ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳು ಒಂದರ್ಥದಲಿ ನೋಯುವ ಕಡಲು
ಮರುಗಳಿಗೆ ಬೆಳದಿಂಗಳ ಮುಗಿಲು
ಒಮ್ಮೊಮ್ಮೆ ಕಪ್ಪನೆಯ ಕಾರ್ಮೋಡ
ಕೆಲವೊಮ್ಮೆ ಹಾಲ್ನೊರೆಯ ನಗು
ಮೊಗದ ತುಂಬಾ

ಅವಳು ತನ್ನೊಡಲ ಬಾಧೆ
ಉಬ್ಬರ ಇಳಿತಗಳಿಗೆಲ್ಲ
ಅಂಜುವವಳಲ್ಲ
ಅವ ನಗುವ ಚಂದಿರನಾದರೆ
ಇವಳು ನಾಚುವ ಮಿಂಚುವ ಚುಕ್ಕಿ

ಅದೇಕೊ ಆ ಚಂದಿರನಿಗೆ ಮತ್ತೆ ಮತ್ತೆ
ಕಾಡುವ ಗ್ರಹಣದ ಕಾಟ
ಆದರೂ ಉಕ್ಕುವ ಜೀವನೋತ್ಸಾಹ
ದಿನವೂ ಹುಣ್ಣಿಮೆ ಚಂದ್ರನ ಕಳೆ
ಹೀಗೆ ಏರಿಳಿತ ನೆರಳು ಬೆಳಕಿನ
ಚಂದಿರನೊಂದಿಗೆ ಒಮ್ಮೊಮ್ಮೆ ನಲಿಯುತ್ತ
ಮಗುದೊಮ್ಮೆ ಉಮ್ಮಳಿಸುತ್ತ
ಭೋರ್ಗರೆಯುತಿತ್ತು ನೋಯುವ ಕಡಲು

ಚಂದಿರನೆಂದರೆ ಕಡಲ ಜೀವದ ಜೀವ
ಕಡಲೆಂದರೆ ಚಂದಿರನ ಪೊರೆವ ಸರ್ವಸ್ವ
ಚಂದಿರನ ಮೊಗದಲಿ ಮಿನುಗುವ
ಬೆಳದಿಂಗಳ ಉಳಿಸಿಕೊಳಲು
ತೆತ್ತ ಕಡಲಿನ ತ್ಯಾಗ ನಿತ್ಯ ನಿರಂತರ
ಕಡಲ ಪ್ರೀತಿಯಲಿ ಅವ ನಿತ್ಯ ಸುಂದರ

ಅಗೊ ಎಲ್ಲಿತ್ತೋ ಸಂಚು ಮಾಡಿ
ನೆಪ ಹೂಡಿ ಆಕ್ರಮಿಸಿಯೇ ಬಿಟ್ಟಿತ್ತು
ಪೂರ್ಣ ಚಂದ್ರ ಗ್ರಹಣ!
ಬಂದ ಗ್ರಹಣ ಹಿಂದಿನಂತೆ
ಸರಿಯಲಿಲ್ಲ…ಸರಿಸಲೆಂದು
ವೈದ್ಯರು ಮಾಡಿದ ವ್ಯರ್ಥ ಕಸರತ್ತು
ಗ್ರಹಣ ಸರಿಯುತ್ತದೆ ಎಂಬ ಹುಸಿ
ಭ್ರಮೆ ಕಡಲಿಗೆ!

ಚಂದ್ರ ಮತ್ತೆ ಬೆಳದಿಂಗಳ ಸೂಸಲಿಲ್ಲ
ಅಮಾವಾಸ್ಯೆಯ ಕತ್ತಲೆ ಕಳೆಯಲಿಲ್ಲ
ಚಂದ್ರನ ಸುಖಾಗಮನಕ್ಕೆ ಕಾದು ಕಾದು
ಉಕ್ಕಿ ಉಕ್ಕಿ. ಮೊರೆದ ಕಣ್ಣೀರ ಭೋರ್ಗರೆತ
ಕೊನೆಗೂ ಸ್ಥಗಿತಗೊಂಡಿದೆ …

ಒಳಗೊಳಗೆ ಉಮ್ಮಳಿಸಿ ಬಿಕ್ಕುತ್ತಿದೆ
ಚಿಕ್ಕ ಮಗುವಿನಂತೆ ಚಂದಿರನ ಆಗಮನವಿಲ್ಲದೆ
ಅವ ಕತ್ತಲೆಯಲಿ ಕರಗಿಹೋದ
ಕಡಲಿನ ಒಡಲಲ್ಲಿ ಲೀನವಾದ
ಇನ್ನಾದರೂ ನೋಯುವ ಕಡಲು
ಶಾಂತವಾಗಲಿ ದು:ಖ ಶಮನವಾಗಲಿ…


About The Author

7 thoughts on “ಸುಧಾ ಹಡಿನಬಾಳ ಅವರ ಹೊಸ ಕವಿತೆ-‘ಕಡಲ ಒಡಲಲಿ ಲೀನವಾದ ಚಂದಿರ’”

  1. ಬದುಕಿನ ಏರಿಳಿತ, ನೋವು ನಲಿವು, ಸುಖ ದುಃಖ, ಅಂತಿಮವಾಗಿ ಶಾಶ್ವತವಾದ ಅಗಲಿಕೆಯನ್ನು ಶರಧಿ ಮತ್ತು ಚಂದ್ರನ ಉಪಮೆಯೊಂದಿಗೆ ಕೆಲವೇ ಶಬ್ದಗಳಲ್ಲಿ ಸೆರೆಹಿಡಿದ ವಿದಾಯಗೀತೆಯನ್ನು ನೋವಿನಿಂದ ಬರೆಯುವುದು ಅಷ್ಟು ಸುಲಭವಲ್ಲ.

Leave a Reply

You cannot copy content of this page

Scroll to Top