ಕಾವ್ಯ ಸಂಗಾತಿ
ಭಾವಯಾನಿ
“ಭಾವ ತನ್ಮಯಿ”


ಅದೇಕೋ ಗೊತ್ತಿಲ್ಲ,
ನೀ ಬಂದ ಮೇಲೆ
ಬಿಸಿಲ ಬೇಗೆಗೆ ಕಾದ ಭುವಿ ತಂಪಾದ ಹಾಗೆ
ನನ್ನ ಮನದೊಳಗೂ ಒಲವ ಸಿಂಚನ!
ಅದೇನು ಮೋಡಿ ಮಾಡಿಬಿಟ್ಟೆ ಹುಡುಗಿ
ದಿನ ಬೆಳಗಾದರೆ ಕಾಫಿ ಕಪ್ ಹಿಡಿದು ಕೂರುತಿದ್ದವಳು
ಈಗ ನಿನ್ನ ನೆನಪಿನ ಧ್ಯಾನದಲ್ಲಿ ಕಳೆದು ಹೋಗುತ್ತಿದ್ದೇನೆ!!
ಕಾಫಿಯ ಘಮಕ್ಕಿಂತಲೂ ನಿನ್ ನೆನಪೇ ಚೆನ್ನಾಗಿದೆ ಕಣೆ!!
ಮಾತಿಗೊಂದು ನಗು,
ಹೇಳದೇ ಕೇಳದೆ ಬರುವ ಹುಸಿಮುನಿಸು
ಪುಟ್ಟ ಮಗುವಿನಂತೆ ರಚ್ಚೆ ಹಿಡಿಯುವೆ!
ಕೆಲವೊಮ್ಮೆ ಹಠಮಾರಿಯಂತೆ ಕಂಡರೂ
ಮತ್ತೆ ಮತ್ತೆ ಪ್ರೀತಿಸುವ ಅದೇ ಹಂಬಲ ನನ್ನೊಳಗೆ!!
ಮುಚ್ಚಿದ ಕಣ್ಣ ರೆಪ್ಪೆಯೊಳಗಿಂದಲೂ ತುಂಟಾಟವಾಡುವ ನೀನು
ನನಗೊಂದು ಸುಂದರ ಸ್ವಪ್ನದ ಹಾಗೆ….
ನಿನ್ನ ಮುದ್ದು ಮುಖದ ಅಂದ ಸವಿಯುವುದರಲ್ಲೇ ಭಾವ ತನ್ಮಯಿ ನಾನು!!
ಭಾವಯಾನಿ



