ಅಂಕಣ ಬರಹ

ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ 10

ಮೊದಲ ದಿನ
ನಮ್ಮ ಹೊಸ ಬಾಡಿಗೆಯ ಮನೆ ಇನ್ನೂ ಪೂರ್ತಿ ಸಜ್ಜಾಗದೆ ಇದ್ದುದರಿಂದ ಅಂದು ಚಿಕ್ಕಮ್ಮನ ಮನೆಯಲ್ಲಿ ಉಳಿದೆವು. ಹಿಂದಿನ ದಿನ ಶನಿವಾರವೇ ನನ್ನ ಮೈದುನ ದಿನೇಶ ಅವರು ಒಂದಷ್ಟು ಸಾಮಾನುಗಳನ್ನು ತಂದು ಹೊಸ ಮನೆಯಲ್ಲಿ ಇಟ್ಟಿದ್ದರು. ಹೆಚ್ಚಿನ ಸಾಮಾನುಗಳು ಇರಲಿಲ್ಲ. ಒಂದು ಕುಕ್ಕರ್ ಹಾಗೂ ಪಂಪ್ ಸ್ಟವ್ ಚಿಕ್ಕಬಳ್ಳಾಪುರದಲ್ಲಿ ಕೊಂಡುಕೊಂಡೆವು ಸೀಮೆಎಣ್ಣೆ ಬ್ಲಾಕ್ ನಲ್ಲಿ ಕೊಳ್ಳಬೇಕಿತ್ತು ಅದು ಸರಿಯಾಗಿ ಸಿಗುವುದಿಲ್ಲ ಎಂದು ತಿಳಿಯಿತು ಸ್ವಲ್ಪ ತಲೆಬಿಸಿ ಆಗಿದ್ದಂತೂ ನಿಜ.
ರಾತ್ರಿಯೆಲ್ಲ ಸರಿಯಾಗಿ ನಿದ್ರೆ ಬರಲಿಲ್ಲ ಒಂದು ರೀತಿಯ ಚಿಕ್ಕ ಆತಂಕ ಕಳವಳ ನಿರೀಕ್ಷೆಗಳ ಸಮ್ಮಿಶ್ರಣ .ಬದುಕಿನ ಹೊಸತೊಂದು ಘಟ್ಟದ ಪ್ರತೀಕ್ಷೆಯಲ್ಲಿ.
ಬೆಳಿಗ್ಗೆ ಚಿಕ್ಕಮ್ಮ ಶಾಲೆಗೆ ಹೋಗಬೇಕಾಗಿದ್ದರಿಂದ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಮತ್ತೆ ಮನೆಗೆ ಬರಲು ಸಾಧ್ಯವಿದೆಯೋ ಇಲ್ಲವೋ ಆಫೀಸ್ನ ವಾತಾವರಣ ಹೇಗೋ ಏನೋ ತಿಳಿಯದೆ ಇದ್ದಿದ್ದರಿಂದ ಅದೇ ಉಪ್ಪಿಟ್ಟನ್ನು ಒಂದು ಡಬ್ಬಿಗೆ ಹಾಕಿಕೊಂಡು ಆಫೀಸಿಗೆ ಹೊರಟೆವು ನಮ್ಮ ತಂದೆ ಹಾಗೂ ರವೀಶ್ ಸಹ. ಆಗ ಹತ್ತು ವರೆಗೆ ಕಚೇರಿ ಆರಂಭವಾಗುತ್ತಿದ್ದು ಹತ್ತು ಹತ್ತಕ್ಕೆಲ್ಲ ನಾವು ಶಾಖೆಗೆ ತಲುಪಿದ್ದೆವು. ಬಹಳ ಜನ ಹೊಸ ಉದ್ಯೋಗಿಗಳು ಇದ್ದ ಶಾಖೆಗೆ ಬೆಂಗಳೂರಿನಿಂದ ಕಾರ್ಮಿಕ ಪ್ರತಿನಿಧಿಗಳು ಹೋಗಿದ್ದರಂತೆ
ನಮ್ಮಲ್ಲಿಗೆ ನಮ್ಮ ಬ್ಯಾಚ್ ನಿಂದ ನಾನೊಬ್ಬಳೇ. ಆದರೆ ಎನ್ಟಿಬಿ ಅಭ್ಯರ್ಥಿಗಳು ಮೂರು ಜನ ಇದ್ದರು ಮೊದಲೇ ಹೇಳಿದಂತೆ ನಾಗರಾಜ ಅವರು ಅಲ್ಲದೆ ಮಾಧವನ್ ಎಂಬ ಮತ್ತೊಬ್ಬರು ಅದೇ ಊರಿನವರಾದ ನಾಗಲಕ್ಷ್ಮಿ ಎನ್ನುವವರು ಮತ್ತು ನಾನು ಒಟ್ಟು ನಾಲ್ಕು ಜನ ಹೊಸ ಉದ್ಯೋಗಿಗಳು. ಅವರೆಲ್ಲ ತಾತ್ಕಾಲಿಕ ಕೆಲಸ ಮಾಡಿ ನಂತರ ಕೆಲಸ ಸಿಕ್ಕವರಾದ್ದರಿಂದ ನನಗಿಂತ ಐದಾರು ವರ್ಷ ಸೀನಿಯರ್ ಗಳು. ಫೆಡರೇಶನ್ ಕಾರ್ಮಿಕ ಸಂಘದ ವತಿಯಿಂದ ನಾನೊಬ್ಬಳೇ. ಅವರು ಮೂರು ಜನರು ಎ ಐ ಇ ಏ ಯೂನಿಯನ್ ಗೆ ಸೇರಿದ್ದವರು. ನನ್ನನ್ನು ಅದೇ ಯೂನಿಯನ್ಗೆ ಎಳೆಯುವ ಬಹಳಷ್ಟು ಪ್ರಯತ್ನಗಳು ನಡೆದವು ನಾನು ನೋಡಲು ಮೆತ್ತಗಿದ್ದರೂ ಈ ವಿಷಯದಲ್ಲಿ ಬಹಳ ಖಡಕ್ ಆದ್ದರಿಂದ ಅದು ಸಾಧ್ಯವಾಗಲಿಲ್ಲ. ಅಲ್ಲದೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಇದ್ದ ಫೆಡರೇಶನ್ ಯೂನಿಯನ್ ಸದಸ್ಯರು ಸಹ ನನಗೆ ಬಹಳ ಸಪೋರ್ಟ್ ಮಾಡಿ ಸಹಕಾರ ಕೊಟ್ಟಿದ್ದರಿಂದ ಯೂನಿಯನ್ ಬದಲಾವಣೆ ಸಾಧ್ಯವಾಗಲಿಲ್ಲ.

ಅಲ್ಲಿಗೆ ಹೋದ ತಕ್ಷಣ ಅಲ್ಲಿ ಆಫೀಸರ್ ಆಗಿದ್ದ ಪ್ರಭಾಕರ ಶಾಸ್ತ್ರಿ ಅವರು ತಮ್ಮ ಸ್ವೀಟಿನ ಮುಂದೆ ನಮ್ಮನ್ನು ಕೊಡಿಸಿಕೊಂಡು ಮಾತನಾಡಿಸಿದರು ಅಷ್ಟು ಹೊತ್ತಿಗೆ ನಾಗರಾಜ್ ಹಾಗು ಮಾಧವನ್ ಅವರು ಬೆಂಗಳೂರಿನಿಂದ ಬಂದರು ಅವರು ಹಾಗೂ ನಾಗಲಕ್ಷ್ಮೀ ನಾವು ನಾಲ್ಕು ಜನಕ್ಕೂ ಡ್ಯೂಟಿ ರಿಪೋರ್ಟ್ ಪ್ರತಿಗಳನ್ನು ಕೊಟ್ಟು ಸಹಿ ಮಾಡಿ ಕಚೇರಿಗೆ ಕೊಡಲು ತಿಳಿಸಿದರು. ಅಷ್ಟರಲ್ಲಿ ಶಾಖಾಧಿಕಾರಿಗಳು ಬಂದಿದ್ದರಿಂದ
ಅವರ ಕೋಣೆಗೆ ನಮ್ಮನ್ನು ಕರೆಸಿದರು. ಪರಮಶಿವಪ್ಪ ಎನ್ನುವವರು ಆಗ ಅಲ್ಲಿನ ಶಾಖ ವ್ಯವಸ್ಥಾಪಕರು. ನಮ್ಮನ್ನೆಲ್ಲ ಚೆನ್ನಾಗಿ ಮಾತನಾಡಿಸಿ ಈಗಾಗಲೇ ಯಾವ ವಿಭಾಗಗಳಿಗೆ ನಿಮ್ಮನ್ನು ಹಾಕುವುದು ಎಂದು ನಿರ್ಧರಿಸಿದ್ದೇವೆ ಅಧಿಕಾರಿಗಳಾದ ಪ್ರಭಾಕರ ಶಾಸ್ತ್ರಿ ಅವರು ತಿಳಿಸುತ್ತಾರೆ .ಚೆನ್ನಾಗಿ ಕೆಲಸ ಮಾಡಿ ಪದೋನ್ನತಿ ಪಡೆದು ಮುಂದೆ ಬನ್ನಿ ಎಂದು ಹಾರೈಸಿದರು. ಕಾಫಿ ಹಾಗೂ ಬಿಸ್ಕತ್ತಿನ ಸೇವನೆಯೂ ಆಯಿತು. ಅಣ್ಣ ಮತ್ತು ರವೀಶ್ ಆಚೆಗೆ ಕುಳಿತಿದ್ದರು ಅವರಿಗೂ ಬಲವಂತ ಮಾಡಿ ಕಾಫಿ ಬಿಸ್ಕೆಟ್ ಕೊಟ್ಟರಂತೆ. ನಂತರದಲ್ಲಿ ತಿಳಿದ ಹಾಗೆ ಶಾಖಾಧಿಕಾರಿಗಳು ಶಾಖೆಗೆ ಯಾರೇ ಬಂದರೂ ಈ ರೀತಿ ಅತಿಥಿ ಸತ್ಕಾರ ಮಾಡುತ್ತಾರೆ ಅಲ್ಲದೆ ವಿಭಾಗಗಳ ಮೀಟಿಂಗ್ ಉದ್ಯೋಗಿಗಳ ಮೀಟಿಂಗ್ ಯಾವುದೇ ಆದರೂ ಈ ರೀತಿಯ ಕಾಫಿ ಹಾಗೂ ಬಿಸ್ಕೆಟ್ ಗಳ ಆತಿಥ್ಯ ನಡೆಯುತ್ತದೆ ಎಂದು.
ಮೇಲೆ ಹೇಳಿದ ಹಾಗೆ ಡ್ಯೂಟಿ ರಿಪೋರ್ಟ್ ಗಳನ್ನು ಟೈಪ್ ಮಾಡಿ ನಮಗೆ ಸಹಿ ಮಾಡಲು ಕೊಟ್ಟದ್ದು ಆಗ ಶಾಖೆಯಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಪ್ರಭಾಕರ್ ಎನ್ನುವವರು. ನಂತರದಲ್ಲಿ ಶಾಖೆಗಳಲ್ಲಿ ಸ್ಟೆನೋಗ್ರಾಫರ್ ಇರುತ್ತಿರಲಿಲ್ಲ. ಬರಿ ವಿಭಾಗಿಯ ಕಚೇರಿಗಳಲ್ಲಿ ಮಾತ್ರ. ಅವರು ಈಗಾಗಲೇ ಇದ್ದುದರಿಂದ ಅವರನ್ನು ವರ್ಗಾವಣೆ ಮಾಡದೆ ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತಂತೆ. ಹಸನ್ಮುಖದ ಸ್ನೇಹಮಯಿ ವ್ಯಕ್ತಿತ್ವ .ಒಬ್ಬ ಉತ್ತಮ ಸ್ನೇಹಿತ ಹಿರಿಯಣ್ಣನಂತೆ ನನಗೆ ಸಲಹೆ ಕೊಟ್ಟು ಉದ್ಯೋಗದ ಆರಂಭದಲ್ಲಿ ಮಾರ್ಗದರ್ಶಕರಾದರು. ಫೋನು ಇನ್ಯಾವುದೂ ಅಷ್ಟೊಂದು ಅನುಕೂಲ ಇಲ್ಲದ ಆ ಸಮಯದಲ್ಲಿ ನಮ್ಮ ಮಧ್ಯೆ ಆ ನಂತರ ಸಂಪರ್ಕವೇ ಇಲ್ಲ. ಈ ವೇಳೆಗೆ ಅವರು ಸಹ ನಿವೃತ್ತರಾಗಿರಬಹುದು. ಚಿಕ್ಕಬಳ್ಳಾಪುರ ಬಿಟ್ಟ ನಂತರ ಅವರನ್ನು ಭೇಟಿಯಾಗಲೇ ಇಲ್ಲ.
ನಮ್ಮ ನಿಗಮದ ಕಚೇರಿಗಳ ಬಗ್ಗೆ ಒಂದು ಮಾತು ಇಲ್ಲಿ ಹೇಳಲೇಬೇಕು ಕಟ್ಟಡ ನಿರ್ಮಾಣಗಳ ಬಗ್ಗೆ .ಸ್ವಂತ ಕಟ್ಟಡವಾದರೆ ಸಾಮಾನ್ಯ ಊರುಗಳ ಹೊರ ಭಾಗದಲ್ಲಿ ನಮ್ಮ ಶಾಖೆಯ ಕಟ್ಟಡಗಳು ಇರುತ್ತವೆ. ಬರ ಬರುತ್ತಾ ಊರು ಬೆಳೆದು ಶಾಖೆಗಳು ಊರ ಒಳಗೆ ಆಗಿಬಿಡುತ್ತದೆ. ಚಿಕ್ಕಬಳ್ಳಾಪುರ ಶಾಖೆ, ಇದ್ದುದು ಬೆಂಗಳೂರು ಬಳ್ಳಾರಿ ಹೈವೇ ನಲ್ಲಿ ಊರಿನ ಹೊರ ವಲಯ ಎಂದೇ ಹೇಳಬಹುದು .ಅಲ್ಲಿ ಇದ್ದ ಕಟ್ಟಡ ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಹೋಗಿ ನೋಡಿದಾಗ ನಮ್ಮ ಶಾಖೆಯ ಕಟ್ಟಡ ದಾಟಿ ಎಷ್ಟೋ ಕಿಲೋಮೀಟರ್ ಊರು ಬೆಳೆದುಬಿಟ್ಟಿದೆ. ಇದೊಂದೇ ಅಂತ ಅಲ್ಲ ಮಂಡ್ಯ ಮದ್ದೂರು ಚಿತ್ರದುರ್ಗಗಳಲ್ಲಿಯೂ ಇದೇ ರೀತಿ ಆಗಿದೆ. ಇತ್ತೀಚೆಗೆ ಪ್ರಯಾಗ್ ಅಯೋಧ್ಯ ಆ ಕಡೆ ಎಲ್ಲಾ ಹೋದಾಗ ಸಹ ನಾನು ಗಮನಿಸಿದ ಅಂಶ ಇದು. ಒಮ್ಮೆ ರಿಕ್ಷಾದಲ್ಲಿ ಹೋಗುವಾಗ ರಿಕ್ಷಾದವನು ಸಹ 20 ವರ್ಷದ ಹಿಂದೆ ಇದು ಊರಾಚೆ ಆಗಿತ್ತು ಈಗ ನೋಡಿ ಎಷ್ಟೊಂದು ಬೆಳೆದುಬಿಟ್ಟಿದೆ ಎಂದು ಹೇಳಿದ.
ಇನ್ನು ಒಳಗಿನ ರಚನೆಯ ಬಗ್ಗೆ ಹೇಳುವುದಾದರೆ ಹಣ ಪಾವತಿ ಮಾಡುವ ಕ್ಯಾಶ್ ಕೌಂಟರ್ಗಳು ಪ್ರವೇಶ ದ್ವಾರದ ಹತ್ತಿರದಲ್ಲೇ ಇರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರದ ವಿಭಾಗ, ಪಾಲಿಸಿದಾರರ ಸೇವೆ ವಿಭಾಗ, ದಾವಾ ವಿಭಾಗ, ಇವೆಲ್ಲವೂ ಸಹ ಕೆಳಗಡೆಯ ಭಾಗದಲ್ಲೇ ಇರಲ್ಪಟ್ಟು ಪಾಲಿಸಿದಾರರರಿಗೆ ಸೌಕರ್ಯ ಕೊಡುವಂತೆ ಇರುತ್ತದೆ .ಇನ್ನು ಆಂತರಿಕ ಗ್ರಾಹಕರಾದ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗಗಳಿಗೆ ಸಂಬಂಧಿಸಿದ ವಿಭಾಗಗಳಾದ ಕಚೇರಿ ಸೇವೆ, ವಿಕ್ರಯ ವಿಭಾಗ, ಹೊಸ ವ್ಯವಹಾರಗಳ ವಿಭಾಗ ಇವೆಲ್ಲವೂ ಸಾಮಾನ್ಯ ಮೊದಲನೆಯ ಮಹಡಿಯಲ್ಲಿ ಇರುತ್ತದೆ. ಎರಡು ಕಡೆಯಲ್ಲಿಯೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಅಭಿವೃದ್ಧಿ ಅಧಿಕಾರಿಗಳಿಗೆ ಸಹ ವಿಕ್ರಯ ವಿಭಾಗದ ಪಕ್ಕದಲ್ಲಿಯೇ ಆಸನದ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಸ್ಥಳವ್ಯವಸ್ಥೆ ಅಲ್ಲದೆ ಯಾವುದಾದರೂ ಸಭೆ ಅಥವಾ ತರಬೇತಿ ಕಾರ್ಯಕ್ರಮ ನಡೆದಾಗ ಒಂದಷ್ಟು ಜನ ಕುಳಿತುಕೊಳ್ಳಲು ಸಹ ಜಾಗದ ವ್ಯವಸ್ಥೆ ಮಾಡಲಾಗಿರುತ್ತದೆ. ಸ್ವಂತ ಕಟ್ಟಡಗಳಲ್ಲಿ ಸುತ್ತ ಗಿಡ ಮರಗಳಿಗೆ ಜಾಗ ಮಾಡಿ ಬೆಳೆಸಲಾಗಿರುತ್ತದೆ . ಪಾಲಿಸಿದಾರರಿಗೆ ಕುಳಿತುಕೊಳ್ಳಲು ಅನುವಾಗುವಂತೆ ಹಾಸನಗಳ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ.
ನನ್ನ ಡ್ಯೂಟಿ ರಿಪೋರ್ಟ್ ಆದ ನಂತರ ಅಣ್ಣ ಮೈಸೂರಿಗೆ ಹೊರಟುಬಿಟ್ಟರು. ರವೀಶ್ ಸಹ ಬೆಂಗಳೂರಿಗೆ ಹೋಗಿ ೨ ದಿನಗಳ ನಂತರ ಮತ್ತೆ ಬರುವವರಿದ್ದರು. ಪಂಪ್ ಸ್ಟೌಗೆ ಎಣ್ಣೆ ಎಲ್ಲಾ ಹಾಕಿ ರೆಡಿ ಮಾಡಿಟ್ಟು ಹೋದರು.
ಪ್ರಭಾಕರ ಶಾಸ್ತ್ರಿಯವರು ಸಹಾಯಕ ಆಢಳಿತಾಧಿಕಾರಿ. ಬಿಳಿಕೂದಲು ಕನ್ನಡಕ. ಸ್ವಲ್ಪ ಗಂಭೀರ ವ್ಯಕ್ತಿತ್ವದವರು. ಆದರೆ ತುಂಬಾ ಒಳ್ಳೆಯ ಸ್ವಭಾವ. ಆಗ ಸಧ್ಯಕ್ಕೆ ಅವರೊಬ್ಬರೇ ಅಧಿಕಾರಿ ಇದ್ದದ್ದು. ಇನ್ನಿಬ್ಬರು ಹೊಸದಾಗಿ ಪದೋನ್ನತಿ ಪಡೆದವರು ಇನ್ನೂ ಬೆಂಗಳೂರಿನಿಂದ ಬಂದು ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ನನಗೆ ವಿಕ್ರಯ ವಿಭಾಗ ಕೊಡಲಾಗಿದೆ ಎಂದು ಹೇಳಿದರು. ಅವರಲ್ಲಿ ಮಾಧವನ್ ಅವರಿಗೆ ದಾವಾ ವಿಭಾಗ ಮತ್ತು ನಾಗರಾಜ್ ಮತ್ತು ನಾಗಲಕ್ಷ್ಮಿ
ಅವರಿಗೆ ಪಾಲಿಸಿ ಸೇವಾ ವಿಭಾಗ ಎಂದು ತಿಳಿಸಲಾಯಿತು. ನಾಗಲಕ್ಷ್ಮಿ ಅವರು ಅದೇ ಶಾಖೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿದ್ದವರು.. ಅಲ್ಲದೇ ಅದೇ ಊರಿನವರಾದ್ದರಿಂದ ಎಲ್ಲರ ಪರಿಚಯ ಇತ್ತು. ಎನ್ ಟಿ ಬಿ ಅಭ್ಯರ್ಥಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೆಲ್ಲಾ ಅವರು ಕಾರ್ಯ ನಿರ್ವಹಿಸಿದ ಶಾಖೆಗಳಲ್ಲಿಯೇ ಪೋಸ್ಟಿಂಗ್ ಸಿಕ್ಕಿತ್ತು. ಪುರುಷ ಉದ್ಯೋಗಿಗಳಿಗೆ ಮಾತ್ರ ಸ್ವಲ್ಲ ಬೇರೆ ದಿನಾಲೂ ಓಡಾಡುವ ಸ್ಥಳಗಳಿಗೆ ಸಿಕ್ಕಿತ್ತು.
ವಿಕ್ರಯ ವಿಭಾಗ ನಾನು ಮೊದಲೇ ಹೇಳಿದಂತೆ ಮೊದಲನೆಯ ಮಹಡಿಯಲ್ಲಿ. ಮುಖ್ಯ ದ್ವಾರದ ಎದುರಿಗೆ ಕ್ಯಾಷ್ ಕೌಂಟರ್. ಎಡ ಪಕ್ಕದಲ್ಕಿ ಮಹಡಿಯ ಮೆಟ್ಟಲುಗಳು. ಹತ್ತಿದ ತಕ್ಷಣ ಬಲಗಡೆ ಪ್ರಭಾಕರ ಶಾಸ್ತ್ರಿಯವರ ಸಿಇಟ್. ಮುಂದೆ ಬಂದರೆ ವಿಕ್ರಯ ವಿಭಾಗ. ಬಲಗಡೆ ಶಾಸ್ತ್ರಿಯವರ ಸೀಟ್ಗೆ ಎದುರಾಗಿ ಹೊಸ ವ್ಯವಹಾರ ಮತ್ತು ಕಛೇರಿ ಸೇವಾ ವಿಭಾಗಗಳು.

ಹೊಸದಾಗಿ ಹೋದ ತಕ್ಷಣ ನೀಲಿ ಕೆಂಪು ಪೆನ್ ಗಳು ಪೆನ್ಸಿಲ್ ಮೆಂಡರ್ ರಬ್ಬರ್ ಸ್ಕೇಲ್ ಸ್ಟ್ಯಾಪ್ಲರ್ ಜೊತೆಗೆ ಒಂದು ಸ್ಟೀಲ್ ಲೋಟ ಹಾಗೂ ಪುಟ್ಟ ಟವೆಲ್ ಇವನ್ನೆಲ್ಲಾ ಕೊಟ್ಟರು. ಟೇಬಲ್ ತೋರಿಸಿದರು. ವಿಕ್ರಯ ವಿಭಾಗದಲ್ಲಿ ಮತ್ತಿಬ್ಬರು ಸಹಾಯಕರಿದ್ದರು. ವೆಂಕಟರಾಯಪ್ಪ ಮತ್ತು ಜಯಶ್ರೀ.ಅವರ ಬಗ್ಗೆ ಮುಂದೆ ವಿವರವಾಗಿ ಬರೆಯುತ್ತೇನೆ.
ನಮಗೆ ನಾಗರಾಜ್ ಎನ್ನುವವರು ಉನ್ನತ ಶ್ರೇಣಿ ಸಹಾಯಕರು.ದಿನಾ ಬೆಂಗಳೂರಿನಿಂದ ಓಡಾಡುತ್ತಿದ್ದರು. ವಿಕ್ರಯ ವಿಭಾಗಕ್ಕೆ ಉಪ ಶಾಖಾಧಿಕಾರಿಗಳೇ ಮುಖ್ಯಸ್ಥರು. ಅವರ ಹೆಸರು ಮರೆತುಹೋಗಿದೆ. ತುಂಬಾ ಒಳ್ಳೆಯ ವ್ಯಕ್ತಿ. ಉತ್ತರ ಕರ್ನಾಟಕದವರು.
ಹೊಸದಾಗಿ ಬರುವ ವಿಮೆ ಅರ್ಜಿಗಳು ಪ್ರತಿನಿಧಿಗಳಿಗೆ ಸಂಬಂಧಿಸಿದ ನೇಮಕಾತಿ ಮೊದಲಾದ ವಿವರಗಳು ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ ವಿಚಾರಗಳು ಇವೆಲ್ಲವೂ ವಿಕ್ರಯ ವಿಭಾಗದ ಪರಿಧಿಗೆ ಬರುವುದು.
ಹೊಸದಾಗಿ ಬರುವ ವಿಮೆಯ ಅರ್ಜಿಗಳಿಗೆ ಪ್ರೊಪೋಸಲ್ ಎನ್ನುತ್ತಾರೆ.ಅವುಗಳನ್ನು ನೋಂದಾಯಿಸಿಕೊಂಡು ಒಂದು ಕ್ರಮಸಂಖ್ಯೆ ಕೊಡಬೇಕು. ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ದಾಖಲಿಸಬೇಕು. ಈ ಪ್ರಕ್ರಿಯೆಗೆ ರಿಜಿಸ್ಟ್ರೇಷನ್ ಎಂದು ಹೆಸರು. ಆ ಕೆಲಸ ಮತ್ತು ಪ್ರತಿನಿಧಿಗಳ ಸಂಬಂಧಿತ ಇತರ ವಿಷಯಗಳ ಬಗ್ಗೆ ನೋಡಿಕೊಳ್ಳುವುದು ಒಂದು ಸೀಟಿನ ಕೆಲಸ ಅದನ್ನು ವೆಂಕಟರಾಯಪ್ಪ ಅವರು ನೋಡಿಕೊಳ್ಳುತ್ತಿದ್ದರು.
ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ ಹಲವಾರು ಕೆಲಸಗಳು ಅವರಿಗೆ ಸಂದಾಯವಾಗಬೇಕಾದ ಬಿಲ್ಲುಗಳ ಬಗ್ಗೆ ಮತ್ತು ಮುಖ್ಯವಾದ ಕೆಲಸ ಅಭಿವೃದ್ಧಿ ಅಧಿಕಾರಿಗಳ ಕಾರ್ಯ ವೈಖರಿಯ ಬಗೆಗಿನ ರಿಪೋರ್ಟ್ ಅದಕ್ಕೆ ಅಪ್ರೈಸಲ್ ಎಂದು ಕರೆಯುತ್ತಾರೆ ಪ್ರತಿಯೊಬ್ಬ ಅಭಿವೃದ್ಧಿ ಅಧಿಕಾರಿಗಳಿಗೂ ವರ್ಷಕ್ಕೊಮ್ಮೆ ಈ ರೀತಿಯ ಅಪ್ರೈಸಲ್ ಮಾಡಬೇಕು. ಬಹಳ ವಿಸ್ತಾರವಾದ ಆಳದ ಕೆಲಸ ಇದನ್ನು ಜಯಶ್ರೀ ಅವರು ನೋಡಿಕೊಳ್ಳುತ್ತಿದ್ದರು.
ನನಗೆ ವಹಿಸಿದ್ದು ಕಮಿಷನ್ ಪಾವತಿಯ ಕೆಲಸ ಪ್ರತಿಯೊಂದು ವಿಮೆಗೂ ಮೊದಲ ಬಾರಿ ಕಮಿಷನ್ ಅದಕ್ಕೆ ಬೋನಸ್ ಕಮಿಷನ್ ಪಾವತಿ ಮಾಡಬೇಕು ಅಲ್ಲದೆ ಕಂಪ್ಯೂಟರ್ ನೆರವಿನಿಂದ ಪ್ರತಿ ತಿಂಗಳು ಸಂದಾಯವಾದ ಪ್ರೀಮಿಯಂ ಗಳ ಮೇಲೆ ಪುನರ್ ಕಮಿಷನ್ ಪಟ್ಟಿ ಬರುತ್ತದೆ ಅದನ್ನು ಆಯಾ ಪ್ರತಿನಿಧಿಗಳಿಗೆ ಹೊಂದುವಂತೆ ಸೇರಿಸಿಕೊಂಡು ದೊಡ್ಡದೊಂದು ರಿಜಿಸ್ಟರ್ ನಲ್ಲಿ ಗುರುತು ಮಾಡಿಕೊಂಡು ಎಲ್ಲವನ್ನು ಸರಿಯಾಗಿ ಒಂದೊಂದು ಅಕೌಂಟ್ ಕೋರ್ಟ್ ಗಳ ಪ್ರಕಾರ ಬರೆದು ಮೊತ್ತ ಹಾಕಿ ಅದನ್ನು ಚೆಕ್ ಬರೆಯಲು ಅಕೌಂಟ್ಸ್ ಡಿಪಾರ್ಟ್ಮೆಂಟ್ ಗೆ ಕಳಿಸಬೇಕು. ನಾಗರಾಜ ಅವರು ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟು ಒಂದೆರಡು ಎಂಟ್ರಿ ಹಾಕಲು ಹೇಳಿಕೊಟ್ಟರು ನಂತರ ಅದನ್ನು ಮುಂದುವರಿಸುವಂತೆ ಹೇಳಿದರು ಸುಮಾರು ಜನ ಪ್ರತಿನಿಧಿಗಳಿದ್ದ ಶಾಖೆ ಅದು ಕೆಲಸ ಸ್ವಲ್ಪ ಹೆಚ್ಚಾಗಿಯೇ ಇತ್ತು ಆದರೆ ಮಾಡುವ ನನ್ನ ಉತ್ಸಾಹವು ಕಡಿಮೆ ಮಟ್ಟದ್ದೇನು ಆಗಿರಲಿಲ್ಲ ಆದ್ದರಿಂದ ಖುಷಿಯಾಗಿಯೇ ವಹಿಸಿ ಕೊಂಡೆ.
ಅಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯ ಆಯಿತು ಬಹಳ ಜನ ಮನೆಗೆ ಊಟಕ್ಕೆ ಹೋಗುವವರು ಇದ್ದರು ನನ್ನ ಡಬ್ಬಿ ತೆಗೆದು ತಿನ್ನೋಣ ಎಂದುಕೊಳ್ಳುವಷ್ಟರಲ್ಲಿ ಕೆಳಗಿನ ನಾಗರಾಜ ಅವರು ಸಹ ತಮ್ಮ ಡಬ್ಬಿ ತೆಗೆದುಕೊಂಡು ಮೇಲೆ ಬಂದರು. . ಅಂದಿನಿಂದ ಮಧ್ಯಾಹ್ನದ ಊಟ ಒಟ್ಟಿಗೇ ಮಾಡುತ್ತಿದ್ದೆವು. ಅವರೂ ಅಷ್ಟೇ. ತುಂಬಾ ಸ್ನೇಹಮಯಿ. ಬೇರೆಕಡೆ ಕೆಲಸ ಮಾಡಿದ್ದರಿಂದ ಲೋಕಜ್ಙಾನ ಚೆನ್ನಾಗಿತ್ತು. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಅವರೊಡನಿನ ಮಾತುಕತೆ ಸಹಾಯಕವಾಯಿತು.
ಊಟದ ನಂತರ ಮತ್ತೆ ಕೆಲಸದಲ್ಲಿ ಮಗ್ನಳಾದೆ. ಆಗ ಕ್ಯಾಲ್ಕುಲೇಟರ್ ಬಳಕೆ ಇರಲಿಕ್ಲ. ಕಛೇರಿಯಲ್ಲಿ ಕೊಟ್ಟೂ ಇರಲಿಕ್ಲ. ಹಾಗಾಗಿ ಒಮ್ಮೆ ಕೂಡಿಸಿ ನಂತರ ಮತ್ತೆ ಅದನ್ನು ಪರಿಶೀಲಿಸುತ್ತಿದ್ದೆ . ನೋಡ ನೋಡುತ್ತಿದ್ದಂತೆ ಮೊದಲ ದಿನ ಕಳೆದು ಹೋಗಿಯೇ ಬಿಟ್ಟಿತ್ತು
(ಮುಂದುವರೆಯುವುದು)
ಸುಜಾತಾ ರವೀಶ್





ತುಂಬಾ ಸುಂದರವಾಗಿ ಸೂಕ್ತ ಚಿತ್ರಗಳೊಂದಿಗೆ ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು
ಸುಜಾತ ರವೀಶ್
ಮೈಸೂರು
ಅಕ್ಷರ ದೋಷಗಳನ್ನು ಸರಿಪಡಿಸುವ ಅವಶ್ಯಕತೆ ಇದೆ. ಆಸನ ಕ್ಕೆ ಹಾಸನ, ಜ್ಞಾನ ಕ್ಕೆ ಙ್ಙಾನ ಇತ್ಯಾದಿ. ವಿಮಾ ಪ್ರತಿನಿಧಿಗಳು ಎಲ್.ಐ. ಸಿ ಏಜೆಂಟರು ಜನ ಪ್ರತಿನಿಧಿಗಳಾಗಿದ್ದಾರೆ
ಖಂಡಿತಾ…. ಸರಿ ಪಡಿಸುವೆ. ಧನ್ಯವಾದಗಳು
ತಮ್ಮ ಮೊದಲ ದಿನದ ವೃತ್ತಾಂತ ಸ್ವಾರಸ್ಯಕರವಾಗಿ ವಿವರಿಸಿದ್ದೀರಿ. ಕತೆ ಓದಿಸಿಕೊಂಡು ಹೋಗುತ್ತದೆ. ಎರಡನೆ ದಿನಚರಿಯ ನಿರೀಕ್ಷೆಯಲ್ಲಿ..
ಓದಿ ಸಹೃದಯೀ ಸ್ಪಂದನೆಯನ್ನು ನೀಡಿದ್ದಕ್ಕಾಗಿ ಅನಂತ ಧನ್ಯವಾದಗಳು.
ಸುಜಾತಾ ರವೀಶ್
ಆ ಕಾಲಘಟ್ಟದಲ್ಲಿ ಹಿಂತಿರುಗಿ ನೋಡುವ ಈ ಪ್ರಸ್ತುತ ವರ್ತಮಾನದ ಕ್ಷಣಗಳೇ ಹಿತವಾದ ಮತ್ತು ಪರೀಕ್ಷಕ ದೃಷ್ಟಿಯ ದ್ಯೋತಕ. ಭವ ಅನುಭವ ಮತ್ತು ಭಾವ ಎಲ್ಲವೂ ಸೇರಿಯೇ ಜೀವ ಜೀವನದ ಬೆಡಗಿನ ಹಿನ್ನೋಟಗಳಿಗೆ ನಾಂದಿ.ತಲ್ಲಣ,ತಳ್ಳಂಕಗಳ ಆಗಿನ ವ್ಯಾಪ್ತಿಪ್ರದೇಶದ ಸ್ಮೃತಿ ವಿಸ್ಮೃತಿಯ ಜಾರಿಕೆಯಲ್ಲ.
ತುಂಬಾ ಸುಂದರ ಪ್ರತಿಕ್ರಿಯೆ. ಹೃದಯಾಂತರಾಳದ ಧನ್ಯ ಭಾವಗಳು. ಬರವಣಿಗೆಯ ಸಾರ್ಥಕತೆ ಇಂತಹ ಪ್ರೋತ್ಸಾಹದ ಕ್ಷಣಗಳು. ವಂದನೆಗಳು.
ಸುಜಾತಾ ರವೀಶ್
ಅಬ್ಬಾ ನೆನಪಿನ ಆಳದಿಂದ ಹೆಕ್ಕೆ ತೆಗದ ನಿನ್ನ ವೃತಿ ಜೀವನದ ವೃತ್ತಾಂತ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಧನ್ಯವಾದಗಳು ಮಂಜು. ನಿಮ್ಮ ಈ ಪ್ರೋತ್ಸಾಹದ ನುಡಿಗಳೇ ಬರೆಯಲು ಜೀವಜಲ.
ಸುಜಾತಾ ರವೀಶ್
ನಿಮ್ಮ ವೃತ್ತಿ ವೃತ್ತಾಂತ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಮೇಡಂ. ಶುಭವಾಗಲಿ
— ಇಂದುಮತಿ ಶ್ರೀನಿವಾಸ, ಮೈಸೂರು
ಸಹೃದಯೀ ಓದು ಮತ್ತು ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಇಂದುಮತಿ.
ಸುಜಾತಾ ರವೀಶ್
ವೃತ್ತಿ ಬದುಕಿನ ಅನುಭವ ಸುಂದರವಾಗಿ ಮೂಡಿ ಬಂದಿದೆ
ಧನ್ಯವಾದಗಳು.
ವೃತ್ತಿ ಬದುಕಿನ ಅನುಭವದ ಜೊತೆಗೆ ಸಾಹಿತ್ಯದ ಲೇಖನದಲ್ಲೂ ಸಹ ಅಷ್ಟೇ ಗಟ್ಟಿಯಾದ ಹಿಡಿತ ಇರುವ ಬರಹ ಆಗಿದೆ.
ಮುರಳೀಧರ ಅ
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ನಾನು ಆಭಾರಿ.ತುಂಬು ಹೃದಯದ ಧನ್ಯವಾದಗಳು.
ಸುಜಾತಾ ರವೀಶ್
ಸಿಹಿ ಕಹಿ ನೆನಪುಗಳು