ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

This image has an empty alt attribute; its file name is 9622422b-6638-4680-a230-087d25f0e185-1024x683.jpg

ಸುಮತಿಯ ಹಿರಿಯ ಮಗಳ ಮದುವೆಯಾದ ಒಂದೆರಡು ವರ್ಷಗಳಲ್ಲಿ ಎರಡನೇ ಮಗಳ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಸುಮತಿಯ ಅಳಿಯ ಹಾಗೂ ಮಗಳು ಹೇಳಿದರು. ಇದರಿಂದ ಸುಮತಿಗೆ ಬಹಳ ಸಂತೋಷವಾಯಿತು. ಅಕ್ಕನನ್ನು ಒಂದು ಕ್ಷಣವೂ ಬಿಟ್ಟಿರದ ಮೂರನೇ ಮಗಳು ತಾನು ಅನಾಥಾಲಯದಲ್ಲಿ ಇರುವುದಿಲ್ಲ ಎಂದು ಹಠ ಮಾಡಿದಳು. ಆಗ ಸುಮತಿ ಹೇಗೂ ಇಲ್ಲಿನ ಸರ್ಕಾರಿ ಶಾಲೆಯ ವಿದ್ಯಾಭ್ಯಾಸ ಉಚಿತವಾಗಿ ದೊರೆಯುತ್ತದೆ. ಊಟಕ್ಕೆ ರೇಶನ್ ಅಕ್ಕಿ ದೊರೆಯುತ್ತದೆ. ಮನೆಯ ಹಿತ್ತಲಲ್ಲಿ ಬೆಳೆಯುವ ತರಕಾರಿ- ಸೊಪ್ಪು ,ಸಾರು-ಪಲ್ಯ ಮಾಡಲು ಸಾಕಾಗುತ್ತದೆ. ತನಗೆ ಬರುವ ಅಲ್ಪ ವರಮಾನದಲ್ಲಿ ಹೇಗೂ ಮೂವರ ಹೊಟ್ಟೆ ಹೊರೆದುಕೊಳ್ಳಬಹುದು. ಹೀಗಿರುವಾಗ ಮೂರನೆಯ ಮಗಳನ್ನು ಅನಾಥಾಲಯದಿಂದ ಮನೆಗೆ ಕರೆದುಕೊಂಡು ಬರುವುದೆಂದು ಸುಮತಿ ತೀರ್ಮಾನಿಸಿದಳು. ಇಷ್ಟು ವರ್ಷ ಮಕ್ಕಳ ಅಗಲಿಕೆಯಿಂದ ನೊಂದಿದ್ದ ಸುಮತಿಗೆ ಇದೊಂದು ಸಮಾಧಾನದ ವಿಷಯವಾಗಿತ್ತು. ಆದರೂ ಎರಡನೇ ಮಗಳು ತನ್ನ ಜೊತೆಗೆ ಇರುವುದಿಲ್ಲ ಎನ್ನುವ ಕೊರಗು ಅವಳ ಮನಸ್ಸನ್ನು ಕಾಡಿತು. ಆದರೂ ಹೈಸ್ಕೂಲ್ ಮೆಟ್ಟಲು ಏರಿದ್ದ ಅವಳ ವಿದ್ಯಾಭ್ಯಾಸದ ಹೊಣೆ ಮಗಳು ಅಳಿಯ ಹೊತ್ತಿದ್ದರಿಂದ ಮನಸ್ಸಿಗೆ ಸಮಾಧಾನವು ಇತ್ತು. ಅನಾಥಾಶ್ರಮದ ಎಲ್ಲಾ ನಿಯಮಗಳನ್ನು ಅನುಸರಿಸಿ ಅದರ ಪ್ರಕಾರ ಮಕ್ಕಳಿಬ್ಬರನ್ನು ಅಲ್ಲಿಂದ ಮನೆಗೆ ಕರೆತಂದಳು. ಅಮ್ಮನ ಪ್ರೀತಿ ವಾತ್ಸಲ್ಯ ಅಕ್ಕರೆಯನ್ನು ಹಲವು ವರ್ಷಗಳ ಕಾಲ ಪಡೆಯದ ಮಕ್ಕಳಿಗೆ ಈಗ ಅಮ್ಮನ ಮಡಿಲು ಸೇರಿದ್ದು ಸ್ವರ್ಗವೇ ಸಿಕ್ಕಷ್ಟು ಖುಷಿ ಕೊಟ್ಟಿತು. ಮಕ್ಕಳಿಬ್ಬರ ಸಂತೋಷಕ್ಕೆ ಎಣೆಯೇ ಇರಲಿಲ್ಲ. ರಜೆಯಲ್ಲಿ ಮನೆಗೆ ಬರುತ್ತಿದ್ದರೂ ಈಗ ಅಲ್ಲಿಯೇ ಇರಲು ಅಮ್ಮನ ಜೊತೆಗೆ ಮನೆಯ ಕಡೆಗೆ ಪಯಣ ಬೆಳೆಸುವಾಗ ಮೊದಲ ಬಾರಿಗೆ ಹೊರಟ ಹಾಗೆ ಮಕ್ಕಳಿಗೆ ಅನುಭವವಾಯಿತು. 

ಖುಷಿಯಿಂದ ಮಕ್ಕಳು ಮನೆಗೆ ಬಂದರು. ಅಕ್ಕಂದಿರನ್ನು ಕಂಡ ಕೊನೆಯ ಮಗಳಿಗೆ ತುಂಬಾ ಖುಷಿಯಾಯಿತು. ಇಷ್ಟು ದಿನ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಅವಳಿಗೆ ಇನ್ನು ಮೇಲೆ ಅಕ್ಕಂದಿರು ತನ್ನ ಜೊತೆಗೆ ಇರುತ್ತಾರೆ ಎನ್ನುವ ಸಂಗತಿ ತುಂಬಾ ಸಮಾಧಾನ ಕೊಟ್ಟಿತು. ಹಿರಿಯ ಮಗಳು ಮತ್ತು ಅಳಿಯ ಎರಡನೇ ಮಗಳನ್ನು ಅವರ ಜೊತೆಗೆ ಕರೆದುಕೊಂಡು ಹೋಗಲು ಬಂದರು. ರಜೆಯಾಗಿದ್ದ ಕಾರಣ ಸುಮತಿ ಮತ್ತು ಉಳಿದ ಹೆಣ್ಣು ಮಕ್ಕಳು ಕೂಡಾ ಅವರ ಜೊತೆಗೆ ಹೊರಟರು. ಸ್ವಲ್ಪ ದಿನಗಳ ಕಾಲ ಅಲ್ಲಿದ್ದು ನಂತರ ತಮ್ಮ ಊರಿಗೆ ಹಿಂತಿರುಗಿ ಬಂದರು. ಹಿರಿಯ ಮಗಳು ಮತ್ತು ಅಳಿಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎರಡನೇ ಮಗಳನ್ನು ಅಲ್ಲಿಯೇ ಹತ್ತಿರವಿದ್ದ ಹೈಸ್ಕೂಲ್ ನ ಇಂಗ್ಲಿಷ್ ಮೀಡಿಯಂ ತರಗತಿಗೆ ಸೇರಿಸಿದರು. ಸುಮತಿಯ ಮಕ್ಕಳೆಲ್ಲರೂ ಓದಿನಲ್ಲಿ ಬಹಳ ಚುರುಕಾಗಿದ್ದರು. ಎಲ್ಲ ತರಗತಿಯಲ್ಲೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದರು. ಸುಮತಿಗೆ ಇದು ಬಹಳ ನೆಮ್ಮದಿ ಕೊಟ್ಟಿದ್ದು, ಮುಂದೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂಬುದನ್ನು ಮನಗಂಡಿದ್ದಳು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನನ್ನ ವಾತ್ಸಲ್ಯ ಮಮತೆಯನ್ನು ತನ್ನಲ್ಲಿಯೇ ಹುದುಗಿಸಿಟ್ಟು ಇಷ್ಟು ದಿನಗಳು ಕಾಲ ಕಳೆದಿದ್ದಳು. ತನ್ನ ಜೊತೆ ಈಗ ಮನೆಯಲ್ಲಿ ಮಕ್ಕಳಿರುವುದರಿಂದ ಅವಳ ಮನಸ್ಸಿಗೆ ಶಾಂತಿಯು ಇತ್ತು. ಇಷ್ಟು ಕಾಲ ತನಗೆ ನೀಡಲು ಸಾಧ್ಯವಾಗದಿದ್ದ ಅಷ್ಟೂ ಪ್ರೀತಿ ವಾತ್ಸಲ್ಯವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಳು. ತನ್ನ ಕೈಲಿ ಸಾಧ್ಯವಾದಷ್ಟು ಬಗೆ ಬಗೆಯ ರುಚಿಯಾದ ತಿಂಡಿಗಳನ್ನು ಮಾಡಿ ತಿನಿಸುತ್ತಿದ್ದಳು. ಅಮ್ಮನ ಕೈ ರುಚಿಯ ಅಡುಗೆ ಉಂಡ ಮಕ್ಕಳು ಸಂತೃಪ್ತರಾಗುತ್ತಿದ್ದರು. ಈಗ ಕೊನೆಯ ಇಬ್ಬರು ಮಕ್ಕಳು ಶಾಲೆಗೆ ಒಟ್ಟಿಗೇ ಖುಷಿಯಿಂದ ಹೋಗಿ ಬರುತ್ತಿದ್ದರು. 

ಇದರ ನಡುವೆ ಹಿರಿಯ ಮಗಳು ಗರ್ಭಿಣಿ ಎನ್ನುವ ವಿಚಾರ ಸುಮತಿಗೆ ತಿಳಿಯಿತು. ತನ್ನ ಕುಟುಂಬಕ್ಕೆ ಈಗ ಮೊಮ್ಮಗು ಕೂಡ ಸೇರ್ಪಡೆಯಾಗುತ್ತಿದೆ ಎನ್ನುವ ವಿಚಾರ ತಿಳಿದು ಅತಿಯಾದ ಸಂತೋಷವೂ ಅವಳಿಗಾಯಿತು. ಮಗಳ ಬಾಣಂತನಕ್ಕೆ ಬೇಕಾದ ತನ್ನಿಂದ ಆಗುವ ಎಲ್ಲಾ ಸೌಕರ್ಯವನ್ನು ಮಾಡಿಕೊಂಡಳು. ದೊಡ್ಡ ಸಾಹುಕಾರರು ತೀರಿಕೊಂಡ ಮೇಲೆ ಕಾಫಿ ತೋಟದ ಎಲ್ಲಾ ಉಸ್ತುವಾರಿಯನ್ನು ಅವರ ಮಗ ಡಾಕ್ಟರ್ ನೋಡಿಕೊಳ್ಳುತ್ತಿದ್ದರು. ಅವರು ಕೂಡ ಅಪ್ಪನಂತೆ ಸಹೃದಯಿ. ಆದುದರಿಂದ ತೋಟದಲ್ಲಿ ಮೊದಲಿನಂತೆಯೇ ಶಾಂತಿ ಸಮಾಧಾನ ನೆಲೆಸಿತ್ತು. ಎರಡನೇ ಮಗಳು ಶಾಲೆಗೆ ಹೋಗುತ್ತಲೇ ಬಿಡುವಿನ ವೇಳೆಯಲ್ಲಿ ಅಕ್ಕನ ಆರೈಕೆ ಮಾಡುತ್ತಿದ್ದಳು. ಹಿರಿಯ ಮಗಳು ಏಳು ತಿಂಗಳು ಗರ್ಭಿಣಿ ಆಗ ಅವಳಿಗೆ ಇದ್ದಕ್ಕಿದ್ದ ಹಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಆಗ ಅವಳನ್ನು ಅಲ್ಲಿನ ಖಾಸಗಿ ಆಸ್ಪತ್ರೆ ಒಂದಕ್ಕೆ ದಾಖಲು ಮಾಡಲಾಯಿತು. ಏಳು ತಿಂಗಳಲ್ಲೇ ಅವಳು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದಳು. ಒಂದು ಗಂಡು ಮತ್ತೊಂದು ಹೆಣ್ಣು. ಹೆಣ್ಣು ಮಗು ಅಮ್ಮನಂತಿದ್ದರೆ ಗಂಡು ಮಗು ಅಪ್ಪನಂತೆ ಇತ್ತು. ಅವಧಿ ಪೂರ್ವ ವಾಗಿ ಹುಟ್ಟಿದ ಕಾರಣ ಎಳೆಯ ಕೂಸುಗಳನ್ನು ಇಂಕ್ಯೂಬೇಟರ್ ನಲ್ಲಿ ಇಡಲಾಗಿತ್ತು. ಮಕ್ಕಳು ಸ್ವಲ್ಪ ಸುಧಾರಿಸಿದ ನಂತರ ಆಸ್ಪತ್ರೆಯಿಂದ ನೇರವಾಗಿ ಸುಮತಿಯ ಮನೆಗೆ ಕರೆದುಕೊಂಡು ಹೋಗುವುದೆಂದು ತೀರ್ಮಾನವಾಯಿತು. ಆದರೆ ನಾಲ್ಕೈದು ದಿನಗಳ ಒಳಗಾಗಿ ಗಂಡು ಮಗು ಅಸು ನೀಗಿತು. ಹೆಣ್ಣು ಮಗು ಬದುಕುಳಿಯಿತು. 15 ದಿನಗಳು ಕಳೆಯಿತು ಮಗು ಆರೋಗ್ಯ ಪೂರ್ಣವಾಗಿತ್ತು ಹಾಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆತರಬೇಕು ಎಂದು ತೀರ್ಮಾನಿಸಿದ ಕೆಲವೇ ಕ್ಷಣಗಳಲ್ಲಿ ಆ ಹೆಣ್ಣು ಮಗುವೂ ಅಸು ನೀಗಿತು. ಈ ಸುದ್ದಿಯು ಕುಟುಂಬದ ಎಲ್ಲರಿಗೂ ಆಘಾತ ನೀಡಿತು. ಸುಮತಿಯ ಮಗಳು ಮತ್ತು ಅಳಿಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಚಿಂತಾಮಗ್ನರಾದರು.  

ಮಗಳು ಮತ್ತು ಅಳಿಯನ ಸ್ಥಿತಿ ಕಂಡು ಸುಮತಿಗೆ ಕರುಳು ಹಿಂಡಿದಂತೆ ಆಗುತ್ತಿತ್ತು. ಇದಕ್ಕೂ ಮೊದಲು ಒಂದೆರಡು ಬಾರಿ ಅವಳ ಹಿರಿಯ ಮಗಳು ಗರ್ಭಿಣಿ ಆಗಿದ್ದರು ಕೂಡ ಮೂರು ತಿಂಗಳಲ್ಲೇ ಗರ್ಭಪಾತವಾಗಿತ್ತು. ಈ ಬಾರಿಯಾದರೂ ಮಗು ಉಳಿಯುವುದೆಂಬ ಆಶಯದಲ್ಲಿ ದಂಪತಿಗಳು ಸಂತೋಷಪಟ್ಟಿದ್ದರು. ಅವಳಿ ಜವಳಿ ಮಕ್ಕಳು ಎಂದು ತಿಳಿದಾಗ ಬಹಳ ಖುಷಿಯಲ್ಲಿ ಇದ್ದರು. ದೇವರು ತಮಗೆ ತಾವು ಬಯಸಿದಂತೆ ಗಂಡು ಹೆಣ್ಣು ಎರಡೂ ಸಂತಾನಗಳನ್ನು ಒಟ್ಟಿಗೇ ಕೊಟ್ಟಿದ್ದಾನೆ ಎಂದು ಸುಮತಿಯ ಹಿರಿಯ ಮಗಳು ಹಿರಿ ಹಿರಿ ಹಿಗ್ಗಿದ್ದಳು. ಅಮ್ಮ ಮಕ್ಕಳ ನಡುವೆ ಸದಾ ಪತ್ರ ವ್ಯವಹಾರ ಇರುತ್ತಿತ್ತು. ಹಾಗಾಗಿ ಮಗಳ ಪರಿಸ್ಥಿತಿಯನ್ನು ತಿಳಿದು ಸುಮತಿ ಬಹಳ ನೊಂದುಕೊಂಡಳು. ಮಗಳನ್ನು ಸಮಾಧಾನ ಪಡಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಅವಳ ಜೊತೆಗೆ ಅವಳ ತಂಗಿ ಇರುವುದೇ ಸುಮತಿಗೆ ಸಮಾಧಾನದ ಸಂಗತಿಯಾಗಿತ್ತು. ಅಳಿಯ ಮತ್ತು ಮಗಳು ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಂಡರು. ಕೊನೆಗೆ ಒಬ್ಬ ಒಳ್ಳೆಯ ಲೇಡಿ ಡಾಕ್ಟರ್ ದೊರೆತರು. ಅವರ ಸಲಹೆಯನ್ನು ಅನುಸರಿಸಿದರು. ಅವರ ಸಲಹೆಯಂತೆ ಚಿಕಿತ್ಸೆಯನ್ನು ಪಡೆದರು. ಈ ಎಲ್ಲಾ ಸಂದರ್ಭದಲ್ಲೂ ತನ್ನ ಎರಡನೇ ಮಗಳು ಹಿರಿಯ ಮಗಳ ಜೊತೆ ಇರುವುದು ಸುಮತಿಗೆ ಒಂದು ಸಮಾಧಾನಕರ ಸಂಗತಿ. ಏಕೆಂದರೆ ಇಲ್ಲಿ ಶಾಲೆಗೆ ರಜಾ ಇರುತ್ತಿದ್ದು ಕಾಫಿ ಕೊಯ್ಲಿನ ನಂತರ ತೋಟದ ಕೆಲಸಗಾರರಿಗೆ ಬೇಸಿಗೆಯಲ್ಲಿ ಸಿಗುವ ರಜಾ ಅವಧಿಯಲ್ಲಿ ಮಾತ್ರ. ಹಾಗಾಗಿ ದೂರದ ಊರಿನಲ್ಲಿ ಇರುವ ಮಗಳ ಆರೈಕೆಯನ್ನು ಮಾಡಲು ಸುಮತಿಗೆ ಸಾಧ್ಯವಾಗುತ್ತಿರಲಿಲ್ಲ.

ಕೆಲವೊಮ್ಮೆ ತನ್ನ ಪರಿಸ್ಥಿತಿಯನ್ನು ನೆನೆದು ಬಹಳ ನೊಂದುಕೊಳ್ಳುತ್ತಿದ್ದಳು ಆದರೂ ಇಷ್ಟಾದರೂ ಜೀವನದಲ್ಲಿ ಸಂತಸವಿದೆಯಲ್ಲ ಎಂದು ಸಮಾಧಾನ ಪಡುತ್ತಿದ್ದಳು. ಇದರ ನಡುವೆ ಕೆಲವೊಮ್ಮೆ ಸುಮತಿಯ ಆರೋಗ್ಯವು ಆಗಾಗ ತೀರಾ ಹದಗೆಡುತ್ತಿತ್ತು. 


About The Author

Leave a Reply

You cannot copy content of this page

Scroll to Top