ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಹಾ!! ಸುಂದರ ಸೋಜಿಗ ದೈವ ಸೃಷ್ಟಿ ಈ ಪ್ರಕೃತಿ. ಚರಾಚರ ಜೀವ ಜಂತುಗಳ ಉಸಿರು, ಮೂಲಾಧಾರ ಬದುಕು ಈ ನಿಸರ್ಗ. ತನ್ನೊಡಲ ಮಕ್ಕಳ ಮೇಲೆಯೇ ತನ್ನ ಪ್ರತೀಕಾರಎಂದರೆ ಇದು ನಿಜಕ್ಕೂ ಪ್ರಕೃತಿಯ ಮಾತೆಯ ದಯನೀಯ ಸ್ಥಿತಿ ಎನ್ನಬಹುದೇನೋ. ಇಂದು ನಾವು ಕಾಣುತ್ತಿರೋ ಈ ವಿಕೋಪ, ನೈಸರ್ಗಿಕ ಅಸಮತೋಲನ ಇದು  ನಮ್ಮಗಳ ಅವಿವೇಕದ ಕಾರ್ಯಕ್ಕೆ ಪ್ರಕೃತಿ ನಮಗೀಯುತ್ತಿರುವ ಶಿಕ್ಷೆಯೋ, ನಮ್ಮ ಪರಿವರ್ತನೆಗಾಗಿ ಕಲಿಸುತ್ತೀರೋ ಪಾಠದ ಪರಿಯೋ ಅರಿಯಲಾಗುತ್ತಿಲ್ಲ.
       ಮಾನವ ಎಲ್ಲಾ ಪ್ರಾಣಿಗಳಲ್ಲೂ ಬುದ್ಧಿವಂತ ಪ್ರಾಣಿ, ಜೀವಿ ಎನಿಸಿಕೊಂಡಿರುವ. ಆದರೆ ವಿಪರ್ಯಾಸ ಏನೆಂದರೆ ಅವನ ಈ ಅತಿಯಾದ ಬುದ್ಧಿವಂತಿಕೆಯೇ ಎಲ್ಲಾ ಅನಾಹುತಕ್ಕೆ ಎಡೆಮಾಡಿಕೊಟ್ಟಿರುವುದು.
       ನಿಜ, ನಮ್ಮ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಎಲ್ಲದರಲ್ಲೂ ಮಾನವನ ಕೊಡುಗೆ ಅಪಾರ. ಹಳ್ಳಿಗಳೂ ನಗರಗಳಾಗಿವೆ, ಕೃಷಿ, ತಂತ್ರಜ್ಞಾನ, ವೈದ್ಯಕೀಯ ಎಲ್ಲಾ ಕ್ಷೇತ್ರದಲ್ಲಿಯೂ ಗಣನೀಯ ಪ್ರಗತಿ ಸಾಧಿಸುತ್ತಿದೆ. ಹತ್ತು ಜನ ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡುವಂತಾಗಿದೆ. ಇದೆಲ್ಲವೂ ಮಾನವನ ಶ್ರಮ ಪ್ರಗತಿಗೆ ಪೂರಕವೇ ಒಂದು ಬಗೆಯಾಗಿ ಯೋಚಿಸಿದರೆ. ಉರುವಲಿಂದ ಬೆಂಕಿ ಹಿಡಿಸುತ್ತಿದ್ದ ಹಳ್ಳಿಗಳಲ್ಲಿ ಗ್ಯಾಸ್, ಇಂಧನ ಬಂದಿದೆ. ನವ ನವೀನ ಕೃಷಿ ಉಪಕರಣಗಳು ಚಾಲ್ತಿಯಲ್ಲಿವೆ ಮಾನವ ತನ್ನ ಅಗಾಧ ಬುದ್ಧಿಶಕ್ತಿಯಿಂದ ಎಲ್ಲವನ್ನೂ ತನಗೆ ಬೇಕಾದಂತೆ ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾನೆ, ಚಂದ್ರಯಾನದಂತಹ ಸಾಹಸವನ್ನೇ ಕೈಗೆತ್ತಿ ಕೊಂಡಿದ್ದಾನೆ. ವೈ ದ್ಯಲೋಕವಂತೂ ಊಹೆಗೂ ಮೀರಿ ದಿನೇ ದಿನೇ ಬೆಳವಣಿಗೆಯತ್ತ ಸಾಗುತ್ತಿದೆ. ಹಿಂದೆ ಹರಪ್ಪ ನಾಗರೀಕತೆಯ ಕಾಲದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಆಗಿನ ಒಂದಿಷ್ಟು ಜನಾಂಗವೇ ನಶಿಸಿ ಹೋಗಿರುವ ಚರಿತ್ರೆ ನಾವು ಓದುತ್ತೇವೆ ಅದನ್ನೆಲ್ಲವನ್ನು ಗಮನಿಸಿದಾಗ ಈಗ ನಾವು ಎಷ್ಟೋ ವಿಧದಲ್ಲಿ ಸುರಕ್ಷತೆಯನ್ನು ಕಂದುಕೊಂಡಿದ್ದೇವೆ ಎಂಬುದನ್ನು ಅಲ್ಲಗಳೆಯಲಾ ಗದು.
    ಇದೇನೇ ಇದ್ದರೂ ನಾವುಗಳು ಈ ಅಭಿವೃದ್ಧಿಯ ಗುಂಗಿನಲ್ಲಿ ಅವಿವೇಕಿಗಳಾಗುತ್ತಿರುವುದು ಶೋಚನೀಯ. ಏಕೆಂದರೆ ಒಂದು ಕೆಲಸ ಮಾಡುವುದರಿಂದ ಅದರಿಂದಾಗುವ ಅನುಕೂಲ ಅನಾನುಕೂಲ ಎರಡನ್ನು ಪರಾಮರ್ಶಿಸಿ ಅದ ಕೈಗೆತ್ತಿಕೊಳ್ಳಬೇಕು. ಅಂತಹ ತಾಳ್ಮೆ ಇರಬೇಕು. ನಾವು ಮಾಡುವ ಕಾರ್ಯದಿಂದ ಮನುಕುಲಕ್ಕೆ ಬಂದೊದಗುವ ಸಮಸ್ಯೆಗಳ ಕುರಿತು ವೈಜ್ಞಾನಿಕವಾಗಿ ಯೋಚಿಸಿ ಮುಂದುವರೆದಲ್ಲಿ ಈ ರೀತಿಯ ಪ್ರಕೃತಿ ವಿರೋಧಿ, ಪ್ರಕೋಪಗಳನ್ನು ಆದಷ್ಟು ತಡೆಗಟ್ಟಬಹುದು.
ತಾನು, ತನ್ನದು ಎನ್ನುವ ಸಂಕುಚಿತ ಆಲೋಚನೆ ತೊಡೆದಾಗಲೇ ಎಲ್ಲರ ಕ್ಷೇಮ ಸಾಧ್ಯ.

About The Author

Leave a Reply

You cannot copy content of this page

Scroll to Top