ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಗಳು ಟೈಪಿಂಗ್ ಕಲಿಯಲೆಂದು ಇನ್ಸ್ಟಿಟ್ಯೂಟ್ ಗೆ ಹೋಗಲು ಪ್ರಾರಂಭಿಸಿದಳು. ಹೈಸ್ಕೂಲ್ ಹಂತ ತಲುಪಿದ ಮೂರನೇ ಮಗಳು ಅಕ್ಕನೊಂದಿಗೆ ಹೋಗಿ ಸಂಜೆ ಅವಳ ಜೊತೆಯೇ ಹಿಂದಿರುಗುತ್ತಿದ್ದಳು. ಇದು ಸುಮತಿಗೆ ಸಮಾಧಾನ ತರುವ ಸಂಗತಿಯಾಗಿತ್ತು. ಕಿರಿಯ ಮಗಳು ಅಲ್ಲಿ ಹತ್ತಿರದ ಪ್ರಾರ್ಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಒಂದು ದಿನ ಅಂಗಡಿಯಿಂದ ಮನೆಯ ಕಡೆಗೆ ಹೋಗುತ್ತಿರುವಾಗ ದಾರಿಯಲ್ಲಿ ಭೇಟಿಯಾದ ಶಾಲೆಯ ಹೆಡ್ ಮಾಸ್ಟರ್ ಸುಮತಿಯನ್ನು ಶಾಲೆಗೆ ಬರುವಂತೆ ಸೂಚಿಸಿದರು. ಹೆಡ್ ಮಾಸ್ಟರ್ ಸೂಚಿಸಿದಂತೆ ಮಾರನೇ ದಿನವೇ ಮಗಳ ಜೊತೆಗೆ ಶಾಲೆಗೆ ಹೋದಳು….”ನಮಸ್ತೆ ಸರ್”….ಎಂದು ಹೆಡ್ ಮಾಸ್ಟರ್ ಗೆ ವಂದಿಸಿದಳು. ಸುಮತಿ ಬಾಗಿಲಲ್ಲಿ ನಿಂತಿರುವುದನ್ನು ಕಂಡು ನಸುನಗುತ್ತಾ….” ಓ ನೀವಾ?…ಸುಮತಿಯವರೇ ಒಳಗೆ ಬನ್ನಿ”…. ಎಂದು ಹೇಳುತ್ತಾ ತಮ್ಮ ಎದುರಿಗಿದ್ದ ಕುರ್ಚಿಯ ಕಡೆ ನೋಡುತ್ತಾ….” ಬನ್ನಿ ಇಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಿ”…. ಎಂದರು. ಹೆಡ್ ಮಾಸ್ಟರ್ ತನ್ನನ್ನು ಏಕೆ ಕರೆದಿರಬಹುದು?ಎನ್ನುವ ಪ್ರಶ್ನೆ ಅವಳ ಮನದಲ್ಲಿ ಮೂಡಿತು. ಅದನ್ನು ಊಹಿಸಿದ ಹೆಡ್ ಮಾಸ್ಟರ್ ….”ಸುಮತಿಯವರೇ ನಿಮ್ಮ ಮಗಳು ಓದು ಬರಹದಲ್ಲಿ ಬಹಳ ಚುರುಕು…. ಬಿಡುವಿನ ವೇಳೆಗಳಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಬೆರೆತು ಹರಟೆ ಹೊಡೆಯದೆ ಏನಾದರೂ ಒಂದು ಪುಸ್ತಕವನ್ನು ಓದುತ್ತಾ ಕುಳಿತುಕೊಳ್ಳುವಳು….. ಇತರ ಚಟುವಟಿಕೆಯಲ್ಲೂ ಅವಳು ಜಾಣೆ….. ನಿಮ್ಮ ಮಗಳಲ್ಲವೇ?…. ಅಮ್ಮನಂತೆ ಮಗಳೂ ಬಹಳ ಬುದ್ಧಿವಂತಳು…. ನಿಮಗೊಂದು ವಿಷಯವನ್ನು ಹೇಳಬೇಕೆಂದು ನಾನು ನಿಮ್ಮನ್ನು ಇಲ್ಲಿಗೆ ಬರಲು ಹೇಳಿದ್ದು”……ಎಂದು ಸುಮತಿಯ ಕಡೆ ನೋಡಿದರು.

ಏನಿರಬಹುದು? ಎಂಬ ಕುತೂಹಲದಿಂದ….” ವಿಷಯ ಏನೆಂದು ದಯವಿಟ್ಟು ಹೇಳಿ ಸರ್”….. ಎಂದು ವಿನಂತಿಸಿಕೊಂಡಳು. ಸುಮತಿಯ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ ನೋಡಿ…” ನಿಮ್ಮ ಕಷ್ಟ ನನಗೆ ತಿಳಿದಿದೆ….ನೀವಾಗಿ ಹೇಳಿಕೊಳ್ಳದಿದ್ದರೂ ನನಗದು ಅರ್ಥವಾಗುತ್ತದೆ…..ಬಹಳ ಸುಸಂಸ್ಕೃತ ಕುಟುಂಬ ನಿಮ್ಮದು ಎನ್ನುವುದು ನಿಮ್ಮ ಮಗಳ ಹಾಗೂ ನಿಮ್ಮ ನಡವಳಿಕೆಯಿಂದ ತಿಳಿಯುತ್ತದೆ….. ಅತಿ ಕಡಿಮೆ ಸಂಬಳದಲ್ಲಿ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದು ಸುಲಭದ ಕೆಲಸವೇನಲ್ಲ…. ಹಿರಿಯ ಮಗಳನ್ನು ಮದುವೆ ಮಾಡಿದ್ದೀರಿ….. ಎರಡನೇ ಮಗಳು ಕೂಡ ಬಹಳ ಬುದ್ಧಿವಂತೆ ಎಂದು ತಿಳಿಯಿತು….. ನಿಮ್ಮ ಮೂರನೇ ಮಗಳು ನಮ್ಮಲ್ಲಿ ಪ್ರಾಥಮಿಕ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ…..ಅವಳು ಕೂಡ ಬಹಳ ಬುದ್ಧಿವಂತೆ…. 7ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾಳೆ….. ಈಗ ಸಕಲೇಶಪುರದ ಹೈಸ್ಕೂಲಿನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ…. ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿಕೊಂಡರೆ ನಿಮ್ಮ ಈ ಕಷ್ಟಗಳಿಗೆಲ್ಲ ಪರಿಹಾರವಾದಂತೆ….. ಈಗ ನಾನು ಹೇಳಲು ಬರುವ ವಿಷಯವೇನೆಂದರೆ, ಕೇಂದ್ರ ಸರ್ಕಾರದಿಂದ ಹೊಸದಾಗಿ ಒಂದು ಶಾಲೆ ಪ್ರಾರಂಭವಾಗಿದೆ….ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕೇಂದ್ರ ಸರ್ಕಾರ ನಡೆಸುವ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು, ಅದರಲ್ಲಿ ಉತ್ತೀರ್ಣರಾದರೆ ಕೇಂದ್ರ ಸರ್ಕಾರ ಹೊಸದಾಗಿ ಪ್ರಾರಂಭಿಸಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಿಬಿಎಸ್ಇ ಬೋರ್ಡ್ ನಲ್ಲಿ ಆರನೇ ತರಗತಿಯಿಂದ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶವಿದೆ…. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾದ ಮಕ್ಕಳಿಗೆ ಉಚಿತವಾಗಿ 12ನೇ ತರಗತಿಯವರೆಗೂ ವಿದ್ಯಾಭ್ಯಾಸ ಮುಂದುವರಿಸುವ ಅವಕಾಶವಿದೆ….. ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ವಸತಿ ಆಹಾರ ಬಟ್ಟೆ ಹಾಗೂ ವಿದ್ಯಾಭ್ಯಾಸದ ಎಲ್ಲಾ ಖರ್ಚುಗಳು ಕೇಂದ್ರ ಸರ್ಕಾರ ಭರಿಸುತ್ತದೆ. ಈ ಶಾಲೆಯನ್ನು ನಮ್ಮ ಜಿಲ್ಲೆಯ ಒಂದು ಹಳ್ಳಿಯ ವಿಶಾಲವಾದ ಸ್ಥಳದಲ್ಲಿ ಪ್ರಾರಂಭಿಸಲಾಗಿದೆ….. ಇಲ್ಲಿ ಮಕ್ಕಳಿಗೆ ತಂಗಲು ಹಾಸ್ಟೆಲ್ ವ್ಯವಸ್ಥೆ ಕೂಡ ಇದೆ,… ಅತ್ಯುತ್ತಮ ಶಿಕ್ಷಕರು ಇಲ್ಲಿ ಮಕ್ಕಳಿಗೆ ಪಾಠವನ್ನು ಮಾಡುತ್ತಾರೆ. 

ಎಂದು ಹೇಳುತ್ತಾ ಸುಮತಿಯ ಮುಖವನ್ನೇ ದಿಟ್ಟಿಸಿ ನೋಡಿದರು. ಹೆಡ್ ಮಾಸ್ಟರ್ ರ ಮಾತುಗಳನ್ನು ಶ್ರದ್ಧೆಯಿಂದ ಆಲಿಸಿದ ಸುಮತಿಯ ಮುಖದಲ್ಲಿ ಸಂತೋಷದ ಕಿರುನಗೆಯೊಂದು ಕಾಣಿಸಿತು….ಸರ್ ನೀವು ಬಹಳ ಒಳ್ಳೆಯ ವಿಷಯವನ್ನೇ ನನಗೆ ತಿಳಿಸಿದ್ದೀರಿ ….ಈ ಪರೀಕ್ಷೆಗಾಗಿ ನನ್ನ ಮಗಳು ಹೇಗೆ ತಯಾರಿಯನ್ನು ಮಾಡಿಕೊಳ್ಳಬೇಕು?….ಎನ್ನುವುದನ್ನು ದಯವಿಟ್ಟು ವಿವರವಾಗಿ ತಿಳಿಸಿ ಎಂದಳು…. ಸುಮತಿಯ ಉತ್ಸುಕತೆಯನ್ನು ಕಂಡ ಹೆಡ್ ಮಾಸ್ಟರ….” ಸುಮತಿಯವರೇ….ಇಲ್ಲಿ ಹೆಚ್ಚಿಗೆ ಏನೂ ಕಲಿಯುವ ಅಗತ್ಯವಿಲ್ಲ….. ಸಮಾಜ, ವಿಜ್ಞಾನ ಮತ್ತು ಗಣಿತ ಈ ಮೂರು ವಿಷಯಗಳ ಬಗ್ಗೆ ಸ್ವಲ್ಪ ಹೆಚ್ಚಿಗೆ ಅಭ್ಯಾಸ ಮಾಡಿದರೆ ಸಾಕು…. ಪುಸ್ತಕದ ಅಂಗಡಿಯಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಕೈಪಿಡಿ ಒಂದು ದೊರೆಯುತ್ತದೆ…. ಅದನ್ನು ಖರೀದಿಸಿ ಮಗಳಿಗೆ ಅಭ್ಯಾಸ ಮಾಡಿಸಿ….. ಪರೀಕ್ಷೆಗೆ ಒಂದೆರಡು ತಿಂಗಳ ಸಮಯಾವಕಾಶವಿದೆ….. ಪರೀಕ್ಷೆಯನ್ನು ಸಕಲೇಶಪುರದ ಹಲವು ಶಾಲೆಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತದೆ…. ಬುದ್ಧಿವಂತಳಾದ ನಿಮ್ಮ ಮಗಳಿಗೆ ಅಲ್ಲಿ ಖಂಡಿತಾ ಅವಕಾಶ ಸಿಗುತ್ತದೆ”…. ಎಂದು ಹೇಳಿದರು. ಹೆಡ್ ಮಾಸ್ಟರ್ ರ ಮಾತನ್ನು ಕೇಳಿದ ಸುಮತಿಗೆ ಮನದಲ್ಲಿ ಒಂದು ಹೊಸ ಭರವಸೆ ಮೂಡಿತು. ಅವರಿಗೆ ಧನ್ಯವಾದಗಳನ್ನು ತಿಳಿಸಿ ಮನೆಯ ಕಡೆ ಹೆಜ್ಜೆ ಹಾಕಿದಳು. ಗುರುವಾರ ರಜೆ ಇದ್ದ ಕಾರಣ ಸುಮತಿ ಸಕಲೇಶಪುರಕ್ಕೆ ಹೋದಳು. ಮೊದಲು ಹೆಡ್ ಮಾಸ್ಟರ್ ಹೇಳಿದ ಅಂಗಡಿ ಗೆ ಹೋಗಿ ಪುಸ್ತಕವನ್ನು ಖರೀದಿ ಮಾಡಿದಳು. ನಂತರ ದಿನಸಿಯನ್ನು ಖರೀದಿಸಿ ಮನೆಗೆ ಹಿಂತಿರುಗಿದಳು. ಕಿರಿಯ ಮಗಳನ್ನು ಕರೆದು ತಾನು ತಂದ ಪುಸ್ತಕವನ್ನು ತೋರಿಸಿ ಹೆಡ್ ಮಾಸ್ಟರ್ ಹೇಳಿದ ಎಲ್ಲಾ ವಿವರಗಳನ್ನು ಮಗಳಿಗೆ ತಿಳಿಸಿದರು….”ಅಮ್ಮ ಹೆಡ್ ಮಾಸ್ಟರ್ ತರಗತಿಗೆ ಬಂದು ಈ ವಿಷಯದ ಬಗ್ಗೆ ನಮಗೆಲ್ಲರಿಗೂ ಅರಿವನ್ನು ಮೂಡಿಸಿದ್ದಾರೆ…. 

ನನಗೂ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ದೊರೆತರೆ ಒಳ್ಳೆಯದು ಅಲ್ಲವೇ!?…. ಎಂದ ಮಗಳ ತಲೆಯನ್ನು ನೇವರಿಸಿ…” ಹೌದು ಮಗಳೇ ನೀವು ಮೂವರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸದಲ್ಲಿ ಸೇರಿದ ನಂತರ ದೇವರ ಕರೆ ಬಂದಾಗ ಸಂತ್ರಪ್ತಿಯಿಂದ ನಾನು ನಿರ್ಗಮಿಸುವೆ”… ಎಂದಳು ಸುಮತಿಯ ಮಾತನ್ನು ಕೇಳಿದ ಮೂವರು ಮಕ್ಕಳೂ ಒಟ್ಟಿಗೇ ಸುಮತಿಯ ಬಳಿಗೆ ಬಂದು ಸುಮತಿಯನ್ನು ಸುತ್ತುವರೆದು ಬಿಗಿಯಾಗಿ ಅಪ್ಪಿಕೊಂಡರು. ಎರಡನೇ ಮಗಳು…..” ಅಮ್ಮ ಎಂತಹ ಮಾತನ್ನು ಆಡುತ್ತಿದ್ದೀಯ…. ನೀನು ಹೀಗೆ ಹೇಳಿದರೆ ನಮಗೆ ತುಂಬಾ ದುಃಖವಾಗುತ್ತೆ…. ನೀನು ಸದಾ ನಮ್ಮ ಜೊತೆ ಇರಬೇಕು…. ನೀನಿಲ್ಲದಿದ್ದರೆ ಬದುಕಲು ನಮ್ಮಿಂದ ಸಾಧ್ಯವಿಲ್ಲ…. ನಮಗೆ ಎಲ್ಲವೂ ನೀನೆ…. ತಂದೆ ತಾಯಿ ಇಬ್ಬರ ಸ್ಥಾನವನ್ನು ತುಂಬಿ ನಮ್ಮನ್ನು ಸಾಕಿ ಸಲಹಿದ್ದೀಯ. ನೀನಿಲ್ಲದೆ ಅರೆಗಳಿಗೆ ಇರಲಾರೆವು…. ದಯವಿಟ್ಟು ಇನ್ನು ಮುಂದೆ ಇಂತಹ ಮಾತುಗಳನ್ನು ಆಡಬೇಡಮ್”…. ಎಂದು ಗದ್ದದಿತಳಾಗಿ ಹೇಳಿದಳು. ಮಗಳ ಮಾತನ್ನು ಕೇಳಿದ ಸುಮತಿಯ ಕಣ್ಣಂಚು ತೇವವಾಯಿತು. ನನ್ನ ಈ ಮುಗ್ಧರಾದ ಮೂವರು ಮಕ್ಕಳಿಗೆ ಏನು ತಿಳಿದಿದೆ? ತಾನು ಸಕ್ಕರೆ ಕಾಯಿಲೆಯಿಂದ ಎಷ್ಟು ಜರ್ಜರಿತಳಾಗಿದ್ದೇನೆ. ಏಕೋ ಇತ್ತೀಚೆಗೆ ಮೊದಲಿನ ಶಕ್ತಿ ಶರೀರದಲ್ಲಿ ಉಳಿದಿಲ್ಲ. ಎಲ್ಲಿ ಮಕ್ಕಳನ್ನು ಅನಾಥರನ್ನಾಗಿ ಮಾಡಿಬಿಡುವನೋ ಎನ್ನುವ ಭಯ ಸದಾ ಕಾಡುತ್ತಲೇ ಇದೆ. ಒಂದೆಡೆ ಕಣ್ಣು ಕೂಡ ಸರಿಯಾಗಿ ಕಾಣದು. ಸಕ್ಕರೆ ಕಾಯಿಲೆಯು ಉಲ್ಬಣಗೊಳ್ಳುತ್ತಿದೆ. ಏನು ಮಾಡಲಿ ನನಗೆ ಏನಾದರೂ ಆದರೆ ಈ ಮಕ್ಕಳಿಗೆ ಯಾರು ದಿಕ್ಕು? ನನ್ನ ಅಕ್ಕ, ತಮ್ಮಂದಿರಿಗೆ ಕೂಡಾ ಅವರ ಸಂಸಾರದ ತಾಪತ್ರಯ, ಹೊಣೆಗಳು ಇವೆ. ನನ್ನ ಮಕ್ಕಳನ್ನು ಖಂಡಿತಾ ಅವರ ಮಡಿಲಿಗೆ ಹಾಕಲಾರೆ. ಮೊದಲನೆಯ ತಮ್ಮನಂತೂ ಯಜಮಾನರು ತೀರಿಹೋದ ಸಮಯದಲ್ಲಿ ತನ್ನ ಅಳತೆಗೂ ಮೀರಿ ಸಹಾಯವನ್ನು ಮಾಡಿದ್ದಾನೆ. ಅಪರೂಪಕ್ಕೆ ನಾನು ಅವನ ಮನೆಗೆ ಹೋದಾಗ ಬರಿಗೈಲಿ ಎಂದೂ ನನ್ನನ್ನು ಕಳುಹಿಸಿಲ್ಲ. ನನಗೂ ಮಕ್ಕಳಿಗೂ ಹೊಸ ಬಟ್ಟೆಗಳನ್ನು ಕೊಡಿಸಿ, ತನ್ನಿಂದ ಸಾಧ್ಯವಾದಷ್ಟು ಹಣವನ್ನು ನನ್ನ ಕೈಲಿ ಕೊಟ್ಟು ಕಳುಹಿಸಿದ್ದಾನೆ. ದೇವರೇ!! ಈಗ ನೀನೇ ನಮಗೆ ಎಲ್ಲಾ. ನನ್ನ ಮಕ್ಕಳು ವಿದ್ಯಾಭ್ಯಾಸ ಮುಗಿಸಿ, ಅವರ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುವಂತೆ ಆಗುವವರೆಗೂ ನನ್ನನ್ನು ಅವರ ಜೊತೆಗೆ ಉಳಿಸಿಕೊಡು ತಂದೆ ಎಂದು ಮನದಲ್ಲಿ ಪ್ರಾರ್ಥಿಸಿದಳು.


About The Author

Leave a Reply

You cannot copy content of this page

Scroll to Top