ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಹೆರಿಗೆ ವಾರ್ಡ್ ಮುಂದೆ
ಫಿಂಗರ್‌ ಕ್ರಾಸ್ ಮಾಡ್ಕೊಂಡು
ಓ ಗಾಡ್, ಪ್ಲೀಸ್‌ ಪ್ಲೀಸ್‌ ಮೊರೆಯಿಡುತ್ತ
ಅಷ್ಟು ವರ್ಷದ ತಪಸ್ಸಿಗೆ ಫಲ ಬೇಡಿ
ಹಾಟ್ ಸೀಟಲ್ಲಿ ಕುಳಿತ  ಕ್ಷಣಕ್ಷಣವೂ ಯುಗವಾಗಿತ್ತು

ಆ ವೈದ್ಯೆಯೋ ಸಾಕ್ಷಾತ್ ಸಂತಾನಲಕ್ಷ್ಮಿ ಸ್ವರೂಪಳು
ಪುಟುಪುಟು ಓಡಾಡುವ ದಾದಿಯರ ಫೇಸ್ ರೀಡಿಂಗ್ ಪ್ರಯತ್ನ
ಕಿಬ್ಬೊಟ್ಟೆಯಲಿ ಅದೇನೋ ಅರಿಯದ ಸಂಕಟದ ಅಲೆ
ದೈವಭಿಕ್ಷೆಯೋ ಪ್ರಸಾದವೋ ಕಾತರ ನಿರೀಕ್ಷೆ
ಹಣೆಯಲಿ ಸ್ವೇದಬಿಂದುಗಳ ಸಂಗಮ

ಅವನ ಫಸ್ಟ್ ಕ್ರೈ ಕೇಳಿದಾಗ ಅಹಾ! ಪುಳಕ
ಈಗವನು ಎಲ್ಲರ ಫಸ್ಟ್ ಕ್ರಶ್ ಆಗಿದ್ದ
ಹೂವಿನ ಒಡಲಲ್ಲಿ ಮತ್ತೊಂದು ಹೂವು
ದಣಿವಿನಲ್ಲೂ ಉಕ್ಕುವ ತಾಯ್ತತನದ ಸಂತೃಪ್ತಿ ಕಣ್ಣಿಗೆ ಹಬ್ಬ

ಉಣ್ಣೆಯ ಟೋಪಿಯಲ್ಲಿ ಪಿಳಿಪಿಳಿ ಮಿನುಗುವ ಕರಿದ್ರಾಕ್ಷಿ ಕಂಗಳು
ಶ್ವೇತಗುಲಾಬಿಯೊಂದು ಜೀವ ತೆಳೆದು
ಮಿಸುಕಿಸುವ ಮಿದು ಕೈಕಾಲುಗಳು
ಶುಗರ್ ಕ್ಯಾಂಡಿ ಬೊಂಬೆಯ ಎದೆಗೊತ್ತಿದಾಗ ಆ ಅಪ್ಯಾಯತೆಯ ವರ್ಣಿಸಲು ಸಾಧ್ಯವೇ?


ಕಿನ್ನರ ಲೋಕದ ಈ ಪುಟ್ಟ ಅಥಿತಿ ನಮ್ಮ ಬದುಕಿನ ರಿವಾಜನ್ನೇ ಬದಲಿಸಿದ ಮಾಂತ್ರಿಕ
ಟಿವಿ ಮೊಬೈಲ್ ಮಾತ್ರವಲ್ಲ ಕೆಮ್ಮು ಸೀನುಗಳನೂ ಸೈಲೆಂಟ್ ಮೋಡಗೆ ಹಾಕಿಸಿದ ಸ್ವೀಟ್ ಭಯೋತ್ಪಾದಕ
ದಿನಕ್ಕೊಂದು ಹೊಸಹೊಸ ಲಾಲಿ ಜೋಗುಳ ಕವಿತೆ ಕಟ್ಟಲು ಆದೇಶಿಸಿದ ಕ್ಯೂಟ್ ನಿರ್ದೇಶಕ

ಅಲ್ಲಲ್ಲಿ ಇಣುಕುವ ಬೆಳ್ಳಿಗೂದಲಿಗೆ
ಕಪ್ಪುಬಳಿದು ವಯಸ್ಸು ಮರೆಮಾಚಿದರೂ
ನಾನೀಗ ಅಪ್ಡೇಟೆಡ್ ಮಾಡರ್ನ ಅಜ್ಜಿಯೆಂಬುದು ಮರೆಯಬಹುದೆ
ಬಲ್ಲೆನೀಗ ಅಜ್ಜಿತನದ ಸಜ್ಜಿಗೆಯ ಸವಿರುಚಿ
ಪಟ್ಟಪಾಡೆಲ್ಲವೂ ಈಗ ಹುಟ್ಟಿನ ಹಾಡಾಗಿದೆ ಈ ದಿನದ ಓದಿಗೆ ದಕ್ಕಿದೆ.


About The Author

1 thought on “ವಿಜಯಲಕ್ಷ್ಮಿ ಕೊಟಗಿ ಅವರ ಕವಿತೆ-“ಶುಗರ್ ಕ್ಯಾಂಡಿ””

Leave a Reply

You cannot copy content of this page

Scroll to Top