಲ್ ಶಾಪ್‌ನಲ್ಲಿ ನೀಡಿದ್ದ ಡೊಲೋ-೬೫೦ ಗುಳಿಗೆಯನ್ನು ತಂದು ತಿನ್ನಿಸಿದರೂ, ಕಡಿಮೆಯಾಗಲಿಲ್ಲ. ತಿಂಡಿ ತಿನ್ನದೆ, ಗಂಜಿ ಕುಡಿಯದೇ ಸಾಯಂಕಾಲದವರೆಗೂ ಜ್ವರದ ತಾಪದಲ್ಲೇ ನರಳಿದ್ದ. ಅಷ್ಟರಲ್ಲೇ ಅಂಗನವಾಡಿ ಟೀಚರ್ ಶಾಂತಾ ಮನೆ ಬಾಗಿಲಿಗೆ ಬಂದು, ‘ಕೊರೋನಾ ಟೆಸ್ಟ್ ಮಾಡಾಕ ದವಾಖಾನಿಲಿಂದ ನರ್ಸ್ ಬಂದಾರ, ಮನ್ಯಾಗಿದ್ದ ದೊಡ್ಡೋರೆಲ್ಲ ರ‍್ರಿ ನಮ್ ಸಾಲೀಗಿ’ ಎಂದು ಹೇಳಿ ಹೋದಳು. ಕೂಡಲೇ ಅಮ್ಮನ ಸಹಾಯದಿಂದ ಅಪ್ಪನನ್ನ ಅಂಗನವಾಡಿ ಶಾಲೆಗೆ ಕರೆದುಕೊಂಡು ಹೋದೆ. ಅಲ್ಲೇ ಇದ್ದ ನರ್ಸ್ ಅಪ್ಪನ ಗಂಟಲು ದ್ರವ ಪರೀಕ್ಷೆ ಮಾಡಿ, ನನ್ನ ಮೊಬೈಲ್ ನಂಬರ್ ಪಡೆದು ‘ರಿಪೋರ್ಟ್ ಬಗ್ಗೆ ನಿಮ್ಮ ಮೊಬೈಲ್ ನಂಬರಿಗೆ ಮೆಸೇಜ್ ಬರುತ್ತೆ ಅಕಸ್ಮಾತ್ ಪಾಸಿಟಿವ್ ಬಂದ್ರೆ ನಮಗೆ ಕಾಂಟ್ಯಾಕ್ಟ್ ಮಾಡಿ’ ಅಂದಳು. ಮನೆಗೆ ಬಂದು ತಾಸಾಗಿರಲಿಲ್ಲ. ಪಾಸಿಟಿವ್ ಕೋವಿಡ್ ರಿಪೋರ್ಟ್ ಮೊಬೈಲ್‌ಗೆ ಮೆಸೇಜ್ ಬಂದಿತ್ತು ನನಗೂ ಅಮ್ಮನಿಗೂ ಗರಬಡಿದಂಗಾಗಿತ್ತು. ಮುಂದೇನು ಎನ್ನುವ ಪ್ರಶ್ನೆ ಮೂಡುತ್ತಿರುವಾಗಲೇ ಆಟೋದಲ್ಲಿ ಮೈಕಿನಿಂದ ಹಾಡೊಂದು ಬಿತ್ತರವಾಗುತ್ತಿತ್ತು. ‘ಸ್ವಚ್ಛ ನಿರ್ಮಲ ಭಾರತವನ್ನು ಕಟ್ಟುವ ನಾವು ಒಳ್ಳೆಯ ಪರಿಸರದಿ…..’ ಎಂದು ನಿಮಿಷಕ್ಕೊಮ್ಮೆ ಹಾಡಿನ ಜತೆ ಮಧ್ಯದಲ್ಲಿ ಕರೋನಾ ರೋಗದ ಗಂಭೀರತೆ, ಅದರ ಲಕ್ಷಣಗಳು, ರೋಗಿಗಳು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಹೋಗುವ ಮಾಹಿತಿ, ಉಸಿರಾಟದ ತೊಂದರೆಯಿರುವವರಿಗೆ ಆಂಬುಲೆನ್ಸ್ ಸೇವೆಯ ಕುರಿತ ಮಾಹಿತಿ, ಜಿಲ್ಲಾಸ್ಪತ್ರೆಗೆ ಹಾಗೂ ತಾಲ್ಲೂಕಾಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ನೊಂದಾಯಿಸಿಕೊಳ್ಳುವ ಹಲವು ವಿವರಗಳ ಪ್ರವರವನ್ನೆಲ್ಲಾ ಬಿತ್ತರಿಸುತ್ತಿತ್ತು.
ಹೊಟ್ಟೆಗಿಟ್ಟಿಲ್ಲದ ಸ್ಥಿತಿಯಲ್ಲಿ ಬದುಕು ಬವಣೆಪಡುತ್ತಿರುವಾಗಲೆ ಅಪ್ಪನಿಗೆ ಬಂದ ಈ ಕೊರೋನಾ ರೋಗದ ಚಿಕಿತ್ಸೆಗೆ ಎಲ್ಲಿ ಹೋಗುವುದೆಂದು ಹೆಣಗಾಡುತ್ತಿರುವಾಗ ಮನೆ ಮುಂದೆ ವಾಹನದ ಶಬ್ಧ ಬಂದಿತು. ಹೊರಬಂದು ನೋಡಿದರೆ ೧೦೮ ರ ಆಂಬುಲೆನ್ಸ್ ನಿಂತಿದೆ (ಮನುಷ್ಯನಿಗೆ ಬರುವ ೧೦೮ ರೋಗಗಳ ಮನಗಂಡೇ ಅದಾವ ಪುಣ್ಯಾತ್ಮ ಈ ಸಂಖ್ಯೆ ಇಟ್ಟನೋ……) ಅದರಿಂದ ಇಳಿದ ಇಬ್ಬರು ನರ್ಸ್ಗಳು ಹಾಗೂ ಒಬ್ಬ ಅಟೆಂಡರ್ ಮೈಮೇಲೆಲ್ಲಾ ಪಿ.ಪಿ.ಇ ಕಿಟ್ ಹಾಕಿಕೊಂಡು ಬಂದಿದ್ರು. ಬಾಗಿಲಿಗೆ ಬಂದವರೇ, ‘ಶಿವರಾಮ್ ಮನೇಲಿ ಇದ್ದಿರೇನ್ರಿ……
ಎಂದು ಕೂಗಿದಾಗ ನಾನು ಅಮ್ಮ ಕೂಡಲೇ ಬಾಗಿಲೆಡೆ ದೌಡಾಯಿಸಿ, ‘ಹಾಂ… ಇದ್ದಾರೆ ಬನ್ನಿ’ ಅಂದೆ. ‘ನೋಡಿ, ಅವರಿಗೆ ಕೋವಿಡ್ ಪಾಸಿಟಿವ್ ಬಂದಿರೋದ್ರಿಂದ ಕೂಡಲೇ ಅವರನ್ನ ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಚಿಕಿತ್ಸೆ ಮಾಡಬೇಕಾಗುತ್ತೆ. ಅವರ ಜತೆ ನೀವು ಇರೋದ್ರಿಂದ ನೀವು ಕೂಡ ಗಂಟಲು ದ್ರವ ಪರೀಕ್ಷೆ ಮಾಡಿಕೊಂಡು ನೆಗೆಟಿವ್ ಬಂದ್ರೆ ಹೋಂ ಕ್ವಾರಂಟೈನ್ ಆಗಬೇಕು ಪಾಸಿಟಿವ್ ಆದ್ರೆ ನೀವು ಕೂಡ ಅಡ್ಮಿಟ್ ಆಗಬೇಕಾಗುತ್ತೆ.’ ಅಂದಾಗ ನನಗೂ ಅಮ್ಮನಿಗೂ ಮಾತಾಡುವ ಧೈರ್ಯವೇ ಇರಲಿಲ್ಲ. ಅದೇಗೋ ಆಂಬುಲೆನ್ಸ್ ಬಂದ ಸುದ್ದಿ ಆಕಾಶವಾಣಿಯಂತೆ ಊರೆಲ್ಲ ಹಬ್ಬಿ ಓಣಿಯ ಜನರೆಲ್ಲ ಸಂದಿಯಲ್ಲೆಲ್ಲಾ ಇಣಿಕಿ ನೋಡುತ್ತಾ ನಿಂತಿದ್ದರು. ಅಷ್ಟರಲ್ಲಾಗಲೇ ಮುನ್ಸಿಪಾಲ್ಟಿಯ ಲೇಬರ್ ಬಂದು ಹುದುಗಿಯಂದ ಮನೆ ಎಡ ಬಲಕ್ಕೆ ತಗ್ಗು ತೋಡಿ ಕಟ್ಟಿ ನಂತರ ಮುಳ್ಳ ಬೇಲಿ ಹಾಕಿ ಕೆಂಪು ಬೆಲ್ಟ್ ಕಟ್ಟಿ ಹೋಗಿದ್ದರು. ಇತ್ತ ಅಪ್ಪನನ್ನ ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋದ ಮೇಲೆ ನಾನಂತೂ ಅಧೀರನಾಗಿ ಹೋದೆ ಗಡಿ ಪಾರಾದವರ ಸ್ಥಿತಿ ಉಂಟಾಯಿತು. ಅಷ್ಟರಲ್ಲೇ ಮೊಬೈಲ್ ರಿಂಗಾಯಿತು. ರಿಸೀವ್ ಮಾಡುತ್ತಲೇ ಆ ಕಡೆಯಿಂದ ಮನೆ ಓನರ್ ಮಾತಾಡಿ ಒಂದು ವಾರದ ಗಡುವು ನೀಡಿ ಮನೆ ಖಾಲಿ ಮಾಡಲು ಹೇಳಿದ. ಸಂಜೆಯವರೆಗೂ ಉಪವಾಸವಿದ್ದರೂ ಒಂದು ಗ್ಲಾಸ್ ನೀರು ಕೊಡುವವರಿಲ್ಲ. ನಲ್ಲಿ ನೀರು ತುಂಬಲಿಕ್ಕೂ ಆಗದು. ಮನೆ ಸುತ್ತ ಬೇಲಿ ಹಾಕಿ ಹೋಗಿದ್ದರು. ಹೆಜ್ಜೆಯಿಟ್ಟರೇ ಮುಳ್ಳು ಚುಚ್ಚಿ ರಕ್ತ ಹೊರಸೂಸುತ್ತಿತ್ತು. ನರಕವೇನೆಂದು ಇಲ್ಲಿಯೇ ಕಣ್ಣಾರೆ ಅನುಭವಿಸುವಂತಾಗಿತ್ತು. ಓಣಿಯ ತಿರುವಿಗೆ ಬ್ಯಾರಿಕೇಡ್ ಹಾಕಿ ಯಾರೊಬ್ಬರೂ ಇತ್ತ ಸುಳಿಯುವ ಹಾಗೂ ಇರಲಿಲ್ಲ.
ಅತ್ತ ಅಪ್ಪ ಕ್ವಾರಂಟೈನ್ ಕೇಂದ್ರದಲ್ಲಿ ಸಂಕಟಪಡುತ್ತಲೇ ಏದುಸಿರು ಬಿಡುತ್ತ ನೋವನನುಭವಿಸುತ್ತಿದ್ದ. ನಾನು ಮತ್ತ ಅಮ್ಮ ನೋಡಲು ಹೋದರೆ ಕೊರೋನಾ ನಿಯಮದಂತೆ ಮಾಸ್ಕ್, ಸ್ಯಾನಿಟೈಜರ್ ಹಾಕಿಕೊಂಡು ಹೋದರೂ ನರ್ಸ್ಗಳು ಬಿಡುತ್ತಿರಲಿಲ್ಲ ಹಾಗೂ ಹೀಗೂ ಅವರಲ್ಲಿ ಗೋಗರೆದು ದೂರದಿಂದಲೇ ಪಿ.ಪಿ.ಇ ಕಿಟ್ ಧರಿಸಿ ಅಪ್ಪನ ಸಮೀಪಿಸಿ ನೋಡಿದರೆ, ಜ್ವರ, ಕೆಮ್ಮಿನ ತಾಪದಲ್ಲಿ ಬೆಂದು ಹೋಗಿ ಗುಬ್ಬಿಯಂತಾಗಿದ್ದ ಬೆಡ್ ಮೇಲೆ ಮಲಗಿದವನಿಗೆ ವಾಸ್ತವ ಪ್ರಪಂಚದ ಕಲ್ಪನೆಯಿಲ್ಲ ಆತನ ಚಿಂತಾಜನಕ ಸ್ಥಿತಿ ಹೊರಗಿರುವ ನಮಗೆ ಗೊತ್ತಾಗುತ್ತಿಲ್ಲ. ಬದುಕು ತರಗೆಲೆಯಂತಾಗಿ ಪ್ರತಿಕ್ಷಣ ಯಕ್ಷ ಪ್ರಶ್ನೆಯಾಗಿ ಕಾಡುತ್ತಿತ್ತು. ಬಂಧು, ಬಾಂಧವರೆನ್ನುವವರು ಅಪರಿಚಿತರಂತೆ ಭಾಸವಾದರು. ಪರಿಚಿತರು ಅಪರಿಚಿತರಂತೆ ದೂರದಿಂದಲೇ ಸರಿದು ಹೋಗುತ್ತಿದ್ದರು.
ಸುದ್ದಿ ತಿಳಿದ ಶಾಲಾ ಮಂಡಳಿ ಸದಸ್ಯರು ಹಾಗೂ ಅಪ್ಪನ ಜತೆಗೆ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆ ವಿದ್ಯಾಸ್ಪೂರ್ತಿಯ ಶಿಕ್ಷಕರಿಬ್ಬರು ನನ್ನನ್ನು ಹಾಗೂ ಅಮ್ಮನನ್ನು ಅನತಿ ದೂರದಿಂದಲೇ ಮಾತಾಡಿಸಿ ಹೊರಟು ಹೋಗಿದ್ದರು. ಇಪ್ಪತ್ತು ವರ್ಷಗಳಿಂದ ಅನವರತ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಪ್ಪನಿಗೆ ಶಾಲಾ ಮಂಡಳಿಯವರು ನೀಡುತ್ತಿದ್ದ ಅಲ್ಪಸ್ವಲ್ಪ ಸಂಬಳದಿಂದಲೇ ಸಂಸಾರದ ಬಂಡಿ ದೂಡುತ್ತಿದ್ದ. ಲಾಕ್‌ಡೌನ್ ಜಾರಿಯಾಗಿ ಕಳೆದೊಂದು ವರ್ಷದಿಂದ ಶಾಲೆ ಪ್ರಾರಂಭವಾಗದಿರುವುದರಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಸರಿಯಾಗಿ ಫೀಸ್ ವಸೂಲಿಯಾಗದಿರುವುದರಿಂದ ಶಿಕ್ಷಕರಿಗೆ ಸಂಬಳವನ್ನೆ ಕೊಡುವುದನ್ನು ನಿಲ್ಲಿಸಿದ್ದರು ಆದರೆ ಆರಂಭದಿಂದಲೂ ಅಪ್ಪನು ಅವಿರತವಾದ ಸೇವೆ ಮನಗೊಂಡು ಅರ್ಧ ಸಂಬಳವನ್ನು ಕೊಡುತ್ತಿದ್ದರು. ಆದರೆ ಈ ವರ್ಷವೂ ಎರಡನೇ ಅಲೆಯ ಕೊರೋನಾಘಾತದಿಂದ ಆ ಅರ್ಧ ಸಂಬಳವೂ ಕಳೆದ ಮೂರು ತಿಂಗಳಿಂದ ನಿಂತುಹೋಗಿತ್ತು. ನಮಗೆಲ್ಲ ಉಪವಾಸ ವ್ರತವೇ ಖಾಯಂ ಆಗಿತ್ತು. ಅಮ್ಮನ ಮೌನರೋಧನ, ಅಪ್ಪನ ಅಸಹಾಯಕತೆಯನ್ನು ಕಂಡಾಗ ನಾನೇ ಕೂಲಿ ಕೆಲಸಕ್ಕಾದರೂ ಹೋಗಲೇ….. ಅಂತನ್ನಿಸ್ತಿತ್ತು. ಡಿಗ್ರಿ ಓದಿದ್ದು ಇದಕ್ಕೇನಾ……? ಎನ್ನುವ ಅನುಮಾನವೂ ಮೂಡುತ್ತಿತ್ತು. ಸದ್ಯ ರೇಷನ್ ಅಕ್ಕಿಯೇ ನಮ್ಮ ಹಸಿವಿನ ಮೂಲಾಧಾರವಾಗಿತು. ಆದರೆ ಅನಿರೀಕ್ಷಿತವಾಗಿ ಅಪ್ಪ ಕೊರೋನಕ್ಕೆ ತುತ್ತಾಗಿ ನರಳುತ್ತಿದ್ದ.
ಬದುಕೆಂದರೆ ಹಾಗೇನೆ… ಏರಿದರೆ ಕೈಗೆ ಸಿಗದ ಆಕಾಶ, ಇಳಿದರೆ ತಳ ಸಿಗದ ಪಾತಾಳ. ಹೀಗೆ ಏನೇನೋ ವಿಚಾರಗಳ ತೆಕ್ಕೆಯಲಿ ಸಿಲುಕುತ್ತಿರುವಾಗಲೇ ಆಸ್ಪತ್ರೆ ಹೊರಗೆ ಮೈಕ್‌ನಿಂದ ಅನೌನ್ಸ್ ಆಗುತ್ತಿತ್ತು ಹೊರಗೆ ಬಂದು ನೋಡಿದರೆ ೪೦೬ ಗಾಡಿಗೆ ಶಾಸಕರ ಭಾವಚಿತ್ರ ಅಂಟಿಸಿ ಊಟದ ಪಾಕೀಟನ್ನು ಹಂಚುವುದಕ್ಕಾಗಿ ಆಸ್ಪತ್ರೆ ಒಳಗೆ ಬಂದು ಶಾಸಕರ ಹಿಂಬಾಲಕರು ಬಂದು ಪ್ರತಿ ವಾರ್ಡ್ಗೂ ಹಂಚುತ್ತಿದ್ದರು ಹೊರಗೆ ಧ್ವನಿವರ್ಧಕವು ಅರಚುತ್ತಿತ್ತು. ‘ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಈ ಕ್ಷೇತ್ರದ ಜನಪ್ರಿಯ ಶಾಸಕರಾದ ರಂಗರಾಜರು ಕೊರೋನಾ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ಫುಡ್‌ಕಿಟ್ ಹಾಗೂ ಊಟದ ಪಾಕೀಟನ್ನು ಹಂಚುತ್ತಿದ್ದಾರೆ. ಹಸಿವನ್ನ ತೀರಿಸಲು ಅನ್ನದಾನಗೈದು ಕಲಿಯುಗ ಕರ್ಣನಾಗಿದ್ದಾರೆ. ಪ್ರತಿಯೊಬ್ಬರು ಬಂದು ಪಡೆದುಕೊಳ್ಳಲು ಕೋರಿಕೆ. ಶಾಸಕರಿಗೆ ಜೈ….’ ಹೀಗೆ ಭಟ್ಟಂಗಿಗಳ ಜೈಕಾರದ ಜತೆಗೆ ಅವರ ಚೇಲಾಗಳಿಂದ ಊಟದ ಪಾಕೀಟನ್ನ ನೀಡುತ್ತಾ ನಿಂತಿತು. ಇಲ್ಲೂ ಅವ್ಯಕ್ತ ರಾಜಕೀಯದ ದುರ್ವಾಸನೆ ಕಾಣಹತ್ತಿತು. ಅಲ್ಲಿಯವರೆಗೂ ಸುಮ್ಮನಿದ್ದ ಹೊಟ್ಟೆ ಅನ್ನದ ಪಾಕೀಟ್ ನೋಡುತ್ತಲೇ ತರಲು ಹೋಗೆಂದು ಮನಸ್ಸಿಗೆ ಸೂಚಿಸಿತು. ಅನ್ನದ ವಾಸನೆ ಮೂಗಿಗೆ ತಾಕಿದ ಕೂಡಲೆ ಬಾಯಿ ಗಬಗಬನೇ ನುಂಗಿತು. ಅದಕ್ಕೇನೆ ‘ಹಸಿವು’ ಅನ್ನೊ ಮೂರಕ್ಷರ ಮೂರು ಲೋಕಕ್ಕೆ ಸಮವೆಂದು ಹೇಳೋದು
ರೊಟ್ಟಿ ನೋಡಲು ವೃತ್ತಾಕಾರ
ನೋಡಲು ವಾಮನನಾದರೂ
ಹಿಡಿಯಲಾಗದ ಬೃಹದಾಕಾರವೇ ಸರಿ
———————
ಅಪ್ಪ ಮನೆಗೆ ಬಂದ ಮೇಲೆ ಸರೀಕರ ಎದುರು ನಮ್ಮ ಬದುಕು ಅಸಹನೀಯವಾಯಿತು. ಪರಿಚಿತರು, ಅಪರಿಚಿತರಾದರು. ಸಂಬAಧಿಗಳು ಸುಳಿಯದಂತಾದರು ಗುಬ್ಬಿಯಂತೆ ಮಂಚದ ಮೇಲೆ ಆಯಾಸದಿಂದ ಮಲಗಿದ್ದ ಅಪ್ಪನ ಕಂಡರೆ ಕರುಳು ಚರ‍್ರೆಂದಿತು. ಸದಾ ಶಾಲೆಗಾಗಿ ತನ್ನ ಜೀವ ತೇದ ಅದೆಷ್ಟೋ ವಿದ್ಯಾರ್ಥಿಗಳು ಅಪ್ಪನ ಕೈಯಲ್ಲೇ ಕಲಿತು ದೊಡ್ಡ ಅಧಿಕಾರಿಗಳಾದರು. ಆದರೆ ಅಪ್ಪ ತನ್ನ ನಿಷ್ಕಾಮ ಕರ್ಮದಿಂದ ಸೇವೆ ಸಲ್ಲಿಸಿದರೂ ಆತನಿಗೀಗ ಬಂದ ಪರಿಸ್ಥಿತಿಯನ್ನು ಕಂಡಾಗ ಅತಿಯಾದ ಒಳ್ಳೆಯತನವು ಒಮ್ಮೊಮ್ಮೆ ನಮ್ಮನ್ನ ತುಂಬಾ ಅಧೀರನಾಗಿಸುತ್ತೇನೋ ಅನ್ನಿಸುತ್ತೆ.
ಆಡಳಿತ ಮಂಡಳಿಯವರು ಈ ಕಡೆ ತಲೆ ಹಾಕಿರಲೇಯಿಲ್ಲ. ಶಾಲೆಯಂತು ಸದ್ಯ ಆರಂಭವಾಗುವುದAತು ದೂರ ಆದರೆ ಪ್ರತಿಕ್ಷಣ ಗರ‍್ರೆನ್ನುವ ಹೊಟ್ಟೆಗೆ ಹೇಗೆ ಸಮಾಧಾನಿಸುವುದು? ಆಸ್ಪತ್ರೆಯಿಂದ ಅಪ್ಪ ಬಂದು ಇಂದಿಗೆ ಹತ್ತು ದಿನವಾದರೂ ಯಾವುದೇ ನಿರ್ಧಾರ ಕೈಗೊಳ್ಳದ ಹತಾಶ ಸ್ಥಿತಿಯಲ್ಲಿದ್ದೆ. ಅಪ್ಪನಿಗೆ ಕೊರೋನಾ ಬಂದು ಹೋದ ಮೇಲೆ ಯಾರೊಬ್ಬರು ಮನೆ ಹತ್ರಾನೂ ಸುಳಿದಿರಲಿಲ್ಲ. ಇಲ್ಲಿ ಉಪವಾಸ ಬಿದ್ದು ಸಾಯುವುದಕ್ಕಿಂತ ಬೆಂಗಳೂರಿಗಾದರೂ ಹೋಗಿ ದುಡಿದರಾಯಿತು ಎಂದುಕೊAಡು ಅಮ್ಮ-ಅಪ್ಪನನ್ನ ಒಪ್ಪಿಸಿ ಟ್ರೆöÊನಿಗೆ ಹೋಗುವುದೆಂದು ನಿರ್ಧಾರವಾಯಿತು. ಆದರೆ ಊರಿಂದ ರಾಯಚೂರು ೬೦ ಕಿ.ಮೀ ನಡೆಯಬೇಕಲ್ಲ…..! ನಾನು ಹೇಗೋ ನಡೆಯಬಹುದು, ಆದರೆ ಅಮ್ಮ ಇದೀಗ ಸುಧಾರಿಸಿಕೊಳ್ಳುತ್ತಿರುವ ಅಪ್ಪನನ್ನ ಹೇಗೆ ಕರೆದೊಯ್ಯುವುದು……? ಕೊನೆಗೆ ಅವರೂ ಕೂಡ ನಡದೇ ಹೋಗುವುದೆಂದು ತೀರ್ಮಾನಿಸಿದರು. ಮನೇಲಿರೋ ರೇಷನ್ ಖಾಲಿಯಾಗಿ ಕಿಸೆಯಲ್ಲಿ ದಮಡಿ ದುಡ್ಡಿರಲಿಲ್ಲ. ಬೆಳಗ್ಗೆ ಎಂಟಕ್ಕೆ ಹೊರಟವರು ಸಂಜೆ ಆರು ಗಂಟೆ ಹೊತ್ತಿಗೆ ಸ್ಟೇಷನ್ ತಲುಪಿದೆವು. ಲಾಕ್‌ಡೌನ್ ನಿಮಿತ್ತ ಬಸ್ಸು, ಲಾರಿ, ಯಾವುದೇ ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮಸರಕಲ್, ಗಬ್ಬೂರು ಹೀಗೆ ದಾರಿಗುಂಟ ನಡೆದರೆ ಯಾವೊಂದು ಅಂಗಡಿ, ಹೋಟಲ್ಲುಗಳು ತೆರೆದಿರಲಿಲ್ಲ.

ಸ್ಟೇಷನ್‌ನೊಳಗೆ ಬಂದು ಬೆಂಗಳೂರು ಟ್ರೆöÊನ್ ಕುರಿತು ಲೇಬರ್‌ನೊಬ್ಬನಿಗೆ ವಿಚಾರಿಸಿದರೆ ರಾತ್ರಿ ೧೦ ಗಂಟೆಗೆ ಇರುವುದೆಂದು ಹೇಳಿದ ನನ್ನ ಪರಿಸ್ಥಿತಿ ಅರುಹಿ ಹೇಗಾದರೂ ಮಾಡಿ ಮೂರು ಸೀಟು ಕೊಡಿಸೆಂದು ಕೇಳಿದೆ. ಆದರೆ ಅವನ್ನು ಸೀಟ್ ಅಡ್ಜಸ್ಟ್ ಮಾಡಲು ೧೦೦/- ರೂ ಚಾರ್ಜೆಂದ. ನನ್ನಲ್ಲಿ ದುಡ್ಡಿಲ್ಲವೆಂದು ದುಡ್ಡು ಹೊಂದಿಸಲು ಏನು ಮಾಡಲಿ ….. ಪುನಃ ಅವನನ್ನೇ ಕೇಳಿದೆ. ಅದಕ್ಕವನು, ‘ಇಲ್ಲೇ ನಂದಿ ದವಾಖಾನಿ ಆದ ಹೋಗಿ ಒಂದು ಬಾಟ್ಲಿ ರಕ್ತ ಕೊಟ್ರೇ ೨೦೦/- ರೂ ಕೊಡ್ತಾರ ತಗೊಂಬಾ’ ಎಂದ. ಅದರಂತೆ ನಂದಿ ದವಾಖಾನೆಗೆ ಹೋಗಿ ‘ಬ್ಲಡ್ ಬ್ಯಾಂಕಿಗೆ’ ತೆರಳಿ ಬಾಟ್ಲಿ ರಕ್ತ ನೀಡಿ ದುಡ್ಡು ತಂದು ಲೇಬರಿನವನಿಗೆ ೧೦೦/-ರೂ ಕೊಟ್ಟು ಇನ್ನೊಂದು ನೂರಲ್ಲಿ ಮೂರು ಪ್ಲೇಟ್ ಇಡ್ಲಿ ತಂದು ತಿಂದೆವು. ಬೆಳಗಾಗುವುದರಲ್ಲಿ ಟ್ರೆöÊನು ಜಾಲಹಳ್ಳಿ ಕ್ರಾಸ್‌ಗೆ ಬಂದಾಗ ಎಲ್ಲರೂ ಇಳಿದು ನಿಂತಾಗ ಊರ ಸ್ನೇಹಿತ ಶಿವಪ್ಪ ಕಾಯುತ್ತಾ ನಿಂತಿದ್ದ. ಅವನ ಜತೆ ನೇರ ಬಿಲ್ಡಿಂಗ್ ಕೆಲಸ ಮಾಡುವಲ್ಲಿಗೆ ಕರೆದುಕೊಂಡು ಹೋದ. ಅಲ್ಲಿದ್ದ ಮೇಸ್ತಿç ಅಪ್ಪನಿಗೆ ಸಿಮೆಂಟ್ ತುಂಬಿ ಕೊಡುವ ಕಾಯಕ ನೀಡಿದ. ನಾನು ಲಿಫ್ಟ್ ಆಪರೇಟರ್ ಆಗಿನಿಂತೆ. ಅಕ್ಷರ ನೀಡಿ ವಿದ್ಯಾರ್ಥಿಗಳ ಭವಿಷ್ಯ ಗಟ್ಟಿಗೊಳಿಸುತ್ತಿದ್ದ. ಅಪ್ಪ ತನ್ನ ಭವಿಷ್ಯವನ್ನೇ ರೂಪಿಸಿಕೊಳ್ಳದಂತಾ ಅಸಹಾಯಕ ಸ್ಥಿತಿಗೆ ತಲುಪಿದ್ದ. ಅಂತೂ ಸ್ವಾಭಿಮಾನದ ಪ್ರತೀಕವಾಗಿ ಜೀವನಗೈದವನು. ಅಪ್ಪನ ಬಾಲ್ಯದ ಗೆಳೆಯ ಶಿವಪ್ಪನ ಸಹಯದಿಂದ ಈಗಾಗಲೇ ಅವನು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ ಹಲವಾರು ವರ್ಷಗಳಿಂದ ಇರುವುದರಿಂದ ತಮ್ಮ ಮೇಸ್ತಿçಗೆ ಹೇಳಿ ನನಗೂ ಅಪ್ಪನಿಗೂ ಕಟ್ಟಡ ಕೆಲಸ ಕೊಡಿಸಿದ್ದ. ಸದಾ ಶಾಲೆಯ ಕೊಠಡಿಯಲ್ಲಿ ಪಾಠ-ಪ್ರವಚನ ನೀಡಿ ವಿದ್ಯಾರ್ಥಿಗೀಗೆ ಅಕ್ಷರ ಭಾಗ್ಯ ನೀಡಿ ಇಂಜಿನಿಯರ್-ಡಾಕ್ಟರ್‌ರನ್ನ ತಯಾರುಮಾಡುವವ ಇಂದು ಕಟ್ಟಡ ಕೆಲಸದ ಆಳಾಗಿ ಪುಟ್ಟಿಯಲ್ಲಿ ಸಿಮೆಂಟ್ ತುಂಬಿಕೊಡುತ್ತಿದ್ದ.

ಕೆಲಸ ಮುಗಿಸಿ ಸಾಯಂಕಾಲ ಶಿವಪ್ಪನ ಮನೆಗೆ ಹೊರಟಿದ್ದೆವು. ರಸ್ತೆ ಪಕ್ಕದಲ್ಲಿರುವ ಜಾನಿ ಚಿಕನ್ ಶಾಪ್‌ನಲ್ಲಿ ಅಂಗಡಿಯಲ್ಲಿದ್ದವರು ಅಲ್ಲಿರುವ ಕೋಳಿಗಳನ್ನ ಹೊರಗೆಸೆಯುತ್ತಿದ್ದರು. ರಸ್ತೆಯಲಿ ಹೋಗುವವರಾರೂ ಅದನ್ನ ಮುಟ್ಟುವ ಸಾಹಸ ಮಾಡಲಿಲ್ಲ. ಏಕೆಂದರೆ ಕಳೆದ ಕೆಲ ದಿನಗಳಿಂದ ಟಿ.ವಿ ಯಲ್ಲಿ ಕೊರೋನಾ ರೋಗ ಲಕ್ಷಣಗಳು ಚಿಕನ್‌ನಲ್ಲಿ ಕಾಣಸಿಗುವ ಸಂಭವವಿರುವುದರಿAದ ವಿಚಾರವಂತರು, ವೈದ್ಯರು ಹೇಳಿಕೆ ನೀಡಿದಂದಿನಿAದ ಪುಗ್ಸಟ್ಟೆ ಕೊಟ್ಟರೂ ಚಿಕನ್ ತಿನ್ನೋರಿಲ್ಲ. ಎಲ್ಲರೂ ಮೂಗು ಮುಚ್ಚಿಕೊಂಡು ಹೋಗುವವರೇ… ಹಾಗೆಯೇ ಆಸ್ಪತ್ರೆಯಲ್ಲಿ ಹೆಣಗಳ ರಾಶಿಯು ಹೀಗೆಯೇ ಬೀಳುತ್ತಿದ್ದರೂ ಸುಡಲು ಸೌದೆಯಿಲ್ಲ. ಕಣ್ಣೀರು ಬತ್ತಿಹೋಗಿ ಬದುಕು ಮೂರಾಬಟ್ಟೆಯಾಗಿ ಪ್ರತಿಕ್ಷಣವೂ ಪ್ರಶ್ನಿಸುವ ಮನಸ್ಸಿಗೆ ಉತ್ತರ ಹೇಳುವುದೆಂತು?
ಮನೆಯ ಯಜಮಾನ ಸತ್ತರೆ ಮನೆಯವರೆ ಮುಟ್ಟದ ದಾರುಣ ಸ್ಥಿತಿ ನಿರ್ಮಾಣವಾಗಿತ್ತು ಕೊರೋನಾ ತಂದ ಈ ದುಸ್ಥಿತಿಯಲ್ಲಿ ಕೆಲವೊಮ್ಮೆ ಅನ್ನಿಸುತ್ತದೆ. ರೋಗದೊಡ್ಡದೊ…! ಅಥವಾ ರೋಗಗ್ರಸ್ತ ಮನಸ್ಸು ದೊಡ್ಡದೋ…! ಹರಡುವ ರೋಗಕ್ಕಿಂತಲೂ ಕೊರಡಾಗಿರುವ ಮನಸ್ಥಿತಿಗೇನೆನ್ನುವುದು?
ಶಂಕರರಾವ ಉಭಾಳೆ





ವಂದನೆಗಳು ಸರ್
ಚೆನ್ನಾಗಿದೆ ಸರ್