ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಖಡಕ್ ಕಮಲಿ ಕಣ್ಣಗಲಿಸಿ
ಕೇಳಿದಳು ಪತಿರಾಯನಿಗೆ..
” ಇಂದು ಭೀಮನಮಾವಾಸೆ
ಹೇಳಿಬಿಡಿ ನಿಮ್ಮಯ ಆಸೆ…
ತೀರಿಸುವೆ ಈ ಹಬ್ಬದಿನದಂದು
ಪತಿಯೇ ಪರಶಿವನೆಂದು..!”

“ಮುಖಕೆ ಮಂಗಳಾರತಿ ಎತ್ತಲೇ?
ಹೂವಿಟ್ಟು ಅರ್ಚನೆ ಮಾಡಲೇ?
ಕೂಡಿಸಿ ಕುಂಭಾಭಿಷೇಕ ಮಾಡಲೇ?
ಪಾದಗಳ ತೊಳೆದು ಪೂಜಿಸಲೇ?
ಪಾಯಸದ ನೈವೇದ್ಯ ಮಾಡಲೇ”

ಕಮಲಿಯ ಪತಿ ಬದರಿನಾಥ
ಬೆದರುತ್ತಾ.. ಭಿನ್ನವಿಸಿಕೊಂಡ..
“ಮಂಗಳಾರತಿ ಎತ್ತದಿದ್ದರೂ..
ಚಿಂತಿಲ್ಲ ಆದರೆ ಇಂದಾದರೂ
ಮಾತು ಮಾತಿಗೆ ಕುಟಕದಿರು”

“ಹೂವಿನರ್ಚನೆ ಮಾಡದಿದ್ದರೂ
ಬೇಸರವಿಲ್ಲ ಆದರೆ ಇಂದಾದರೂ
ಬೈಗುಳ ಸಹಸ್ರನಾಮ ಮಾಡದಿರು”

“ಕುಂಭಾಭಿಷೇಕ ಆಗದಿದ್ದರೂ
ತೊಂದರೆಯಿಲ್ಲ ಆದರೆ ಇಂದಾದರೂ
ತಪ್ಪುಹುಡುಕಿ ತಲೆಗೆ ಮೊಟಕದಿರು.”

“ಪಾದತೊಳೆದು ಪೂಜಿಸದಿದ್ದರೂ
ಪರವಾಗಿಲ್ಲ ಆದರೆ ಇಂದಾದರೂ
ಪಾತ್ರೆಗಳ ಮಾತ್ರ ತೊಳೆಸದಿರು..”

“ಪಾಯಸದ ನೈವೇದ್ಯವಾಗದಿದ್ದರೂ
ಯೋಚನೆಯಿಲ್ಲ.. ಆದರೆ ಇಂದಾದರೂ
ಹೋಟೆಲಿನಿಂದ ಊಟ ತರಿಸದಿರು”

“ಏನಿರದಿದ್ದರೂ ಏನಾಗದಿದ್ದರೂ
ಸಮಸ್ಯೆಯಿಲ್ಲ.. ಕನಿಷ್ಟ ಇಂದಾದರೂ
ಜಗಳವಾಡಿ ಮುಸುಕುಹೊದ್ದು ಮಲಗದಿರು”


About The Author

2 thoughts on “ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..!”

Leave a Reply

You cannot copy content of this page

Scroll to Top