ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸ್ಸೆಂಬುದು ಮನುಷ್ಯನ ಜೀವದ ಒಡಲು. ಅದು ಭಾವನೆಗಳ ಕಡಲೂ ಹೌದು. ಮನಸ್ಸು ಬಹಳ ಸೂಕ್ಷ್ಮವಾದುದು.ಮನಸಿನ ಭಾವನೆಗಳಿಗೆ ಪೆಟ್ಟಾದಾಗ ಅದು ಬಹಳ ತೀಕ್ಷ್ಣವಾದ ಪರಿಣಾಮವನ್ನು ಬೀರುತ್ತದೆ. ಕೆಲವೊಮ್ಮೆಸಣ್ಣ ಘಟನೆಗಳಿಗೂ ಸಹ ಮನಸ್ಸು ತೀಕ್ಷ್ಣವಾಗಿ ಸ್ಪಂದಿಸಬಹುದು. ನೋವನ್ನು ಅನುಭವಿಸಲೂ ಬಹುದು. ಮನಸ್ಸಿನ ಗ್ರಹಿಕೆ ಹಾಗೂ ಪ್ರತಿಸ್ಪಂದನೆಯಲ್ಲಿ ಧನಾತ್ಮಕತೆ ಮತ್ತು ಋಣಾತ್ಮಕತೆ ಎಂಬ ಎರಡು ತದ್ವಿರುದ್ಧ ಅಂಶಗಳನ್ನು ನಾವು ಕಾಣುತ್ತೇವೆ.ಇದು ವ್ಯಕ್ತಿಯ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ.

ದೃಷ್ಟಿಯಂತೆ ಸೃಷ್ಟಿ

‘ದೃಷ್ಟಿಯಂತೆ ಸೃಷ್ಟಿ’ ಎಂಬ ಮಾತಿನಂತೆ ನಮ್ಮ ಮನಸ್ಸು ಧನಾತ್ಮಕ ದೃಷ್ಟಿಯಿಂದ ನೋಡಿದರೆ ಒಳ್ಳೆಯ ಅಂಶಗಳೇ ಕಂಡು ಬರುತ್ತವೆ. ಅದೇ ಋಣಾತ್ಮಕವಾಗಿ ಗ್ರಹಿಸಿದರೆ ಒಳ್ಳೆಯ ಅಂಶಗಳಿದ್ದರೂ,ಅದರಲ್ಲಿರುವ ಒಂದೆರಡು ಕೆಟ್ಟ ಗುಣಗಳೇವಿಜೃಂಭಿಸಿ, ಮನುಷ್ಯ ಋಣಾತ್ಮಕವಾಗಿ ಸ್ಪಂದಿಸುವಂತೆ
ಮಾಡುತ್ತದೆ. ಮನುಷ್ಯನ ಮಾನಸಿಕ ಗ್ರಹಿಕೆ ಮತ್ತು ಪ್ರತಿಸ್ಪಂದನೆ ಅವನ ಸಾಮಾಜಿಕ ಸಂಬಂಧಗಳಲ್ಲಿ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ,ಮಾನಸಿಕ ಸಮತೋಲನ ಕಾಪಾಡುವಲ್ಲಿ ಬಹಳಷ್ಟು ಪ್ರಭಾವವನ್ನು ಬೀರುತ್ತದೆ. ಮನಸು ಬಹಳ ಸೂಕ್ಷ್ಮವಾದದ್ದು.ಅದು ಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಾ, ಜೀವನದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಸಹಕರಿಸುತ್ತದೆ. ಆದರೆ  ಕೆಲವೊಮ್ಮೆ ನಡೆದ ಘಟನೆಗಳನ್ನು ಪರಿಶೀಲಿಸುತ್ತಾ,ಅದಕ್ಕೆ ವಿಪರೀತಾರ್ಥಗಳನ್ನು ಕಲ್ಪಿಸಿಕೊಂಡು, ಅನವಶ್ಯಕವಾಗಿ ಮನನೋಯಿಸಿಕೊಂಡು, ತೀವ್ರವಾಗಿ ಪ್ರತಿಕ್ರಿಯಿಸುವ ಅತಿಸೂಕ್ಷ್ಮ ಪ್ರವೃತ್ತಿಯವರು ನಾವಾಗುತ್ತೇವೆ. ಆಗ ನಮ್ಮ ಬದುಕು ಹೆಜ್ಜೆಹೆಜ್ಜೆಗೂ ನಲುಗುತ್ತದೆ. ಇದನ್ನು ತಪ್ಪಿಸುವುದು ಹೇಗೆ? ಮನಸ್ಸನ್ನು ಮನುಷ್ಯ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸೂಕ್ಷ್ಮತೆಯನ್ನು ಸಂಭಾಳಿಸಲು ಅರಿತುಕೊಂಡರೆ ಅದರಿಂದಾಗುವ ಮಾನಸಿಕ ತುಮುಲವನ್ನು ತಡೆಯಬಹುದು.

ಭಾವನೆಗಳ ಬಳಲಾಟ

ಮನುಷ್ಯನ ಬಳಿ ಇರುವ ಅತ್ಯಂತ ಶಕ್ತಿಶಾಲಿಯಾದ ಸಾಧನ ಎಂದರೆ ಅದು ಮನಸ್ಸು.ಮನಸ್ಸನ್ನು ಭಾವನೆಗಳ ಕೈಯಲ್ಲಿ ಕೊಟ್ಟರೆ, ಭಾವನೆಗಳ ಬಳಲಾಟದಲ್ಲಿ ಮನಸ್ಸು ನೋವನ್ನು ಅನುಭವಿಸುವುದು ಸಹಜ.ಅತಿ ಸೂಕ್ಷ್ಮತೆಯ ಮನಸ್ಸನ್ನು ಹೊಂದಿರುವವರು ಭಾವನಾತ್ಮಕ ಹೊಯ್ದಾಟವನ್ನು ಅನುಭವಿಸುತ್ತಾರೆ.‌ಮನದ ಭಾವನೆಗೆ ತಕ್ಕಂತೆ ಕುಣಿಯುವ ಈ ತರಹದ ಮಾನಸಿಕತೆಯಿರುವವರಿಗೆ ದುಃಖವಾದರೆ,ಅದು ತೀವ್ರವಾದ ದುಃಖ, ಖುಷಿಯಾದರೆ ಅದು ವಿಪರೀತವೆನಿಸುವ ಉತ್ಸಾಹ.ಇಂತಹ ಸನ್ನಿವೇಶಗಳಲ್ಲಿ  ಅನಿಯಂತ್ರಿತವಾದ ಭಾವ ವ್ಯತ್ಯಯಗಳು  ಮನುಷ್ಯನಿಗೆ ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತವೆ. ಉಂಟಾಗುವ ಭಾವನಾತ್ಮಕ ವೈಪರೀತ್ಯಗಳು ಸಮಾಧಾನದ ಮತ್ತು ಆರಾಮದಾಯಕ ಜೀವನವನ್ನು ನಡೆಸಲು ಅಡ್ಡಿಯಾಗುತ್ತವೆ. ಇವು ತೀವ್ರ ಭಾವನೆಗಳ ಬಿಗಿ ಮುಷ್ಟಿಯಲ್ಲಿ ಅಂಥವರನ್ನು ಬಂಧಿಯಾಗಿಯೇ ಉಳಿಸಿಬಿಡುತ್ತದೆ. ಅದರಲ್ಲೂ ಸಾಮಾಜಿಕ ಟೀಕೆ, ಅವಮಾನ,ಸಂಘರ್ಷಗಳು, ಸಂಬಂಧಗಳಲ್ಲಿ ತಿರಸ್ಕಾರಗಳು ಇಂಥವುಗಳನ್ನು ಎದುರಿಸಬೇಕಾಗಿ ಬಂದಾಗ ಅವರು ದುಃಖಿತರಾಗಿ ನಕಾರಾತ್ಮಕ ಆಲೋಚನೆಗಳ ಸುಳಿಗೆ ಸಿಲುಕುತ್ತಾರೆ.ಬೇರೆಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ, ಅದನ್ನು ಹಾಗೆ ತೆಗೆದುಕೊಳ್ಳದೆ,ತನಗೆ ಬೇಕಾದಂತೆ ತಿಳಿದುಕೊಳ್ಳುತ್ತಾರೆ. ಹೀಗೆ ಕ್ಷುಲ್ಲಕ ವಿಚಾರವನ್ನೂ ವೈಯಕ್ತಿಕ ಪ್ರಹಾರವೆಂದು ಭಾವಿಸುವುದು, ಸಣ್ಣ ಭಿನ್ನಾಭಿಪ್ರಾಯವೂ ಸಂಬಂಧದಲ್ಲಿ ಬಿರುಕು ಮೂಡಿಸುತ್ತಿದೆಯೆಂದು ಹೆದರುವುದು, ಇಂಥ ಮಾನಸಿಕತೆಗೆ ಸೂಕ್ಷ್ಮ ಮನಸ್ಸಿನವರು ಒಳಗಾಗುತ್ತಾರೆ. ಟೀಕೆಗಳು ತನ್ನ ಅಸಮರ್ಥತೆಯಿಂದಲೇ ಬರುತ್ತಿವೆ. ಎಲ್ಲರೂ ತನ್ನ ಬಲಹೀನತೆಯ ಬಗ್ಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಅತಿಯಾಗಿ ಆಲೋಚಿಸುತ್ತ, ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಹೀಗಾಗಿ ಸಂಬಂಧಗಳ ಮೇಲೂ ಇದು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಮನಃಶಾಂತಿ ಎಲ್ಲಿದೆ?

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬಹಳಷ್ಟು ಮಂದಿ ನನಗೆ ಮನಃಶಾಂತಿಯೇ ಇಲ್ಲ ಎಂದು ಹೇಳುವುದನ್ನು ಆಗಾಗ ಕೇಳುತ್ತಿರುತ್ತೇವೆ. ಬದುಕಿನಲ್ಲಿ ನೆಮ್ಮದಿಯೇ ಇಲ್ಲ ಎಂದು ಕೊರಗುತ್ತಾರೆ. ಹಾಗಾದರೆ ನೆಮ್ಮದಿ ಎಲ್ಲಿಂದ ಸಿಗುತ್ತದೆ?. ಮನಃಶಾಂತಿ ಅಥವಾ ನೆಮ್ಮದಿ ಎನ್ನುವಂತದ್ದು ಬೇರೆ ಎಲ್ಲೂ ಇಲ್ಲ. ಅದು ನಮ್ಮ ನಮ್ಮ ಮನಸ್ಸಿನಲ್ಲಿಯೇ ಇದೆ. ನಮ್ಮ ಮನಸ್ಸು ದೃಢವಾಗಿದ್ದರೆ ನೆಮ್ಮದಿಯನ್ನು ಪಡೆದುಕೊಳ್ಳಬಹುದು. ಮನುಷ್ಯ ಬಹಳ ಸುಲಭವಾಗಿ ನಕರಾತ್ಮಕವಾದ ಸುಳಿವಿನಲ್ಲಿ ಸಿಲುಕಿ ಒದ್ದಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮನಸ್ಸು ದೃಢವಾಗಿದ್ದರೆ ಜೀವನದಲ್ಲಿ ಬರುವ ಯಾವುದೇ ಕ್ಷಣಗಳನ್ನು ಎದುರಿಸಲು ಸಿದ್ಧವಾಗಿದ್ದರೆ, ನಾವು ನೆಮ್ಮದಿಯನ್ನು ಖಂಡಿತ ಕಳೆದುಕೊಳ್ಳಲು ಸಾಧ್ಯವಿಲ್ಲ.ಆದರೆಇದು ಹೇಳುವಷ್ಟು ಸುಲಭವಲ್ಲ. ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವ ಸಾಮರ್ಥ್ಯ ನಮಗಿರಬೇಕಾಗುತ್ತದೆ. ಇದನ್ನೇ ನಾವು “ವಿಲ್ ಪವರ್’ ಎನ್ನುತ್ತೇವೆ. ನಮ್ಮ ಮನಸ್ಸಿನ ಹಿಡಿತವನ್ನು ನಾವಿಟ್ಟುಕೊಂಡು,ಕಷ್ಟದ ಸಂದರ್ಭಗಳನ್ನು ಸುಲಭವಾಗಿ ನಿಯಂತ್ರಿಸುವುದೇ ಮನುಷ್ಯನ ಮನಸ್ಸಿನ ಶಕ್ತಿ ಅಥವಾ ವಿಲ್ ಪವರ್.

ಮನಸ್ಸು ಸೂಕ್ಷ್ಮತೆ ಅರಿಯಬೇಕು

ಸೂಕ್ಷ್ಮತೆ ಇರುವವರಿಗೆ ಸ್ವ-ಪ್ರಜ್ಞೆ ಹೆಚ್ಚು. ಹಾಗಾಗಿ ಇದು ವ್ಯಕ್ತಿತ್ವದ ದೋಷಗಳನ್ನು ಅರಿತು ಸರಿಪಡಿಸಿಕೊಳ್ಳುವಲ್ಲಿ ಸಹಕಾರಿ. ಆತ್ಮವಿಮರ್ಶೆ ಉತ್ತಮವಾದ ಮೌಲ್ಯಪ್ರಧಾನ ಜೀವನವನ್ನು  ಕಟ್ಟಿಕೊಳ್ಳುವಲ್ಲಿ ನೆರವಾಗಬಲ್ಲದು.
ಸೂಕ್ಷ್ಮತೆ ಇದ್ದಷ್ಟೂ ಸೃಜನಶೀಲತೆಯೂ ಹೆಚ್ಚಿರುತ್ತದೆಯಂತೆ. ಆದ್ದರಿಂದ ತಮ್ಮ ಕೆಲಸಗಳಲ್ಲಿ ಈ ಪ್ರವೃತ್ತಿಯನ್ನು ಬಳಸಿಕೊಂಡರೆ ನಮ್ಮ ಶಕ್ತಿಯನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳಬಹುದು. ಗೆಲುವಿಗೆ ಕಾರಣವಾಗಬಹುದು. ಜೀವನದ ಔದಾರ್ಯಕ್ಕೆ ಕೃತಜ್ಞರಾಗಿರುವ, ಚಿಕ್ಕ ಸಂತಸಗಳನ್ನೂ ಪೂರ್ತಿಯಾಗಿ ಅನುಭವಿಸುವ ಮನಸ್ಸು ಇವರಿಗಿರುತ್ತದೆ. ಆಳವಾದ ಸಂಬಂಧಗಳನ್ನು ಹೊಂದುವ, ತನ್ನವರ ಮನಸ್ಸಿನ ಭಾವನೆಗಳ ಬಳಲಾಟವನ್ನು ಅರಿಯುವ, ಇತರರ ಕಷ್ಟಗಳಿಗೆ ಮರುಗುವ ಅವರು ಪುಟ್ಟ ಪ್ರಶಂಸೆಯಿಂದಲೇ ಪ್ರೇರೇಪಿತರಾಗುತ್ತಾರೆ. ಒಟ್ಟಿನಲ್ಲಿ ಸೂಕ್ಷ್ಮತೆಯನ್ನು ಚೆಂದವಾಗಿ ನಿರ್ವಹಿಸಬಲ್ಲವರಾದರೆ ಆಗ, ಅದೇ ನಮಗೆ ಚೈತನ್ಯವೂ ಆಗಬಲ್ಲದು. ಶಕ್ತಿಯೂ ಆಗಬಲ್ಲದು.

ಮನಸ್ಸಿನ ಆರೋಗ್ಯ

ವ್ಯಕ್ತಿಯೊಬ್ಬನ ಬದುಕಿನ ಗತಿಯಲ್ಲಿ,ಮಾನಸಿಕ ಆರೋಗ್ಯ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಟೀಕೆ ಟಿಪ್ಪಣಿಗಳಿಗೂ ಪ್ರತಿಕ್ರಿಯಿಸುವಾಗ ಮನಸ್ಸು ಗಟ್ಟಿಯಾಗಿರಬೇಕು.ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.ಆತ್ಮವಿಶ್ವಾಸಕ್ಕೆ ಆದ್ಯತೆ ನೀಡಬೇಕು. ಎಲ್ಲರಂತೆ ನಮ್ಮಲ್ಲೂ ಸಹಜವಾಗಿ ಕುಂದುಕೊರತೆಗಳು ಇರುತ್ತವೆ. ಗಮನವಿಟ್ಟು ನೋಡಿದರೆ ಎದ್ದು ಕಾಣುವವು.ಅವುಗಳನ್ನು ಒಪ್ಪಿಕೊಂಡು,ನಾವು ಇನ್ನಷ್ಟು ಬೆಳೆಯುವವರಾಗಬೇಕು.ನಮ್ಮಲ್ಲಿಸ್ವಸ್ಥ ಮನಸ್ಸಿದ್ದರೆ ಮಾತ್ರ ಆರೋಗ್ಯಯುತ ಜೀವನ ರೂಪಿಸಿಕೊಳ್ಳಬಹುದು.ಎಲ್ಲದಕ್ಕೂ ಮೂಲಕಾರಣ ನಮ್ಮ ಮನಸ್ಸು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತ, ಖುಷಿ ಖುಷಿಯಾಗಿ ಇರುವುದು ಸ್ವಸ್ಥ ಆರೋಗ್ಯದ ಲಕ್ಷಣ.ನಮ್ಮ ಸುಂದರ ವ್ಯಕ್ತಿತ್ವಕ್ಕೆ ಮೆರುಗನ್ನು ತಂದು ಕೊಡುವುದೇ ನಮ್ಮ ಮನಸ್ಸು.ನಮ್ಮ ವ್ಯಕ್ತಿತ್ವವನ್ನು ಸುಂದರಗೊಳಿಸುವ ಆತ್ಮವಿಶ್ವಾಸವನ್ನು ವೃದ್ಧಿಗೊಳಿಸಿಕೊಳ್ಳುವತ್ತ ನಮ್ಮ ಚಿತ್ತವಿರಿಸಲು ಪ್ರಯತ್ನಿಸೋಣವೇ!!


About The Author

Leave a Reply

You cannot copy content of this page

Scroll to Top