ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರವಿ ಅಣ್ಣ ಮರಲೂರಿನ ಕಾಂಟ್ರಾಕ್ಟರ್. ಊರಿನಲ್ಲಿ ಆತ ಎಲ್ಲಾ ಕೆಲಸಗಳಲ್ಲಿಯೂ ಮುಂದಾಳತ್ವ ವಹಿಸುತ್ತಾ ಅಘೋಷಿತ ನಾಯಕತ್ವವನ್ನು  ಉಳಿಸಿಕೊಂಡಿರುತ್ತಾನೆ. ಅವಿವಾಹಿತನಾಗಿಯೇ ಉಳಿದ ಆತ ಊರಿನ ಮದುವೆ ಮುಂಜಿಗಳಿಂದ ಹಿಡಿದು ಮಸಣ ಮತ್ತು ಬೊಜ್ಜಗಳವರೆಗೆ ಎಲ್ಲ ಕೆಲಸಗಳಲ್ಲಿಯೂ ಮುಂದು. ಆತನ ಹಿರಿತನವನ್ನು ಎಲ್ಲರೂ ಒಪ್ಪಿ ಗೌರವಿಸುತ್ತಿರುತ್ತಾರೆ.

ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ ಎಂಬ ಯುವಕ ರವಿ ಅಣ್ಣ ಮತ್ತು ಸ್ನೇಹಿತರ ಪಟಾಲಮ್ಮನೊಂದಿಗೆ ಮದುವೆ ಮನೆಯಲ್ಲಿ ಚೆನ್ನಾಗಿ ಕುಡಿದು ಡ್ಯಾನ್ಸ್ ಮಾಡಿ ತಾನು ಲೈನ್ ಹೊಡೆಯುತ್ತಿದ್ದ ಹುಡುಗಿಯನ್ನು ಕದ್ದು ಮುಚ್ಚಿ ಮಾತನಾಡಲು ಪ್ರಯತ್ನಿಸುತ್ತಾನೆ. ಮರಳಿ ಮನೆಗೆ ಬರುವಾಗ ಆಕೆಯನ್ನು ನೋಡಲು ಪ್ರಯತ್ನಿಸುವ ಆತನ ತುಂಟಾಟ ವಿಪರೀತಕ್ಕೆ ಇಟ್ಟುಕೊಳ್ಳುತ್ತದೆ.ತಾನು ಮಾಡಿದ ಹುಡುಗಾಟವನ್ನು ಮುಚ್ಚಿಡಲು ಪ್ರಯತ್ನಿಸಿ ಸಿಕ್ಕು ಬೀಳುವ ಆತ ತನ್ನನ್ನು ಹಿಡಿಯಲು ಬಂದವರು ಪರಸ್ಪರರಲ್ಲಿ ಮಾತನಾಡಿಕೊಂಡಂತೆ ತನ್ನ ಮೈಯಲ್ಲಿ ಪ್ರೇತ ಬಂದಂತೆ ವರ್ತಿಸುತ್ತಾನೆ.

 ಇದರ ಪರಿಣಾಮವಾಗಿ ಇಡೀ ಊರಿನ ಜನರೆಲ್ಲಾ ಸೇರಿ ಆತನ ದೇಹದಲ್ಲಿ ಸೇರಿಕೊಂಡಿರುವ ಪ್ರೇತವನ್ನು
 ಬಿಡಿಸಲು ದೊಡ್ಡ ಸ್ವಾಮೀಜಿಯೊಬ್ಬರನ್ನು ಕರೆಸುವರು.
 ಬಚಾವಾಗಲು ತಾನು ಹೂಡಿದ ಉಪಾಯವೇ ತನಗೆ ಅಪಾಯವನ್ನು ತಂದೊಡ್ಡಿದಾಗ ಅದನ್ನು ಎದುರಿಸಲು ಸಾಧ್ಯವಾಗದೆ ತನ್ನ ಸ್ನೇಹಿತರಿಗೆ, ಮನೆಯವರಿಗೆ ತನಗೆ ಯಾವುದೇ ಪ್ರೇತಭಾಧೆ ಆಗಿಲ್ಲ. ತಾನು ಸಂಪೂರ್ಣ ಆರೋಗ್ಯವಂತನಾಗಿರುವೆ ಎಂದು ಅದೆಷ್ಟೇ ಹೇಳಿದರೂ ಅವರಾರೂ ಕಿವಿಗೆ ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಎಲ್ಲರ ಭಯ ಆತಂಕ ಅನುಮಾನದ ದೃಷ್ಟಿಗಳು ಆತನಿಗೆ ಹಿಂಸೆಯಾಗ ತೊಡಗುತ್ತವೆ.

ಇಲ್ಲಿಯವರೆಗೂ ಕೇವಲ ಕುಡಿತ, ತಮಾಷೆ, ಮದುವೆ ಮನೆಯ ಗೌಜಿ ಗದ್ದಲ ಭೂತ ಪ್ರೇತಗಳ ಉಚ್ಛಾಟನೆಯ ದೃಶ್ಯಗಳು, ಊರಿಗೆ ಹಿರಿಯರು ಎನಿಸಿಕೊಂಡವರು ಸಣ್ಣಪುಟ್ಟ ಸಮಸ್ಯೆಗಳನ್ನು ಭೂತಗನ್ನಡಿಯಲ್ಲಿ ನೋಡಿ ಪರಿಹಾರ ಸೂಚಿಸುವ ಮೂಲಕ ತಮ್ಮನ್ನು ತಾವು ಮತ್ತಷ್ಟು ಜನರ ದೃಷ್ಟಿಯಲ್ಲಿ ದೊಡ್ಡವರಾದಂತೆ ಭಾವಿಸುವ ಜನರ ಕುರಿತಾದ ಸಾಮಾನ್ಯ ಚಿತ್ರದಂತೆ ತೋರುತ್ತದೆ. ಇಡೀ ಚಿತ್ರದಲ್ಲಿ ಮುಖ್ಯವಾಗಿ ಕಾಣುವುದು 90 ಹಾಕುವ ಗಂಡಸರು ಮತ್ತು ನೈಟಿ ಹಾಕುವ ಹೆಣ್ಣು ಮಕ್ಕಳು. ನಮ್ಮ ರಾಷ್ಟ್ರೀಯ ದಿರಿಸೇನೋ ಎಂಬಂತೆ ಎಲ್ಲ ಹೆಣ್ಣು ಮಕ್ಕಳ ಮೈ ಮೇಲೆ ನೈಟಿಗಳು ಮದುವೆ ಮನೆ, ಮಸಣದ ಮನೆ ಎಂಬ ವ್ಯತ್ಯಾಸವಿಲ್ಲದೆ ರಾರಾಜಿಸುತ್ತವೆ.

 ಅಶೋಕನ ಮೈಯಲ್ಲಿ ಸೇರಿಕೊಂಡಿರುವ ಪ್ರೇತ ಸೋಮೇಶ್ವರ ಎಂಬ ಮತ್ತೊಂದು ಊರಿನ ಸುಲೋಚನಮ್ಮ ಎಂಬಾಕೆಯದು ಎಂದು ಬಾಯಿಂದ ಬಾಯಿಗೆ ಹರಡುತ್ತದೆ. ಅಶೋಕನ ದೇಹವನ್ನು ಸೇರಿರುವ ಆಕೆಯನ್ನು ನೋಡಲು ಸುಲೋಚನಮ್ಮನ ಮಗಳು ಮತ್ತು ಆಕೆಯ ಚಿಕ್ಕಪ್ಪ ಅಲ್ಲಿಗೆ ಬರುತ್ತಾರೆ…. ಇಲ್ಲಿಂದ ಹೊಸತೊಂದು ಸಮಸ್ಯೆಯ ಅನಾವರಣವಾಗುತ್ತದೆ. ಅಶೋಕನ ಮೈಯಲ್ಲಿ ತನ್ನ ತಾಯಿ ಪ್ರೇತವಾಗಿ ತನಗಾಗಿ ಬಂದಿದ್ದಾಳೆ ಎಂದು ನಂಬಿದ ಆಕೆ ತನ್ನ ತಾಯಿ ಎಂದು ಭಾವಿಸಿ ಅಶೋಕನ ಬಳಿ ತಾನು ಅನುಭವಿಸುತ್ತಿರುವ ನೋವು, ಅಸಹಾಯಕತೆಯನ್ನು ತೋಡಿಕೊಳ್ಳುತ್ತಾಳೆ. ಇಲ್ಲಿಂದ ಕತೆ ಮತ್ತೊಂದು ದಿಕ್ಕಿಗೆ ಹೊರಳಿಕೊಳ್ಳುತ್ತದೆ.

ಆಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಶೋಕ ಮತ್ತು ಊರಿನ ಎಲ್ಲಾ ಕೆಲಸಗಳಿಗೆ ಮುಂದಾಳತ್ವ ವಹಿಸುವ ರವಿ ಅಣ್ಣ ಜೊತೆಯಾಗುತ್ತಾರೆ.

 ಚಿತ್ರದ ಮೊದಲ ಕೆಲವು ದೃಶ್ಯಗಳಲ್ಲಿ ಕುಣಿತ ಮತ್ತು ಮದುವೆ ಮನೆಯ ಗೌಜಿಗದ್ದಲಗಳು ಮತ್ತು ತಮ್ಮದೇ ಹಿರಿತನ ಎಂಬಂತೆ ಓಡಾಡುವ ಕೆಲ ಜನರ ಮಾನಸಿಕ ಸ್ಥಿತಿಯ ಅನಾವರಣದ ಜೊತೆ ಜೊತೆಗೆ ತಮ್ಮ ಕುಡಿತದ ಕಾರಣದಿಂದಾದ ಸಣ್ಣಪುಟ್ಟ ಪ್ರಮಾದಗಳನ್ನು ಮುಚ್ಚಿಕೊಳ್ಳುವ ಮನುಷ್ಯ ಸಹಜ ಸ್ವಭಾವಗಳು ನಮಗೆ ಇಲ್ಲಿ ಕಾಣಸಿಗುತ್ತವೆ.

 ಯಾವುದೇ ಮೇಕಪ್ ಖರ್ಚಿಲ್ಲದ, ಹೊರಾಂಗಣ  ಚಿತ್ತೀಕರಣವಿಲ್ಲದ, ಭರ್ಜರಿ ಸೆಟ್ಟುಗಳಿಲ್ಲದ, ಭಾರಿ ತಾರಾಗಣವಿಲ್ಲದ ಚಲನಚಿತ್ರವೊಂದು ಕೇವಲ ತನ್ನ ನೇಟಿವಿಟಿಯ ಮತ್ತು ಶುದ್ಧ ಮನರಂಜನೆಯ ಕಾರಣಕ್ಕೆ
 ಗೆಲ್ಲಬಹುದು ಎನ್ನುವುದಾದರೆ ಅದಕ್ಕೆ ಸೂ ಫ್ರಮ್ ಸೋ ಉದಾಹರಣೆಯಾಗಬಹುದು.

ಅತ್ಯುತ್ಕೃಷ್ಟ ಚಿತ್ರ ಎನ್ನದೆ ಹೋದರೂ ಕೂಡ, ರಾಜ್ ಬಿ ಶೆಟ್ಟಿಯನ್ನು ಹೊರತುಪಡಿಸಿ ಬೇರೆ ಯಾವ ನಟರ ಹೆಸರುಗಳು ಕೂಡ ಗೊತ್ತಿರದೆ ಇದ್ದರೂ ಕೂಡ ಕೇವಲ ಚಿತ್ರದ ಕಥೆಯಲ್ಲಿರುವ ಶುದ್ಧವೆಂದು ಹೇಳಬಹುದಾದ ತಮಾಷೆಯ ದೃಶ್ಯಗಳು, ಸಂಭಾಷಣೆಗಳು ನಮ್ಮ ನಿಮ್ಮ ಊರುಗಳಲ್ಲಿ ನಡೆಯಬಹುದಾದ ಘಟನೆಗಳು ಒಂದು ಚಿತ್ರಕ್ಕೆ ಸರಕಾಗಬಲ್ಲವು ಮತ್ತು ಆ ಚಿತ್ರವನ್ನು ಅತಿಯಾಗಿ ಸಾಮಾಜಿಕ ಜಾಲತಾಣಗಳ ಮೂಲಕ
ಪ್ರಚಾರ ನೀಡಿದಾಗ ಒಮ್ಮೆಯಾದರೂ ಹೋಗಿ ನೋಡಬೇಕು ಎಂಬ ಆಸೆಯನ್ನು ಮೂಡಿಸಿದರೆ ಅದು ಚಿತ್ರದ ತಪ್ಪಲ್ಲ.

 ಆದರೂ ನಟನೆ ಮತ್ತು ನಿರ್ದೇಶನವನ್ನು ಒಟ್ಟೊಟ್ಟಿಗೆ ಕೊಂಡೊಯ್ದಿರುವ ಅಶೋಕ ಪಾತ್ರಧಾರಿ ಜೆ ಪಿ ತೂಮಿನಾಡ್, ರವಿ ಅಣ್ಣನ ಪಾತ್ರಧಾರಿಯಾಗಿ ಶಮೀಲ್ ಗೌತಮ್, ಸ್ವಾಮೀಜಿಯ ಪಾತ್ರಧಾರಿಯಾಗಿ ರಾಜ್ ಬಿ ಶೆಟ್ಟಿ ಕುಡುಕ ಭಾವನ ಪಾತ್ರಧಾರಿಯಾಗಿ ಪುಷ್ಪರಾಜ್ ನಟನೆ ಚೆನ್ನಾಗಿದೆ….. ಬಂದರೋ ಬಂದರೋ ಭಾವ ಬಂದರು ಹಾಡು ಇನ್ನು ಮುಂದೆ ಮದುವೆ ಮನೆಗಳಲ್ಲಿ ಮೊಳಗಿದರೂ ಅಚ್ಚರಿಯಿಲ್ಲ.

 ಹೆಣ್ಣು ಮಕ್ಕಳು ಅನುಭವಿಸುವ ಅಂತರಾಳದ ನೋವುಗಳ ಅನಾವರಣ ಹೀಗೂ ಆಗಬಹುದು ಎಂಬುದಕ್ಕೆ ಸಾಕ್ಷಿಯಾಗಿ ಈ ಚಿತ್ರ ನಿಂತಿದೆ. ಕೆಲ ವರ್ಷಗಳ ಹಿಂದೆ ಈ ಚಿತ್ರದಲ್ಲಿ ತೋರಿಸುವಂತಹ ಘಟನೆ ನಡೆದಿದೆ ಎಂಬುದಕ್ಕೆ ಸಾಕಷ್ಟು ಪತ್ರಿಕೆಗಳ ವರದಿಗಳನ್ನು ತೋರಿದ್ದಾರೆ.

 ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಒಮ್ಮೆ ಚಿತ್ರವನ್ನು  ನೋಡಿದರೆ…. ಮುಂದೆ ಇಂಥದ್ದೇ ಸದಭಿರುಚಿಯ ಹಾಸ್ಯ ಚಿತ್ರಗಳು ಇನ್ನಷ್ಟು ತೆರೆ ಕಾಣಬಹುದು.


About The Author

1 thought on “ʼಸು ಫ್ರಮ್ ಸೋ…ʼ ಮನರಂಜನೆಯ ಆಳದಲ್ಲಿ ನೋವಿನ ಅನಾವರಣʼ ವೀಣಾ ಹೇಮಂತ್‌ ಗೌಡ ಪಾಟೀಲ್”

  1. Madam
    Veena hamanth patel
    After reading your comments, so far I haven’t s seen any movies, in theatre,
    Now I thought let me visit
    Thanks

Leave a Reply

You cannot copy content of this page

Scroll to Top