ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
“ಆಸೆಗಳ ಸುಳಿ”


ಆಸೆಗಳ ಸುಳಿಯಲಿ ಬಂಧಿ ನೀ ಮನವೇ
ಕನಸುಗಳ ಹೊಳೆಯಲಿ ಸೆಳೆತ ನೀ ಮನವೇ
ಹುಚ್ಚು ಮನವೇ ಪೆಚ್ಚು ಮನವೇ
ಮೂಕ ಮೌನದಲೇ ಮಾತಾಡೋ ಮನವೇ
ಸಹಿಸಲಾರೆ ಏನನೂ ಸಂಬಾಳಿಸಲಾರೆ
ನೋವು ನಲಿವು ಒಲವು ಗೆಲುವನು//
ಬೇಕೆನುವ ಭಾವ ಬಯಕೆಗಳಾ ಕೊರಗಿನಲಿ
ಸಾಕೆನುವ ಭಾವ ಗೆಲುವಿನೆಂಬ ಹಠದಲಿ
ದಿಟವನರಿಯದೆ ಚಡಪಡಿಕೆಯಲಿ
ದಡಬಡಿಸುತಲೇ ದಣಿಯುವುದು
ಅರಿವಿಗೆ ಅನುವು ಮಾಡಿ ಕೊಡದೇ
ತಾಳುವಿಕೆ ಇರದೇ ತಾಪ ಮೀರದೇ
ಸದಾ ಚಿತ್ತ ಚಂಚಲತೆಯಲಿ ಸುತ್ತುತಲೇ ಇಹುದು//
ಗತ್ತು ತೋರುವುದೊಮ್ಮೆ
ಮೆತ್ತಗಾಗುವುದೊಮ್ಮೆ
ಅತ್ತು ಕರೆಯುತ ಸುಸ್ತಾಗುವ
ಪರಿ ಮತ್ತೊಮ್ಮೆ
ದಿಕ್ಕುಗಾಣದೆ ತಿರುಗುವುದು
ಹೊತ್ತುಗಳೆಯದೇ ಕೊರಗುವುದು
ಪರಿತಾಪ ಸಂತಾಪದೇ ಗೊಗರೆಯುತಲೇ
ಗೊಣಗಾಡುತಲೇ ಕಾಲ ಕಳೆವುದು//
ತಳ ಬುಡ ಇಲ್ಲದ ಆಸೆಗಳಾ ಮೂಟೆ
ದಿಕ್ಕು.ಗಾಣದೇ ತಿರುಗುವ ರಾಟೆ
ಬಿಡು ಬಿಡು ಮನವೇ
ತಡವರಿಕೆ ತಾಕಲಾಟ ತೊಳಲಾಟ
ಬಿಂಕು ಬಿನ್ನಾಣ ಬೆಡಗಿನ ನೋಟ
ಇರುವುದೊಂದೇ ಜನುಮ
ಅನುಭವಿಸು ಆತ್ಮಾಭಿಮಾನ
ನಿನ್ನಭಿಮಾನಕೆ ಕುಂದು ಕೊರತೆಯಾಗದಂತೆ//
ನಿಲ್ಲು ಮನವೇ ಅಲ್ಲಲ್ಲಿ
ಗೆಲ್ಲು ಮನವೇ ನಿಜ ಒಲವಲ್ಲಿ
ಮೆಲ್ಲು ಮನವೇ ಸಿಹಿ ಕಹಿಯ
ಬೇವು ಬೆಲ್ಲದಂತೆ
ನಿನ್ನಾಟಕೆ ಹಾಕು ಬೇಲಿ
ಕಳೆ ಕ್ಷಣಗಳ ನಲಿವಿನಲಿ
ಬಂದದ್ದೆಲ್ಲ ಬರಲಿ ಇರುವಂತೆಲ್ಲ ಇರಲಿ
ಸೋಲದಿರು ಕಂಗೆಡದಿರು ಮನವೇ//
ಡಾ ಅನ್ನಪೂರ್ಣ ಹಿರೇಮಠ




ಚೆನ್ನಾಗಿದೆ…
ಹೃನ್ಮನಪೂರ್ವಕ ವಂದನೆಗಳು..!
ಆತ್ಮಪೂರ್ವಕ ಅನಂತ ಅಭಿನಂದನೆಗಳು..!