ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾರತ ದೇಶದ ವಿಶಿಷ್ಟ ಸಂಸ್ಕೃತಿ ಪರಂಪರೆ ನಿಂತಿದ್ದೆ ನಾವು ಆಚರಿಸುವ ಹಬ್ಬಗಳಲ್ಲಿ.ಅದರಲ್ಲೂ ಗಣೇಶ ಚತುರ್ಥಿ ಜಾತಿಧರ್ಮಗಳನ್ನು ಮೀರಿ ಕಿರಿಯರಿಂದ ಹಿರಿಯರವರೆಗೂ ಎಲ್ಲರಿಗೂ ಅಚ್ಚುಮೆಚ್ಚು.
ಪ್ರಥಮ ವಂದಿತನಾದ ಗಣಪತಿಯು ದೇವತೆಗಳಲ್ಲೆ ತನ್ನ ವೇಷಭೂಷಣ ಹಾಗೂ ಸಿದ್ಧಿಬುದ್ಧಿಗಳಲ್ಲಿ ವಿಶಿಷ್ಡನಾದವನು.
ಸ್ಮೃತಿ, ಪುರಾಣಗಳು ಗಣೇಶನ ಜನ್ಮದ ಕುರಿತ ಹೇಳಿಕೆಗಳು ನಮಗೆ ತಿಳಿದಿರುವಂತಹದೆ.
ಪ್ರಾಚಿನ ಕಾಲದಿಂದಲೂ ಹಿಡಿದು ಇಂದಿನವರೆಗೂ ಭಾರತದಲ್ಲಷ್ಟೆ  ಅಲ್ಲ ವಿದೇಶಗಳಲ್ಲೂ ಕೂಡ ಗಣಪ ಭಕ್ತಿಭಾವಗಳಿಂದ ಪೂಜೆಗೊಳಪಡುವದು ನಮಗೆ ತಿಳಿದ ವಿಷಯವೇ.
ಜೀವನದಲ್ಲಿ ಕಷ್ಟವೇ ಇರಲಿ ಸುಖವೇ ಇರಲಿ ಎಲ್ಲ ಸಂದರ್ಭಗಳಲ್ಲೂ ಜನ ಭಕ್ತಿಯಿಂದ ಪೂಜಿಸುವ ಗಣೇಶನು,ಗಣೇಶ ಚತುರ್ಥಿಯಂದು ಮನೆಮನೆಗಳಲ್ಲಿ ವಿಶೇಷವಾಗಿ ಪೂಜಿಸುವ ಸಂಪ್ರದಾಯ ಪ್ರಾಚಿನ ಕಾಲದಿಂದ ಹಿಡಿದೂ ಇಲ್ಲಿಯವರೆಗೂ ಮುಂದುವರಿದು ಕೊಂಡು ಬಂದಿದ್ದು ಅಚ್ಚರಿಯೆ.

ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿಯು ಗಣೇಶ ಉತ್ಸವಕ್ಕೆ ಆರಂಭದ ಮೆರಗನ್ನು ತಂದವನು.ತದನಂತರದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಭಾಲಗಂಗಾಧರ ತಿಲಕರು ಹಿಂದೂಗಳೆಲ್ಲರನ್ನೂ ಜಾತಿಪಂಥಗಳ ಭೇದವಿಲ್ಲದೆ ಹೋರಾಟದ ರೂಪುರೇಷೆಗಳ ಜತೆಗೆ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಗಣೇಶ ಚತುರ್ಥಿಯನ್ನು ಸಾರ್ವಜನಿಕ ಉತ್ಸವವನ್ನಾಗಿ ಮಾರ್ಪಡುಗೊಳಿಸಿದರು.
೧೮೯೨ ರಲ್ಲಿ ಪುಣೆಯ ಕೇಸರಿವಾಡದಲ್ಲಿ ಮೊಟ್ಟ ಮೊದಲಿಗೆ ಈ ಉತ್ಸವವನ್ನು ಪ್ರಾರಂಬಿಸಿದರು.
ಒಂದು ಒಳ್ಳೆಯ ಉದ್ದೇಶಕ್ಕಾಗಿ ಪ್ರಾರಂಭವಾದ ಈ ಉತ್ಸವ,ಇಂದಿನವರೆಗೂ ಕಾಲಕ್ಕೆ ತಕ್ಕಂತೆ ತನ್ನ ರೂಪನ್ನು ಬದಲಾಯಿಸಿಕೊಂಡು ಸಾರ್ವಜನಿಕ ಉತ್ಸವವಾಗಿ ಉಳಿದದ್ದು ಹೆಗ್ಗಳಿಕೆಯ ವಿಷಯವೆ.

ನಾವೆಲ್ಲ ಚಿಕ್ಕವರಿದ್ದಾಗ ಗಣೇಶ ಚತುರ್ಥಿ ಬಂತೆಂದರೆ ಖುಷಿಯೊ ಖುಷಿ.ನಮ್ನ ಮನೆಯ ಗಣಪ ವಿಶೇಷವಾಗಿ ಕಾಣಬೇಕು ಎಂಬ ಸ್ಪರ್ಧಾತ್ಮಕ ಭಾವದಿಂದ ಅಲಂಕರಿಸುತ್ತಿದ್ದೆವು.
ಪ್ರತಿಯೊಬ್ಬರ ಮನೆಗೆ ಹೋಗಿ ಅವರ ಅಲಂಕೃತ ಗಣಪನನ್ನು ನಮ್ಮ ಮನೆಯ ಗಣಪನೊಂದಿಗೆ ಹೋಲಿಕೆ ಮಾಡಿಕೊಂಡು, ಸಂತಸ ಅಥವಾ ಬೇಜಾರು ಪಟ್ಟಿಕೊಳ್ಳುತ್ತಿದ್ದೆವು.ಬಸ್ಕಿ ಹೊಡೆಯದಿದ್ದರೆ ನಮ್ಮ ವಿದ್ಯೆಗೆ ಕುತ್ತು ಬರುತ್ತದೆ ಎಂದು ಗಣಪನ ಮುಂದೆ ಬಸ್ಕಿ ಹೊಡೆದು ಕೈಕಾಲು ನೋವು ಮಾಡಿಕೊಳ್ಳುತ್ತಿದ್ದೆವು.
ಅಂತಹ ಮುಗ್ಧ ಭಕ್ತಿ ನಮ್ಮದಾಗಿತ್ತು.
ನಮ್ಮೆಲ್ಲರಿಗೆ ಅದೆಷ್ಟು ಉತ್ಸಾಹ ಎಂದರೆ ಮನೆ,ಶಾಲೆ,ಸಾರ್ವಜನಿಕ ಹೀಗೆ ಎಲ್ಲಾ ಕಡೆಗಳಲ್ಲೂ ನಮ್ಮದೆ ದರ್ಬಾರು.ಒಂಬತ್ತು ದಿನ ನಮ್ಮ ಪಾಲಿಗೆ ಒಂಬತ್ತು ಕ್ಷಣಗಳಾಗಿರುತ್ತಿದ್ದವು.

ಆದರೆ ಇಂದು ಅದೇ ಉತ್ಸವಗಳು ಹೊಸ ರೂಪ ಪಡೆದುಕೊಂಡಿವೆ.ಇಂದಿನ ಗಣೇಶನ ಉತ್ಸವಗಳು ತೋರಿಕೆಯ ಮತ್ತು ಪ್ರತಿಷ್ಠೆಯ ಆಚರಣೆಗಳಾಗಿವೆ.
ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣಪನು ಇಂದು ಆಧುನಿಕ ಮಾನವ ರೂಪ ಪಡೆದುಕೊಳ್ಳುತ್ತಿದ್ದಾನೆ.ಸೈನಿಕ, ಲ್ಯಾಪಟಾಪ ಬಳಸುವ ಗಣಪ ,ರಾಜಕಾರಣಿ ವೇಷಧಾರಣಿ ಗಣಪ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ.ಇದು ಭಕ್ತಿಭಾವದಿಂದ ಆಕರ್ಷಣೆಯ ಕಡೆಗೆ ಮಾರ್ಪಟ್ಟಿದೆ.
ಇಂದಿನ ಗಣೇಶನ ಉತ್ಸವಗಳು ವಾಯುಮಾಲಿನ್ಯ,ಜಲಮಾಲಿನ್ಯ,ಶಬ್ದಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿವೆ.ಆದಾಗ್ಯೂ ಇತ್ತಿಚೆಗೆ ಜನರು ಪರಿಸರ ಸ್ನೇಹಿ ಗಣಪನ ಕಡೆಗೆ ವಾಲುತ್ತಿರುವದು ಉತ್ತಮ ಬೆಳವಣಿಗೆ ಎನ್ನಬಹುದು.
ಗಣೇಶನ ಉತ್ಸವದ ಬಗೆ ಪೋಷಕರಿಗೆ ಭಯ ಉಂಟಾಗುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಗಣೇಶನ ವಿಸರ್ಜನೆ.ಇಲ್ಲಿ ಕೆಲವೇ ಕೆಲವು ಯುವಜನತೆ ಕುಣಿತ,ಕುಡಿತ ಮೋಜಿಗೆ ಮಾರು ಹೋಗಿ ತಮ್ಮ ವೈಯುಕ್ತಿಕ ಬದುಕಿನ ಜೊತೆಗೆ ಇಂತಹ ಉತ್ಸವಗಳ ಮೂಲ ಉದ್ದೇಶವನ್ನೆ ಹಾಳುಮಾಡುತ್ತಿದ್ದಾರೆ.
ಎಷ್ಟೊ ಯುವಕರು ಈ ಸಂದರ್ಭದಲ್ಲಿ ಪ್ರಾಣಕಳೆದುಕೊಂಡದ್ದು ಉಂಟು.

ಇದನ್ನೆ ಮುಂದಿಟ್ಟುಕೊಂಡ ಪ್ರಗತಿಪರ ಚಿಂತಕರು ಗಣಪ ಇದದ್ದೆ ನಿಜವಾದರೆ ಇವರನ್ನೆ ಏಕೆ ಕಾಪಾಡಲಿಲ್ಲ ಎಂಬ ವಾದಮಂಡಿಸಿದ್ದರೆ,ಸಂಪ್ರದಾಯವಾದಿಗಳು ಕಟ್ಟುಕತೆ ಸೃಷ್ಟಿಸಿ ತಮ್ಮ ಹೇಳಿಕೆಯನ್ನು ಮಂಡಿಸುತ್ತಾರೆ.ಇನ್ನೂ ಸಾಮಾನ್ಯ ಜನತೆ ತಮಗೆ ಇದಾವದು ಸಂಬಂಧವೆ ಇಲ್ಲ ಎನ್ನುವಂತೆ ತಮ್ಮ ಪಾಡಿಗೆ ತಾವು ಮನೆಯಲ್ಲಿ ಭಕ್ತಿ ಭಾವದಿಂದ ಗಣೇಶನನ್ನು ಪೂಜಿಸುತ್ತಾರೆ.
ಇಂದಿನ ಯಾಂತ್ರಿಕ ಯುಗದಲ್ಲಿ ಇಂಥ ಉತ್ಸವಗಳು ಕಿರಿಕಿರಿ ಉಂಟು ಮಾಡುತ್ತಿವೆಯೇ?ಎನ್ನುವ ಪ್ರಶ್ನೆಗಳು ಮೂಡುತ್ತಿವೆ.

ಗಣಪನೆ ಒಂದು ಕಾಲ್ಪನಿಕ ಸೃಷ್ಟಿ ಎನ್ನುವ ಇಂದಿನ ಪೀಳಿಗೆ,ಇಂತಹ ಉತ್ಸವಗಳ ಬಗೆ ಸಮ್ಮತಿಯನ್ನು ಸೂಚಿಸದೆ ಮತ್ತು ನಿರಾಕರಿಸದೆ ಮೌನಕ್ಕೆ ಶರಣು ಹೋಗಿದ್ದಾರೆ.

ಅದೇನೆ ಇರಲಿ ಮಹಾರಾಷ್ಟ್ರದ ಸಂತ ಜ್ಞಾನೇಶ್ವರ ಒಂದು ಘಟನೆಯನ್ನು ಪ್ರಸ್ತುತ ಪಡಿಸಿ ನನ್ನ ಲೇಖನಿಗೆ ವಿರಾಮ ನೀಡುತ್ತೆನೆ.
ಸಂತ ಜ್ಞಾನೇಶ್ವರರ ತಾಯಿಗೆ ಆರಾಮ ಇರಲಿಲ್ಲ.
ಇವತ್ತೊ ನಾಳೆಯೊ ಪ್ರಾಣ ಹೋಗುತ್ತದೆ ಎನ್ನುವ ಸ್ಥಿತಿಯಲ್ಲಿತ್ತು.ಆಗ ಕೆಲವರು ಗುಡ್ಡದ ಮೇಲಿನ ಗಣಪನಿಗೆ ೨೧ ಮೋದಕ ಇನ್ನಿತ್ತರ ೨೧ ತಿನಿಸುಗಳನ್ನು ಮಾಡಿಕೊಂಡು ನೈವೇದ್ಯ ಮಾಡಿದರೆ ಖಂಡಿತ ಗುಣ ಆಗುತ್ತದೆ ಎಂದಾಗ,ಸಂತರು ಎಲ್ಲವನ್ನೂ ಮಾಡಿಕೊಂಡು ಬುಟ್ಟಿಯಲ್ಲಿ ಇಟ್ಟುಕೊಂಡು ಹೊರಡುತ್ತಾರೆ ಅಲ್ಲಿ ತಲುಪಲು ೪-೫ ದಿನ ಆಗುತ್ತಿತ್ತು.
ಸಂತರು ಗುಡಿ ತಲುಪಿದರು. ಹರಕೆ ಹೊತ್ತ ಜನರ ದೊಡ್ಡ ಸಾಲೆ ಇತ್ತು.ಸಂತರ ಪಾಳಿ ಬಂತು. ಬುಟ್ಟಿ ತೆಗೆದು ನೋಡಿದಾಗ ಅದರಲ್ಲಿ ಯಾವ ತಿನಿಸು ಇರಲಿಲ್ಲ. ಪೂಜಾರಿ ಕೋಪಗೊಂಡು ಖಾಲಿ ಬುಟ್ಟಿ ತಂದು ದೇವರ ಜೊತೆ ಹುಡುಗಾಟ ಆಡುತ್ತಿಯಾ?ಎಂದ.ನೆರೆದ ಜನರೆಲ್ಲಾ ಹೀಗಳೆದರು.ಆಗ ಸಂತರು ನಾನು ಮಾಡಿದರಲ್ಲಿ ತಪ್ಪೆನಿದೇ?ಐದು ದಿನದ ದಾರಿ ಹಸಿದವರಿಗೆ ಹಂಚಿದೆ,ಹಳಸಿದ ಪದಾರ್ಥ ದೇವರಿಗೆ ನೈವೇದ್ಯ ತೋರುವದಕ್ಕಿಂತ ಹಸಿದವರಿಗೆ ಕೊಡುವದೇ ಸರಿ ಎಂದರು.ಅಲ್ಲಿಂದ ಮನೆಗೆ ಬಂದಾಗ ತಾಯಿ ಗುಣಮುಖಳಾಗಿದ್ದಳು.
‘ಸಮಷ್ಠಿ ಭಕ್ತಿ’ಯಲ್ಲಿಯ ಶಕ್ತಿಯೆ ಅಂತಹದು.ಭಕ್ತಿಯ ಸಾರ್ಥಕತೆ ಅಡಗಿರುವುದು!


About The Author

1 thought on ““ಗಣೇಶ ಉತ್ಸವಗಳು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿವೆಯೇ?ಒಂದು ಚರ್ಚೆ” ಗಿರಿಜಾ ಇಟಗಿಯವರಿಂದ”

Leave a Reply

You cannot copy content of this page

Scroll to Top