ಅಂಕಣ ಸಂಗಾತಿ=93
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮನ ಕರಗಿಸಿದ ಮಗಳ ಮಾತು

ಮಗಳು ಬರುವುದನ್ನೇ ಕಾತುರದಿಂದ ಕಾಯುತ್ತಿದ್ದ ಸುಮತಿಗೆ ಅಷ್ಟು ದೂರದಲ್ಲಿ ಮಗಳು ನಡೆದು ಬರುತ್ತಿರುವುದು ಕಂಡಿತು. ಹತ್ತಿರ ಬಂದ ಮಗಳ ಮುಖವನ್ನು ಕಂಡು ಸುಮತಿಗೆ ಮಗಳು ಸಂತೋಷದ ಸಮಾಚಾರವನ್ನು ತಂದಿರುವಳು ಎಂದು ಅರ್ಥವಾಯಿತು. ಅಮ್ಮ ತನ್ನ ಮುಖವನ್ನೇ ನೋಡುತ್ತಿರುವುದನ್ನು ಕಂಡು….” ಅಮ್ಮಾ…..ನನ್ನ ಮುಖವನ್ನು ಹೀಗೆ ದುರುಗುಟ್ಟಿ ನೋಡಬೇಡ….. ನೀನು ಕನ್ನಡಕ ಹಾಕಿ ನೋಡುತ್ತಿದ್ದರೆ ನನಗೆ ಭಯವಾಗುತ್ತೆ”…. ಎಂದಳು ಕೀಟಲೆಯ ಸ್ವರದಲ್ಲಿ. ಸುಮತಿ ನಗುತ್ತಾ ಮಗಳ ಕೆನ್ನೆಯನ್ನು ಚಿವುಟಿ….” ಹೌದು ನಾನು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಈ ಕನ್ನಡಕವನ್ನು ಹಾಕಿಕೊಂಡಾಗಿನಿಂದ ನೀನು ಹೀಗೇ ನನ್ನನ್ನು ರೇಗಿಸ್ತಾ ಇರುತ್ತೀಯ”…. ಎಂದು ಹಸಿ ಮುನಿಸು ತೋರುತ್ತಾ ಹೇಳಿದಳು. ಭೂತಗನ್ನಡಿಯಂತಹ ತನ್ನ ಕನ್ನಡಕವನ್ನು ಹಾಗೂ ಅದರೊಳಗಿಂದ ಕಾಣುವ ತನ್ನ ದೊಡ್ಡ ದೊಡ್ಡ ಕಣ್ಣುಗಳನ್ನು ನೋಡಿ ಮಕ್ಕಳೆಲ್ಲರೂ ಹೆದರುತ್ತಾರೆ ಎನ್ನುವ ವಿಷಯ ಸುಮತಿಗೂ ತಿಳಿದಿತ್ತು. ಆದರೆ ತನ್ನ ಈ ಮುದ್ದು ಮಗಳಲ್ಲದೆ ಬೇರೆ ಯಾರೂ ಹೀಗೆ ಧೈರ್ಯವಾಗಿ ನೇರವಾಗಿ ಹೇಳುತ್ತಿರಲಿಲ್ಲ. ಒಮ್ಮೆ ಕಣ್ಣಿನ ಪೊರೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ನಂತರ ಮತ್ತೊಮ್ಮೆಯೂ ಕಣ್ಣಿನಲ್ಲಿ ಪೊರೆ ಕಾಣಿಸಿಕೊಂಡಿತ್ತು. ಆಗಲೂ ಮೊದಲಿನಂತೆಯೇ ಸಣ್ಣ ಸಾಹುಕಾರರು ಹಾಗೂ ಅವರ ಪತ್ನಿ ಸುಮತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ ಆರೈಕೆ ಮಾಡಿದ್ದರು. ಮಗಳು ಹೀಗೆ ಹೇಳಿ ತನ್ನನ್ನು ಚೇಡಿಸಿದಾಗ ಎಲ್ಲ ಘಟನೆಗಳು ಮತ್ತೊಮ್ಮೆ ಸುಮತಿಯ ಸ್ಮೃತಿ ಪಟಲದಲ್ಲಿ ಹಾದುಹೋಯಿತು. ಮಗಳ ತೋಳನ್ನು ಹಿಡಿದು…. “ನಿನ್ನ ಸಂತೋಷದ ಮುಖವನ್ನು ಕಂಡಾಗ ಹೋದ ಕಾರ್ಯ ಸಫಲವಾಗಿದೆ ಎಂದು ತಿಳಿಯಿತು…. ಆದರೂ ನಿನ್ನ ಬಾಯಿಂದಲೇ ಎಲ್ಲ ವಿಚಾರವನ್ನು ನಾನು ಕೇಳಿ ತಿಳಿದುಕೊಳ್ಳುವ ತವಕ ….ಹೇಳು ಮಗಳೇ…. ಅಮ್ಮ ಏನು ಹೇಳಿದರು? ಎಂದು ಕುತೂಹಲದಿಂದ ಕೇಳಿದಳು ಸಮಿತಿ.
ಸುಮತಿಯ ಪ್ರಶ್ನೆಗೆ ಏನೂ ಹೇಳದೇ ಮಗಳು ಅವಳನ್ನು ಅಪ್ಪಿಕೊಂಡು ಒಂದು ಕ್ಷಣ ನಿಂತಳು. ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎನ್ನುವ ತನ್ನ ಕನಸನ್ನು ಈಡೇರಿಸಿದ ಅಮ್ಮನನ್ನು ಹಾಗೂ ದೇವರನ್ನು ಮತ್ತು ತನ್ನ ತಾಯಿ ಸುಮತಿಯನ್ನು ನೆನೆದುಕೊಂಡಳು. ಅಮ್ಮನ ಕೆನ್ನೆಗೆ ಒಂದು ಹೂ ಮುತ್ತನ್ನು ಕೊಟ್ಟು,…”ನೀನು ಊಹಿಸುತ್ತಿರುವುದು ಸರಿಯಾಗಿಯೇ ಇದೆ… ” ನಾನು ಟೈಪಿಂಗ್ ಕಲಿಯಲು ಪ್ರತೀ ತಿಂಗಳೂ ಧನ ಸಹಾಯ ಮಾಡುವುದಾಗಿ ಹಾಗೂ ಬಸ್ ಚಾರ್ಜ್ ಗೆ ಕೂಡ ಹಣ ಕೊಡುವುದಾಗಿ ಅಮ್ಮ ಹೇಳಿದರು… ಇದೋ ನೋಡು ಅವರು ನನಗೆ ಕೊಟ್ಟ ಹಣ….. ಎಂದು ತಾನು ಕೈಯಲ್ಲಿ ಸುರುಳಿ ಆಕಾರದಲ್ಲಿ ಸುತ್ತಿ ಭದ್ರವಾಗಿ ಇರಿಸಿದ್ದ ನೋಟುಗಳನ್ನು ತೋರಿಸಿದಳು….. ಅಮ್ಮ ನಿನ್ನ ಮಗಳ ಕನಸು ನನಸಾಗುತ್ತಿದೆ…. ನೀನು ದೇವರಲ್ಲಿ ಮಾಡಿದ ಪ್ರಾರ್ಥನೆಯು ಫಲಿಸಿದೆ…. ಈ ವರ್ಷ ಟೈಪಿಂಗ್ ಕಲಿತು ಮುಂದಿನ ವರ್ಷ ಕಾಲೇಜಿಗೆ ಸೇರಿಕೊಳ್ಳುತ್ತೇನೆ. ನನ್ನ ವಿದ್ಯಾಭ್ಯಾಸ ಮುಗಿಸಿ, ನಾನು ಒಂದು ಒಳ್ಳೆಯ ಕೆಲಸಕ್ಕೆ ಸೇರಿ ನಿನಗೆ ಸಹಾಯ ಮಾಡುತ್ತೇನೆ….ಆಗ ನೀನೊಬ್ಬಳೇ ನಮ್ಮ ಕುಟುಂಬಕ್ಕಾಗಿ ಹೀಗೆ ಕಷ್ಟ ಪಡುವ ಅಗತ್ಯ ಇರುವುದಿಲ್ಲ…. ತಂಗಿಯರನ್ನು ಸಾಕಿ ಸಲಹಲು ನಿನ್ನ ಜೊತೆ ಸಹಾಯಕ್ಕಾಗಿ ನಾನಿರುತ್ತೇನೆ….. ನನಗೊಂದು ಒಳ್ಳೆಯ ಕೆಲಸ ಸಿಕ್ಕ ಮೇಲೆ ನೀನು ಕೆಲಸ ಮಾಡಬೇಡ…. ಸಾಧ್ಯವಾದಷ್ಟು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ…. ನಮ್ಮ ಜೊತೆಗೆ ದೇವರಿದ್ದಾನೆ ಅಮ್ಮ…. ನೋಡು…ಹಾಗಾಗಿ ಈ ತೋಟದ ಯಜಮಾನಿಯಾದ ಅಮ್ಮ ನಮಗೆ ಸಹಾಯ ಮಾಡುತ್ತಿದ್ದಾರೆ…. ಎಂದಳು. ತನ್ನ ಪುಟ್ಟ ಮಗಳು ತನ್ನ ಮುಂದೆ ಬಹಳ ಎತ್ತರಕ್ಕೆ ಬೆಳೆದಂತೆ ಅನಿಸಿತು ಸುಮತಿಗೆ. ಅವಳ ಕಣ್ಣುಗಳು ಹನಿಗೂಡಿದವು ಅವಳಿಗೇಕೋ ಮಗ ವಿಶ್ವನ ನೆನಪಾಯಿತು. ಅವನೂ ಹೀಗೇ ಅಲ್ಲವೇ ಹೇಳುತ್ತಿದ್ದಿದ್ದು !?
ಈಗ ನೋಡಿದರೆ ಮಗಳು ಕೂಡಾ ಅದೇ ಮಾತನ್ನೇ ಪುನರುಚ್ಚರಿಸುತ್ತಿದ್ದಾಳೆ. ಸುಮತಿಗೆ ಪತಿಯ ನೆನಪು ಬಂದಿತು. ಈ ಮಗು ತನ್ನ ಗರ್ಭದಲ್ಲಿದ್ದಾಗ ಮಗನೆಂದು ಭಾವಿಸಿ,ನಿನ್ನ ಉದರದಲ್ಲಿ ಬೆಳೆಯುತ್ತಿರುವುದು ಗಂಡು ಮಗು…. ನಾಳೆ ವಯಸ್ಸಾದ ಮೇಲೆ ನಮ್ಮನ್ನು ನೋಡಿಕೊಳ್ಳುತ್ತಾನೆ”…. ಎಂದು ಹೇಳಿದ್ದು ನೆನಪಾಯಿತು. ಹುಟ್ಟಿದ್ದು ಹೆಣ್ಣು ಮಗು ಎಂದು ತಿಳಿದ ಮೇಲೆ ಪತಿಯು ಈ ಮಗುವನ್ನು ನಿಕೃಷ್ಟವಾಗಿ ಕಾಣುತ್ತಿದ್ದುದು ನೆನಪಾಗಿ ಅವಳ ಕಣ್ಣಿನಿಂದ ಹನಿಗಳು ಜಾರಿ ಕೆನ್ನೆಯನ್ನು ತೋರಿಸಿದವು. ಅಮ್ಮನ ಕಣ್ಣು ತುಂಬಿದ್ದನ್ನು ನೋಡಿ ಮಗಳು ಪ್ರೀತಿಯಿಂದ ಅಮ್ಮನ ಕಣ್ಣುಗಳನ್ನು ಒರೆಸುತ್ತಾ….” ಅಮ್ಮಾ…. ನೀನು ಏನನ್ನು ನೆನೆದು ಅಳುತ್ತಿರುವೆ ಎನ್ನುವುದನ್ನು ನಾನು ಚೆನ್ನಾಗಿ ಬಲ್ಲೆ…. ಹಳೆಯದನ್ನೆಲ್ಲ ನೆನೆದು ಅಳಬೇಡ…ಈಗ ನೋಡು ನಾನು ಮತ್ತು ನನ್ನ ತಂಗಿಯರು ಎಷ್ಟು ದೊಡ್ಡವರಾಗಿ ಬೆಳೆದಿದ್ದೇವೆ…. ಇನ್ನು ನೀನು ಈ ರೀತಿ ದುಃಖಿಸುವುದನ್ನು ನಾನು ನೋಡಲಾರೆ….. ಈಗ ನೋಡು ನಮ್ಮ ಬಾಳಿಗೆ ಬೆಳಕನ್ನು ತೋರುವ ದಾರಿ ನಮ್ಮ ಮುಂದೆ ಇದೆ…. ಅಳುವುದನ್ನು ಬಿಟ್ಟು ನನ್ನನ್ನೊಮ್ಮೆ ನೋಡು… ಒಳ್ಳೆಯದಾಗಲಿ…. ಎಂದು ನನಗೆ ಆಶೀರ್ವಾದ ಮಾಡಮ್ಮಾ”…. ಎಂದು ಅಮ್ಮನ ಪಾದಗಳನ್ನು ಮುಟ್ಟಿ ನಮಸ್ಕರಿಸಿದಳು. ತನ್ನ ಪಾದಗಳನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡ ಮಗಳ ಭುಜವನ್ನು ಹಿಡಿದು ಎಬ್ಬಿಸುತ್ತಾ ತನ್ನ ಮಗಳನ್ನು ದಿಟ್ಟಿಸಿ ನೋಡಿದಳು. ಆಗ ಅವಳಿಗೆ ತಾನೊಮ್ಮೆ ಮಧುಮೇಹ ಹೆಚ್ಚಿ ಮರಣ ಶೈಯೆಯಲ್ಲಿ ಇದ್ದಾಗ ಶಾಲೆಗೆ ಮಧ್ಯವಾರ್ಷಿಕ ರಜೆ ಇದ್ದ ಕಾರಣಕ್ಕೆ ಹಾಸ್ಟೆಲ್ ನಿಂದ ತನ್ನ ಪುಟ್ಟ ತಂಗಿಯ ಜೊತೆಗೆ ಮನೆಗೆ ಬಂದಿದ್ದ ತನ್ನ ಈ 9 ವರ್ಷದ ಮಗಳು ಅಮ್ಮನ ಸ್ಥಿತಿಯನ್ನು ಕಂಡು ಏನು ಮಾಡಬೇಕೆಂದು ತೋಚದೆ, ಅಲ್ಲಿಯೇ ಸ್ವಲ್ಪ ಹತ್ತಿರದಲ್ಲಿ ಇದ್ದ ಕೂಲಿ ಕೆಲಸಗಾರರ ಮನೆಯಿಂದ ಒಂದು ಲೋಟ ಗಂಜಿಯನ್ನು ಕೇಳಿ ಪಡೆದು ಅಮ್ಮನಿಗೆ ಕುಡಿಸಲು ತಂದಿದ್ದಳು.
ಆಗ ಅಲ್ಲಿದ್ದ ಕೂಲಿಕಾರರು ಆ ಮಗುವಿಗೆ ಹೇಳಿದ್ದರು…. “ನಿಮ್ಮ ಅಮ್ಮ ಇನ್ನು ಹೆಚ್ಚು ದಿನ ಬದುಕಿ ಉಳಿಯುವುದಿಲ್ಲ ಎಂದು ಡಾಕ್ಟರ್ ಆದ ನಮ್ಮ ಸಣ್ಣ ಸಾಹುಕಾರರು ಬಂದು ನೋಡಿ ಹೇಳಿ ಹೋಗಿದ್ದಾರೆ”…. ಎಂದಿದ್ದರು. ಆಗ ಈ 9 ವರ್ಷದ ಪುಟ್ಟಬಾಲೆ…. “ಇಲ್ಲ…. ಇಲ್ಲ… ನನ್ನ ಅಮ್ಮನಿಗೆ ಏನೂ ಆಗುವುದಿಲ್ಲ… ಅಮ್ಮ ಬದುಕುತ್ತಾಳೆ…. ಅಮ್ಮನಿಗೆ ಕುಡಿಸಲು ನನಗೊಂದಿಷ್ಟು ಗಂಜಿ ನೀರನ್ನು ದಯವಿಟ್ಟು ಕೊಡಿ ಎಂದು ಬೇಡಿ ಪಡೆದುಕೊಂಡು ಬಂದು ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಕುಡಿಸಿ ಅಮ್ಮ ಎಚ್ಚರವಾಗುವಂತೆ ಮಾಡಿದ್ದಳು. ಮಗಳು ಕೊಟ್ಟ ಗಂಜಿ ನೀರಿನಿಂದ ಮರು ಜೀವ ಪಡೆದ ಸುಮತಿ ದಿನ ಕಳೆದಂತೆ ಚೇತರಿಸಿಕೊಂಡಳು. ಆಗ ಅವಳಿಂದ ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಈ ಪುಟ್ಟ ಹುಡುಗಿ ತನ್ನ ತಂಗಿಯರನ್ನು ಕರೆದುಕೊಂಡು ಅಮ್ಮ ಅಕ್ಷರಭ್ಯಾಸ ಮಾಡಿಸುತ್ತಿದ್ದ ಶಾಲೆಗೆ ಹೋಗಿ ಅಮ್ಮನ ಪರವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದಳು. ಹಾಗೂ ಹೀಗೂ ಒಂದು ತಿಂಗಳು ತಪ್ಪದಂತೆ ಶಾಲೆ ಈ ಮಕ್ಕಳಿಂದಲೇ ನಡೆಯಿತು. ಒಂದು ತಿಂಗಳ ಸಂಬಳ ಹೋದರೆ ಆ ತಿಂಗಳು ಉಪವಾಸ ಇರಬೇಕಾಗುತ್ತಿತ್ತು. ಈಗ ಆ ಘಟನೆಯು ಸುಮತಿಯ ನೆನಪಿಗೆ ಬಂತು. ಸುಮತಿ ಕೂಡಲೇ ಮಗಳನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ತು ಬಿಟ್ಟಳು. ಅಮ್ಮ ಅಳುತ್ತಿರುವುದನ್ನು ಕಂಡು ಮಗಳಿಗೂ ತುಂಬಾ ನೋವಾಯಿತು…. ಅಮ್ಮ ನೀನು ಅಳಬೇಡ ನೀನು ಹೀಗೆ ಅತ್ತರೆ ನನಗೂ ಅಳು ಬರುತ್ತೆ…. ನಮಗೆ ಧೈರ್ಯ ತುಂಬುವವರು ಯಾರು?…. ನೋಡು ಈಗ ತಂಗಿಯರಿಬ್ಬರೂ ಬಂದರು… ಅವರು ಕೂಡಾ ಅಳಲು ಪ್ರಾರಂಭಿಸುತ್ತಾರೆ…. ನೋಡು ಇಲ್ಲಿ… ನಮ್ಮ ಮೂವರ ಮುಖವನ್ನು ಒಮ್ಮೆ…. ಎಲ್ಲಿ… ಒಮ್ಮೆ ನಕ್ಕು ಬಿಡು…. ಓ… ನೋಡು ಈಗ ಅಮ್ಮ ನಗುತ್ತಾಳೆ…. ವಾರಗಣ್ಣಿನಲ್ಲಿ ನೋಡುತ್ತಿದ್ದಾಳೆ… ಎಂದು ಹೇಳುತ್ತಾ ಅಮ್ಮನನ್ನು ನಗಿಸುವ ಪ್ರಯತ್ನ ಮಾಡಿದಳು.




