ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ತೊಳಲಾಟ

ಹೊತ್ತು ಸರಿದರೂ ನಲ್ಲನ ಸುಳಿವಿಲ್ಲ
ಕತ್ತಲೆಯೇ ಕವಿದಿಹುದು ಬಾಳಿನಲ್ಲಿ
ಸುತ್ತಲೂ ಕೇಳುತಿಹುದು ಜೀರುಂಡೆ ದ್ವನಿಯು
ಮುತ್ತಿಹುದು ತನುವಿನಲಿ ಕಾಣದ ಭಯವು
ಎತ್ತ ನೋಡಿದರೂ ಬೆಳಕು ಗೋಚರವಿಲ್ಲ
ಸೋತು ಆರಿಹೋದ ದೀಪದ ಹಣತೆಯಂತೆ
ಚಿತ್ತದಲಿ ತುಂಬಿಹುದು ದುಗುಡಗಳ ರಾಶಿ
ಅತ್ತಿರುವೆ ಮೂಕವಾಗಿ ಮನದೊಳಗೆ
ಬಿತ್ತಿರುವ ವಿಷದ ಬೀಜದೊಳಗಿಂದ
ಹೊತ್ತಿ ಉರಿಯುತಿದೆ ದ್ವೇಷದ ಕಿಡಿಯು
ಬತ್ತಿ ಹೋಗಲಿಲ್ಲ ಎದೆಯಾಳದ ಕಿಚ್ಚು
ಎತ್ತಿ ನೀರ ಉಣಿಸಿದರೂ ರಭಸದಿಂದ
ಬುತ್ತಿಯೊಳಗೆ ಹುದುಗಿಸಲ್ಪಟ್ಟ ಒಲವು
ಸತ್ತು ಹೋಗಿಹುದು ನಿರಾಸೆಯಲಿ ಬೆಂದು
ಕತ್ತಿಯ ಅಲಗಿನಂತೆ ಚುಚ್ಚುವ ಮಾತಿನೊಳು
ಮೆತ್ತಗಾಗಿದೆ ಸೊರಗಿ ನಲುಗಿದ ಜೀವವು
ಅನುರಾಧಾ ರಾಜೀವ್ ಸುರತ್ಕಲ್





ತೊಳಲಾಟ ಕವನದಲ್ಲಿ ಮುಕ್ತವಾಗಿ ನೋವು,ದುಗುಡ, ದುಮ್ಮಾನಗಳನ್ನು ಹಂಚಿ ಕೊಂಡಿದ್ದೀರಿ ಮೇಡಂ ಸೂಪರ್.