ಕಾವ್ಯ ಸಂಗಾತಿ
ಡಾ.ಬಸಮ್ಮ ಎಸ್ ಗಂಗನಳ್ಳಿ
ಮಹರ್ಷಿ ವಾಲ್ಮೀಕಿ


ದಾರಿಹೋಕರ ತಡೆದು
ಇದ್ದದೆಲ್ಲವ ಕಸಿದು
ಮಡದಿ ಮಕ್ಳಳನು
ಸಲಹಿದೆ ಸಂತಸದಿ
ಎಷ್ಟು ದಿನಗಳು ಹೀಗೆ
ಕಳೆದವು ಅಂಧಕಾರದಿ
ಬಂದರಲ್ಲಿಗೆ ನಾರದರು
ಅರಿವಿನ ಬೆಳಕು ನೀಡಲು
ತಿಳಿಯ ಹೇಳಲು ಕೇಳದೆ
ಮಂಕುಬಡಿದು ಬುದ್ದಿಗೆ
ನೀನು ಮಾಡಿದ ಪಾಪಕೆ
ಸತಿ-ಸುತರು ಭಾಗಿಗಳೇನು
ಅಪಾರ ಭರವಸೆಯು
ನಿನಗೆ ಮಕ್ಕಳು ಹೆಂಡಿರಲಿ
ನಕ್ಕು ಸಾಗಿದೆ ಮನೆಯ ಕಡೆ
ಸಿಗಲಿಲ್ಲ ನಿನ್ನ ಮಾತಿಗಲ್ಲಿ ಬೆಲೆ
ಗರ ಬಡಿದವರಂತೆ
ನಿರ್ಲಿಪ್ತ, ನಿರ್ಲೇಪವು
ಮನವು ಶಾಂತಿಯೆಡೆಗೆ
ತನುವಿನ ಕೋಪವಿರದೆ
ಮುನಿಯ ಎದುರಿಗೆ
ಬಂದು ನಿಂತೆ ಕ್ಷಮೆಗಾಗಿ
ಕಣ್ಣೀರು ಹರಿಯಿತಲ್ಲಿ
ಕಣ್ಣು ತೆರೆಸಿದ ಪ್ರಸಂಗ
ಹಿಡಿದೆ ನೀನು ಮುಕ್ತಿ ಮಾರ್ಗ
ರಾಮನಾಮ ಹಿಂದು ಮುಂದೆ
ಜಪಿಸುತಲಿ ಲೋಕಬಾಧೆಯ
ಮರೆವು, ತನ್ನರಿವಿನ ನಿಲುವು
ಪಾಪಿಗೂ ಉದ್ಧಾರವಿದೆ ಇಲ್ಲಿ
ಅಂತರಂಗದ ಅರಿವಿನ ಶುದ್ಧತೆ
ತನ್ನ ತಪ್ಪುಗಳನು ತಾನೇ ತಿದ್ದಿ
ತನ್ನೊಳಗಿನ ಶಕ್ತಿಗೆ ಆಹ್ವಾನ
ಪ್ರಪಂಚದ ಪರಿವೆಯಿಲ್ಲದೆ
ಹಸಿವು ತೃಷೆ, ಶಯನಗಳು
ಮರೆತು ಹೋಗಿ ಕುಳಿತುದಕೆ
ಹುತ್ತ ಬೆಳೆದು ಕಾಯ ಮಾಯ
ಮರಳಿ ಬಂದ ನಾರದರಿಗೆ
ಗುರುತು ಸಿಗದೆ ಹುಡುಕಿ ಸುಸ್ತು
ಸುತ್ತಲೂ ಮೆಲ್ಲದನಿಯ ರಾಮ
ತಿರುಗಿ ಬಾರಿ ಬಾರಿಗೆ ಮರಾ
ದಿಗ್ಭ್ರಮೆ ಮುನಿಗೆ ಚಣವು
ಈ ಪರಿವರ್ತನೆ, ಇನ್ನೇನು
ಇಂದಿನಿಂದ ನೀನು ವಲ್ಮೀಕ
ಬರೆ ನೀನು ರಾಮಾಯಣವ
ಹರಸಿ ಹೋದರು ನಾರದರು
ಒರೆದನೊಂದು ಮಹಾಕಾವ್ಯ
ಶ್ರೀರಾಮ ಕಥೆಯ ಅದ್ಭುತ
ಅಂದು ಇಂದು ಎಂದಿಗೂ..
ಡಾ.ಬಸಮ್ಮ ಎಸ್ ಗಂಗನಳ್ಳಿ



