ಗಜಲ್ ಸಂಗಾತಿ
ಕಂಚುಗಾರನಹಳ್ಳಿ ಸತೀಶ್
ಗಜಲ್

ನಿನ್ನ ಕಣ್ಣ ನೋಟವೇ ಕಾಮನಬಿಲ್ಲುಗಳಾಗಿ ಪ್ರೀತಿ ಹುಟ್ಟಲು ಕಾರಣವಾಗಿವೆ
ಸವಿನುಡಿಯ ಮೋಡಿಗೆ ಮೋಹಗಳ ಕಲಕಿ ಕಾಮದ ಹೂರಣವಾಗಿವೆ
ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ
ಬಯಕೆಗಳಿಗೆ ಮಿತಿ ಒಡ್ಡಿದರೆ ಭವದ ಕೇಡು ತಪ್ಪಿಸಬಹುದು ಎಂದ ಮಹಾತ್ಮರು
ಗೆಲುವು ಕಾಣಲು ಹೊರಟ ಸಖನಿಗೆ ದುರ್ಗಮ ಹಾದಿಗಳೇ ತಲ್ಲಣವಾಗಿವೆ
ಅಂತರಂಗದ ಅನುರಾಗದ ತಳಮಳಕ್ಕೆ ಎಂದಿಗೂ ಕೊನೆಯಿಲ್ಲ ಸಾವಿಲ್ಲ ಚಿರಾಯು
ಮಂಗಳ ವಾದ್ಯ ಮೊಳಗಲು ಜಾತಿ ಧರ್ಮಗಳ ಸಂಕೋಲೆಗಳೇ ಗ್ರಹಣವಾಗಿವೆ
ದೇವಾನುದೇವತೆಗಳೇ ಸೋತು ಸುಣ್ಣವಾಗಿ ಗೆದ್ದಿರುವಾಗ ಕಂಸನ್ಯಾವ ಲೆಕ್ಕ
ಇರ್ವರ ಧೈರ್ಯ ಛಲ ದೃಢ ನಿರ್ಧಾರ ಜೀವನ ಸಾಂಗತ್ಯಕ್ಕೆ ಚರಣವಾಗಿವೆ




