ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಲ್ಯದ
ಬಾಲು ಬ್ಯಾಟಿನಾಟ
ಈಗಲೂ ಕಣ್ ಮುಂದೆ
ಬಂದು ಹೋಗುತ್ತದೆ
ಕಾಲವು ಮುಂದೆ ಹೋಗುತ್ತಿದ್ದರೂ

ಸಮ ವಯಸ್ಸಿನ
ಸ್ನೇಹಿತರು ಕೂಡಿಟ್ಟ
ಕಾಸು ಸಮನಾಗಿ ಕೂಡಿಸಿ ತಂದ ಎಮ್ಮಾರೈ ಬಾಲು
ಬಡಿಗ ಕೆತ್ತಿಕೊಟ್ಟ ಬ್ಯಾಟು
ಅಟ್ಟದ ಮೇಲಿದ್ದ
ಪಿಳಗುಂಟೆಯ ಬ್ಯಾಕೋಲಿನ ಆಕಾರದ
ಮೂರು ಸ್ಟಂಪ್ಗಳು ಸಕತ್ತಿದ್ದವು
ವಿಕೆಟ್ ಕೀಪರ್ ನ ಮುಂದೆ
ಬ್ಯಾಟ್ಸ್ಮನ್ ನ ಹಿಂದೆ

ಪಿಚ್ ತಯಾರಿಸಲು
ಬಿತ್ತಿ ಬೆಳೆಯದ ಮಡೆ ಹೊಲಕ್ಕೆ
ನಾಕು ಗೇನಿನ ದಿಂಡಿನ ಕುಂಟಿ ಹಾಕಿ
ಹರಗಿ ಹಸ ಮಾಡಿ
ಹೊಸ ಗ್ರೌಂಡ್ ಹುಟ್ಟು ಹಾಕಿದ್ದೊಂದು ಇತಿಹಾಸದ
ಪುಟದಲ್ಲಿ ಬರೆದದ್ದು ನೆನಪಷ್ಟೇ

ಈಗದು ಊರ
ಹೊಸ ಮನೆಗಳು ಬೆಳೆದು ನಿಂತ
ಬೆಲೆಯುಳ್ಳ ಸೈಟುಗಳ ಬಡಾವಣೆ

ಸ್ಕ್ರಿಜ್ಗೆರೆ ಹಾಕಲು
ಪಾದಗಳ ಇತ್ತು ಅಳೆದ
ಅಳತೆ ಅಬ್ಬಬ್ಬಾ ಎಂದಿಗೂ ವ್ಯತ್ಯಾಸವಾಗದಂತಾದ್ದು

ಸ್ಕೂಲು ಬಿಟ್ಟಾಗ
ಒಬ್ಬರೊನ್ನೊಬ್ಬರು ಹಿಡಿದು ಗೇಟು ದಾಟದೆ
ಮೇಯ್ದ ಹಸು ಸಂಜೆಗೆ
ಕರುವಿನ ಬಳಿ ಓಡೋಡಿ ಬರುವಂತೆ
ಎಲ್ಲರೂ ಜೊತೆಯಾಗಿದ್ದು
ಮರುಕಳಿಸಿದ ಸಂತಸದ ಕ್ಷಣಗಳು

ನೆಲದ ಮೇಲಿನ ನೆರಳಿಗೆ
ಬೆರಳು ಕಾಣದಂತೆ
ನಡು ಬಗ್ಗಿಸಿ ನಿಲ್ಲಿಸಿದ ದೋಸ್ತನ
ಕುಂಡಿಯ ಹಿಂದಿಡಿದು ಹಾಕಿದ ನಂಬರ್
ಅಬ್ಬಾ ಅದೇ ಲಕ್ಕಿ ಡ್ರಾಫಲಿತಾಂಶ

ಒಮ್ಮೊಮ್ಮೆ ಬ್ಯಾಟು ನೆಲಕಿಟ್ಟು
ಕಾಣದಂತೆ ಬಾಗಿಸಿ
ನೆಲದ ಮೇಲೆ ಬೆರಳಿಂದ ಅಂಕಿ ಹಾಕಿ
ಬ್ಯಾಟ್ ಮಾಡಿಸಿದ
ಬಾಲ್ಯದ ಬೆಲ್ಲದಂತ ನೆನಪು
ಎಂದಿಗೂ ಹಾಗೆಯೇ ನೆನಪಿನಂಗಳದಲ್ಲಿ

ಬೆಟ್ಟಿಂಗ್ ಇತ್ತು ಈಗಿನಂತಿರಲಿಲ್ಲ
ಚಾ,ಖಾರಾ,ಮಿರ್ಚಿ, ಮಂಡಕ್ಕಿ ಒಗ್ಗರಣೆ
ಈಗೆಲ್ಲ ಲಕ್ಷ ಲಕ್ಷ

ಊರೂರು ಸುತ್ತಿ ಪಂದ್ಯಾವಳಿ ಆಡಿ ಬಂದರೆ
ಐನೂರ ಒಂದು ರುಪಾಯಿ
ಮೇಲೊಂದು ಶಿಲ್ಡ್
ಮ್ಯಾನ್ ಆಫ್ ದಿ ಮ್ಯಾಚ್ ಸಿರಿಜ್
ಎಲ್ಲವೂ ಹನ್ನೊಂದು ಹನ್ನೊಂದು
ಮತ್ತೊಂದು ಶೀಲ್ಡ್

ಅಪ್ಪನ ಸಿಟ್ಟಿಗೆ ಅವ್ವನ ಪ್ರೀತಿಗೆ
ಆಟದ ನೆನಪಿಗೆ ಮೈಮೇಲೆ ಬಾಸುಂಡೆಗಳ ಕೂಟ
—————————————-

About The Author

1 thought on “ಹನಮಂತ ಸೋಮನಕಟ್ಟಿ ಅವರ ಕವಿತೆ-‘ಬಾಲ್ಯದ ಆಟ ಮೇಲೆ ಬಾಸುಂಡೆ ಕೂಟ’”

Leave a Reply

You cannot copy content of this page

Scroll to Top