ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅತ್ಯಂತ ಸಾಮಾನ್ಯ,
ಪರಿಚಿತವಾದ ಪೇಪರ್ ಚೀಲ—
ಸರಳತೆಗೆ ಮೂರ್ತಿಯೇನಿಸಿಕೊಂಡು,
ಎಲ್ಲರ ಹಿತಕೆಲಸದ ಆಸೆಯಿಟ್ಟಿತು.

ಮರದ ಮಡಿಲಲ್ಲಿ ಹುಟ್ಟಿದದು,
ಅಡವಿಯ ತಾಯಿತನದಲ್ಲಿ ಬೆಳೆದದು.
ಗಾಳಿಯ ತೂಗಾಟದಲ್ಲಿ ನಲಿದದ್ದು,
ಜಗದ ಜೊತೆಗೇ ಓಡಿದದ್ದು.

ಬಡವ ಕುಟುಂಬದ ಗುಡಿಸಲಲ್ಲಿ
ರದ್ದಿ ಪತ್ರಿಕೆಯಿಂದ ಮಡಚಲ್ಪಟ್ಟಿದ್ದು.
ಚಿಕ್ಕ ಅಂಗಡಿಯ ಖರೀದಿಗಳಿಗೆ
ದಿನದೊಳಗಿನ ನೆರವಾಗಿದ್ದು.

ಬಜಾರ್ ತಿರುವಿನ ಚಪ್ಪರದ ಕೆಳಗೆ
ಸಾಮಾನು ಸಾಗಣೆಗೆ ಸಹಜ ಸಂಗಾತಿ.
ಪಾರಿಪಾರಿ ಹಳೆಯ ಪುಟಗಳನ್ನೇ
ಹೊಸ ಶಕ್ತಿ ತುಂಬಿ ಹೆಜ್ಜೆಹೆಜ್ಜೆ ಸಾಗಿದ್ದು.

ಬಂಡಿಯ ಬದಿ ಬಜ್ಜಿ ಹಂಚಿದಾಗ
ಮೆಣಸಿನ ಸವಿಯ ರುಚಿಯ ತಾದಾತ್ಮ್ಯ.
ಎಣ್ಣೆ ಚುಕ್ಕೆ ತಗುಲಿ ಎಲ್ಲಿ ಬಿಟ್ಟರೂ
ಒರಟಾದ ಪೆಟ್ಟಿಗೆ ಬದಲಾಗಿ ಆಸೆಯ ಪಾತ್ರವಾಯಿತು.

ಬಡವ–ಶ್ರೀಮಂತರ ವ್ಯತ್ಯಾಸವಿಲ್ಲದೆ
ಒಡನೆ ಹೆಜ್ಜೆ ಹಾಕಿದದು.
ಮುಜುಗರವಿಲ್ಲದ ಗೆಳತಿಯಂತೆ
ದಿನನಿತ್ಯದ ಬಳಕೆಗೆ ಹಿತವಾಯಿತು.

ಮಿಠಾಯಿ ಅಂಗಡಿಯ ಮುಂಭಾಗದಲ್ಲಿ
ಸಿಹಿಯ ಉಡುಗೊರೆ ಹೊತ್ತು ನಿಂತದ್ದು.
ಮೇಣದ ಲೇಪನದ ಮೃದುವಿನಲ್ಲಿ
ಬಾಯಿ ತೆರೆದು ಆನಂದವನ್ನರಿತದ್ದು.

ವಜ್ರದ ಅಂಗಡಿಯಲ್ಲಿ
ಬೆಲೆ ಕಟ್ಟಲಾಗದ ಹಾರವನ್ನು
ದಪ್ಪ ಗುಣಮಟ್ಟದ ಮೈಮೇಲಿಟ್ಟಿ
ಸುರಕ್ಷಿತವಾಗಿ ಮುಚ್ಚಿದದು.

ಮಹಾ ಭವನದ ಸಂಭ್ರಮದಲ್ಲಿ
ಹುಟ್ಟುಹಬ್ಬದ ಉಡುಗೊರೆಗಳ ಪೊಟ್ಟಣ.
ಪಾಪುಗೆ ಸ್ವಪ್ನ ಲೋಕಗಳನ್ನು
ಒಂದೊಂದಾಗಿ ತೆರೆದ ಸುಂದರ ಬಾಗಿಲು.

ಸೀಮಂತ, ಮದುವೆಗಳ ಮಧುರ ಕ್ಷಣದಲ್ಲಿ
ತಾಂಬೂಲ, ಬಾಳೆಹಣ್ಣುಗಳ ಭಾರವಿತ್ತು.
ಅರಿಶಿನದ ಸುವಾಸನೆ ಜೊತೆಗೆ
ಪರಂಪರೆಯ ಪಥವನ್ನೇ ನಡೆಯಿತು.

ಹಸ್ತಕಲೆಗಳ ನೈಪುಣ್ಯದಿಂದ
ವಿವಿಧ ರೂಪಗಳಲ್ಲೇ ಮೂಡಿತು.
ಪಂಡಿತ ಸಭೆಗಳ ಉದ್ದೇಶದಲ್ಲಿ
ಸ್ಮರಣಿಕೆಗೆ ಬೆರಗಿನ ಬಟ್ಟಲು ಆಯಿತು.

ಅಳತೆಯಿಲ್ಲದ ಭಾರಗಳನ್ನೂ
ಸುಲಭವಾಗಿ ಹೊತ್ತಿತು.
ಗೌರವದ ಸೂಕ್ಷ್ಮತೆಯೊಳಗೆ
ಸಾಧನೆಯ ಸಂಕೇತವಾಯಿತು.

ರೂಪವಿರುವವರೆಗೆ
ಇರುವೆನೆಂಬ ನಂಬಿಕೆಯೊಂದಿಗೆ
ಬೇಸತ್ತು ಬಿಸಾಕಿದರೂ ಸಹ
ಮಣ್ಣಿನಲ್ಲಿ ಅರಳಿ ಮರಳುವುದು ಎಂಬ ಆಶಯವಿತ್ತು.
ನೆಲತಾಯಿಯ ಋಣ ತೀರಿಸದಿದ್ದರೂ
ಹಸಿರಿಗೆ ಹಾದಿಯಾದ ಪಾಠವಿತ್ತು.


About The Author

Leave a Reply

You cannot copy content of this page

Scroll to Top