ಕಾವ್ಯಸಂಗಾತಿ
ವಾಣಿ ಯಡಹಳ್ಳಿಮಠ
“ಒಂದಿರುಳು”

ನನ್ನನು ನಾ ಮರೆತು
ಒಂದಿರುಳು ಮಲಗಬೇಕು
ನಾ ಕಲ್ಪಿಸದ ಕನಸಿನೊಂದಿಗೆ
ರಾತ್ರಿ ಕಳೆಯಬೇಕು
ಮಗುವಾಗಿ ಮತ್ತೆ ಅಮ್ಮನ
ಮಡಿಲ ಸೇರಬೇಕು
ಹಠ ಮಾಡುತ ಚಂದ ಮಾಮ ನೋಡಿ
ಕೈ ತುತ್ತು ಉಣಬೇಕು
ಜೋಗುಳ ಕೇಳುತ , ಕಣ್ರೆಪ್ಪೆ ಮುಚ್ಚುತ
ಅಮ್ಮನ ಸನಿಹ ಮಲಗಬೇಕು
ನಾ ಕಲ್ಪಿಸದ ಕನಸಿನೊಂದಿಗೆ
ರಾತ್ರಿ ಕಳೆಯಬೇಕು
ಅಪ್ಪನ ಹೆಗಲೇರಿ ಜಾತ್ರೆ ನೋಡಬೇಕು
ತಂದ ತಿನಿಸುಗಳನ್ನೆಲ್ಲಾ ಹಂಚಿ ತಿನಬೇಕು
ಕೈ ಹಿಡಿದು ಕಲಿಸಿದ ಮೊದಲ ಪದ
ಮತ್ತೊಮ್ಮೆ ಬರೆಯಬೇಕು
ಅಪ್ಪನೆದುರು ಓದಿ ತೋರಿಸಿ
ಬೆನ್ ತಟ್ಟಿಸಿಕೊಳ್ಳಬೇಕು
ನಾ ಕಲ್ಪಿಸದ ಕನಸಿನೊಂದಿಗೆ
ರಾತ್ರಿ ಕಳೆಯಬೇಕು
ಅಕ್ಕ ಕಲಿಸಿದ ಶಿಸ್ತಿನ ನಿಯಮಗಳ
ಮರಳಿ ನೆನೆಯಬೇಕು
ಆಕೆ ತೊಟ್ಟು ಬಿಟ್ಟ ಬಟ್ಟೆಯನ್ನು
ಉಟ್ಟು ಬೀಗಬೇಕು
ಹಿರಿಯಕ್ಕಳಂತೆ ಎಲ್ಲರನು
ಗದರುತ ನಡೆದಾಡಬೇಕು
ನಾ ಕಲ್ಪಿಸದ ಕನಸಿನೊಂದಿಗೆ
ರಾತ್ರಿ ಕಳೆಯಬೇಕು
ಕೈ ಕೈ ಹಿಡಿದು ಮೈಲಿಗಟ್ಟಲೆ
ಗೆಳತಿಯರೊಂದಿಗೆ ತಿರುಗಬೇಕು
ಶಾಲೆಗೆ ಹೋಗಿ ಗಟ್ಟಿಯಾಗಿ
ಪದ್ಯವ ಓದಬೇಕು
ಸಂತೆಗೆ , ಜಾತ್ರೆಗೆ ಕುಣಿದಾಡುತ ಹೋಗಿ
ಪ್ರತಿ ಕ್ಷಣವನು ಆನಂದಿಸಬೇಕು
ನಾ ಕಲ್ಪಿಸದ ಕನಸಿನೊಂದಿಗೆ
ರಾತ್ರಿ ಕಳೆಯಬೇಕು
ಮೊದಲ ಪ್ರೀತಿಯ ಕವನ
ಯಾರಿಗೂ ಹೇಳದೇ ಮನದಲಿರಿಸಿಕೊಳ್ಳಬೇಕು
ತಿರುತಿರುಗಿ ನೋಡಿದ ಆ ಪೋರನ
ನೋಟ ಬರೆಯದೇ ಎದೆಗೊತ್ತಿಕೊಳ್ಳಬೇಕು
ಹರಿದು ಹಾಕಿದ ಮೊದಲ ಪ್ರೇಮ ಪತ್ರದ
ಪ್ರತಿ ಪದವನು ಅನುಭವಿಸಬೇಕು
ನಾ ಕಲ್ಪಿಸದ ಕನಸಿನೊಂದಿಗೆ
ರಾತ್ರಿ ಕಳೆಯಬೇಕು
ನನ್ನನು ನಾ ಮರೆತು
ಒಂದಿರುಳು ಮಲಗಬೇಕು…..

ವಾಣಿ ಯಡಹಳ್ಳಿಮಠ




Very nice englis ma’am
Thank you Ma’am