ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆಡ್ ಮಾಸ್ಟರ್ ಮಾರ್ಗದರ್ಶನದಲ್ಲಿ ಹಾಗೂ ತಾನು ಖರೀದಿ ಮಾಡಿ ತಂದ ಪುಸ್ತಕದಲ್ಲಿ ಇರುವಂತೆ ಮಗಳಿಗೆ ಅಭ್ಯಾಸ ಮಾಡಿಸಿದಳು. ಪರೀಕ್ಷೆಯು ನಡೆಯಿತು. ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ಮಾಡಿರಹುದು ಎನ್ನುವ ಭರವಸೆ ಮಗಳ ಮಾತಿನಲ್ಲಿ ಇತ್ತು. ಫಲಿತಾಂಶದ ದಿನವೂ ಬಂತು. ಪರೀಕ್ಷೆಯ ಫಲಿತಾಂಶ ಶಾಲೆಗೆ ತಲುಪಿತು. ಆದಷ್ಟು ಬೇಗ ತನ್ನನ್ನು ಬಂದು ಭೇಟಿಯಾಗುವಂತೆ ಹೆಡ್ ಮಾಸ್ಟರ್ ಮಗಳ ಮೂಲಕ ಸುಮತಿಗೆ ಸಂದೇಶ ಕಳುಹಿಸಿದರು. ಮಗಳು ಹೆಡ್ ಮಾಸ್ಟರ್ ಹೇಳಿದ ವಿಷಯವನ್ನು ಅಮ್ಮನಿಗೆ ತಿಳಿಸಿದಾಗ ಏಕಿರಬಹುದು? ನನ್ನ ಮಗಳು ಆಯ್ಕೆಯಾಗಿದ್ದಾಳೆಯೇ? ಇಲ್ಲವೇ? ಎನ್ನುವ ಜಿಜ್ಞಾಸೆ ಅವಳ ಮನದಲ್ಲಿ ಮೂಡಿತು. ಮಾರನೇ ದಿನ ತೋಟದ ರೈಟರ್ ಅನುಮತಿಯನ್ನು ಪಡೆದು, ಮಗಳು ಶಾಲೆಗೆ ಹೋಗುವಾಗ ಅವಳ ಜೊತೆ ಹೊರಟಳು. ರೈಟರ್ ಮಗಳೂ ಕೂಡ ಈ ಪರೀಕ್ಷೆಯನ್ನು ಬರೆದಿದ್ದ ಕಾರಣ ಅದನ್ನು ಕೂಡ ವಿಚಾರಿಸಿಕೊಂಡು ಬರಲು ಸುಮತಿಗೆ ಹೇಳಿದರು. ಸುಮತಿ ಲಗುಬಗೆಯಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದಳು. ಹೃದಯವು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಹೆಡ್ ಮಾಸ್ಟರ್ ಕೊಠಡಿಯ ಮುಂದೆ ಬಂದು ನಿಂತಳು….”ನಮಸ್ಕಾರ ಸರ್”… ಎಂದಳು. ಸುಮತಿಯನ್ನು ಕಂಡ ಹೆಡ್ ಮಾಸ್ಟರ್ ಒಳಗೆ ಬರುವಂತೆ ಸೂಚಿಸಿದರು. ಕುರ್ಚಿಯಲ್ಲಿ ಕುಳಿತುಕೊಳ್ಳುವಂತ ಹೇಳಿ, ಒಂದು ಲಿಸ್ಟ್ ಅನ್ನು ಕೈಗೆ ತೆಗೆದುಕೊಂಡರು. ತಾವು ಹಸಿರು ಶಾಯಿಯಲ್ಲಿ ಗುರುತು ಮಾಡಿದ್ದ ಹೆಸರನ್ನು ಸುಮತಿಗೆ ತೋರಿಸಿದರು….” ನಮ್ಮ ಶಾಲೆಯಿಂದ ನಿಮ್ಮ ಮಗಳು ಮಾತ್ರ ಉತ್ತಮ ಅಂಕ ಗಳಿಸಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾಳೆ”…. ಎಂದು ಬಹಳ ಸಂತಸದಿಂದ ಹೇಳಿದರು. ಹೆಡ್ ಮಾಸ್ಟರ್ ಹೇಳಿದ ಮಾತುಗಳನ್ನು ಕೇಳಿ ಸುಮತಿಗೆ ಅತ್ಯಾನಂದವಾಯಿತು. 

ಸುಮತಿಯ ಕಣ್ಣುಗಳಿಂದ ಆನಂದಭಾಷ್ಪ ಉದುರಿತು. ಹೆಡ್ ಮಾಸ್ಟರ್ ಗೆ ಕೈಮುಗಿದು… “ಸರ್ ನಿಮ್ಮ ಉಪಕಾರವನ್ನು ನಾನೆಂದಿಗೂ ಮರೆಯಲಾರೆ…. ಹೀಗೊಂದು ಪರೀಕ್ಷೆ ಇದೆ ಎಂದು ನಮಗೆ ಅರಿವು ನೀಡಿದ್ದೀರಿ….. ನನ್ನ ಮಗಳು ಈ ಶಾಲೆಗೆ ಆಯ್ಕೆಯಾಗಲು ನೀವು ಬಹಳಷ್ಟು ಸಹಾಯವನ್ನು ಮಾಡಿದ್ದೀರಿ… ಪರೀಕ್ಷೆಗಾಗಿ ಅವಳು ಹೇಗೆ ಅಭ್ಯಾಸ ಮಾಡಬೇಕು ಎನ್ನುವುದರ ಬಗ್ಗೆ ಮಾರ್ಗದರ್ಶನ ನೀಡಿದ್ದೀರಿ…. ನನ್ನಲ್ಲಿ ನಿಮಗಾಗಿ ಕೊಡಲು ಏನೂ ಇಲ್ಲ…. ಮುಂದೊಂದು ದಿನ ನನ್ನ ಮಗಳು ಉನ್ನತ ವಿದ್ಯಾಭ್ಯಾಸ ಮಾಡಿ ನಿಮ್ಮ ಗೌರವವನ್ನು ಉಳಿಸುತ್ತಾಳೆ ಎನ್ನುವ ನಂಬಿಕೆ ನನಗಿದೆ…. ಇದೇ ನಾನು ಮತ್ತು ಅವಳು ನಿಮಗೆ ನೀಡುವ ಗುರುದಕ್ಷಿಣೆ”….. ಎಂದು ಗದ್ಗದಿತವಾಗಿ ಹೇಳುತ್ತಾ ಹೆಡ್ ಮಾಸ್ಟರ್ ಗೆ ಕೈಮುಗಿದು ವಂದಿಸಿದಳು. ಸುಮತಿಯ ಈ ಮಾತುಗಳನ್ನೆಲ್ಲ ಆಲಿಸಿದ ಹೆಡ್ ಮಾಸ್ಟರ್….” ಸುಮತಿಯವರೇ ಎಂತಹ ದೊಡ್ಡ ಮಾತುಗಳನ್ನು ಆಡುತ್ತಿದ್ದೀರಿ….. ನಿಮ್ಮ ಮಗಳು ನಮ್ಮ ಶಾಲೆಯ ವಿದ್ಯಾರ್ಥಿನಿ, ನವೋದಯ ಶಾಲೆಗೆ ಆಯ್ಕೆಯಾಗುವ ಮೂಲಕ ಈಗ ನಮ್ಮ ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾಳೆ….. ಆಕೆ ಬಹಳ ಬುದ್ಧಿವಂತೆ ನವೋದಯ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ಪದವಿಯನ್ನು ಪಡೆದು ನಮ್ಮೆಲ್ಲರ ಕನಸುಗಳನ್ನು ಈಕೆ ಸಾಕಾರಗೊಳಿಸುತ್ತಾಳೆ…. ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ….ದೇವರು ನಿಮಗೆ ಒಳ್ಳೆಯದನ್ನು ಮಾಡಲಿ”…. ಎಂದು ಹಾರೈಸಿದರು. ಸರ್, ಆ ಶಾಲೆಗೆ ಸೇರಲು ಏನೇನು ನಿಯಮಗಳು ಇವೆ? ಎನ್ನುವುದನ್ನು ದಯವಿಟ್ಟು ಕೂಲಂಕುಶವಾಗಿ ತಿಳಿಸಿ”… ಎಂದು ಸುಮತಿ ಕೇಳಿದಳು. ಸುಮತಿಯ ಮಾತನ್ನು ಆಲಿಸಿದ ಹೆಡ್ ಮಾಸ್ಟರ್ ಪಟ್ಟಿಯ ಕೆಳಗೆ ಇದ್ದ ನಿಯಮಗಳನ್ನು ತೋರಿಸಿ ಹೇಳಿದರು. 

“ಸುಮತಿಯವರೇ ನೀವು ಆದಷ್ಟು ಬೇಗ ಸಕಲೇಶಪುರದ ತಾಲ್ಲೂಕು ಕಚೇರಿಗೆ ತೆರಳಿ ಅಲ್ಲಿಂದ ಬೇಕಾದ ದಾಖಲೆಗಳನ್ನು ಪಡೆದು ಅತಿ ಶೀಘ್ರದಲ್ಲೇ ಹೊಸದಾಗಿ ಪ್ರಾರಂಭವಾಗಿರುವ ನವೋದಯ ಶಾಲೆಗೆ ತೆರಳಿ ಅವುಗಳನ್ನು ಅಲ್ಲಿ ಸಲ್ಲಿಸಿದ ನಂತರ ನನಗೆ ತಿಳಿಸಿ”…. ಎಂದರು. ಹೆಡ್ ಮಾಸ್ಟರ್ ಮಾತನ್ನು ಆಲಿಸಿದ ಸುಮತಿ “ಸರ್ ಹಾಗೆ ಆಗಲಿ”…. ಎಂದು ಹೇಳುತ್ತಾ ಕೈಮುಗಿದು ಮಗಳನ್ನು ಕರೆದುಕೊಂಡು ಅಲ್ಲಿಂದ ಹೊರಟಳು. ಸುಮತಿಯ ಮಗಳು ಕೂಡಾ ಹೆಡ್ ಮಾಸ್ಟರ್ ಗೆ ಧನ್ಯವಾದಗಳನ್ನು ತಿಳಿಸಿ ,ವಂದನೆಗಳನ್ನು ಸಲ್ಲಿಸಿದಳು. ಹೇಗೂ ರೈಟರ್ ರವರಿಂದ ಶಾಲೆಯ ಒಂದು ದಿನದ ರಜೆಗೆ ಅನುಮತಿ ಪಡೆದಿರುವುದರಿಂದ ಸಕಲೇಶಪುರಕ್ಕೆ ಹೋಗುವ ಮಧ್ಯಾಹ್ನದ 12ರ ಬಸ್ ಹತ್ತಿ ಸಕಲೇಶಪುರದ ಕಡೆಗೆ ಹೊರಟಳು. ಸಕಲೇಶಪುರ ತಲುಪಿದ ನಂತರ ಹಿರಿಯ ಮಗಳ ಮನೆಗೆ ಹೋದರು. ದೂರದ ಊರಿಗೆ ಟಿಂಬರ್ ಕೆಲಸಕ್ಕೆಂದು ಹೋಗಿದ್ದ ಅಳಿಯ ಅಂದು ಮನೆಗೆ ಬಂದಿದ್ದರು. ಅಳಿಯನನ್ನು ಕಂಡು ಸುಮತಿಗೆ ಬಹಳ ಸಂತೋಷವಾಯಿತು. ಅಳಿಯನಿಗೆ ವಿಷಯವನ್ನು ತಿಳಿಸಿದರು. ಅಳಿಯನಿಗೂ ಬಹಳ ಸಂತೋಷವಾಯಿತು. ತಾಲ್ಲೂಕು ಕಚೇರಿ ಹಾಗೂ ನಾದಿನಿ ನವೋದಯ ಶಾಲೆಗೆ ಹೋಗಿ ದಾಖಲಾಗುವವವರೆಗೂ ಎಲ್ಲಾ ಕೆಲಸಗಳಿಗೂ ತಾನು ಜೊತೆಗೆ ಬರುವುದಾಗಿ ಅಳಿಯ ಭರವಸೆ ನೀಡಿದನು. ಮಗಳ ಮನೆಯಲ್ಲಿ ಸುಮತಿಗೂ ಒಂದು ಸಂತಸದ ವಿಷಯ ಕಾದಿತ್ತು. ಹಿರಿಯ ಮಗಳು ಎರಡನೇ ಬಾರಿಗೆ ತಾನು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಅಮ್ಮನಿಗೆ ತಿಳಿಸಿದಳು. ಸುಮತಿಗೆ ಬಹಳ ಆನಂದವಾಯಿತು. ತಾನು ಮತ್ತೊಮ್ಮೆ ಅಜ್ಜಿಯಾಗುತ್ತಿದ್ದೇನೆ ಎನ್ನುವ ಸಂಗತಿ ಅವಳಿಗೆ ಖುಷಿಕೊಟ್ಟಿತು. ಅಷ್ಟು ಹೊತ್ತಿಗೆ ಅಜ್ಜಿಯ ದನಿಯನ್ನು ಕೇಳಿದ ಮೊಮ್ಮಗ ನಿದ್ರೆಯಿಂದ ಎದ್ದು ಓಡೋಡಿ ಬಂದು ಅಜ್ಜಿಯ ಮಡಿಲನ್ನು ಹತ್ತಿ ಕುಳಿತುಕೊಂಡ. 

ಮೊಮ್ಮಗನನ್ನು ಕಂಡ ಸುಮತಿಗೆ ಬಹಳ ಆನಂದವಾಯಿತು. ಅವನನ್ನು ಎತ್ತಿ ಮುದ್ದಾಡಿ ಅವನ ಕೆನ್ನೆಗೆ ಹೂಮುತ್ತನ್ನು ಕೊಟ್ಟು ಅಪ್ಪಿಕೊಂಡಳು. ಅಜ್ಜಿಯನ್ನು ಕಂಡರೆ ಮೊಮ್ಮಗನಿಗೆ ಬಹಳ ಪ್ರೀತಿ. ಮೊಮ್ಮಗನನ್ನು ಕಂಡು ತುಂಬಾ ದಿನಗಳಾಗಿತ್ತು. ಹಾಗಾಗಿ ಅವನನ್ನು ನೆಲಕ್ಕೆ ಬಿಡದೆ ಮಡಿಲಲ್ಲಿ ಕುಳ್ಳಿರಿಸಿ ಕೊಂಡಿದ್ದಳು. ಇನ್ನೇನು ಸ್ವಲ್ಪ ಹೊತ್ತಿಗೆ ಎರಡನೇ ಮಗಳು ಟೈಪಿಂಗ್ ಮುಗಿಸಿ ಅಕ್ಕನ ಮನೆಗೆ ಬರುವವಳಿದ್ದಳು. ಸಂಜೆ ಅವಳ ಜೊತೆಗೆ ಒಟ್ಟಿಗೇ ಮನೆಗೆ ಹಿಂದಿರುಗಿ ಹೋದರಾಯಿತು ಎಂದುಕೊಂಡಳು ಸುಮತಿ . ಅಮ್ಮ ಮತ್ತು ತಂಗಿ ಬಂದಿರುವುದರಿಂದ ಹಿರಿಯ ಮಗಳು ರುಚಿರುಚಿಯಾದ ಅಡುಗೆಯನ್ನು ಮಾಡಿದಳು. ಎಲ್ಲರೂ ಸಂತೋಷದಿಂದ ಊಟ ಮಾಡಲು ಕುಳಿತರು. ಅದೇ ವೇಳೆಗೆ…” ಅಕ್ಕಾ… ಇದೋ ನಾನು ಬಂದೇ”…. ಎಂದು ಹೇಳುತ್ತಾ ಹೊಸ್ತಿಲು ದಾಟಿ ಅಕ್ಕನ ಮನೆಯ ಒಳಗೆ ಕಾಲಿಟ್ಟ ಹುಡುಗಿಗೆ ಅಮ್ಮ ಹಾಗೂ ತಂಗಿಯನ್ನು ಕಂಡು ಅಚ್ಚರಿಯಾಯಿತು….”ಅಮ್ಮ ಇದೇನು ನೀನೆಲ್ಲಿ? ಜೊತೆಗೆ ತಂಗಿಯು ಬಂದಿದ್ದಾಳೆ…. ಏನು ವಿಶೇಷ”… ಎಂದು ಕೇಳಲು ಅವಳ ಅಕ್ಕ…” ಮೊದಲು ಹೋಗಿ ಕೈ ಕಾಲು ಮುಖ ತೊಳೆದು ಊಟಕ್ಕೆ ಬಾ ನಂತರ ವಿಶೇಷಗಳನ್ನು ಹೇಳೋಣ”…. ಎಂದು ನಗುತ್ತಾ ನುಡಿದಳು. ಅಕ್ಕನ ಮಾತನ್ನು ಕೇಳಿ, ಸಲುಗೆಯಿಂದ ಅಕ್ಕನ ಎರಡೂ ಗುಳಿಕೆನ್ನೆಗಳನ್ನು ಹಿಂಡಿ,…” ಇದೋ ಬಂದೆ ಅಕ್ಕ”… ಎಂದು ಹಿತ್ತಲ ಕಡೆಗೆ ಓಡಿದಳು. ಕೈ ಕಾಲು ಮುಖ ತೊಳೆದ ತಂಗಿ ಊಟಕ್ಕೆ ಬಂದು ಕುಳಿತಾಗ ಊಟವನ್ನು ಬಡಿಸುತ್ತಾ ಕೊನೆಯ ತಂಗಿ ನವೋದಯ ಶಾಲೆಗೆ ಆಯ್ಕೆಯಾಗಿರುವ ಸುದ್ದಿಯನ್ನು ಹಾಗೂ ತಾನು ಎರಡನೇ ಬಾರಿ ತಾಯಿಯಾಗುತ್ತಿರುವ ಸುದ್ದಿಯನ್ನು ಅವಳಿಗೆ ತಿಳಿಸಿದಳು. ತಂಗಿ ಖುಷಿಯಿಂದ ನಗುತ್ತಾ ಅಕ್ಕನನ್ನು ಅಪ್ಪಿಕೊಂಡಳು.


About The Author

Leave a Reply

You cannot copy content of this page

Scroll to Top