ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಗುಮ್ಮನೆಂಬುವನು” ಎಲ್ಲಿ ಅವಿತು ಕುಂತಿರುವನು?ಪುಟ್ಟ ಕಂದಮ್ಮನಿಗೆ ಇವನೊಬ್ಬ ಭಯಾನಕ ಸ್ವರೂಪಿ‌.ಅಳುವಿನ ನಡುವೆ ತುತ್ತು ನುಂಗುವ ಪರಿಸ್ಥಿತಿ. ಎಷ್ಟೋ ಮಕ್ಕಳಿಗೆ ಊಟ ಮಾಡಿಸಲು ಹರಸಾಹಸ ಪಡುವ ತಾಯಂದಿರಿಗೆ ಇದೊಂದು ‌ಅಸ್ತ್ರವೆಂದರೆ ವಿಶೇಷವೆನಲ್ಲ.ವಾಟ್ಸಪ್‌ ನಲ್ಲಿ ಹರಿದಾಡುತ್ತಿದ್ದ ವಿಡಿಯೋ ಒಂದು ನೆನಪಾಗುತ್ತೆ..ಅದು ಪ್ರಾಣೇಶರವರ ನಗೆ ಹಬ್ಬದಲ್ಲಿ.ಒಬ್ಬ ತಾಯಿ ತನ್ನ ಮಗುವಿಗೆ ಊಟ ಮಾಡಿಸುವ ಸಮಯ,ಮಗು ಅಮ್ಮನ ಊಟದ ಬಟ್ಟಲು ಕಂಡಿದ್ದೆ ಓಡುತ್ತಿರುತ್ತದೆ, ಆದರೆ ಮಗುವಿನ ತಾಯಿ ಮಗುವನ್ನು ರಮಿಸುತ್ತ,ಮುದ್ದು ಮಾಡುತ್ತ ಉಣಿಸತ್ತ ಸಾಗುತ್ತಿರುತ್ತಾಳೆ,ಅವಳಿಗೆ ತನ್ನೂರು ದಾಟಿ ಬಂದಿದ್ದು ಗೊತ್ತಾಗುವುದಿಲ್ಲ…ಊರಿನ ಜನ ಈ ತಾಯಿಗೆ ಹಿಂಗ್ಯಾಕೆ ಬರತಿದ್ದಿಯವ್ವಾ ಅಂದಾಗ ಮಗುವಿಗೆ ಊಣಿಸಲು ಅಂದಿದ್ದೆ ಅಲ್ಲಿಯವರು…ನಿಮ್ಮೂರು ದಾಟಿ ಬಾಳ ಮುಂದ ಬಂದಿಯವ್ವ ಮಗು ಕರಕೊಂಡು ಊರ ಸೇರು ಅಂತ ಹೇಳುವಾಗ…ತಾಯಿಗೆ ಆಶ್ಚರ್ಯ ಆಗುತ್ತದೆ.ಅವಳ ದೃಷ್ಟಿ ಮನಸ್ಸು ಕೇವಲ ಮಗುವಾಗಿತ್ತು. ಇಂತಹ ಮುಗ್ದ ತಾಯಂದಿರು ನಮ್ಮ ಮುಂದೆ ಈಗಲೂ ಇದ್ದಾರೆ…ಆದರೆ ವ್ಯವಸ್ಥೆ ಬದಲಾಗಿದೆ,ಊರು ದಾಟುವುದಿರಲಿ, ಮನೆಯ ಹೊಸ್ತಿಲು ದಾಟವುದು ಕಡಿಮೆಯೆಂದರೆ ಆಶ್ಚರ್ಯವಾಗಬಹುದು.

ನನ್ನ ಮಗಳಿಗೆ ಚಂದಾಮಾಮ ತೋರಿಸಿ ಊಣಿಸಿದ ನೆನಪು…ಪಾಪ ಆ ಮಕ್ಕಳು ಎಷ್ಟು ಮುಗ್ದರು…ಖುಷಿಯಾಗಿ ಇದ್ದ ಗಳಿಗೆ.ಸ್ವಲ್ಪ ದೊಡ್ಡವಳಾದ ಮೇಲೆ ಅಂದರೆ ಕೈಕಾಲುಗಳು ಕಟ್ಟಿಹಾಕುವಂತಹ ಗಳಿಗೆ ಕಾರಣ,ಅವಳಿಗೆ ಕಂಟ್ರೋಲ್ ಮಾಡುವುದೇ ದೊಡ್ಡ ಕಷ್ಟದ ಕೆಲಸ. ಮನೆಯ ಸುತ್ತ ತಿರುಗುವುದು ದೈಹಿಕ ವ್ಯಾಯಾಮ ಆದರೂ,ಮಗಳಿಗೆ ಉಣಿಸಿದ ಮೇಲೆ ತಾನೆ ನಮ್ಮ ಗಂಟಲಿಗೆ ಅನ್ನ ಇಳಿಯುವುದು.ಇಂತಹ ಘಟನೆಗಳು ಪ್ರತಿಯೊಬ್ಬ ತಾಯಿ ಅನುಭವಿಸಿಯೇ ಇರುತ್ತಾಳೆ.ಆದರೆ ಈಗಿನ ತಾಯಂದಿರಿಗೆ ಇಂತಹ ಕಷ್ಟದ ಕೆಲಸ ಕಡಿಮೆ, ಯಾಕೆಂದರೆ “ಮೊಬೈಲ್ ” ಕೈಗಿತ್ತು ಮಗುವಿನ ಬಾಯಿಗೆ ತುತ್ತು ತುರುಕುವ ಕೆಲಸವೆ ಹೆಚ್ಚಿನದಾಗಿದೆ. ಮಗುವಿಗೆ ರುಚಿ, ಸ್ವಾದದ ನೆನಪು ಬೇಕಿಲ್ಲ, ಮನರಂಜನೆಯ ಮೊಬೈಲ್ ಸಾಕು ಎನಿಸಿ ಬಿಟ್ಟಿದೆ.ನಾವುಗಳು ತುಂಬಾ ಬಿಜಿ!. ಮಕ್ಕಳು ನಮ್ಮ ಕೈ ಬಿಟ್ಟು ಆಡಿದರೆ ಸಾಕು!. ನಮ್ಮ ಕೆಲಸಗಳಿಗೆ ಮಕ್ಕಳಿಂದ ತೊಂದರೆಯಾಗಬಾರದು,ಅವರನ್ನು ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಆಟಕ್ಕೂ ಬಿಡದೆ,ಕಟ್ಟಿ ಹಾಕುವ ಮೂಲಕ ಮಕ್ಕಳ ಮಾನಸಿಕ ಆರೋಗ್ಯ ಹದಗೆಟ್ಟಿದೆಯೆಂದರೆ ಅದಕ್ಕೆ ಪರೋಕ್ಷವಾಗಿ ಪಾಲಕರು  ನೇರವಾಗಿ ಕಾರಣ!. ನಮ್ಮ ಮಗುವಿನ ಭವಿಷ್ಯ ರಚಿಸುವ ಉದ್ದೇಶವನ್ನು ಹೊತ್ತಿರುವುದು ಸ್ವಾಗತಾರ್ಹ ಆದರೆ,ಮಗುವಿನ ಸ್ವಾತಂತ್ರ್ಯ ಕಸಿದುಕೊಂಡು,ಮಗುವನ್ನು ನಮ್ಮ ರಿಮೋಟ್ ಕಂಟ್ರೋಲ್ ತರ ಬಳಸಿದರೆ ಏನು ತಾನೆ ಸಾಧನೆ?.. ಅದರೊಳಗೆ ಸಾತ್ವಿಕ,ತಾತ್ವಿಕ ಸಿದ್ದಾಂತಗಳು ಚಿಂತನೆಗೆ ಅವಕಾಶ ಕಲ್ಪಿಸುವುದು ಯಾವಾಗ? ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು ಎಂಬ ಮಾತು ಮಾತಾಗಿಯೇ ಉಳಿದರೆ ಏನು ಲಾಭ?.

“ಮಕ್ಕಳಿರಲವ್ವ ಮನೆತುಂಬ” ಎಂಬ ಮಾತು ಹಿಂದಿನ ಕಾಲಕ್ಕೆ ಅನ್ವಯ. ಈಗೆಲ್ಲ,ಒಂದು ತಪ್ಪಿದರೆ ಎರಡು ಮಕ್ಕಳ ಹೊರತು ಮತ್ತೇನಿಲ್ಲ.ಜಗತ್ತು ಮಕ್ಕಳಿರದ ಅದೆಷ್ಟೋ ದಂಪತಿಗಳಿಂದ ಕೂಡಿದೆ. ಮಕ್ಕಳಿಗೆ ಮೌಲ್ಯಗಳ ಚಿಂತನೆಯನ್ನು ಬಿತ್ತುತ್ತಿರುವುದು ಸಕಾಲವಾದರೂ,ಪ್ರಾಯೋಗಿಕವಾಗಿ ಬಳಕೆಯತ್ತ ಸಾಗದಂತೆ ಅಡೆತಡೆಗಳ ಗೋಡೆಯನ್ನು ಹೊಂದಿರುವ ಸಮಾಜದಲ್ಲಿ ಮಕ್ಕಳು, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸುವ, ಮಂಡಿಸುವ ಎದೆಗಾರಿಕೆಗೆ ಎಲ್ಲರೂ ಸ್ಪಂದಿಸುವ ಮತ್ತು ಪುನಃ ಅದು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಸಮಾಜದ ಭಾಗ ನಾವು.

ಏನೂ ಅರಿಯದ ಮಗು ಮುಂದೊಂದು ದಿನ ಸಮಾಜ‌ಘಾತುಕನಾಗಿ ಬೆಳೆದರೆ ಹೆತ್ತತಾಯಿಯ ಒಡಲು ಸಹಿಸುವುದೇ? ತಾಯಂದಿರ ಪಾತ್ರ ಈಗ ಬದಲಾಗಿದೆ,ಮಗು ಮಗುವಾಗಿ ಉಳಿಯಲು ಬಿಡದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಬೆಳೆಯುತ್ತಿದ್ದೆವೆ.ಮಗು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗದೆ ಎಡುವುತ್ತಿರುವುದು, ಸ್ವಾರ್ಥದ ಬೆನ್ನು ಹತ್ತಿ ತನ್ನ ಮೌಲ್ಯಗಳನ್ನು ಮೌನವಾಗಿರುವಂತೆ ಮಾಡಿರುವುದು ನಾವುಗಳು.ವೃದ್ಧ ದಂಪತಿಗಳು ಮಕ್ಕಳನ್ನು ಅಗಲಿ ಬದುಕುವ ಸ್ಥಿತಿ ಮತ್ತು ವೃದ್ದಾಶ್ರಮಗಳು ಹುಟ್ಟುತ್ತಿರುವುದು ಸಮಾಜದ  ಕುಟುಂಬ ವ್ಯವಸ್ಥೆಯನ್ನು ನೆಲಸಮಗೊಳಿಸಿದ್ದರ ಪರಿಣಾಮವೆಂದರೆ ತಪ್ಪಾಗದು.

ಒಟ್ಟಾರೆಯಾಗಿ ಹೇಳುವುದಾದರೆ, ತಾಯಿ ಮಗುವಿನ ಪಾತ್ರಗಳು ದೈವ ನಿರ್ಮಿತ. ಕರುಳ ಸಂಬಂಧ. ಹೆತ್ತವರಿಗೆ ಹೆಗ್ಗಣ ಮುದ್ದು…ಮಗುವಿನ ಬಣ್ಣ ಮುಖ್ಯವಲ್ಲ. ಅದರ ಮುಗ್ದತೆ ಬಹುಮುಖ್ಯ.ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು,ಸ್ವಾರ್ಥ,ನಿಸ್ವಾರ್ಥದ ವ್ಯತ್ಯಾಸ ತಿಳಿದು..ಬೆಳೆದರೆ ಸೂಕ್ತ. ಬಾಲ್ಯದ ತುಂಟಾಟಗಳನ್ನು ಮೆಲುಕು ಹಾಕುವ ಅದೆಷ್ಟೋ ತಾಯಂದಿರು,ತನ್ನ ಮಗ,ಮಗಳು ಬೆಳೆದ ರೀತಿ ನೆನೆದು ಕಣ್ಣೀರು ಹಾಕುವ ಸಮಯ ತಂದೆ ತಾಯಿಗೆ ಬರದಂತೆ ಕಾಪಾಡುವ ಮಕ್ಕಳು ಪ್ರತಿ ಮನೆಯಲ್ಲಿ ಹುಟ್ಟಲೆಂಬ‌ ಆಶಯ.ವಯಸ್ಸಾದವರು ವೃದ್ಧಾಶ್ರಮಗಳನ್ನು ಸೇರದಂತೆ,ಬಾಲ್ಯದ ನೆನಪುಗಳನ್ನು ಬೆಸೆವ ಕೆಲಸ ಯುವ ಪೀಳಿಗೆಯಿಂದ ಇನ್ನೂ ಗಟ್ಟಿಯಾಗಲಿ ಎಂಬ ಮಾತೆ ಬಹುಮುಖ್ಯ.


ಶಿವಲೀಲಾ ಶಂಕರ್

About The Author

Leave a Reply

You cannot copy content of this page

Scroll to Top