ಕಾವ್ಯ ಸಂಗಾತಿ
ಪ್ರಶಾಂತ್ ಬೆಳತೂರು
“ಕಾವ್ಯ ವಿಮರ್ಶಕನಿಗೆ..!”


ಪ್ರಿಯ ಕಾವ್ಯ ವಿಮರ್ಶಕನೇ
ನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲ
ಹಾಗಾಗಿಯೇ
ಇಲ್ಲಿ ನಿತ್ಯ ಬಳಸಿ
ಸವಕಲಾಗಿಸಿರುವ
“ಜಾತ್ಯತೀತ”ವೆಂಬ ಪದವನ್ನು
ಯಣ್ ಸಂಧಿಯ ಕುರಿತು
ವಿವರಿಸುವಾಗ ಮಾತ್ರ
ಉದಾಹರಣೆಗಾಗಿ ಬಳಸುತ್ತೇನಷ್ಟೇ..!
ಪಕ್ಷಪಾತ ಮಾಡುತ್ತಲೇ
ಪಕ್ಷಾತೀತವೆನ್ನುವ ಇಲ್ಲಿನ ಹುಚ್ಚು ಕಲ್ಪನೆಯನ್ನು
ಸವರ್ಣಕ್ಕೆ ತಕ್ಕನಾದುದೆಂದು
ಆಲೋಚಿಸುತ್ತೇನೆ..!..
ಅಸ್ಪೃಶ್ಯತೆಯ
ನೋವು ಅವಮಾನಗಳನ್ನು
ಅಲಂಕಾರ ಶಾಸ್ತ್ರದಲ್ಲಿ ಹೇಳಲೊರಟರೆ
ಉಪಮೆ ರೂಪಕಗಳೆಲ್ಲಾ
ತಲೆತಗ್ಗಿಸಿ ನಿಲ್ಲಬಹುದೆಂಬ
ಕಾವ್ಯ ಉತ್ಪ್ರೇಕ್ಷೆಯ
ಸಂಶಯದಿಂದ ಬಿಟ್ಟು ಬಿಡುತ್ತೇನೆ..!
ನನ್ನಜ್ಜ ಹೊಲಿದಿರಬಹುದಾದ
ಸಹಸ್ರಾರು ಎಕ್ಕಡಗಳ
ಉಳಿ ರಂಪಿಯ ಮೊನೆಯಂಚಿನ
ದಾರದಲ್ಲಿ
ಛಂದಸ್ಸಿನ ಲಯವನ್ನು ಪೋಣಿಸಿ
ಪ್ರಾಸಾಕ್ಷರಗಳ ತೊಡಿಸಿ
ಕಾವ್ಯವನ್ನು ಹುಚ್ಚೆದ್ದು ಕುಣಿಸಲಾರೆ..!
ದ್ವಂದ್ವಾರ್ಥ, ವಾಚ್ಯಾರ್ಥ
ವಿಶಿಷ್ಟಾರ್ಥಗಳೆನ್ನುವ
ಉತ್ಕೃಷ್ಟತೆಯ ಭಾಷಾ ಸೋಗಿನಲ್ಲಿ
ಮಡಿ- ಮೈಲಿಗೆಗಳನ್ನು
ನಿನ್ನ ಖ್ಯಾತ ಕರ್ನಾಟಕದ
ಆರು ವೃತ್ತದ ಪರಿಧಿಯಲ್ಲಿ
ಗುದ್ದಾಡಿಸದೆ
ಒಂದೇ ಏಟಿಗೆ ಸರಳಾರ್ಥದಲ್ಲಿ
ಕೆಡವಿ ಬಿಡುತ್ತೇನೆ..!
ಅಷ್ಟೇ ಏಕೆ?
ಪಟ್ಟಭದ್ರರ ಪಟಾಲಮ್ಮುಗಳ
ಬೂಟು ನೆಕ್ಕುತ್ತಾ
ಯಾರಾದರೂ
ಸ್ವಾತಂತ್ರ್ಯ ಮತ್ತು ಸಮಾನತೆಯ ಕುರಿತ
ಕಾವ್ಯ ಕಲ್ಪನೆಯ ಮಂತ್ರ ಪಠಿಸುತ್ತಿದ್ದರೆ
ಕೆನ್ನೆಗೆರಡು ಬಿಗಿದು
ಇನ್ಮುಂದೆ ಅದನ್ನು
ನಿಷೇಧಾರ್ಥಕದಲ್ಲಿ ಮಾತ್ರ
ಕಡ್ಡಾಯವಾಗಿ ಬಳಸಬೇಕೆಂಬ
ಹೊಸ ನಿಯಮವನ್ನು
ಮೊನ್ನೆಯ ಕನ್ನಡ ತರಗತಿಯಲ್ಲಿ
ನಿನಗಾಗಿಯೇ ಹೇಳಿ ಬಂದಿದ್ದೇನೆ…!
——————-
ಪ್ರಶಾಂತ್ ಬೆಳತೂರು




Super sir
Nice