ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ʼತನಗ ಯಾನ ‘ ದ ಕಾಡುವ ನೆನಪುಗಳು

   ‘ ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ’, ‘ ಸೃಜನಶೀಲ ಮನಸ್ಸಿನವರು ಸುಮ್ಮನಿದ್ದರೂ ಏನಾದರೊಂದು ಮಾಡುತ್ತಲೇ ಇರುತ್ತಾರೆ ‘, ‘ ಸಾಧಕನಿಗೆ ಅಸಾಧ್ಯವಾದುದು ಯಾವುದೂ ಇಲ್ಲ’, ‘ ಸೂರ್ಯ ಹೋದನೆಂದು ಅಳುತ್ತ ಕುಳಿತರೆ ಚಂದ್ರನನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳಬಹುದು ‘ ಎಂಬೆಲ್ಲ ಮಾತುಗಳು ಸದಾ ಹೊಸತನ್ನು ಕಲಿಯುವ ಹಂಬಲದಲ್ಲಿರುವ ಕವಯಿತ್ರಿ, ನಿರೂಪಕಿ, ಸಂಘಟಕಿ , ಗಜಲ್ ಕಾರ್ತಿ , ವಚನಕಾರ್ತಿ, ಉತ್ತಮ ವಾಗ್ಮಿ , ಸಿತಾರ್ ವಾದಕಿ ಮೈಸೂರಿನ ಎ.ಹೇಮಗಂಗಾ (64) ಅವರಿಗೆ ಅಕ್ಷರಶಃ ಅನ್ವಯವಾಗುತ್ತವೆ. ಕವಿತೆ, ಹನಿಗವಿತೆ, ಭಕ್ತಿಗೀತೆ, ಭಾವಗೀತೆ, ಆಧುನಿಕ ವಚನ, ಗಜಲ್, ಹಾಯ್ಕು ಮುಂತಾದ ಕಾವ್ಯ ಪ್ರಕಾರಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಅಧ್ಯಯನಪೂರ್ಣವಾಗಿ ಬರೆಯುತ್ತಿರುವ ಹೇಮಗಂಗಾ ಅವರು ಫಿಲಿಪೈನ್ಸ್ ಮೂಲದ ಛಂದೋಬದ್ಧ ಕಿರುಕಾವ್ಯ ಪ್ರಕಾರವಾದ ತನಗಗಳನ್ನು ತುಂಬ ಧ್ಯಾನಸ್ಥರಾಗಿ ರಚಿಸುತ್ತಿದ್ದಾರೆ.

   ತನಗ ಏಳು ಸ್ವರಾಕ್ಷರಗಳ ನಾಲ್ಕು ಸಾಲಿನಲ್ಲಿ ಅಗಾಧತೆಯನ್ನು ಹೇಳುವ ಕಾವ್ಯ. ಫಿಲಿಪೈನ್ಸ್ ನ ‘ ಟ್ಯಾಗ್ ಲೋಗ್ ‘ ಭಾಷೆಯಲ್ಲಿ ಮೂಡಿದ ತನಗಕ್ಕೆ ಮನದ ಭಾವನೆಗಳನ್ನು ಕಟ್ಟಿಕೊಡುವ ಕುಶಲತೆ ಇದೆ. ಇದು ಕರಿಯನ್ನು ಕನ್ನಡಿಯಲ್ಲಿ ತೋರಿಸಿದಂತೆ ಸವಾಲಿನ ಕೆಲಸವೂ ಹೌದು. ತನಗಗಳು ಜಪಾನಿನ ಹಾಯ್ಕುಗಳನ್ನು ಹೋಲುವುದರಿಂದ ಇವುಗಳನ್ನು ‘ಫಿಲಿಪೈನ್ಸ್ ನ ಹಾಯ್ಕು’ ಎಂತಲೂ ಕರೆಯುವರು.

   ಬಹುಭಾಷಾ ಪ್ರವೀಣರಾದ ಹೇಮಗಂಗಾರವರಿಗೆ ಕನ್ನಡ ಭಾಷೆಯ ಮೇಲೆ ಹಿಡಿತವಿದ್ದು ತುಂಬ ಸಶಕ್ತವಾದ ತನಗಗಳನ್ನು ಬರೆದಿದ್ದಾರೆ. ‘ ತನಗ ಬಳಗ ‘ದ ಗುಂಪಿನಲ್ಲಿ ಸೇರ್ಪಡೆಯಾದ ನಂತರವಂತೂ ತನಗ ಬರಹಾಸಕ್ತಿ ಮತ್ತಷ್ಟು ಹೆಚ್ಚಾಗಿ ಇವರ ರಚನೆಗಳು ನನ್ನನ್ನೂ ಒಳಗೊಂಡಂತೆ ಗುಂಪಿನ ಇತರ ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದ್ದು ಸುಳ್ಳಲ್ಲ. ತಾವು ಬರೆದ ತನಗಗಳನ್ನು ಪರಿಷ್ಕರಿಸಿ 454 ತನಗಗಳನ್ನು ಸೇರಿಸಿ ‘ತನಗ ಯಾನ’ ಎಂಬ ಕೃತಿ ಪ್ರಕಟಿಸಿರುವುದು ಅಭಿಮಾನ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಮೈಸೂರಿನ ರಚನ ಪ್ರಕಾಶನದವರು ಇದನ್ನು ಪ್ರಕಟಿಸಿದ್ದಾರೆ. ಶೀರ್ಷಿಕೆಗೆ ಪೂರಕವಾದ ಆಕರ್ಷಕ ಮುಖಪುಟ ಹಾಗೂ ಸುಂದರ ಮುದ್ರಣ ಓದುಗರ ಮನ ಸೆಳೆಯುತ್ತವೆ.

   ಹೆಸರೇ ಸೂಚಿಸುವಂತೆ ‘ ತನಗ ಯಾನ ‘ ಕೃತಿ ಹೇಮಗಂಗಾ ಅವರ ತನಗ ಪಯಣವೇ ಆಗಿದೆ. *ಇದು ಕನ್ನಡದಲ್ಲಿ ಪ್ರಕಟಗೊಂಡ ಆರಂಭಿಕ ಹತ್ತು ಸಂಕಲನಗಳಲ್ಲಿ ಒಂದು ಮತ್ತು ‘ ಮೈಸೂರು ಭಾಗದಲ್ಲಿ ಪ್ರಕಟಗೊಂಡ ಮೊದಲ ತನಗ ಕೃತಿ ‘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* ಇದರಲ್ಲಿ ಪ್ರಕೃತಿ, ಪ್ರೀತಿ, ಪ್ರೇಮ, ಆಧ್ಯಾತ್ಮ, ಅಲೌಕಿಕತೆ, ವಿರಹ, ವ್ಯಾಮೋಹ, ವೈರಾಗ್ಯ, ಸುಖೀ ದಾಂಪತ್ಯ, ಅನಿಶ್ಚಿತ ಬದುಕು, ಅರಣ್ಯ ನಾಶದ ಅನಾಹುತ, ವಾಸ್ತವ ಬದುಕಿನ ಚಿತ್ರಣ, ಸೇವಿಸುವ ಖಾದ್ಯಗಳು ಮುಂತಾದ ವಿಷಯಗಳ ಬಗ್ಗೆ  ರಚಿಸಿದ ಒಂದಕ್ಕಿಂತ ಒಂದು ಅರ್ಥಪೂರ್ಣವಾದ ತನಗಗಳಿವೆ. ಕೆಲವು ರಚನೆಗಳಲ್ಲಿ ಅಷ್ಟಾಗಿ ಬಳಕೆಯಲ್ಲಿಲ್ಲದ ‘ ಸಲಿಲ ‘ ( ನೀರು ), ‘ ಜಿಹ್ವೆ ‘ ( ನಾಲಿಗೆ ), ‘ ಚಿಗರೆ ‘ ( ಜಿಂಕೆ ), ‘ ನಿಚ್ಚಣಿಕೆ ‘ ( ಏಣಿ ) , ‘ ಗರಳ ‘( ವಿಷ ), ‘ ಗಾರುಡಿಗ ‘ ( ಮೋಡಿಗಾರ ), ‘ ಚುಂಚು ‘( ಕೊಕ್ಕು) ಮುಂತಾದ ಪದಗಳನ್ನು ಬಳಸಿರುವುದು ಒಂದು ವಿಶೇಷ. ‘ ರವಿ ಕಾಣದ್ದನ್ನು ಕವಿ ಕಂಡ ‘ ಎಂಬಂತೆ ಜೀವನಾನುಭವದ ನೆಲೆಯಲ್ಲಿ ರಚಿಸಲ್ಪಟ್ಟಿರುವ ಎಲ್ಲ ತನಗಗಳು ಆಯ್ದ ಮುತ್ತುಗಳಾಗಿವೆ ಮತ್ತು ಬದುಕಿಗೆ ಮಾರ್ಗದರ್ಶಿಯಂತಿವೆ. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಉಲ್ಲೇಖಿಸಿದ್ದೇನೆ.


ನಡೆವ ದಾರಿಯಲಿ
ಮೈಲಿಗಲ್ಲು ಅನೇಕ
ಇರಬೇಕು ಗಮ್ಯವ
ತಲುಪುವ ತವಕ


ಕುಂದು ಕೊರತೆಗಳು
ನೂರು ಕಾಡಲಿ ನನ್ನ
ಸುಖೀ ದಾಂಪತ್ಯದಲಿ
ಅಂಬಲಿಯೂ ಮೃಷ್ಟಾನ್ನ


ಕೈಗೆಟುಕದ ದ್ರಾಕ್ಷಿ
ಹುಳಿಯೆಂದಿತು ನರಿ
ಎಟುಕಿಸಿಕೊಳ್ಳುವ
ಕಲೆಯ ನೀನು ಅರಿ


ನೀನಿರದೇ ಜೊತೆಗೆ
ಮನದಿ ಕಾದಿರುಳು
ನೀ ಬರಲು ನನ್ನೆಡೆ
ಬರೀ ಬೆಳದಿಂಗಳು


ಬೇಸಿಗೆ ಬಿಸಿಲಿಗೆ
ಮರ ಬೆತ್ತಲಾಯಿತು
ಮಳೆ ಬೀಳಲು ಮತ್ತೆ
ಹಸಿರನ್ನು ಹೊದ್ದಿತು


ಹೆಚ್ಚಿಸುತ್ತಲೇ ಇದೆ
ಸರ್ಕಾರ ತುಟ್ಟಿ ಭತ್ಯೆ
ನಲ್ಲ ನೀನೂ ಹೆಚ್ಚಿಸು
ನಿನ್ನಯ ತುಟಿ ಭತ್ಯೆ


ಕಾಲೆಳೆವ ಜನಕೆ
ತೋರಬೇಕು ಅಲಕ್ಷ್ಯ
ಗುರಿ ಸಾಧನೆಯತ್ತ
ಇಡಲೇಬೇಕು ಲಕ್ಷ್ಯ


ವೈರಾಗ್ಯದ ಸಂಕೇತ
ನಿಂತ ಆ ಬಾಹುಬಲಿ
ಅಶಾಶ್ವತ ಬಾಳಿನ
ತತ್ವವ ನೀನು ಕಲಿ


ಹತ್ತಿದ ನಿಚ್ಚಣಿಕೆ
ಈಗ ಬೇಡವಾಗಿದೆ
ಕೃತಘ್ನ ನೀನದನ್ನು
ಒದ್ದು ಹೋಗಿಯಾಗಿದೆ

೧೦
ನೀರು ತಿಳಿಯಾಗಿದೆ
ಬನದ ಕೊಳದಲ್ಲಿ
ದಣಿದು ಬಾಯಾರಿಹ
ಹಕ್ಕಿ ಚುಂಚು ಅಂಚಲ್ಲಿ

೧೧
ಕೂದಲಿನ ನಡುವೆ
ಮೂಡಿದಂತೆ ಬೈತಲೆ
ಹಾಲಿನಂತೆ ಹರಿವ
ಝರಿ ಹೊತ್ತಿದೆ ಮಲೆ

೧೨
ರುಚಿ ಮೊಗ್ಗು ಅರಳಿ
ಲಾಲಾರಸ ಸ್ರವಿಸಿ
ನಾಲಿಗೆ ಬೇಡುವುದು
ಉಪ್ಪಿನಕಾಯಿಗೆಂದು

  ‘ ತುಂಬಿದ ಕೊಡ ತುಳುಕುವುದಿಲ್ಲ ‘ ಎಂಬಂತೆ ಅಪಾರ ಜ್ಞಾನವಿದ್ದರೂ ‘ ನಾನು ಕಲಿಯುವುದು ಇನ್ನೂ ಬಹಳಷ್ಟಿದೆ ‘ ಎಂದು ವಿನಯವಂತಿಕೆ ತೋರುವ ಹೇಮಗಂಗಾ ಅವರದು ಮಗುವಿನಂಥ ಮನಸ್ಸು. ಎಲ್ಲರೊಂದಿಗೂ ಆಪ್ತವಾಗಿ ಬೆರೆಯುವ ಅವರ ಸ್ವಭಾವ ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿತ್ವಕ್ಕೆ ಮೆರುಗು ನೀಡಿದೆ.

ಈಗಾಗಲೇ ಹೃದಯಗೀತೆ ( ಭಾವಗೀತೆ ಸಂಕಲನ ) , ಮುಕ್ತ ವಚನಾಮೃತ ( ಆಧುನಿಕ ವಚನ ಸಂಕಲನ ) , ಬರಬಾರದೇ ನೀನು…?( ಗಜಲ್ ಸಂಕಲನ ) , ಮತಾಪು ( ಹಾಯ್ಕು ಸಂಕಲನ ) ಹಾಗೂ ಕನಸಿಲ್ಲದ ಹಾದಿಯಲ್ಲಿ ( ಕವನ ಸಂಕಲನ ) ಕೃತಿಗಳನ್ನು ಪ್ರಕಟಿಸಿರುವ ಹೇಮಗಂಗಾರವರಿಂದ ಭವಿಷ್ಯದಲ್ಲಿ ಮತ್ತಷ್ಟು ಮಹತ್ವದ ಕೃತಿಗಳು ಹೊರಬರಲೆಂದು ಆಶಿಸುತ್ತೇನೆ.


About The Author

Leave a Reply

You cannot copy content of this page

Scroll to Top