ಇತಿಹಾಸ ಸಂಗಾತಿ
ಪಾರ್ವತಿ ಎಸ್ ಬೂದೂರು
“ಸಾಮ್ರಾಟರ ಸೋಲಿಸಿದ
ವೀರವನಿತೆ ಬೆಳವಡಿಮಲ್ಲಮ್ಮ”
ನೆನಪಿನಲ್ಲಿಒಂದು ಬರಹ

“ಚಿಗುರು ಚಿಮ್ಮಿದ ಮಣ್ಣಲ್ಲಿ, ವೀರ ಕವಿದು ನಿಂತಿರುವಾಗ, ಶೌರ್ಯಕೆ ಸೋತ ಸಾಮ್ರಾಟ, ಅವಳ ಕಣ್ಗಳ ಕಂಡು ಬೆರಗಾದ!”.
ಹೀಗೆ ಬೆಕ್ಕಸ ಬೆರಗಾಗಿಸಿದ ವೀರ ವನಿತೆಯೆ ಬೆಳವಡಿ ಮಲ್ಲಮ್ಮನವರ ನೆನಪಿನಲ್ಲಿ ಈಬರಹನಿಮ್ಮ ಓದಿಗಾಗಿ
ನಿನ್ನೆ ಕೇವಲ ಒಂದು ದಿನವಲ್ಲ, ಅದು ಇತಿಹಾಸದ ಅಮರ ಅಧ್ಯಾಯವೊಂದನ್ನು ಪುನರ್ಮನನ ಮಾಡುವ ಸುದಿನ. ನಮ್ಮ ನಾಡಿನ ಗತವೈಭವದ ಪ್ರಕಾಶ, 17ನೇ ಶತಮಾನದ ಆ ದಿನಗಳಲ್ಲಿ, ಶಿವಾಜಿ ಮಹಾರಾಜರಂತಹ ಮಹಾ ಸಾಮ್ರಾಟರೂ ಕೂಡ ಈ ವೀರ ರಾಣಿಯ ಧೈರ್ಯ ಮತ್ತು ಶೌರ್ಯಕ್ಕೆ ತಲೆಬಾಗಿದ್ದರು.
ಬೆಳವಡಿಯ ಮಹಾರಾಜರು ಯುದ್ಧದಲ್ಲಿ ವೀರಮರಣವನ್ನಪ್ಪಿದಾಗ, ಇಡೀ ರಾಜ್ಯ ನಿಬ್ಬೆರಗಾಗಿ ನಿಂತಿತ್ತು. ಕತ್ತಲಾವರಿಸಿದ ಆ ಕ್ಷಣದಲ್ಲಿ, ರಾಣಿ ಮಲ್ಲಮ್ಮ ಅಗ್ನಿಯ ಜ್ವಾಲೆಯಂತೆ ಎದ್ದು ನಿಂತರು.
“ನಾರಿಯರೆಂದಲ್ಲ, ನಾವು, ನಾಡು ನುಡಿಗೆ ಕತ್ತಿ ಹಿಡಿಯುವೆವು, ರಣಭೂಮಿಯ ಕದನದಲ್ಲಿ, ಧೀರತೆಯನು ತೋರುವೆವು.” ಎಂದು ಉದ್ಘರಿಸುತ್ತ, ರಾಜ್ಯ ರಕ್ಷಣೆಗಾಗಿ ತಮ್ಮ ಕೈಗೆ ಕತ್ತಿ ಹಿಡಿದು, ಕೇವಲ 2,000 ಸ್ತ್ರೀ ಸೈನಿಕರ ಪಡೆಯೊಂದಿಗೆ ರಣರಂಗಕ್ಕೆ ಇಳಿದರು. ಅದು ಕೇವಲ ಯುದ್ಧವಾಗಿರಲಿಲ್ಲ, ಅದು ಅಸಾಧಾರಣ ನಾಯಕತ್ವದ ಮತ್ತು ದೃಢ ಸಂಕಲ್ಪದ ಮಹಾಕಾವ್ಯವಾಗಿತ್ತು.
ಪುರುಷ ಸೈನಿಕರ ಬೃಹತ್ ಸೈನ್ಯದ ವಿರುದ್ಧ ಈ ವೀರ ವನಿತೆಯ ಯುದ್ಧತಂತ್ರ, ಸ್ಥೈರ್ಯ ಮತ್ತು ನಿರ್ಭೀತ ಹೋರಾಟ ಶಿವಾಜಿ ಮಹಾರಾಜರಿಗೂ ಆಶ್ಚರ್ಯ ಮೂಡಿಸಿತ್ತು. ಮಲ್ಲಮ್ಮನ ಹೋರಾಟ ಕೇವಲ ಗೆಲುವು ಅಥವಾ ಸೋಲಿನ ಬಗ್ಗೆ ಇರಲಿಲ್ಲ. ಅದು ತನ್ನ ನಾಡು, ತನ್ನ ಪ್ರಜೆಗಳು, ತನ್ನ ಗೌರವ ಮತ್ತು ಸ್ವಾಭಿಮಾನಕ್ಕಾಗಿ ನಡೆಸಿದ ಅಪ್ರತಿಮ ಸಮರ. ಆಕೆಯ ಶೌರ್ಯದ ಪ್ರತಿರೂಪವಾಗಿ, ಮಲ್ಲಮ್ಮ ಎಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.

“ರಕ್ತ ಹರಿಯಲಿ, ಬೆವರು ಸುರಿಯಲಿ, ಈ ಮಣ್ಣು ನಮದೆಂದು, ಕೊನೆಯುಸಿರಿರುವವರೆಗೂ, ಹೋರಾಡುವೆವು ಎಂದ.” ಈ ಮಹಾನ್ ರಾಣಿಯ ಜನ್ಮದಿನವನ್ನು ಸ್ಮರಿಸುತ್ತಾ, ಸ್ತ್ರೀ ಶಕ್ತಿಯ ನಿಜವಾದ ಅರ್ಥವನ್ನು ತೋರುವ. ಬೆಳವಡಿ ಮಲ್ಲಮ್ಮನಂತಹ ವೀರ ಮಹಿಳೆಯರು ನಮ್ಮ ಇತಿಹಾಸದಲ್ಲಿ ಸೇರಿಕೊಂಡಿರುವುದು ಕೇವಲ ದಾಖಲೆಗಾಗಿ ಅಲ್ಲ, ಬದಲಾಗಿ ಅವರು ನಮಗೆ ಸದಾ ಕಾಲ ಸ್ಫೂರ್ತಿ ನೀಡಲು, ಆಕೆಯ ಜೀವನದ ಪ್ರತಿಯೊಂದು ಪುಟವೂ ಹೇಳುವ ನೀತಿ ಎಂದರೆ “ಸವಾಲುಗಳು ಎಷ್ಟೇ ದೊಡ್ಡದಾಗಿರಲಿ, ಧೈರ್ಯ ಮತ್ತು ಆತ್ಮವಿಶ್ವಾಸವಿದ್ದರೆ ನಾವು ಏನನ್ನಾದರೂ ಸಾಧಿಸಬಹುದೆಂದು ತೋರಿದ ಯಶೋಗಾಥೆಯದು.
“ಬೀಸಿದ ಕತ್ತಿ, ಹರಿಸಿದ ರಕ್ತ, ಇದು ಕಥೆಯಲ್ಲ, ಇತಿಹಾಸ; ಹೆಣ್ಣಿನ ಹೃದಯದಲ್ಲಿ ಅಡಗಿರುವ, ಜ್ವಲಂತ ವೀರಾವೇಶ. ನಮ್ಮ ನಾಡಿನ ಮಣ್ಣು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಆದರೆ ಆ ಇತಿಹಾಸದ ಪುಟಗಳಲ್ಲಿ ಕೆಲವು ಹೆಸರುಗಳು ಮಾತ್ರ ಜ್ವಾಲೆಯಂತೆ ಪ್ರಕಾಶಿಸುತ್ತವೆ. ಅಂತಹ ಜ್ವಾಲೆಗಳಲ್ಲಿ ಬೆಳವಡಿ ಮಲ್ಲಮ್ಮರದ್ದು ಒಂದು. ಆಕೆಯ ಧೈರ್ಯ, ಶೌರ್ಯ ಮತ್ತು ದೇಶಪ್ರೇಮವು ಕತ್ತಲಾವರಿಸಿದ ಆ ಕ್ಷಣದಲ್ಲಿ, ದೀಪದಂತೆ ಅಗ್ನಿಯ ಜ್ವಾಲೆಯಂತೆ ಎದ್ದು ನಿಂತು ಕೈಗೆ ಕತ್ತಿ ಹಿಡಿದದ್ದು ಕೇವಲ ರಾಜ್ಯ ರಕ್ಷಣೆಗಾಗಿ ಮಾತ್ರವಲ್ಲದೆ ಆ ಕಾಲದ ಅತ್ಯಂತ ಪ್ರಬಲ ಸಾಮ್ರಾಟ ಶಿವಾಜಿ ಮಹಾರಾಜರ ಸೈನ್ಯದ ವಿರುದ್ಧ ಹೋರಾಟ ಕೇವಲ ಗೆಲುವು ಅಥವಾ ಸೋಲಿನ ಲೆಕ್ಕವಾಗಿರದೆ ಒಬ್ಬ ಸಾಮಾನ್ಯ ಮಹಿಳೆಯೂ ‘ಏನಾದರೂ ಮಾಡಬಹುದು’ ಎಂದು ಜಗತ್ತಿಗೆ ತೋರಿಸಿದ ಸಂದೇಶವಾಗಿತ್ತು.
,ಆಕೆಯ ಹೋರಾಟ ಗತಿಸಿದ ವಿಷಯವಲ್ಲ, ಅದು ಪ್ರತಿ ಹೆಣ್ಣಿಗೂ, ಪ್ರತಿ ಮನುಷ್ಯನಿಗೂ ಸ್ಫೂರ್ತಿ ನೀಡುವ ಜೀವಂತ ಸತ್ಯ.
ಇಂದು ನಾವು ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುತ್ತಾ, ಅವರ ತ್ಯಾಗ ಮತ್ತು ಸಾಹಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪ ಮಾಡುತ್ತ ಅವರ ವೀರಗಾಥೆ ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಿಹ ಬೆಳವಡಿ ಮಲ್ಲಮ್ಮ ಎಂದೆಂದಿಗೂ ಅಮರ.
———— ————————————————————————————————
ಪಾರ್ವತಿ ಎಸ್ ಬೂದೂರು




