ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

ಸಂತೆಯಲ್ಲೊಂದು ಚೀಲದ ಸ್ವಗತ…….

ಗೌಜು ಗದ್ದಲ
ಸುತ್ತ ಕೂಗು ತರತರದ್ದು
ಧ್ವನಿ ಯಾರದ್ದು ಕೂಗು ಕಾಣದ್ದು
ಹತ್ತಿರವಿದ್ದಾಗ ಪರಿಚಿತ
ದೂರ ಹೋದರೆ ಅಪರಿಚಿತ
ಹೋಗಬೇಕು ಕೊಳ್ಳಬೇಕು ದಿನಕ್ಕೆ
ವಾರಕ್ಕೊಮ್ಮೆ ಚೀಲ ತುಂಬಿ
ನೋಡಿದರೆ ಒಂದು ಸಂತೆಗೆ
ಬರುವ ಚೀಲಗಳೆಷ್ಟೋ
ತರತರ ಬಣ್ಣ ತರೇವಾರಿ ನಮೂನೆ
ಕೆಲವಕ್ಕೆ ಬಣ್ಣ ಮಾಸಿವೆ
ಇನ್ನು ಹೆಚ್ಚಿನವು ಬಣ್ಣ ಹಚ್ಚಿವೆ
ನಾನಾ ಸಾಮಾನು ತುಂಬಿ ಚೀಲ
ಸಾಗುತ್ತಿತ್ತು ಸುಮ್ಮನೇ


ದೊಡ್ಡ ಚಿಕ್ಕ ಕೊನೆಗೊಮ್ಮೆ ಮಧ್ಯಮ
ಗಾತ್ರ ಮಾರಲು ಕುಳಿತ ಚೀಲಗಳು
ಹಿಂದೆಲ್ಲಾ ಮನೆಯಲ್ಲಿ ತಯಾರಾಗಿ
ಸಂತೆಗೆ ಬರುತ್ತಿದ್ದವು
ಈಗೀಗ ಸಂತೆಯಿಂದ ಮನೆಗೆ
ಹಿಂದೆ ಇತ್ತು ಚೀಲ ಕಂಡರೆ ಆದರ
ಅಭಿಮಾನ ಸ್ನೇಹ ಆತ್ಮೀಯತೆ
ಈಗ ಆದರವೇನೂ ಬೇಕಾಗಿಲ್ಲ ಇವಕ್ಕೆ
ಬರುವವು ಜೊತೆಗೆ ಸುಮ್ಮನೇ
ಅನುಬಂಧವಲ್ಲ ಆದರೂ
ಬಂಧ ಬೇಕಾದ ಕಡೆ
ಲೆಕ್ಕ ಇಟ್ಟಿಲ್ಲ ಇಡುವವರೂ ಇಲ್ಲ
ಎಲ್ಲರೂ ತರುವವರೇ
ತರತರದ  ಚೀಲಗಳ
ಸುಮ್ಮನೇ ಕುಳಿತರೂ ನಿಂತರೂ
ಜೀವವಿಲ್ಲ ಸಂತೆಗೆ ಕಾಲಿಟ್ಟರೆ
ಮಾತ್ರ ಕೌತುಕ ಖುಷಿ ಚೀಲಕ್ಕೆ
ಮನಸಿಗೆ ತೋಚಿದ್ದು ಕೊಂಡು
ಹೊರಟ ಚೀಲಗಳ
ತುಂಬಿದ ನಗುವೇ ಜೀವನ
ಬದುಕುವ ಒಲುಮೆಗೆ
ಚೀಲಗಳೇ ನೆಲೆ ಬೆಲೆ
ದುಡಿಮೆ ಹಸಿವೆಗೊಂದು ಚೀಲ
ಸಂತೆ ಮುಗಿದರೆ ಅಲ್ಲೊಂದು ಮೌನ
ಚೀಲಗಳದ್ದು ಬೆವರ ಹನಿಯದ್ದು
ಮಾರಾಟವಾಗದ ಉಳಿದ ಚೀಲಗಳದ್ದು ಬದುಕಿನದ್ದು
ಚೀಲವೆಂದರೆ ಜೀವ ಜೀವನ
ಕಟ್ಟಬೇಕು ಪ್ರೀತಿ ಸ್ನೇಹವ
ಉಳಿಸಬೇಕು ಮಣ್ಣು ನೀರಿನರಿವ
ಆಗಲೇ ಅದು
ಅರ್ಥ ಭಾವದ ಸೊಗಸ ಕವನ……

——————————–

ನಾಗರಾಜ ಬಿ.ನಾಯ್ಕ

About The Author

2 thoughts on “ನಾಗರಾಜ ಬಿ.ನಾಯ್ಕ ಕವಿತೆ ಸಂತೆಯಲ್ಲೊಂದು ಚೀಲದ ಸ್ವಗತ…….”

  1. ಸಂತೆ ತುಂಬ ಚೀಲಗಳೆ… ಚೀಲ ಇಲ್ಲದೆ ಸಂತೆ ಇಲ್ಲ… ಚೀಲದ ಚಾಗವನ್ನು ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳು ತುಂಬಿಕೊಂಡಿವೆ.. ಬದುಕಿನ ಚೀಲ ತುಂಬಲು… ಸಂತೆ ಚೀಲ ತುಂಬ ಅಗತ್ಯ…

Leave a Reply

You cannot copy content of this page

Scroll to Top