ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೆಮನೆಗಳಲ್ಲಿ ಬೆನಕನ ಪ್ರತಿಷ್ಠಾಪನೆಯಾಗಿದ್ದು ಪ್ರಥಮ ಪೂಜಿತನಿಗೆ ಪೂಜೆ ಪುನಸ್ಕಾರಗಳು ನಡೆದು  ವೈವಿಧ್ಯಮಯ ನೈವೇದ್ಯಗಳನ್ನು ಅರ್ಪಿಸಿ ಭಕ್ತಿಯ ನಮಸ್ಕಾರಗಳನ್ನು ಸಲ್ಲಿಸಲಾಗಿದೆ.

ವಿಘ್ನ ವಿನಾಯಕನನ್ನು ನಮ್ಮ ಬದುಕಿನಲ್ಲಿ ಬರುವ ಎಲ್ಲಾ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಕೊಡು ಎಂದು ಬೇಡಿಕೊಳ್ಳುವ ಮೂಲಕ ನಮ್ಮ ಮನೆ ಮನಗಳಲ್ಲಿ ಸಕಾರಾತ್ಮಕ ಶಕ್ತಿಗೆ ಆಹ್ವಾನ ನೀಡಿದ್ದೇವೆ.

ಆನೆಯ ಮುಖವನ್ನು ಹೊತ್ತಿರುವ ಗಜಾನನನನ್ನು ಪೂಜಿಸುವ ನಾವು ಜೀವಂತ ಆನೆ ತನ್ನ ಹಿಂದಿನ ತಾವನ್ನು ಹುಡುಕಿಕೊಂಡು ಒತ್ತುವರಿಯಾದ ಭೂಮಿಯಲ್ಲಿನ ಮನೆಗಳ ಬಳಿ ಬಂದರೆ ಜೀವವನ್ನು ಕೈಯಲ್ಲಿ ಹಿಡಿದು ಓಡುತ್ತೇವೆ. ಹುಯಿಲೆಬ್ಬಿಸಿ, ಪಟಾಕಿ ಹಾರಿಸಿ ತಮಟೆ ಡೋಲುಗಳನ್ನು ಬಾರಿಸಿ ಅವುಗಳನ್ನು ಬೆದರಿಸಿ ಕಾಡಿನತ್ತ ಮರಳುವಂತೆ ಓಡಿಸುತ್ತೇವೆ.  .

ತನ್ನ ಆಹಾರ ಮೂಲವನ್ನು ಕಳೆದುಕೊಂಡಿರುವ ಆನೆ ಆಹಾರವನ್ನು ಅರಸಿ, ಹೊಲ ಗದ್ದೆಗಳಿಗೆ ಬಂದರೆ ಅವುಗಳನ್ನು ಓಡಿಸುತ್ತೇವೆ. ಹಾಗೆ ನಾವು ಓಡಿಸುವಾಗ ಮಾಡುವ ಸದ್ದು ಗದ್ದಲಗಳಿಗೆ ಸ್ವಭಾವತಃ ಶಾಂತಿ ಪ್ರಿಯ ಸಾಧು ಪ್ರಾಣಿಗಳಾದ ಆನೆಗಳು ಹೆದರಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನುಷ್ಯನ ಮೇಲೆ ಎರಗಲು ನಾವೇ ಕಾರಣರಾಗುತ್ತೇವೆ.

ಮನುಷ್ಯನ ಆಸೆಗೆ ಮಿತಿ ಇಲ್ಲ… ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆತ ಇಡೀ ಕಾಡನ್ನು ನಾಡಾಗಿಸಬಲ್ಲ.
ಪ್ರಾಣಿಗಳ ಅವಶೇಷಗಳಿಂದ ತನ್ನ ಮನೆಯನ್ನು ಅಲಂಕಾರ ಮಾಡಬಲ್ಲ. ತನ್ನ ಬಾಯಿ ಚಪಲಕ್ಕೆ ಪ್ರಾಣಿಗಳನ್ನು ಬೇಟೆಯಾಡಿ ತಿನ್ನಬಲ್ಲ..ಪ್ರಾಣಿಗಳು ಸತ್ತ ನಂತರ ಅವುಗಳ ಚರ್ಮವನ್ನು ಹಾಸಲೂ ಬಲ್ಲ
ಆದರೆ ಆತ ಮರೆತಿದ್ದಾನೆ ಕಾಡಿಲ್ಲದೆ ನಾಡಿಲ್ಲ, ಕಾಡಿನ ಉಳಿಯುವಿಕೆಯಲ್ಲಿಯೇ ನಾಡಿನ ಹಿತ ಅಡಗಿದೆ.
ಕಾಡು ಮತ್ತು ನಾಡುಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ತನ್ನ ಬದುಕನ್ನು ನಡೆಸಲು ಮೊದಲಿನಿಂದಲೂ ಪ್ರಕೃತಿಯೊಂದಿಗೆ ಸಮನ್ವಯದ ಬದುಕನ್ನು ಸಾಧಿಸಿರುವ ಮನುಷ್ಯ ಇಂದು ವಿಸ್ಮೃತಿಯಲ್ಲಿ ಮುಳುಗಿದ್ದಾನೆ. ಈಗಾಗಲೇ ಸಾಕಷ್ಟು ಕಾಲ ಮೀರಿ ಹೋಗಿದ್ದು ಈಗಲೂ ಎಚ್ಚರಗೊಳ್ಳದಿದ್ದರೆ ಮುಂದೆಂದೂ ಎಚ್ಚರಗೊಳ್ಳದಂತಹ ಅಂತಿಮ ಯಾತ್ರೆಗೆ ಆತ ಸಿದ್ದನಾಗಬೇಕಾಗುತ್ತದೆ.

ಇದೀಗ ಪ್ರಪಂಚದಾದ್ಯಂತ ಪ್ರಕೃತಿ ಸಿಡಿದು ಮನುಷ್ಯನ ದುರಾಸೆಗೆ, ದುಷ್ಕೃತ್ಯಗಳಿಗೆ ಉತ್ತರ ನೀಡುತ್ತಿದೆ. ಭೂಕಂಪ ಜ್ವಾಲಾಮುಖಿ, ನೆರೆ ಬರ ಮತ್ತು  ಪ್ರವಾಹ ಪರಿಸ್ಥಿತಿಗಳು ನಮ್ಮ ಜನ ಜೀವನವನ್ನು ಅರ್ಥವ್ಯಸ್ತರುಗೊಳಿಸಿ ಇನ್ನಿಲ್ಲದಂತೆ ಬುದ್ಧಿ ಹೇಳಿದರೂ ಕೂಡ ನಾವು ಎಚ್ಚೆತ್ತುಕೊಂಡಿಲ್ಲ.

ಇವೆಲ್ಲದರ ಪರಿಣಾಮವಾಗಿ ಕಳೆದ ಒಂದು ದಶಕದಲ್ಲಿ ಪ್ರಕೃತಿ ಸಹಜವಾದ ಮಳೆ,ಚಳಿ ಮತ್ತು ಬಿಸಿಲುಗಳು ತಮ್ಮ ನಿಯಮಿತತೆಯನ್ನು ಮರೆತು ಯಾವಾಗ ಬೇಕೆಂದರೆ ಅವಾಗ ತಮ್ಮ ಪ್ರತಾಪವನ್ನು ತೋರಿ ನಮ್ಮ ಬದುಕನ್ನು ಅಲ್ಲೋಲಕಲ್ಲೋಲ್ಲಗೊಳಿಸುತ್ತಿವೆ.

 ವೈಜ್ಞಾನಿಕವಾಗಿ ಮುಂದುವರೆದಿರುವ ನಾವು ಪ್ರತಿಯೊಂದು ಕ್ರಿಯೆಗೂ ಅದಕ್ಕೆ ತಕ್ಕನಾದ ಮತ್ತು ತಮ್ಮನಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬ ವೈಜ್ಞಾನಿಕ ವಾದವನ್ನು ಮರೆತಿದ್ದೇವೆ. ನಮ್ಮ ಆಕೃತ್ಯ ಗಳಿಗೆ, ಪ್ರಕೃತಿಯ ಮೇಲೆ ನಾವು ಎಸಗುವ ಅಪಚಾರಗಳಿಗೆ ನಮ್ಮ ಮುಂದಿನ ಪೀಳಿಗೆ ಬೆಲೆ ತೆರಬೇಕಾದಂತಹ ಪರಿಸ್ಥಿತಿಯನ್ನು ನಾವು ತಂದೊಡ್ಡಿದ್ದೇವೆ.

 ಗಜಾನನ..ಆನೆಯ ತಲೆಯ, ಪ್ರಕಾಂಡ ಪಂಡಿತರ ಜ್ಞಾನವನ್ನು ಹೊಂದಿರುವ ಗಣೇಶ ಕೇವಲ ವಿಘ್ನ ವಿನಾಯಕನಲ್ಲ, ದೇವತೆಯಲ್ಲ ಬದಲಾಗಿ ಆತ ಪರಿಸರ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸುವ ದೈವ. ಈ ಅಗಾಧ ಪರಿಸರವು ತನ್ನಲ್ಲಿ ಅಡಗಿಸಿಕೊಂಡಿರುವ ಜಾಣ್ಮೆ, ದೃಢತೆ, ಸ್ಥಿತಿಸ್ಥಾಪಕತೆ ಮತ್ತು ಸಾಮರಸ್ಯದ ಸಂಕೇತವಾಗಿ ಗಣೇಶ ನಮ್ಮ ಮುಂದೆ ನಿಂತಿದ್ದಾನೆ.

 ಸಾಂಸ್ಕೃತಿಕವಾಗಿ ಆನೆಗಳು ಕೂಡ ನಮ್ಮ ಬದುಕಿನಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಆನೆಗಳು ನಮ್ಮ ಕಾಡುಗಳ ನಿರ್ಮಾತೃಗಳು ಎಂದರೂ ತಪ್ಪಿಲ್ಲ.
ತಾವು ನಡೆದಾಡುವ ಜಾಗಗಳಲ್ಲೆಲ್ಲ ಬೀಜಗಳನ್ನು ಪ್ರಸರಿಸುವ ಆನೆಗಳು ಕಾಡಿನ ಬೆಳವಣಿಗೆಗೆ ಗಣನೀಯ ಕಾರ್ಯವನ್ನು ಎಸಗುತ್ತವೆ. ನದಿ ಪಾತ್ರಗಳನ್ನು ರಕ್ಷಿಸುವಲ್ಲಿಯೂ ಕೂಡ ಆನೆಗಳ ಪಾತ್ರ ಬಹು ದೊಡ್ಡದು…. ಇಷ್ಟೆಲ್ಲಾ ಸೇವೆಯನ್ನು ಮಾಡಿದರೂ ಕೂಡ ಆನೆಗಳ ಸಂತತಿ ಇಳಿ ಮುಖವಾಗುತ್ತಿದೆ. ಆನೆಗಳು ವಾಸಿಸುತ್ತಿದ್ದ ಕಾಡುಗಳು ನಾಡಾಗಿ ಪರಿವರ್ತನೆ ಹೊಂದಿದ್ದು ಕಾಡುಗಳ ಒತ್ತುವರಿ ತೀವ್ರವಾಗಿ ಸಾಗುತ್ತಿದೆ.

ಗಣಪತಿಯನ್ನು ಪೂಜಿಸುವ ಈ ಹಬ್ಬವು ಕೇವಲ ದೈವಾರಾಧನೆ ಅಲ್ಲ, ಸಂಪ್ರದಾಯದ ಆಚರಣೆಯೂ ಅಲ್ಲ. ಬದಲಾಗಿ ಪ್ರಕೃತಿಯೊಂದಿಗೆ ಬುದ್ಧಿಜೀವಿಯಾದ ಮನುಷ್ಯನ ಸಾಮರಸ್ಯದ, ಸಮನ್ವಯದ ಸಂಕೇತ. ನಾವು ನಿಗದಿತ ದಿನಗಳಲ್ಲಿ ಪಶು ಪಕ್ಷಿಗಳ ಕುರಿತು ಕೃತಜ್ಞತೆ ವ್ಯಕ್ತಪಡಿಸಿದರೆ ಸಾಲದು ಬದಲಾಗಿ ಮಾತು ಬಾರದ ಆ ಮೂಕ ಪ್ರಾಣಿಗಳ ಜೊತೆಗಿನ ನಮ್ಮ ಸಂಬಂಧದ ರಕ್ಷಕರು ಕೂಡ ನಾವಾಗಬೇಕು…ಅದು ನಮ್ಮ ಕರ್ತವ್ಯ ಕೂಡ. ನಾವು ಕೂಡ ಶಾಂತಿಯುತವಾದ ನವೀನ ಮಾದರಿಯಲ್ಲಿ ಪರಿಸರದೊಂದಿಗೆ ಸಾಮರಸ್ಯವನ್ನು ಸಾಧಿಸುವ, ಎಲ್ಲ ಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸಬೇಕು.

ಪ್ರಕೃತಿಯು ನಮಗೆ ಪಾಠ ಕಲಿಸುವ ಮುನ್ನವೇ ನಾವು ಪ್ರಕೃತಿಯ ಅಂತರ್ಯದ ದನಿಯನ್ನು ಅರಿಯಬೇಕು. ಈಗಾಗಲೇ ನಾವು ಪ್ರಕೃತಿಗೆ ಸಾಕಷ್ಟು ಅಪಚಾರವನ್ನು ಎಸಗಿದ್ದೇವೆ ಇನ್ನು ಹೆಚ್ಚಿನ ತೊಂದರೆಗಳನ್ನು ನೀಡಿ ಅದಕ್ಕೆ ಪ್ರಕೃತಿ ವಿಪರೀತವಾಗಿ ಪ್ರತಿಕ್ರಿಯಿಸುವ ಮುನ್ನವೇ ನಾವು ಎಚ್ಚೆತ್ತುಕೊಳ್ಳೋಣ.

ಹಬ್ಬ ಹರಿದಿನಗಳಲ್ಲಿ ವಿಪರೀತ ಆಡಂಬರಗಳು ಬೇಡ. ಪ್ಲಾಸ್ಟಿಕ್ ಬಳಸಿದ ಅಲಂಕಾರಿಕ ಸಾಮಗ್ರಿಗಳನ್ನು ತ್ಯಜಿಸೋಣ. ನಾವು ಬಳಸುವುದು ನಿಂತಾಗ ಉತ್ಪಾದಕತೆ ತಂತಾನೇ ಕಡಿಮೆಯಾಗುತ್ತದೆ. ನೈಸರ್ಗಿಕ ಅಲಂಕಾರಿಕ ಸಾಮಗ್ರಿಗಳು ಕಣ್ಮನಗಳಿಗೆ ತಂಪನ್ನು ನೀಡುತ್ತವೆ ಮತ್ತು ಬಳಸಿ ಬಿಸಾಡಿದಾಗಲೂ ಕೂಡ ಪ್ರಕೃತಿಗೆ ಯಾವುದೇ ರೀತಿಯ ಹಾನಿಯೆಸಗದೆ ಪ್ರಕೃತಿಯಲ್ಲಿ ಒಂದಾಗಿ ಹೋಗುತ್ತವೆ

ಪರಿಸರಕ್ಕೆ ಹಾನಿಯಾಗದಂತಹ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸೋಣ. ಹಾನಿಕಾರಕ  ರಸಾಯನಗಳನ್ನು ಹಾಕಿ ತಯಾರಿಸಿದ  ಕೃತಕ ಬಣ್ಣ,, ಪ್ಲಾಸ್ಟಿಕ್ ಮತ್ತಿತರ ಲೋಹದ ಅಲಂಕಾರಿಕ ವಸ್ತುಗಳನ್ನು ಹಾಕಿ ತಯಾರಿಸಿದ ಗಣೇಶನ ಮೂರ್ತಿಯನ್ನು ಮನೆಗೆ ತರುವುದು ಬೇಡ. ಅದ್ದೂರಿಯಾಗಿ ಗಣೇಶನ ಹಬ್ಬವನ್ನು ಆಚರಿಸದಿದ್ದರೂ ಅರ್ಥಪೂರ್ಣವಾಗಿ ಆಚರಿಸಿದರೆ ಸಾಕು ನಮ್ಮ ಗಣೇಶ ಒಲಿಯಲು, ಆತ ಅಲ್ಪ ತೃಪ್ತನು.

ಪರಿಸರಕ್ಕೆ ಹಾನಿ ಎಸಗುವಂತಹ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಉಂಟು ಮಾಡುವ ಪಟಾಕಿಗಳಿಗೆ ವಿದಾಯ ಹೇಳಬೇಕಾಗಿದೆ.
 ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ… ಆ ಮೂಲಕ ಮೂಕ ಪ್ರಾಣಿಗಳ, ಹಸುಗೂಸುಗಳ, ವೃದ್ಧರ, ಅಶಕ್ತರ, ರೋಗಿಗಳ ಕಾಳಜಿ ಮಾಡಬೇಕಾಗಿದೆ.

 ಪ್ರಕೃತಿಯ ಕುರಿತು ನಮಗೆ ಕೇವಲ ಆಕರ್ಷಣೆ ಇದ್ದರೆ ಸಾಲದು, ಬದಲಾಗಿ ಪ್ರಕೃತಿಯನ್ನು ಉಳಿಸುವ ಗಟ್ಟಿತನ ಮತ್ತು ಸ್ಪಷ್ಟ ಉದ್ದೇಶಗಳು ಮತ್ತು ಅವುಗಳನ್ನು ಜಾರಿಗೆ ತರುವಲ್ಲಿ ಬದ್ಧತೆ ಇರಬೇಕು.

 ಮನುಷ್ಯನಲ್ಲಿ ನಿಜವಾದ ಅರಿವು ಇರುವುದೇ ಆದರೆ ಅದು  ಕೇವಲ ತನ್ನ ಒಳಿತನ್ನು ಬಯಸಿ ಪ್ರಾರ್ಥಿಸುವುದರಲ್ಲಿ ಅಲ್ಲ ಬದಲಾಗಿ ಎಲ್ಲರೊಂದಿಗೆ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ನಡೆಸುವುದರಲ್ಲಿ ಇದೆ…. ಪ್ರಕೃತಿಯೊಂದಿಗೆ ಕೂಡ ಈ ಸಾಮರಸ್ಯ ಹೊಂದುವ ಅವಶ್ಯಕತೆ ಇದೆ. ಬದುಕು ಬದುಕಗೊಡು ಎಂಬುದು ನಮ್ಮ ಬಾಳಿನ ಧ್ಯೇಯಮಂತ್ರವಾಗಲೇ ಬೇಕು.

 ವಿಘ್ನ ವಿನಾಯಕ ನಮ್ಮೆಲ್ಲರಲ್ಲೂ ಇಂತಹ ಮಾನಸಿಕ ವಿಘ್ನಗಳನ್ನು ನಿವಾರಿಸಿ ಪರಿಸರದ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಧೈರ್ಯದಿಂದ ಮುನ್ನಡೆಯಲು ಹರಸಲಿ ಎಂದು ಬೇಡಿಕೊಳ್ಳುವ.


About The Author

Leave a Reply

You cannot copy content of this page

Scroll to Top