ಯುವ ಸಂಗಾತಿ
ಮೇಘ ರಾಮದಾಸ್ ಜಿ
“ಯುವಜನರಿಗೇಕೆ ವಿಶೇಷ ಹಕ್ಕುಗಳು?”

ನಮ್ಮದು ಯುವ ರಾಷ್ಟ್ರ. ದೇಶ ಯುವಜನತೆಯ ದೊಡ್ಡ ಸಮುದಾಯವನ್ನೇ ಹೊಂದಿದೆ. ಯುವಪಡೆ ಭಾರತದ ಅಭಿವೃದ್ಧಿಯ ಆಧಾರವಾಗಿದ್ದಾರೆ. ವಿಶ್ವಸಂಸ್ಥೆಯು 15 – 24 ವಯಸ್ಸಿನವರನ್ನು ಯುವಜನರು ಎಂದು ಕರೆದರೆ, ಭಾರತದ ಯುವ ನೀತಿ ಹಾಗೂ ಕರ್ನಾಟಕದ ಯುವ ನೀತಿ 15 – 29 ವಯಸ್ಸಿನವರನ್ನು ಯುವಜನತೆ ಎಂದು ಕರೆದಿದೆ. ಆದರೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಅನುಸಾರ 0 – 18 ವಯಸ್ಸಿನವರನ್ನು ಮಕ್ಕಳು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಯುವಜನತೆ ಎಂದರೆ ಬಾಲ್ಯಾವಸ್ಥೆಯನ್ನು ಕಳೆದು ಯೌವನಕ್ಕೆ ಪ್ರವೇಶಿಸಿ ವಯಸ್ಕರಾಗಲು ಹೊರಟಿರುವವರು. ಅವರಲ್ಲಿ ಮಕ್ಕಳ ಮುಗ್ಧತೆ, ಹದಿಹರೆಯದವರ ಚಂಚಲತೆ ಹಾಗೂ ವಯಸ್ಕರ ಗಾಂಭೀರ್ಯತೆ ಎಲ್ಲವೂ ತುಂಬಿರುವ ಪ್ರಬುದ್ಧರು. ಈಗಿನ ಯುವಜನತೆಗೆ ಬೇಕಿರುವುದು ಬೆಂಬಲವೇ ಹೊರತು ಕಡಿವಾಣವಲ್ಲ. ” ನೀನು ಮಾಡಬಲ್ಲೆ ” ಎನ್ನುವ ಚಿಕ್ಕ ಮಾತು ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಯುವ ಸಮುದಾಯ ನಿರ್ಭೀತಿಯಿಂದ ಬೆಳೆಯಲು ಒಂದಷ್ಟು ಸಾಮಾಜಿಕ ತೊಡಕುಗಳಿವೆ, ಅವುಗಳನ್ನು ನೀಗಿಸಲು ವಿಶೇಷ ಹಕ್ಕುಗಳ ಅನಿವಾರ್ಯತೆ ಇದೆ.
ಎಲ್ಲಾ ಜೀವರಾಶಿಗಳಿಗೂ ಭೂಮಿಯ ಮೇಲೆ ಜೀವಿಸಲು ತಮ್ಮದೇ ಆದ ಕೆಲವು ಹಕ್ಕುಗಳಿವೆ. ಅವುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಬಹುದು. ಇವುಗಳ ಜೊತೆಗೆ ಸಾಂವಿಧಾನಿಕವಾಗಿ ಒಂದಷ್ಟು ಹಕ್ಕುಗಳು ಸಿಕ್ಕಿವೆ. ಇದಷ್ಟೇ ಅಲ್ಲದೇ ದೇಶದ ಕೆಲವು ವಿಶೇಷ ಗುಂಪು/ಸಮುದಾಯಗಳಿಗೆ ಪ್ರತ್ಯೇಕವಾಗಿ ಕೆಲವು ಹಕ್ಕುಗಳನ್ನು ನೀಡಲಾಗಿದೆ. ಅವುಗಳೇ ವಿಶೇಷ ಹಕ್ಕುಗಳು. ಮಹಿಳೆಯರು, ಮಕ್ಕಳು, ವಿಶೇಷ ಚೇತನರು, ಪರಿಸರ, ಅಲ್ಪಸಂಖ್ಯಾತರು, ದಲಿತರು, ಸವರ್ಣೀಯರು ಹೀಗೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಾಗಿ ವಿಶೇಷ ಹಕ್ಕುಗಳು, ಆದ್ಯತೆಗಳು ದೊರೆತಿವೆ. ಇವುಗಳಿಂದ ಈ ಎಲ್ಲಾ ಸಮುದಾಯಗಳಲ್ಲಿ ಒಂದಷ್ಟು ದೊಡ್ಡ ಬದಲಾವಣೆಗಳು ಆಗಿವೆ. ಅದರ ಜೊತೆಗೆ ಈ ಹಕ್ಕುಗಳಿಗೆ ಚ್ಯುತಿ ಬಂದರೆ ಅವುಗಳನ್ನು ಪ್ರಶ್ನಿಸಲು ಪ್ರತ್ಯೇಕ ಆಯೋಗಗಳೂ ಸಹಾ ಇವೆ. ಇದರಿಂದ ಹಕ್ಕುಗಳ ರಕ್ಷಣೆಯ ಜೊತೆಗೆ ನ್ಯಾಯದ ಭರವಸೆಯೂ ಸಹಾ ಲಭಿಸಿದೆ.

ಈ ಎಲ್ಲಾ ವಿಶೇಷ ಸಮುದಾಯಗಳ ಜೊತೆಗೆ ಯುವಜನರನ್ನು ಸಹಾ ಸೇರ್ಪಡೆಗೊಳಿಸುವುದು ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ಈಗ ದೇಶದಲ್ಲಿ ಅತೀ ಹೆಚ್ಚು ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವುದು ಯುವಜನತೆ. ಶಿಕ್ಷಣ, ಉದ್ಯೋಗ, ಕುಟುಂಬ, ಸಂಬಂಧ, ಪ್ರೀತಿ, ಗೆಳೆತನ, ಗುರಿಗಳ ಹಲವು ಗೊಂದಲಗಳ ನಡುವೆ ಯುವಜನತೆ ಸಿಲುಕಿ ಒದ್ದಾಡುತ್ತಿದ್ದಾರೆ. ಇವು ಅವರನ್ನು ಮಾನಸಿಕವಾಗಿ ಹೈರಾಣಗಿಸುತ್ತಿವೆ. ಈ ಒತ್ತಡಗಳು ಮಿತಿಮೀರಿ ಅವುಗಳನ್ನು ನಿಭಾಯಿಸಲು ಆಗದೆ ಇದ್ದಾಗ ಆತ್ಮಹತ್ಯೆಯೇ ಪರಿಹಾರ ಎಂದು ಭಾವಿಸುತ್ತಾರೆ. ಒಂದು ವೇಳೆ ಮೊಂಡು ಧೈರ್ಯ ಮಾಡಿ ಸಹಿಸಿಕೊಂಡರೂ ರಕ್ತದೊತ್ತಡದಿಂದ ಹೃದಯಾಘಾತ ಇವರನ್ನು ಹಿಂಬಾಲಿಸುತ್ತದೆ. ಈ ಎಲ್ಲಾ ಗೊಂದಲಗಳಿಗೂ ಪರಿಹಾರ ಬೇಕಾದರೆ ಅವರಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ಮಾರ್ಗದರ್ಶನಗಳು ಎಲ್ಲಾ ಯುವಜನರನ್ನು ತಲುಪಬೇಕಾದರೆ ಅವು ಹಕ್ಕಾಗಿ ಬದಲಾಗಬೇಕಿದೆ.
ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹರವಾದ ಯುವಜನ ಹಕ್ಕುಗಳು ಯಾವುವೆಂದು ನೋಡುವುದಾದರೆ,
- ಶಿಕ್ಷಣದ ಹಕ್ಕು
- ಗೌರವಯುತ ಜೀವನೋಪಾಯದ ಹಕ್ಕು
- ತಲೆಮಾರುಗಳ ನಡುವಿನ ಸಮತೆಯ ಹಕ್ಕು
- ಆರೋಗ್ಯ ಮತ್ತು ಯೋಗ ಕ್ಷೇಮದ ಹಕ್ಕು
- ನಾಗರಿಕ ಮತ್ತು ರಾಜಕೀಯ ಭಾಗವಹಿಸುವಿಕೆ ಹಕ್ಕು
- ಅಭಿವ್ಯಕ್ತಿ ಸ್ವತಂತ್ರದ ಹಕ್ಕು
- ಲೈಂಗಿಕ ಶಿಕ್ಷಣ ಪಡೆಯುವ ಹಕ್ಕು
- ಸಂಬಂಧಗಳನ್ನು ರೂಪಿಸುವ ಮತ್ತು ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು
- ವಿದ್ಯಾರ್ಥಿ ಸಂಘಗಳನ್ನು ರೂಪಿಸುವ ಹಕ್ಕು
- ಉದ್ಯೋಗದ ಹಕ್ಕು
- ಎಲ್ಲಾ ರೀತಿಯ ಶೋಷಣೆಯಿಂದ ರಕ್ಷಣೆ ಪಡೆಯುವ ಹಕ್ಕು
- ತಮ್ಮದೇ ಆದ ಧರ್ಮವನ್ನು ಆಯ್ಕೆ ಮಾಡಿ ಕೊಳ್ಳುವ ಮತ್ತು ಆಚರಿಸುವ ಹಕ್ಕು
( ಈ ಹಕ್ಕುಗಳ ಮಾಹಿತಿಯನ್ನು http://www.youthrights.in ನಿಂದ ಪಡೆಯಲಾಗಿದೆ)
ಬಹುಶಃ ಮೇಲಿನ ಎಲ್ಲಾ ಹಕ್ಕುಗಳು ಜಾರಿಯಾಗಿ, ಅವುಗಳ ಮೇಲ್ವಿಚಾರಣೆಗೆ ಯುವಜನ ಆಯೋಗವು ರಚನೆಯಾದಲ್ಲಿ ನಿಜವಾಗಿಯೂ ಯುವ ಜನತೆ ಒತ್ತಡಗಳಿಂದ ಪಾರಾಗಿ ನೈಜ ಸಬಲೀಕರಣದತ್ತ ಸಾಗಬಹುದಾಗಿದೆ. ಆದರೆ ಈ ಕಾರ್ಯ ಸಹಕಾರಗೊಳ್ಳಬೇಕಾದರೆ ನಾವೆಲ್ಲರೂ ಪ್ರಭುತ್ವವನ್ನು ಒತ್ತಾಯಿಸುವ ಅಗತ್ಯವಿದೆ.
ಮೇಘ ರಾಮದಾಸ್ ಜಿ




