ಪುಸ್ತಕ ಸಂಗಾತಿ
ಸುಜಾತಾ ರವೀಶ್
ಎಸ್ ಎಲ್ ಬೈರಪ್ಪನವರ
“ಉತ್ತರ ಕಾಂಡ”
ಒಂದು ಪರಾಮರ್ಶೆ


ಉತ್ತರಕಾಂಡ ಕಾದಂಬರಿ
ಎಸ್ ಎಲ್ ಬೈರಪ್ಪ ಲೇಖಕರು
ಪ್ರಕಾಶಕರು ಸಾಹಿತ್ಯ ಭಂಡಾರ ಪ್ರಕಾಶನ
ಮೊದಲ ಮುದ್ರಣ ೧೬.೦೧.೨೦೧೭
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಚಿರಪರಿಚಿತ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ನವರದು . ವಿಶಿಷ್ಟ ರೀತಿಯ ಕಥಾವಸ್ತುಗಳು ವಿಭಿನ್ನ ಹಂದರದ ಕಾದಂಬರಿಗಳಿಂದ ಮನೆಮಾತಾಗಿರುವ ಇವರ ಕಾದಂಬರಿಗಳು ಹೆಚ್ಚು ಹೆಚ್ಚು ಮುದ್ರಣಗಳನ್ನು ಕಾಣುತ್ತಿರುವುದು ಜನಪ್ರಿಯತೆಗೆ ಸಾಕ್ಷಿ . ೨೬.೦೭.೧೯೩೧ರಂದು ಜನಿಸಿದ ಭೈರಪ್ಪನವರದು ಕಡುಬಡತನದ ಕುಟುಂಬ. ಐದನೆಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ನೆಲೆನಿಂತವರು. ಭಿತ್ತಿ ಕಾದಂಬರಿಯು ಇವರ ಆತ್ಮ ಕಥನವೇ ಆಗಿದೆ . ಅವರೇ ಹೇಳಿಕೊಂಡಂತೆ ಗೊರೂರು ರಾಮಸ್ವಾಮಿ ಐಯಂಗಾರ್, ಆದಿಶಂಕರಾಚಾರ್ಯ, ಮಹಾತ್ಮಾಗಾಂಧಿ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು . ಒಟ್ಟು ಇಪ್ಪತ್ತೈದು ಕಾದಂಬರಿಗಳು ,ಜೀವನ ಚರಿತ್ರೆ ಭಿತ್ತಿ ಮತ್ತು ಇತರೆ 4 ಗ್ರಂಥಗಳನ್ನು ಬರೆದಿರುವ ಇವರ ಹದಿನೈದು ಕಾದಂಬರಿಗಳು ಮತ್ತು 2 ಗ್ರಂಥಗಳು ಇಂಗ್ಲಿಷ್ ಹಾಗೂ ಬೇರೆ ಬೇರೆ ಭಾರತೀಯ ಭಾಷೆಗಳಿಗೆ ತರ್ಜುಮೆ ಹೊಂದಿವೆ . ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿ ನೆರಳು ಮತ್ತು ದಾಟು ಕಾದಂಬರಿಗಳು ಚಲನಚಿತ್ರಗಳಾಗಿವೆ . ಗೃಹಭಂಗ ಮತ್ತು ದಾಟು(ಹಿಂದಿ) ಟಿವಿ ಧಾರಾವಾಹಿಗಳಾಗಿವೆ .ಕನ್ನಡ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡಮಿ, ಪಂಪಪ್ರಶಸ್ತಿ, ಎನ್ ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಸರಸ್ವತಿ ಸಮ್ಮಾನ್ ಪ್ರಶಸ್ತಿ, ನಾಡೋಜ ಪ್ರಶಸ್ತಿ, ವಾಗ್ವಿಲಾಸಿನಿ ಪುರಸ್ಕಾರ್, ಡಾಕ್ಟರ್ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, ಸಾಹಿತ್ಯ ಫೆಲೋ ಅಕಾಡಮಿ ಗೌರವ ಮುಂತಾದವು ಇವರ ಪ್ರತಿಭೆಗೆ ಸಂದ ಗೌರವಗಳಾಗಿವೆ .ಕನ್ನಡ ಸಾಹಿತ್ಯ ಪ್ರೇಮಿಗಳಲ್ಲಿ ಇವರು ಮೂಡಿಸಿರುವ ಛಾಪು ಅವಿಸ್ಮರಣೀಯ. ಇತ್ತೀಚೆಗೆ ಕ್ಲಬ್ ಹೌಸ್ ನಲ್ಲಿ ಇವರೊಡನಿನ ಸಂವಾದ ಅಂದಿನ ಎಲ್ಲಾ ಕ್ಲಬ್ ಹೌಸ್ ಸಂವಾದಗಳಿಗಿಂತ ಹೆಚ್ಚು ಶ್ರೋತೃವರ್ಗ ಹೊಂದಿದ ದಾಖಲೆಯಾಗಿದೆ.
೧೬.೦೧.೨೦೧೭ ರಂದು ಪ್ರಥಮ ಮುದ್ರಣಗೊಂಡು ೨೬.೦೧.೨೦೧೭ ಅಂದರೆ ಹತ್ತು ದಿನದ ಒಳಗೆ ದಾಖಲೆ 6 ಮುದ್ರಣಗಳನ್ನು ಕಂಡ ಕಾದಂಬರಿ ಇದು.
ಭೈರಪ್ಪನವರ ಹೇಳಿದಂತೆ ಇದು ವಾಲ್ಮೀಕಿ ರಾಮಾಯಣವನ್ನು ಅವಲಂಬಿಸಿದ ನೇರ ಸೃಜನಶೀಲ ಪ್ರತಿಕ್ರಿಯೆ .
ವಾಲ್ಮೀಕಿ ರಾಮಾಯಣ ಹಾಗೂ ಇನ್ನಿತರ ರಾಮಾಯಣಗಳಲ್ಲಿ ರಾಮನ ದೃಷ್ಟಿಯಿಂದ ಅವನನ್ನೇ ಕೇಂದ್ರೀಕರಿಸಿ ರಾಮಾಯಣ ಬರೆದಿದ್ದರೆ ಈ ಉತ್ತರಕಾಂಡ ಸಂಪೂರ್ಣವಾಗಿ ಸೀತಾಯಣ. ಸೀತೆಯ ದೃಷ್ಟಿಯಲ್ಲಿ ರಾಮಾಯಣವನ್ನು ಮತ್ತೊಮ್ಮೆ ಓದಿದ ಅನುಭವ .
ಇನ್ನೇನು ಪಟ್ಟಾಭಿಷಿಕ್ತಳಾಗಿ ಮೆರೆಯಬೇಕಿದ್ದ ಅವಳು ರಾಮನ ಜೊತೆ ವನವಾಸಕ್ಕೆ ಕಾಡಿಗೆ ಹೋಗಬೇಕಾಗಿ ಅಲ್ಲೆಲ್ಲಾ ಕಷ್ಟ ಅನುಭವಿಸಿ ರಾವಣನಿಂದ ಅಪಹೃತಳಾಗಿ ಅಲ್ಲಿಂದ ಬಂದು ಅಗ್ನಿಪರೀಕ್ಷೆಯ ಕಂಟಕವನ್ನು ಎದುರಿಸಿ ಅಯೋಧ್ಯೆಗೆ ಮರಳಿ ಬಂದು ಗರ್ಭಿಣಿಯಾಗಿರುವಾಗ ಗಂಡನಿಂದ ಪರಿತ್ಯಕ್ತಳಾಗುತ್ತಾಳಲ್ಲಾ! ಆ ವೈದೇಹಿಯ ಮನದ ಭಾವನೆಗಳು ತುಮುಲಗಳು ಗೊಂದಲಗಳು ಅಭಿಪ್ರಾಯಗಳು ನಿಜವಾಗಿ ಅವಳ ಸ್ವಗತವಾಗಿ ಇಲ್ಲಿ ಹೊರಬಂದಿದೆ . ಸೀತೆಯನ್ನು ಪತಿವ್ರತೆ ಎಂದಿದ್ದೇ ಇಷ್ಟೆಲ್ಲಾ ಕಷ್ಟಗಳನ್ನು ಏನೊಂದೂ ಪ್ರತಿನುಡಿಯದೆ ತುಟಿಕಚ್ಚಿ ಅನುಭವಿಸಿದಳಲ್ಲ ಅದಕ್ಕೇನಾ ಎನಿಸಿದ್ದು ಎಷ್ಟೋ ಬಾರಿ . ಆದರೆ ಸಾಮಾನ್ಯ ಸ್ತ್ರೀಯಂತೆ ಅವಳ ಭಾವನೆಗಳು ಇಲ್ಲಿ ಅನಾವರಣಗೊಳ್ಳುತ್ತದೆ . ಆ ಪರಿ ನಿಜಕ್ಕೂ ತುಂಬಾ ಖುಷಿ ಕೊಟ್ಟಿತು . ಅಲ್ಲದೆ ಭೈರಪ್ಪನವರಿಗೆ ಸ್ತ್ರೀ ಸಂವೇದನೆಗಳನ್ನು ತುಂಬಾ ಚೆನ್ನಾಗಿ ಅರಿಯುವ ಶಕ್ತಿ ಇದೆ . ಅವರನ್ನು ಸ್ತ್ರೀಪಕ್ಷಪಾತಿ ಬರಹಗಾರ ಎಂದೂ ಅನ್ನುತ್ತಾರೆ . ಅದಕ್ಕೆ ಈ ಉತ್ತರಕಾಂಡದ ಸೀತೆ ಅತ್ಯುತ್ತಮ ನಿದರ್ಶನವಾಗಿ ನಿಲ್ಲುತ್ತಾಳೆ.
ಕ್ರೌಂಚ ಪಕ್ಷಿಯ ಜೋಡಿಗಳಲ್ಲಿ ಒಂದಕ್ಕೆ ಬಾಣ ತಗುಲಿ ಸಾಯುವಾಗ ಅದನ್ನು ನೋಡಿದ ವಾಲ್ಮೀಕಿ ಮಹರ್ಷಿಗಳಿಂದ ರಾಮಾಯಣ ಕಾವ್ಯ ಜನಿಸುತ್ತದೆ ಅದೇ ವಾಲ್ಮೀಕಿಗಳು ಮುಂದೆ ಒಂದುಕಡೆ ಹೀಗೆನ್ನುತ್ತಾರೆ ಘಟನೆಗಳ ವಾಸ್ತವತೆ ಹೆಚ್ಚಾದರೆ ಅದರ ಭಾರಕ್ಕೆ ಕಾವ್ಯ ನಲುಗುತ್ತದೆ .ಅದು ಕಾವ್ಯ ವಾಗದೆಯೇ ಹೋಗಬಹುದು. ಈ ಮಾತನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಈಗ ನಮ್ಮ ಕಣ್ಣಿಗೆ ಬೀಳುವ ಮಹಾಕಾವ್ಯಗಳು ವಾಸ್ತವದ ಪರಿಧಿಯಿಂದ ಚೌಕಟ್ಟಿನಿಂದ ಅದೆಷ್ಟೋ ದೂರ ಸರಿದು ಬಂದಿರಬಹುದು; ಸಾಮಾನ್ಯ ಘಟನೆಗಳಿಗೆ ಅಸಾಮಾನ್ಯತೆಯ ಬಣ್ಣ ಬಳಿದಿರಬಹುದು; ಪವಾಡಗಳ ಲೇಪನವಾಗಿರಬಹುದು . ಹಾಗಾಗಿ ಘಟನೆಗಳನ್ನು ಹೇಗೆ ಇತ್ತೋ ಹಾಗೆ ಯಥಾವತ್ತಾಗಿ ಸಾಮಾನ್ಯರ ದೃಷ್ಟಿಯಲ್ಲಿ ನೋಡುತ್ತಾ ಹೋಗಿದೆ ಈ ಕಥನ . ಹಿಂದೆ ಪರ್ವ ಕಾದಂಬರಿಯಲ್ಲಿ ಭೈರಪ್ಪನವರು ಇದೇ ರೀತಿಯ ಸಾಮಾನ್ಯತೆಯ ಅನಾವರಣ ಮಾಡಿದ್ದಾರೆ .

ವಾಲ್ಮೀಕಿಯ ಆಶ್ರಮದಲ್ಲಿ ಲವ ಕುಶರಿಗೆ ಜನ್ಮ ಕೊಟ್ಟ ನಂತರದ ಘಟನೆಗಳ ಸಾಗುವಿಕೆಯೊಂದಿಗೆ ಸೀತೆಯು ತನ್ನ ಜೀವನದ ಹಿಂದಿನ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಹೋಗುವಂತೆ ಕಥೆ ನೇದಿರುವುದು ಇಲ್ಲಿನ ವಿಶಿಷ್ಟ ತಂತ್ರ . ಇಲ್ಲಿ ಗೌತಮ ಅಹಲ್ಯೆ ಪ್ರಸಂಗದಲ್ಲಿ ಅಹಲ್ಯೆ ಕಲ್ಲಾದಳು ಎನ್ನುವ ಅಸಾಧಾರಣ ಘಟನೆಯನ್ನು ಬೇರೆಯದೇ ರೀತಿಯ ಚಿತ್ರಣ ನೋಡಿ ಸಂಭವನೀಯ ಎನಿಸಿದ್ದಾರೆ . ಅಂತೆಯೇ ದಶರಥ ಪುತ್ರಕಾಮೇಷ್ಟಿ ಯಾಗದಿಂದ ಮಕ್ಕಳನ್ನು ಪಡೆದ ವಿಧಾನವನ್ನು ಆಯುರ್ವೇದದ ರೀತ್ಯ ಚಿಕಿತ್ಸೆ ಪಡೆದು ಮಕ್ಕಳಾದಂತೆ ಹೇಳುವ ಪರಿ ನಿಜ ಜೀವನಕ್ಕೆ ಹೆಚ್ಚು ಹತ್ತಿರ ಎನಿಸುತ್ತದೆ .
ಮುಂದೆ ವನವಾಸದ ಸಂದರ್ಭದಲ್ಲಿ ಲಕ್ಷ್ಮಣನು ರಾಮ ಸೀತೆಗಾಗಿ ಪಡುವ ಕಷ್ಟಗಳು, ಅಗ್ನಿ ಪರೀಕ್ಷೆಯ ಸಮಯದಲ್ಲಿ ರಾಮನನ್ನು ವಿರೋಧಿಸಿ ಸೀತೆಯನ್ನು ತಡೆಯುವುದು ಹಾಗೆಯೆ ಸೀತೆಯನ್ನು ಪರಿತ್ಯಜಿಸುವ ನಿರ್ಧಾರ ತೆಗೆದುಕೊಂಡ ರಾಮನನ್ನು ವಿರೋಧಿಸಿ ಅಯೋಧ್ಯೆಯನ್ನೇ ಬಿಟ್ಟು ತಾನು ಬೇರೆ ಕಡೆ ನೆಲೆಗೊಳ್ಳುವುದು ಈ ರೀತಿಯಲ್ಲಿ ಲಕ್ಷ್ಮಣನ ವ್ಯಕ್ತಿತ್ವದ ಮತ್ತೊಂದು ಆಯಾಮವನ್ನು ತೆರೆದಿಟ್ಟಿದ್ದಾರೆ . ಅಂತೆಯೇ ಇಲ್ಲಿಯ ಊರ್ಮಿಳೆಯೂ ಅಷ್ಟೇ ನೇಪಥ್ಯಕ್ಕೆ ಸರಿದ ನಾಯಕಿಯಲ್ಲ ಮುಂದೆಯೂ ರಾಮನ ಆಜ್ಞೆಯ ವಿರುದ್ಧವೇ ಸೀತೆಗೆ ಸಹಾಯ ಮಾಡುತ್ತಾ ಅವಳ ಸಂಪರ್ಕವನ್ನಿಟ್ಟುಕೊಂಡು ಧೈರ್ಯ ತುಂಬುವ ನಿಜವಾದ ಸೋದರಿ .
ಕೈಕೇಯಿ ದಶರಥನನ್ನು ವಿವಾಹವಾಗಿ ಬಂದ ಸಂದರ್ಭದ ಹಿನ್ನೆಲೆ ಮುಂದೆ ಭರತನನ್ನು ರಾಜನನ್ನಾಗಿ ಅವಳು ಮಾಡುವ ರಾಜಕೀಯ ಹುನ್ನಾರ ರಾಮನನ್ನು ವನವಾಸಕ್ಕೆ ಕಳುಹಿಸಿಸುವಲ್ಲಿ ಅವಳು ತೋರುವ ರಾಜಕೀಯ ಮುತ್ಸದ್ದಿತನ ಇದೆಲ್ಲವೂ ನಿಜ ಜೀವನಕ್ಕೆ ಹೆಚ್ಚು ಹೆಚ್ಚು ಹತ್ತಿರವೆನಿಸುತ್ತದೆ .
ವನವಾಸದ ಸಂದರ್ಭದಲ್ಲಿ ಮುಂದೆ ಅನಸೂಯೆ ಅತ್ರಿಗಳ ಆಶ್ರಮದಲ್ಲಿ ಸೀತೆಗೆ ಹೇಳುವ ಈ ಮಾತುಗಳು ಗಮನೀಯ “ಅಲಂಕರಿಸಿಕೊಂಡು ತನ್ನ ಚೆಲುವನ್ನು ಕಾಪಾಡಿಕೊಳ್ಳುವುದು ಹೆಣ್ಣಿನ ಅಗತ್ಯ ಧರ್ಮ” ಎಂದು ಹೇಳುತ್ತಾ ಸೀತೆಗೆ ಆಭರಣಗಳನ್ನು ರೇಷ್ಮೆ ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಾಳೆ. .ಬೇರೆಯವರಿಗಾಗಿ ಅಲ್ಲದೆ ನಮ್ಮ ಮನಸ್ಸಂತೋಷಕ್ಕಾಗಿ ಅಲಂಕರಿಸಿಕೊಳ್ಳಬೇಕು ಎನ್ನುವುದು ಅಂದಿನ ಕಾಲದಿಂದಲೂ ಇದ್ದದ್ದೇ ಎಂದು ತಿಳಿದು ಅಚ್ಚರಿಯಾಗುತ್ತದೆ .
ಮುಂದೆ ಲಂಕೇಶನೇ ಕಪಟ ಸನ್ಯಾಸಿಯಾಗಿ ಬಂದು ಸೀತೆಯನ್ನು ಅಪಹರಿಸುತ್ತಾನೆ ಎನ್ನುವ ಸರ್ವವಿಧಿತ ಅಂಶವನ್ನು ಬಿಟ್ಟು ರಾವಣ ತನ್ನ ಸೇವಕರನ್ನು ಕಳುಹಿಸಿ ಸೀತೆಯನ್ನು ಅಪಹರಿಸುತ್ತಾನೆ ಎಂಬ ಅಂಶ ಇಲ್ಲಿ . ರಾವಣನ ಬಳಿ ಸೆರೆಯಾಳಾಗಿ ಇರುವ ಸೀತೆಯಲ್ಲಿ ಮೂಡುವ ಈ ವಿಚಾರಗಳು ಎಷ್ಟು ಸಾರ್ವಕಾಲಿಕ ನೋಡಿ . “ದೇಹಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶವಾದ ಭಾವ ಬರುತ್ತೆ? ದೇಹವು ಆತ್ಮ ಜೀವ ಬುದ್ದಿ ಮನಸ್ಸುಗಳಿಗಿಂತ ಜಡವಾದದ್ದು. ಜಡವು ಅಶುದ್ಧವಾಗಿಯೂ ಆತ್ಮ ಜೀವ ಮನಸ್ಸುಗಳು ಶುದ್ಧವಾಗಿರಲು ಸಾಧ್ಯವಿಲ್ಲವೇ? ಅತ್ಯಾಚಾರದ ಪಾಪವು ಅತ್ಯಾಚಾರಿಗೆ ಮಾತ್ರ ಮೆತ್ತಿಕೊಳ್ಳಬೇಕೇ ಹೊರತು ಬಲಿಯಾದವಳಿಗೆ ಯಾಕೆ ತಗುಲಬೇಕು? ಅವಳೇಕೆ ಆ ದೇಹವನ್ನು ತ್ಯಜಿಸಬೇಕು”. ಎಷ್ಟು ಪುರೋಗಾಮಿ ಹಾಗೂ ಸತ್ಯವಾದ ಆಲೋಚನೆಗಳು! ಆದರೆ ಅವುಗಳ ಅರಿವು ಇಂದಿಗೂ ಆಗದಿರುವುದು ಮಾತ್ರ ನಿಜಕ್ಕೂ ವಿಷಾದನೀಯ .
ಮುಂದೆ ವಾಲ್ಮೀಕಿಗಳ ಆಶ್ರಮದ ಬಳಿ ತಾನೇ ವ್ಯವಸಾಯವನ್ನು ರೂಢಿಸಿಕೊಂಡು ಭೂಮಿ ಪುತ್ರಿ ಎಂಬ ನಾಮಕ್ಕೆ ಅನ್ವರ್ಥವಾಗುವಂತೆ ಸ್ವಾವಲಂಬಿಯಾಗಿ ಕೃಷಿಕಳಾಗಿರುವ ಸೀತೆ ನಿಜಕ್ಕೂ ಮಾದರಿಯಾಗಿ ತನ್ನ ಅಸ್ಮಿತೆಯನ್ನು ತೋರಿಸಿಕೊಳ್ಳುವವಳು . ಅಂತೆಯೇ ಆ ಸಮಯದಲ್ಲಿ ತನ್ನ ಮಕ್ಕಳಿಗೆ ನನ್ನನ್ನು ನಿಷ್ಕರುಣೆಯಿಂದ ಪರಿತ್ಯಜಿಸಿದವನ ಮೇಲೆ ನನ್ನ ಮಕ್ಕಳ ಮನಸ್ಸಿನಲ್ಲಿ ಶಾಶ್ವತ ದ್ವೇಷ ಬೆಳೆಯುವಂತೆ ಒರೆಯಬೇಕು ಎಂದೆನಿಸಿದರೂ ತನ್ನ ತಂದೆ ಕೊಟ್ಟ ಸಂಸ್ಕಾರ ಕ್ಕೆ ಸರಿಯಾಗಿ ನಡೆಯಬೇಕು ಎಂದು ಹೇಳಿ ಆ ಯೋಚನೆಯನ್ನು ತ್ಯಜಿಸುತ್ತಾಳೆ .ಹಾಗಾಗಿಯೇ ಮುಂದೇ ಲವಕುಶರು ರಾಮನನ್ನು ದ್ವೇಷಿಸದೆ ಅಯೋಧ್ಯೆಗೆ ಹೋಗುವುದು.
ಅಶ್ವಮೇಧ ಯಾಗದ ಸಂದರ್ಭದಲ್ಲಿ ಸೀತೆಯನ್ನು ಮತ್ತೆ ಸ್ವೀಕರಿಸುವೆ ಎಂಬ ರಾಮನ ಕರೆಗೆ ಓಗೊಡದ ಸೀತೆ ವಿಶಿಷ್ಠವಾಗಿ ಎದ್ದು ತೋರುತ್ತಾಳೆ . ಹೆಣ್ಣೆಂದರೆ ಆಟದ ವಸ್ತು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎನ್ನುವ ಪುರುಷ ಪ್ರಧಾನ ಸಮಾಜಕ್ಕೆ ಸಡ್ಡು ಹೊಡೆಯುವಂತೆ ಮತ್ತೆ ವಾಲ್ಮೀಕಿ ಆಶ್ರಮಕ್ಕೆ ವಾಪಸ್ಸು ಬರುತ್ತಾಳೆ . ಇಲ್ಲಿನ ಸೀತೆ ಆಪ್ತಳಾಗುವುದು ಅದಕ್ಕಾಗಿಯೇ.
ಯಾಜ್ಞವಲ್ಕ್ಯರು ಆಧ್ಯಾತ್ಮವನ್ನು ಬೋಧಿಸಿ ಎಂದು ಹೇಳಿದ ತಮ್ಮ ಪತ್ನಿ ಮೈತ್ರೇಯಿಗೆ ಹೇಳಿದ ಈ ಶ್ಲೋಕ ಇಲ್ಲಿ ಉದ್ದೃತವಾಗಿದೆ .
ನ ವಾ ಅರೇ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ, ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ, ನ ವಾ ಅರೇ ಜಾಯಾಯೈ ಕಾಮಾಯ ಜಾಯ ಪ್ರಿಯಾ ಭವತಿ, ಆತ್ಮನಸ್ತು ಕಾಮಾಯ ಜಾಯಾ ಪ್ರಿಯಾ ಭವತಿ
ಗಂಡನ ಪ್ರಯೋಜನಕ್ಕಾಗಿ ಅವನ ಹೆಂಡತಿಗೆ ಪ್ರಿಯನಾಗುವುದಿಲ್ಲ ಅವಳ ಪ್ರಯೋಜನಕ್ಕಾಗಿ ಪ್ರಿಯನಾಗಿರುತ್ತಾನೆ: ಹಾಗೆಯೇ ಹೆಂಡತಿಯ ಪ್ರಯೋಜನಕ್ಕಾಗಿ ಅವಳು ಗಂಡನಿಗೆ ಪ್ರಿಯಳಾಗಿರುವುದಿಲ್ಲ ತನ್ನ ಪ್ರಯೋಜನಕ್ಕಾಗಿ ಪ್ರಿಯಳಾಗಿರುತ್ತಾಳೆ; ಮಕ್ಕಳ ಪ್ರಯೋಜನಕ್ಕಾಗಿ ತಂದೆತಾಯಿಯರು ಅವರನ್ನು ಪ್ರೀತಿಸುವುದಿಲ್ಲ ತಮ್ಮ ಪ್ರಯೋಜನಕ್ಕಾಗಿ ಪ್ರೀತಿಸುತ್ತಾರೆ. ಹಾಗೆಯೇ ಧನ ಪಶುಗಳು ಎಲ್ಲವೂ ತನಗಾಗುವ ಸಂತೋಷಕ್ಕಾಗಿ ಎಲ್ಲರೂ ಇತರ ಎಲ್ಲರನ್ನೂ ಪ್ರೀತಿಸುತ್ತಾರೆ ಎಂದರೆ ಎಲ್ಲ ಪ್ರೀತಿಯೂ ಸ್ವಕೇಂದ್ರಿತವಾಧ್ದೇ.
ನಿಜ ಜೀವನದ ತಿರುಳು ಇದೆಯಲ್ಲವೇ? ಈ ಆಧಾರದ ಮೇಲೆಯೇ ಸೀತೆ ತನ್ನ ಮತ್ತು ರಾಮನ ಸಂಬಂಧದ ನಡುವಿನ ಘಟನೆಗಳನ್ನು ಒರೆ ಹಚ್ಚುತ್ತಾಳೆ ಹಾಗೂ ತನ್ನ ಅನುಭವದ ಮೂಸೆಯಲ್ಲಿ ತಿಕ್ಕುತ್ತಾಳೆ.
ಆದರೆ ರಾಮನು ತಾನು ಅವನನ್ನು ಮತ್ತೆ ಸ್ವೀಕರಿಸದೆ ವಾಪಸ್ಸು ಬಂದನಂತರ ಲವಕುಶರಿಗೆ ಪಟ್ಟಕಟ್ಟಿ ಲಕ್ಷ್ಮಣನನ್ನು ಅವರ ಬೆಂಬಲವಾಗಿರಿಸಿ ಬೇರೆಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ನದಿಯಲ್ಲಿ ಪ್ರಾಣ ತ್ಯಾಗ ಮಾಡಿದ ವಿಷಯ ತಿಳಿದ ನಂತರ ನಾನು ಅವನನ್ನು ತ್ಯಜಿಸಿದ್ದಕ್ಕಾಗಿ ಈ ವೈಧವ್ಯದ ಶಿಕ್ಷೆಯನ್ನು ಕೊಟ್ಟನೇನೋ ಎಂದು ಪರಿತಪಿಸುವ ಸೀತೆ ಕಡೆಗೆ ಸಾಲಂಕೃತ ಮುತ್ತೈದೆಯಾಗಿ ಇಚ್ಛಾ ಮರಣವನ್ನು ಕೈಗೊಂಡು ಮಣ್ಣಿನೊಳಗೆ ಐಕ್ಯಳಾಗುವ ಸಂಧರ್ಭ ತುಂಬಾ ಮನಸ್ಸಿಗೆ ತಟ್ಟುವ ಹಾಗೆ ಚಿತ್ರಿತವಾಗಿದೆ . ಸುಮ್ಮನೆ ಭೂಮಿಯಲ್ಲಿ ಐಕ್ಯಳಾದಳು ಎನ್ನುವ ರೀತಿಗಿಂತ ಇದು ಬೇರೆಯೇ ಪರಿಕಲ್ಪನೆಯಾಗಿ ಮೂಡಿಬಂದಿದೆ .
ಕಾದಂಬರಿಯ ಕಡೆಯ ಸಾಲುಗಳಾಗಿ ವಾಲ್ಮೀಕಿ ಮಹರ್ಷಿಗಳು ಹೇಳುತ್ತಾರೆ “ಕಾವ್ಯದಲ್ಲಿ ಕೂಡಾ ಸುಖವನ್ನು ಸೃಷ್ಟಿಸುವುದು ಸಾಧ್ಯವಿಲ್ಲದಂತಾಯಿತಲ್ಲ ಕವಿಯು ಏನನ್ನು ತಾನೆ ಬದಲಿಸಬಲ್ಲ ಎಂಬ ವೈಫಲ್ಯ ಬಾಧಿಸುತ್ತಿದೆ”.
ತೀವ್ರ ವಿಷಾದ ತಟ್ಟುವಂತಹ ಒಂದು ಅಲೌಕಿಕ ಕಥೆಯ ಅಂತ್ಯಕ್ಕೆ ತಕ್ಕನಾದ ಉಪಸಂಹಾರ .
ಸುಜಾತಾ ರವೀಶ್
ಮೈಸೂರು





ಉತ್ತರ ಕಾಂಡದ ಪ
ತುಂಬಾ ಚೆನ್ನಾಗಿದೆ ಮೇಡಂ
ಸವಿತಾ ದೇಶಮುಖ
ಚೆನ್ನಾಗಿದೆ ವಿಮರ್ಶೆ
ಬಹಳ ಚನ್ನಾಗಿದೆ.
ಆಯುರ್ವೇಧ ಔಷಧದಿಂದ ಧಶರಥನಿಗೆ ಮಕ್ಕಳಾಗುವುದಲ್ಲ, ನಿಯೋಗದಿಂದ. ರಾಮಾಯಣ, ಮಹಾಭಾರತ ಕಾಲದಲ್ಲಿ ಪ್ರಚುಲಿತ ಇದ್ದ ಪದ್ಧತಿ ಅದು.
ತುಂಬ ಚೆನ್ನಾಗಿದೆ
ಅರ್ಥಪೂರ್ಣವಾಗಿದೆ.
ಅಭಿನಂದನೆಗಳು