ತತ್ವ ಸಂಗಾತಿ
ಡಾ.ಯಲ್ಲಮ್ಮ.ಕೆ
“ಅನುಭಾವಿ ಸಂತ
ಶಿಶುನಾಳ ಶರೀಫ್ ಸಾಹೇಬರ
ತತ್ತ್ವ ಪದಗಳ ವಿಶ್ಲೇಷಣೆ”

ಭಾರತೀಯ ಜ್ಞಾನಪರಂಪರೆಯಲ್ಲಿ ಹಲವು ಮಾರ್ಗಗಳನ್ನು ಕಾಣುತ್ತೇವೆ. ಅವುಗಳಲ್ಲಿ ಮುಕ್ತಿ ಮಾರ್ಗವೂ ಒಂದು. ಕಳೆದ ಶತ ಶತಮಾನಗಳ ಹಿಂದೆ ಭಾರತೀಯ ನೆಲದಲ್ಲಿ ಹುಟ್ಟಿ ವಿಕಾಸ ಹೊಂದಿದ ಹಲವು ಧರ್ಮಗಳು ಮಾನವನು ಮುಕ್ತಿಯನ್ನು ಪಡೆಯಲು ಅನುಸರಿಸಬೇಕಾದ ಪಥಗಳನ್ನು ನಿರ್ದೇಶಿಸುತ್ತ ಬಂದಿವೆ. ಎಲ್ಲ ಧರ್ಮಗಳ ಅಪೇಕ್ಷೆ ಮುಕ್ತಿಯನ್ನು ಪಡೆಯುವುದಾಗಿದೆ. ಅಂಥ ಮುಕ್ತಿಯನ್ನು ಕರುಣಿಸುವ ಮಾರ್ಗವೇ ತತ್ತ್ವಜ್ಞಾನವಾಗಿದೆ.’
ಜಗತ್ತಿನ ಅಂಧಕಾರವನ್ನು ಕಳೆಯಲು ಹವಣಿಸಿ ಅನೇಕ ದಾರ್ಶನಿಕರು, ಮಹಾಮೇಧಾವಿಗಳು. ಸಾಧುಸಂತರು. ಸತ್ಪುರುಷರು ತಮ್ಮ ಜೀವನಾನುಭವಗಳನ್ನು ಸಾರಿ ಹೋಗಿದ್ದಾರೆ. ಅಂಥಹವರಲ್ಲಿ ಬುದ್ಧ, ಮಹಾವೀರ, ಶಂಕರ, ಬಸವಾದಿ ಶರಣರು, ದಾಸರು, ಅನುಭಾವಿ ತತ್ತ್ವಪದಕಾರರು, ಸೂಫಿಸಂತರುಗಳು ಪ್ರಮುಖರಾದವರಾಗಿದ್ದಾರೆ. ಆದರೆ ವರ್ತಮಾನದ ಧಾವಂತದಲ್ಲಿ ಮನುಷ್ಯನ ವ್ಯಕ್ತಿತ್ವವು ಅಧಃಪತನಕ್ಕೆ ಇಳಿದಿದೆ. ‘ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ. ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ’ ಎಂಬ ಮಾತಿನಂತೆ ನಮ್ಮ ಪೂರ್ವಜರ ಬುತ್ತಿಯಲ್ಲಿನ ಜ್ಞಾನದ ಅನುಭವದಡಿಗೆಯನ್ನು ಹಂಚಿಕೊಂಡು ತಿನ್ನುವುದು ಅತ್ಯಗತ್ಯವಾಗಿದೆ. ಇದನ್ನೇ ಕನಕದಾಸರು ‘ಅಡಿಗೆಯನು ಮಾಡಬೇಕಣ್ಣ ನಾನೀಗ ಸುಜ್ಞಾನದ ಅಡಿಗೆಯನು ಮಾಡಬೇಕು. ಎಂದಿದ್ದಾರೆ.
ತತ್ತ್ವಪದದ ಅರ್ಥ
ತತ್ ಎಂದರೆ ಅದು; ಆ. ತತುವ; ತತ್ವ’ ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ದಿಟ, ಸತ್ಯ, ಸಾರ, ತಿರುಳು, ಸಿದ್ದಾಂತ, ನಿಯಮ ಎಂದರ್ಥ. ತಾತ್ಪರ್ಯ ಅಥವಾ ತತ್ವಾರ್ಥ ಎಂದರೆ, ಸತ್ಯ, ವಸ್ತುಸ್ಥಿತಿ, ಯತಾರ್ಥತೆ ಎಂಬ ಅರ್ಥಗಳನ್ನು ಹೊಂದಿದೆ.
‘ವ್ಯಕ್ತಿಯ ಸಹಜ ಬದುಕಿಗೆ ವಿಮುಖವಾಗಿ ಮುಕ್ತಿ, ಮೋಕ್ಷ ಗಳಿಸುವುದನ್ನೇ ಪರಮೋಚ್ಚ ಧೈಯವನ್ನಾಗಿಸಿಕೊಂಡ ಎಲ್ಲ ಧರ್ಮಗಳು ಜೊಳ್ಳೆಂದು’ ಬಗೆದ ಶರಣರು ಹನ್ನೆರಡನೆಯ ಶತಮಾನದಲ್ಲಿ ವೈದಿಕರ ಸಿದ್ದ ಸಂಪ್ರದಾಯಗಳನ್ನು ತೊಡೆದು ಬದುಕಿನ ಯತಾರ್ಥತೆಯನ್ನು ತಿಳಿಯುವತ್ತ ಗಮನವನ್ನು ಹರಿಸಿದರು. ಆ ನಿಟ್ಟಿನಲ್ಲಿ ಶರಣರು ತಮ್ಮ ವಚನಗಳ ಮೂಲಕ ಕಲ್ಯಾಣದಲ್ಲಿ ಕ್ರಾಂತಿಯನ್ನೇ
ಹುಟ್ಟುಹಾಕಿದರು. ತರುವಾಯ ಅದೇ ಪರಂಪರೆಯನ್ನು ಮುಂದುವರೆಯಿಸಿಕೊಂಡು ಬಂದ ದಾಸಸಾಹಿತ್ಯ, ಕೀರ್ತನೆಗಳು, ತತ್ತ್ವಪದಗಳನ್ನು ಕನ್ನಡ ಸಾಹಿತ್ಯದಲ್ಲಿ ಮೂಡಿಬಂದ ಬಹುವಿಶಿಷ್ಟ ಪ್ರಕಾರಗಳಾಗಿ ಪರಿಗಣಿಸಬಹುದು. ಇಲ್ಲಿ ಭಕ್ತಿಯೇ ಮೂಲ ದ್ರವ್ಯವಾಗಿರುವ, ಸ್ವರ ಮಾಧುರದಿಂದ ಹಾಡಿಕೊಂಡು ಬಂದಿರುವ ಪದಗಳಿಗೆ ಸ್ವರವಚನಗಳೆಂದು, ಅನುಭಾವ ಪದಗಳೆಂದು, ತತ್ತ್ವಪದಗಳೆಂದು, ಭಜನಾ ಪದಗಳೆಂದು ಕರೆಯುತ್ತ ಬಂದಿದ್ದು, ಆತ್ಮದ ಉದ್ವಾರವೇ ತತ್ತ್ವಪದಗಳ ಪ್ರಧಾನ ಆಶಯವಾಗಿದೆ.

ಕುವೆಂಪುರವರು ತಮ್ಮ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯಲ್ಲಿ ‘ಕ್ರಾಂತಿ ಗೀತೆಗಳಿಗೆ ಸಂಗೀತ ಜೊತೆಗೂಡಿಸಿಕೊಂಡು ಹಾಡಿನೊಳಗಿನ ಕೆಚ್ಚನ್ನು ತಣಿಸಿ ಸಂಗೀತ ಸುಧೆ ಹರಿಸಿದರು’ ಎಂಬರ್ಥದಲ್ಲಿ ಹೇಳಿದ್ದಾರೆ. ಅದೇ ರೀತಿಯಾಗಿ ದ.ರಾ.ಬೇಂದ್ರೆಯವರು ದುಃಖಾಂತ, ಬೇಸರದ ಸನ್ನಿವೇಶಗಳಲ್ಲಿ ಬರೆದ “ನೀ ಹಿಂಗ ನೋಡಬ್ಯಾಡ ನನ್ನ’, ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ’ ಇತರೆ ಭಾವಗೀತೆಗಳನ್ನು ಕವಿಯ ಮೂಲ ಆಶಯಕ್ಕೆ ತದ್ವಿರುದ್ಧವಾದ ಅರ್ಥಸಾಧ್ಯತೆಗಳನ್ನು ಕಲ್ಪಿಸಿಕೊಂಡು ಶೃಂಗಾರ ಗೀತೆಗಳನ್ನಾಗಿಸಿಬಿಟ್ಟಿದ್ದೇವೆ. ಅಂತೆಯೇ ಬದುಕಿನ ಯತಾರ್ಥತೆಯನ್ನು ತಿಳಿಸುವ ತತ್ತ್ವಪದಗಳನ್ನು ಹಾಡುಗಾರಿಕೆಯ, ಸ್ವರ, ರಾಗ, ತಾಳಮೇಳಗಳ ಮಾಧುರದ ಅಮಲಿನಲ್ಲಿ ಮೂಲ ಅರ್ಥವನ್ನು ಗ್ರಹಿಸುವಲ್ಲಿ ನಾವು ಸೋತಿದ್ದೇವೆ. ಈ ಕಾರಣವಾಗಿ ಸಂತ ಶಿಶುನಾಳ ಶರೀಫರು ರಚಿಸಿರುವ ಹಲವು ತತ್ತ್ವಪದಗಳನ್ನು, ಸಿ. ಅಶ್ವಥರು ಹಾಡಿದ್ದಾರೆ. ಅವುಗಳಲ್ಲಿ ವಿಶೇಷವಾಗಿ ನನ್ನನ್ನು ಗಮನ ಸೆಳೆದ ‘ಕುರುಬರೋ ನಾವು ಕುರುಬರು’ ಎಂಬ ತತ್ತ್ವಪದವನ್ನು ಶರೀಫರ ಸಂಕ್ಷಿಪ್ತ ಪರಿಚಯದೊಂದಿಗೆ ವಿಶ್ಲೇಷಣೆ ಮಾಡುವುದು ಪ್ರಸ್ತುತ ಲೇಖನದ ಚಉದ್ದೇಶವಾಗಿದೆ.
ಸಂತ ಶಿಶುನಾಳ ಮಹ್ಮದ್ ಶರೀಫ್ ಸಾಹೇಬರು
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. 1819ರ ಮಾರ್ಚ 07 ರಂದು ಜನಿಸಿದರು. ತಂದೆ- ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬರು, ತಾಯಿ-ಹಜ್ಯೂಮಾ ಬೇಗಂ, ಮುಲ್ಕಿ ಪರೀಕ್ಷೆ ಪಾಸುಮಾಡಿ ಶಿಕ್ಷಕ ವೃತ್ತಿಯಲ್ಲಿ ತೊಡಗಿದರು. ಕುಂದಗೋಳದ ನಾಯಕ ಮನೆತನದ ಫಾತಿಮಾ ಎಂಬ ಕನೈಯೊಂದಿಗೆ ಮದುವೆಯಾದರು. ಒಂದು ಹೆಣ್ಣು ಮಗು ಜನಿಸಿದ ಕೆಲವೇ ತಿಂಗಳಲ್ಲಿ ಹೆಂಡತಿ ಹಾಗೂ ಮಗು ಕಾಲವಶರಾದರು. ಈ ಚಿಂತೆಯು ಬಹುವಾಗಿ ಕಾಡಿ ಸಾಂಸಾರಿಕ ಜೀವನಕ್ಕೆ ವಿಮುಖರಾಗಿ, ದೇವರಲ್ಲಿನ ಅಚಲವಾದ ನಂಬಿಕೆಯೊಂದಿಗೆ ಸಾಗಿ ಊರೂರು ಅಲೆದು ಕೊನೆಯಲ್ಲಿ ಕಳಸದ ಗುರು ಗೋವಿಂದ ಭಟ್ಟರಲ್ಲಿ ಶಿಷ್ಯತ್ತ್ವವನ್ನು ಪಡೆದು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿದರು. ನವಲಗುಂದದ ಅಜಾತ ನಾಗಲಿಂಗ ಸ್ವಾಮಿ ಹಾಗೂ ಗರಗದ ಮಡಿವಾಳಪ್ಪರ, ಹುಬ್ಬಳಿಯ ಸಿದ್ಧಾರೂಢರ ಸಮಕಾಲೀನ ಸತ್ಪುರುಷರ ಗಾಢ ಪ್ರಭಾವ, ಸಾನ್ನಿಧ್ಯ-ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು. ‘ಬೋಧ ಒಂದೇ ಬ್ರಹ್ಮನಾದ ಒಂದೇ’ ಎಂಬುದು ಇವರ ಬೀಜ ಮಂತ್ರವಾಗಿತ್ತು. ‘ನಡಿಯೋ ದೇವರ ಚಾಕರಿಗೆ ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ’ ಎಂಬುದು ಇವರು ತಮ್ಮ ಮನಕ್ಕೂ – ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಎಪ್ಪತ್ತು ವರ್ಷಗಳ ತುಂಬು ಜೀವನ ಪೂರೈಸಿ
ತನ್ನ ಶಿಷ್ಯರೆಲ್ಲರಿಗೂ ತಾವು ಹುಟ್ಟಿದ ದಿನವೇ ಈ ಕಾಯ ಬಿಡತೀನಿ ಅಂತ್ತೇಳಿ 1889ರ ಮಾರ್ಚ 07 ರಂದು ಕೈವಲ್ಯವನ್ನು ಪಡೆದು ಶಿಶುನಾಳದೀಶನಲ್ಲಿ ತಾ ಒಂದಾದರು.
ಶರೀಫರ ಸಮಕಾಲೀನರಾದ ಹಠಯೋಗಿ ಅಜಾತ ನಾಗಲಿಂಗ ಸ್ವಾಮಿಗಳು ತಾಯಿಯ ಮಾತಿಗೆ ಮನನೊಂದು ಮನೆ ತೊರೆದು ಲಿಂಗಸೂಗೂರು ತಾಲೂಕಿನ ತೆಲೆಕಟ್ಟು ಗ್ರಾಮ ಈಗೀನ ಅಂಕಲಿಮಠಕ್ಕೆ ಬಂದು ನಿರುಪಾಧೀಶ್ವರ ಯೋಗಿಗಳ ಮುಖಾಂತರ ಸಾಧನ ಚತುಷ್ಟಯಗಳ ಸಂಪನ್ನಕ್ಕೆ, ವೈರಾಗ್ಯ ನಿರ್ಣಯ, ಗುರುಲಕ್ಷಣ, ಶಾಂತಿಲಕ್ಷಣ, ಸಪ್ತಭೂಮಿಕೆ, ಪರಮಾತ್ಮನ ವಿಭೂತಿಗಳು, ಕರ್ಮ, ಭಕ್ತಿ, ಯಂತ್ರ, ಮಂತ್ರ, ಲಯ, ಹಠ ಮತ್ತು ರಾಜ ಯೋಗಗಳನ್ನು ಆಳವಾಗಿ ಅಭ್ಯಸಿಸಿ ಧಾರವಾಡ-ಹುಬ್ಬಳಿಯ ಸಿದ್ದಾರೂಢರ ಮಠದಲ್ಲಿದ್ದರು. ಅಲ್ಲಿ ಶರೀಫ್ ಸಾಹೇಬರ ಮತ್ತು ನಾಗಲಿಂಗ ಯತಿಗಳ ಭೇಟಿ ಹಾಗೂ ಇಬ್ಬರ ನಡುವೆ ನಡೆದ ವಿದ್ವತ್ ಪರೀಕ್ಷೆಯಲ್ಲಿ ಸಮಬಲದೊಂದಿಗೆ ಸಾಗಿ ಮಹಾಜ್ಞಾನಿಗಳಿಬ್ಬರೂ ಪರಸ್ಪರ ಸ್ನೇಹದಿ ಅಪ್ಪಿದರು. ತದನಂತರ ನಾಗಲಿಂಗರು ನವಲಗುಂದಕ್ಕೆ ಬಂದು ನೆಲೆಸಿದರು. ಶರೀಫರು ಶಿಶುವಿನಾಳದಲ್ಲಿ ನೆಲೆಸಿದರು. ಶರೀಫ್ ಸಾಹೇಬರು ಆಗಾಗ ನಾಗಲಿಂಗರ ಭೇಟಿಗೆ ನವಲಗುಂದಕ್ಕೆ ಬಂದು ಹೋಗುತ್ತಿದ್ದರು.
ನಾಗಲಿಂಗ ಗುರುವಿನೊಡನೆ ಮಠದಲ್ಲಿ ನಡೆದ ವಿದ್ವತ್ತ ಸಭೆಯಲ್ಲಿನ ಸಂವಾದದಲ್ಲಿ ಗುರುಗಳು ಬದುಕಿನ ಬಗೆಗೆ ತಿಳಿ ಹೇಳಿದ ಪರಿಗೆ ಬೆರಗಾಗಿ: ಅನುಭಾವದ ನುಡಿಗಳನ್ನು ಮೆಚ್ಚಿ ತೆಲೆದೂಗಿ ಕೂತಲ್ಲಿಯೇ ಕುರುಬರೋ ನಾವು ಕುರುಬರು ತತ್ವಪದವನ್ನು ಕಟ್ಟಿ ಹಾಡಿದರು.
ಕುರುಬರೋ ನಾವು ಕುರುಬರು ಏನು ಬಲ್ಲೇವರಿ ಒಳ ಕಾರುಬಾರು ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು.
ಏಳು ಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ
ಇಟ್ಟೆವು ಕುರಿಗಳು ಚೆನ್ನಾಗಿ ಬಚ್ಚಿ
ಹೊಟ್ಟೆಂಬ ಬಾಗಿಲ ಬಲವಾಗಿ ಮುಚ್ಚಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ.
ತನುಯೆಂಬುವ ದೊಡ್ಡಿಯ ಹಸನಾಗಿ ಉಡುಗಿ
ತುಂಬಿ ಚೆಲ್ಲೇವರಿ ಹಿಕ್ಕಿಯ ಹೆಡಗಿ
ನಮ್ಮ ಕೈಲೇ ಇದ್ಯೋ ಅರಿವಿನ ಗಡಿಗಿ,
ಗುರು ಹೇಳಿದ ಬಾಳು ಹಾಲಿನ ಗಡಿಗಿ
ನಿಮ್ಮ ಕೈಲೇ ಇದ್ಯೋ ಅರಿವಿನ ಬೆಡಗಿ.
ಮೇವು ಹುಲ್ಸಾದಂತ ಮಸಣಿದು ಖರೆಯೆ
ಕುರಿ ಇಲ್ಲಿ ಮೇಯ್ಸಾಕ ಬಂದದ್ದು ಸರಿಯೇ..?
ತೋಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೇ..!
ಈ ತತ್ವಪದದಲ್ಲಿ ಅನೇಕ ಜೀವನ ಸಂದೇಶ ಮತ್ತು ಮುಕ್ತಿ ಮಾರ್ಗಗಳನ್ನು ಕಾಣಬಹುದಾಗಿದೆ. ಅಜಾತ (ಗು).-ಹುಟ್ಟು ಇಲ್ಲದವ. ದೂತ (ನಾ),-ಸಂದೇಶವನ್ನು ಒಯ್ಯುವವ, ಸೇವಕ, ರಾಯಭಾರಿ ,ಕುರುಬ(ನಾ), – ಕುರಿ ಕಾಯುವ,ಕುರಿಗಾಹಿ,ಹಳಬ,
ಕುರುಂಬಿಕೆ – ಕುರಿ ಸಾಕಾಣಿಕೆ, ಕಾರುಬಾರು (ನಾ) ಆಡಳಿತ : ಕಾರ್ಯಭಾರ, ಬದುಕಿನ ಏಳು ಸುತ್ತುಗಳು – ಏಳೇಳು ಜನ್ಮದ ಅನುಬಂಧ, ಸಪ್ತಪದಿ: ಬೇಲಿಗಳು – ಸಾಂಗತ್ಯ, ಸುಖ, ಸಹಚಾರ, ಮೋಹ, ಜ್ಞಾನ, ಶಾಶ್ವತ ನಲಿವು, ಸಪ್ತ ಋಷಿಗಳ ಶುಭಹಾರೈಕೆ. ಪಡತುಗಳು – ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ, ಸಪ್ತರ್ಷಿಗಳು -ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಟ, ಕಶ್ಯವ, ತನು- ದೇಹ, ಕಾಯ, ಹೊಟ್ಟೆ (ನಾ), ಬಸಿರು; ಉದರ, ದೊಡ್ಡಿ (ನಾ), ಹಸು, ಕುರಿ ಮುಂತಾದವುಗಳನ್ನು ಕೂಡಿಡುವ ಸ್ಥಳ, ಕೊಟ್ಟಿಗೆ, ಉಡುಗಿ – ಕಸವನ್ನು ಗುಡುಸಿ. ಹೆಡಗಿ – ಆಗಲವಾದ ಬಾಯಿಯ ದೊಡ್ಡ ಬುಟ್ಟಿ, ಹುಲುಸು (ನಾ). ಹೆಚ್ಚಳ, ಸಮೃದ್ಧಿ, ತೋಳ (ನಾ).- ನಾಯಿಯ ಜಾತಿಗೆ ಸೇರಿದ ಒಂದು ಬಗೆಯ ಕಾಡುಪ್ರಾಣಿ : ಇಲ್ಲಿ ಕಾಲ : ಜವರಾಯ : ಯಮ ಧರ್ಮ ಎಂಬರ್ಥದಲ್ಲಿ ರೂಪಕವಾಗಿ ಬಳಸಿದ್ದಾರೆ. ಪರಿ (ನಾ),
ಈ ಮೇಲಿನ ತತ್ತ್ವಪದವನ್ನು ಬರೆದದ್ದು ಯಾರು? ನಮ್ಮ ಅರಿವಿನ ಹಿನ್ನಲೆಗೆ ಸರಿದ ಪದವನ್ನು ಸಂಪಾದಿಸಿದ್ದು ಯಾರು? ಯಾವ ಕೃತಿಯಲ್ಲಿ ಮೂಡಿಬಂದಿದೆ? ಈ ಪದಕ್ಕೆ ರಾಗ ಸಂಯೋಜನೆ ಮಾಡಿ ಸುಶ್ರಾವ್ಯವಾಗಿ ಹಾಡಿ ಪ್ರಚುರಪಡಿಸಿದ್ದು ಯಾರು? ಎಂಬುದು ಹಲವು ಜನರಿಗೆ ತಿಳಿಯದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂತಕವಿ ಕನಕದಾಸರ ಜಯಂತಿ ನಿಮಿತ್ತವಾಗಿ ಕೇಳಿಬರುತ್ತಿರುವ ಹಾಡು ಮೊದಮೊದಲಿಗೆ ಇದು ಒಂದು ಮತ-ಸಮುದಾಯದ ಹಿನ್ನಲೆಯಲ್ಲಿ ಬರೆದ ಹಾಡಾಗಿರಬಹುದು ಎಂಬ ಸಂಶಯ ಕಾಡಹತ್ತಿತ್ತು. ಈ ಬಗ್ಗೆ ಮಾಹಿತಿಯನ್ನು ಬೆಂಬತ್ತಿ ನಡೆದಾಗ ಸೂಜಿಗ ಅನ್ನುವ ಅಂಶವು ಗೋಚರಿಸಿತು. ನಾನು ಈ ಬಗ್ಗೆ ನನ್ನ ಗುರುಗಳಲ್ಲಿ, ಸಹ-ಉದ್ಯೋಗಿಗಳಲ್ಲಿ, ಆತ್ಮೀಯ ಗೆಳೆಯರಲ್ಲಿ ವಿಚಾರಿಸಲಾಗಿ ಬಗೆಬಗೆಯಾದ ಉತ್ತರಗಳು ಬಂದವು. ಕೊನೆಯಲ್ಲಿ ಮೂಲಹುಡುಕುವಲ್ಲಿ ಯಶಳಾದೆ.
ಪ್ರಸ್ತುತ ತತ್ತ್ವಪದದ ಪಠ್ಯವನ್ನು ಕೂಲಂಕಷವಾಗಿ ನೋಡಲಾಗಿ ಇದು ಯಾವುದೇ ಒಂದು ಮತ-ಸಮುದಾಯವನ್ನು ಪ್ರತಿನಿಧಿಸುವ ಪದವಾಗಿರದೇ ಕಾಯ ಮತ್ತು ಕರ್ಮದ ಕುರಿತಾಗಿ ಗೂಢಾರ್ಥ ವನ್ನೊಳಗೊಂಡದ್ದಾಗಿದೆ. ಈ ದೇಹದೊಳಗಿನ ಆತ್ಮ ಚೈತನ್ಯದ ಒಳ ಕಾರಭಾರನ್ನು ಅರಿಯದ ನಾವುಗಳು
‘ಕುರುಬರೋ ನಾವು ಕುರುಬರು, ಏನು ಬಲ್ಲೇವರಿ..? ಒಳ ಕಾರುಬಾರು..! ಎಂದು ಪ್ರಶ್ನಿಸುತ್ತ ಮುಂದುವರೆದು ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು ಇಲ್ಲಿ ಮನುಷ್ಯರಿಗೆ ಸೊಕ್ಕಿದ ಕುರಿಗಳನ್ನು ರೂಪಕವಾಗಿ ಬಳಸಿ-ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳ ಕೈವಶರಾಗಿ : ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ ಮತ್ತು ಅಧಿಕಾರಗಳೆಂಬ ಅಷ್ಟ ಮದಗಳಿಗೆ ಬಲಿಯಾಗಿ ಅವು ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡನ್ನು ಹೊಡೆದುಕೊಂಡು ಎಂದು, ఇల్లి ಕುರಿಗಾಹಿ ಎಂದರೆ…? ಯಾವೊಬ್ಬ ವ್ಯಕ್ತಿಯಾಗಿರದೆ ದೇವಧೂತರೆಂಬ ಅರ್ಥದಲ್ಲಿ ನೀಡಲಾಗಿದೆ. ಒಂದೆಡೆ ಬೈಬಲ್‌ನಲ್ಲಿ ಯೇಸುಕ್ರಿಸ್ತ ಹೇಳಿದನೆನ್ನಲಾದ ಉಕ್ಕಿ ‘ಈ ಜಗತ್ತು ಕುರಿಗಳ ಹಿಂಡು, ಬುವಿ ದೊಡ್ಡಿ, ನಾನು ಈ ಕುರಿಗಳನ್ನು ಧರ್ಮದ ಹಾದಿಯಲ್ಲಿ ಮುನ್ನಡೆಸಲು ಬಂದಿರುವ ಕುರಿಗಾಹಿ ಅರ್ಥಾತ್ ಆ ದೇವರ ದೂತ-ಸೇವಕನೆಂದು’ ಹೇಳಿಕೊಂಡಿದ್ದಾನೆ.
ಏಳು ಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ ಎಂದರೆ..? ಧರ್ಮದ ಹಾದಿಯಲ್ಲಿ ಏಳೇಳು ಜನ್ಮದ ಬಂಧವೆಂದು ಕರೆಯಲಾದ ಮದುವೆಯನ್ನು ಗಂಡು-ಹೆಣ್ಣಿನ ಸುತ್ತ ಹೆಣೆದ – ಸಾಂಗತ್ಯ, ಸುಖ, ಸಹಚಾರ, ಮೋಹ, ಜ್ಞಾನ, ಸಪ್ತ ಋಷಿಗಳ ಶುಭ ಹಾರೈಕೆಗಳೊಂದಿಗೆ ಶಾಶ್ವತ ನಲಿವು ನಮ್ಮ ಏಳೇಳು ಜನ್ಮದಲ್ಲಿ ಲಭಿಸಲಿ ಎಂಬ ಸದಾಶಯದೊಂದಿಗೆ ಸಪ್ತಪದಿ ಎಂಬ ಏಳು ಸುತ್ತಿನ ಬೇಲಿಗಳನ್ನು ಹಾಕಿಕೊಂಡು ಈ ಜನರನ್ನು ಕುರಿಗಳ ಹಾಗೆ ದೊಡ್ಡಿಯಲ್ಲಿ ಇಟ್ಟೆವು ಚೆನ್ನಾಗಿ ಬಚ್ಚಿಟ್ಟು, ಹೊಟ್ಟೆಂಬ ಬಾಗಿಲನ್ನು ಬಲವಾಗಿ ಮುಚ್ಚಿ. ಸಿಟ್ಟೆಂಬ ನಾಯಿಯನ್ನು ಅಂದರೆ..? ದ್ವೇಷವನ್ನು ಬಿಚ್ಚಿ ಬಿಟ್ಟೇವ್ರ, ಅಂತಯೇ ಸಿಟ್ಟಿನ ಕೈಯಲ್ಲಿ ನಮ್ಮ ಬುದ್ದಿಯನ್ನು ಕೊಟ್ಟಾಗ ನಮಗೆ ಮುಕ್ತಿಯ ಮಾರ್ಗ ಗೋಚರಿಸದು ಎಂದಿದ್ದಾನೆ.
ತನು-ದೇಹ-ಕಾಯವೆಂಬುವ ರಕ್ತ ಮಾಂಸಗಳಿಂದ ತುಂಬಿದ ಎಲುವಿನ ಗೂಡಾದ ದೊಡ್ಡಿಯನ್ನು ಹಸನಾಗಿ ಉಡುಗಿ- ಸ್ವಚ್ಛಗೊಳಿಸಿ, ಹಿಕ್ಕಿಯ ರೂಪದ ಮನಸ್ಸಿನ ಕಲ್ಮಶ ಭಾವಗಳನ್ನು ಹೆಡಗಿ(ಬುಟ್ಟಿ)ಯಲ್ಲಿ ತುಂಬಿ ಹೊರಚೆಲ್ಲಬೇಕು, ನಾಗಲಿಂಗ ಗುರು ಹೇಳಿದ ಮಾತು- ಈ ಬಾಳು ಹಾಲಿನ ಗಡಿಗಿ, ನಮ್ಮ ಕೈಲೇ ಇದ್ಯೋ ಅರಿವಿನ ಬಡಗಿ, ಈ ಕಾಯವನ್ನು ಸತ್ಕರ್ಮವ ಮಾಡಿ ಕಳಕೊಬೇಕು ಎಂದಿದ್ದಾನೆ. ಇಲ್ಲಿ ಪುರಂದರ ದಾಸರ ಕೀರ್ತನೆಯೊಂದನ್ನು ಉಲ್ಲೇಖಿಸುವುದು ಉಚಿತವೆನಿಸುತ್ತದೆ. ‘ಮಾನವ ಜನ್ಮ ಬಲು ದೊಡ್ಡದು ಇದ ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ..!’ ಎಂಬರ್ಥದಲ್ಲಿ ನಮ್ಮ ಅರಿವಿನ ಮೂಲಕ ಈ ಕಾಯವನ್ನು ಸಂರಕ್ಷಣೆಯನ್ನು ಮಾಡಿಕೊಂಡು ಮುಕ್ತಿಯನ್ನು ಹೊಂದುವಂತೆ ಕರೆ ನೀಡಿದ್ದಾರೆ. ಇದನ್ನೇ ವಿಶ್ವಮಾನವನೆನಿಸಿದ ಬಸವಣ್ಣನು ವಚನವೊಂದರಲ್ಲಿ ‘ಕಳಬೇಡ ಕೊಲಬೇಡ…’ ಮುಂದುವರೆದು ತನುವಿನ ಅಂತರಂಗ ಮತ್ತು ಬಹಿರಂಗ ಶುದ್ದಿಯ ಬಗೆ ತಿಳಿಸುತ್ತ ಇದೇ ನಮ್ಮ ಕೂಡಲ ಸಂಗಮನಾಥನನ್ನು ಒಲಿಸಿಕೊಳ್ಳುವ ಪರಿಯೆಂದು ಹೇಳಿದ್ದಾನೆ.
ಈ ಕಾಯವೆನ್ನುವುದು ಮೇವು ಹುಲ್ಸಾದಂತ ಮಸಣಿ (ಸುಡುಗಾಡು)ದು ಖರೆಯೆ (ಸತ್ಯ), ಈ ದೇಹ ನಶ್ವರವೆಂದು ತಿಳಿದೂ ತಿಳಿದು… ನಾನು ನನ್ನದು ಎನ್ನುವ ಸ್ವಾರ್ಥದಿಂದ ಬಡಿದಾಡುವ ಮನುಕುಲಕ್ಕೆ – ಇಲ್ಲಿ ಕುರಿ ಮೇಯಾಕ ಬಂದದ್ದು ಸರಿಯೇ..? ಎಂದು ಪ್ರಶ್ನಿಸುತ್ತ, ಕಾಲನ-ಜವರಾಯನ ಕರೆಗೆ ಓಗೊಟ್ಟು ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು ಎಂಬುದನ್ನು ತೋಳ ಹಾರಿ ಕುರಿಗಳ ಗೋಣು ಮುರಿಯೆ, ಎನ್ನುವ ಪ್ರಾಣಿ ರೂಪಕದೊಂದಿಗೆ ಬದುಕಿನ ಗುಟ್ಟನ್ನು ಬಿಚ್ಚಿಟ್ಟ ಗುರು ನಾಗಲಿಂಗ ಅಜ್ಜ ಹೇಳಿದ ಪರಿಯೇ..! ಎಂದು ತನ್ನ ಸಮಕಾಲೀನ ಅಧ್ಯಾತ್ಮ ಗುರುವಿನ ಸಂವಾದ ರೂಪದಲ್ಲಿನ ಬದುಕಿನಾನುಭವಗಳನ್ನು ಸಂತ ಶಿಶುನಾಳ ಶರೀಫರು ಪದಕಟ್ಟಿ ಹಾಡಿಹೊಗಳಿದ್ದಾರೆ. ಅದೇ ರೀತಿಯಲ್ಲಿ ‘ಏನು ಕೊಡ ಏನು ಕೊಡವ ಹುಬ್ಬಳ್ಳಿ ಮಾಟದ ಎಂಥ ಚಂದುಳ್ಳ ಕೊಡವ’, ‘ಬಿದ್ದೀಯಬೇ ಮುದುಕಿ, ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ನಾಕೋ’,’ ‘ಗುಡಿಯನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ’, ‘ಸ್ನೇಹ ಮಾಡಬೇಕಿಂಥವಳ ಒಳ್ಳೇ ಮೋಹದಿಂದಲಿ ಬಂದು ಕೂಡುವಂಥವಳ’, ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ’, ‘ಒಳ್ಳೆ ನಾರಿಯ ಕಂಡೆ ಈಗಲೆ ಒಳ್ಳೆ ನಾರಿ ಕಂಡೆ’, ‘ಹುಟ್ಟಿದ ಹೊಲಿಮನೆ ಬಿಟ್ಟರೆ ಖಾಲಿಮನಿ ಎಷ್ಟಿದ್ದರೇನು ಗಳಿಗಿ ಮನಿ’, ‘ಸೋರುತಿಹದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹದು ಮನೆಯ ಮಾಳಿಗೆ’, ‘ಎಡಿ ಒಯ್ಯೋನು ಬಾ ಮಡಿಹುಡಿಯಿಂದಲಿ ಪೊಡವಿಗಧಿಕ ಎನ್ನ ಒಡೆಯ ಅಲ್ಲಮನಿಗೆ’ ಇತರ ತತ್ತ್ವಪದಗಳನ್ನು ಮರು ಓದಿಗೆ ಒಳಪಡಿಸುವುದು ಇಂದಿನ ತುರ್ತು ಎಂಬುದು ನನ್ನ ಭಾವನೆ.
ಯಾವುದೇ ಭಾಷೆಯ ಸಾಹಿತ್ಯದ ಪ್ರಕಾರಗಳನ್ನು ಮರು ಓದಿಗೆ ಒಳಪಡಿಸಿ ಪ್ರಸ್ತುತತೆಗೆ ಅನು ಸಂಧಾನಗೊಳಿಸುವಲ್ಲಿ ಸಾಹಿತ್ಯ ರಚನೆಯಾದ ಆಯಾ ಸ್ಥಳ ಮತ್ತು ಕಾಲಮಾನಗಳಿಗೆ ಅನ್ವಯಿಸಿ ಬಹು ಶಿಸ್ತೀಯ ನೆಲೆಯಲ್ಲಿ ಸಾಹಿತ್ಯ ಪಠ್ಯವನ್ನು ಹೊಸ ರೀತಿಯಲ್ಲಿ ಓದುವ ಭರದಲ್ಲಿ ಕವಿ-ಕಾವ್ಯಕೃತಿಯ ಮೂಲ ಆಶಯವನ್ನು ಗ್ರಹಿಸಲಾಗದಿದ್ದರೂ ಹತ್ತಿರವೆನಿಸಬಹುದಾದ ಆಶಯವನ್ನು ಗ್ರಹಿಸುವುದು ಬಹು ಮುಖ್ಯವಾದ ಸಂಗತಿ. ಮೂಲ ಆಶಯಕ್ಕೆ ಧಕ್ಕೆ ತರವುದು, ವಿದ್ಯಾರ್ಥಿಗಳಿಗೆ ಅಥವ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುವುದು ನನ್ನ ದೃಷ್ಟಿಯಲ್ಲಿ ಅಕ್ಷಮ್ಯ ಅಪರಾಧವೇ ಸರಿ
ಡಾ.ಯಲ್ಲಮ್ಮ.ಕೆ




