ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
“ಪ್ರೀತಿಇರಲಿ”

ನಿನ್ನನು ಹೆಗಲ ಮೇಲೆ
ಹೊತ್ತು ಜಗವ ತೋರಿದ
ಅಪ್ಪ ಅವನು ಪ್ರೀತಿ ಇರಲಿ
ನಿನ್ನ ಜೊತೆ ಗೂಡಿ
ಆಡಿ ನಲಿದ ಸ್ನೇಹಿತರು
ಅವರು ಪ್ರೀತಿ ಇರಲಿ
ನಿನ್ನ ಮನೆಗೆ ಮನಕ್ಕೆ
ಎಲ್ಲತೊರೆದು ಬಂದ ಸತಿ
ಅವಳು ಪ್ರೀತಿ ಇರಲಿ
ನಿನ್ನ ರಕ್ತ ಹಂಚಿಕೊಂಡು
ನಿನ್ನ ಮಕ್ಕಳಾಗಿ ಹುಟ್ಟಿದ
ಕುಡಿಗಳವು ಪ್ರೀತಿ ಇರಲಿ
ನಿನ್ನ ಕರ್ಮಭೂಮಿ ನಿನ್ನ
ಊರು ಸೂರು ಇರುವ
ನಿನ್ನೂರದು ಪ್ರೀತಿ ಇರಲಿ
ನಿನ್ನ ನಿಶ್ಚಿಂತ ಇರುವಿಕೆಗೆ
ಗುರು ರೈತ ಯೋಧರು
ಕಾರಣರು ಪ್ರೀತಿ ಇರಲಿ
ನಿನ್ನ ಅಸ್ಮಿತಿಗೆ ಕಾರಣ
ನೆಲ ಜಲ ಭಾಷೆಗಳ
ಮೇಲೆ ಪ್ರೀತಿ ಇರಲಿ.
ನಾನು ನನ್ನದು ಎನದೆ
ಎಲ್ಲರೊಳಗೊಂದಾಗಿ
ಬಾಳುವಲ್ಲಿ ಪ್ರೀತಿ ಇರಲಿ.
.ರೋಹಿಣಿ ಯಾದವಾಡ.





ಪ್ರೀತಿ ಇರಲಿ ನಿಮ್ಮ ಕವನ ತುಂಬಾ ಮನಮುಟ್ಟುವಂತೆ ಇದೆ . ತಂದೆ ,ತಾಯಿ ಸ್ನೇಹಿತರು,ಹೆಂಡ,ಮಕ್ಕಳು,ನೆಲ,ಜಲ,ಬೆಳೆ, ಅದ್ಭುತ ನಿಮ್ಮ ಕವನ
ಕವನ ಚೆನ್ನಾಗಿದೆ