ಕಾವ್ಯ ಸಂಗಾತಿ
ರಾಜು ಪವಾರ್
ರೈತನಿಗೆಲ್ಲಿದೆ ಸ್ವಾತಂತ್ರ್ಯ!?

ಸತ್ಯ ಶೋಧನೆ ಮಾಡಿದ ಗಾಂಧಿಜಿಗೆ
ಸತ್ಯ ಕಂಡಿತು ರೈತನ ಮೊಗದಲ್ಲಿ
ಮಣ್ಣಲ್ಲಿ ಚಿನ್ನ-ಅನ್ನ ಬೆಳೆವ ಕಣ್ಣುಗಳಲ್ಲಿ !
ಗಾಂಧಿಜಿ ಕಂಡಂತೆ ಹಳ್ಳಿಗಳು ದೇಶದ ಆತ್ಮ
ರೈತರು ಹಳ್ಳಿಗಳ ವಾರಸುದಾರರು
ಸ್ವತಂತ್ರ ಭಾರತದ ರಾಯಭಾರಿಗಳು !
ರಾಜಕೀಯ ಸ್ವತಂತ್ರ ದಕ್ಕಿತು
ಮನಸುಗಳ ದಾಸ್ಯ ಕಳಚಲಿಲ್ಲ
ದೇಹಗಳು ಸ್ವತಂತ್ರ, ಮನಸುಗಳು ಪರತಂತ್ರ !
ಸ್ವತಂತ್ರೋತ್ತರ ಭಾರತದ ಹಸಿರು ಕ್ರಾಂತಿ
ಆಹಾರ ಸ್ವಾವಲಂಬಿಯೆಡೆಗೆ ಹೆಜ್ಜೆ
ರೈತನ ಬಾಳು ಹಸಿರಾಗಲಿಲ್ಲ !
ಶಿಕ್ಷಣ, ಉದ್ಯೋಗ, ವ್ಯಾಪಾರ
ಸ್ವತಂತ್ರ ಭಾರತದ ಫಲ
ರೈತನಿಗೆ ಸ್ವಾತಂತ್ರ್ಯ ಕೊಡುವಲ್ಲಿ ವಿಫಲ !
ಕೈಗಾರಿಕೋತ್ಪನ್ನಗಳಿಗೆ
ಮಾಲಿಕರೇ ಕಟ್ಟುವರು ಮಾರುವ ಬೆಲೆ
ರೈತನಿಗೆಲ್ಲಿದೆ ಆ ಸ್ವಾತಂತ್ರ್ಯ!?
ತಂತಮ್ಮ ಬೇಳೆ ಬೇಯಿಸಿಕೊಳ್ಳಲು ಬೇಕು ರೈತ
ರೈತನ ಹೆಸರಲ್ಲಿ ರಾಜಕೀಯ
ರೈತನಿಗೆ ದಕ್ಕಲಿಲ್ಲ ಸ್ವಾತಂತ್ರ್ಯ
ಸ್ವಾತಂತ್ರ್ಯಕ್ಕಿದೆಯೇ ಅರ್ಥ !!??
ರಾಜು ಪವಾರ್




