ಗಜಲ್ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್


ಕೊರೆವ ಚಳಿ ಅವನ ಆಲಿಂಗನ ಬಯಸುತ ಇರುಳು ಜಾರಿತು
ಕೆಂಡ ಸಂಪಿಗೆಯ ಕಂಪಿನಲಿ ತೇಲಿಸುತ ಇರುಳು ಜಾರಿತು
ಬೆಳದಿಂಗಳ ಕಿರಣಕೆ ಅರಳುವ ನೈದಿಲೆಯ ಸೊಬಗು ನೋಡು
ರಾತ್ರಿ ಅಧರ ಮಧು ಚುಂಬನ ಹಂಬಲಿಸುತ ಇರುಳು ಜಾರಿತು.
ಆಷಾಢ ಹೂ ಮಳೆಗೆ ಬಾನಲಿ ಮೂಡಿದೆ ಕಾಮನಬಿಲ್ಲು
ಅವನಿತ್ತ ಮುತ್ತಿನಾ ಅಮಲು ನೆನಪಿಸುತ ಇರುಳು ಜಾರಿತು
ಸಂಜೆ ಬನದ ಗೂಡಲಿ ಹಕ್ಕಿಗಳ ಪಿಸುಮಾತು ಕೇಳುತಿದೆ
ಬಾಹು ಬಂಧನದ ಕನಸುಗಳ ಕರಗಿಸುತ ಇರುಳು ಜಾರಿತು
ಮೋಹದ ಮಾಯಾ ಮೃಗಜಲ ಹಿಂದೆ ಓಡಿ ತನು ದಣಿಯಿತು
ನಿತ್ಯ ಅವನ ದಿವ್ಯ ಪ್ರಭೆ ಧ್ಯಾನಿಸುತ ಇರುಳು ಜಾರಿತು
ಪ್ರಭಾವತಿ ಎಸ್ ದೇಸಾಯಿ




ಹೃದಯವನ್ನು ತಾಕುವ ಸುಂದರ ಗಜಲ್ ಜೀ ಮೇಡಂ
ಮಹಾರಾಣಿ ಮನದಲ್ಲಿ ಅನುಭವಿಸಲಾಗದ ಸುಖವಿದೆ
ಹೊರಹಾಕಲಾಗದ ಬಯಕೆಯ ಬೇಗುದಿಯಿದೆ ಅದನ್ನು ಕಾವ್ಯ ಕಟ್ಟಿಕೊಡಬಲ್ಲುದೆ?
ಕಾವ್ಯಕ್ಕೆ ಸ್ವಂತಿಕೆಯಿಲ್ಲ
ಬರೆಯುವವರ ಬರಹಕ್ಕೆ
ಭಾವಸೇತುವೆ ಯಾಗಬಲ್ಲದು,
ಕಲ್ಪನೆಯ ಹೊಳಿಗೆ
ಕಾಲುವೆಯಾಗಿ ಹರಿಯಬಲ್ಲದು.
ಮನದಾಳದ ಮಾತುಗಳು, ಇಲ್ಲಿ ಪಡಿಮೂಡಿದ, ಆ ಅಸ್ಮಿತೆಯ ಅನಾವರಣ ಮಾತ್ರ, ಅಮೋಘ!.
ಬಾಷೆ ದುಡಿಸಿಕೊಳ್ಳುವ ಕಲೆಯ ಪರಿಣಿತಿ, ಉತ್ತಮ ಸಾಂದರ್ಭಿಕ, ಪದಲಾಲಿತ್ಯ!, ಅಗತ್ಯ ಪ್ರಾಸದ ಸೊಗಸು! ಉತ್ತಮಕಾವ್ಯ ಧಾರೆ! ಅಭಿನಂದನೆಗಳು, ಮೇಡಂ!!.
ಅದ್ಬುತ ರಸಿಕತೆಯ ತನ್ನೊಡಲಿನ ಭಾವ ಸ್ಪರ್ಶ ❤️ತುಂಬಿ ಬಂತು
Hmm