ಕಾವ್ಯ ಸಂಗಾತಿ
ಅಭಿಷೇಕ ಬಳೆ ಮಸರಕಲ್-

ಹೃದಯದ ಕಣ್ಣೀರ ಕವಿತೆ….

ಎದೆಗಾನಿಸಿಕೊಂಡೆ
ಬಿಕ್ಕಿ ಬಿಕ್ಕಿ ಅತ್ತಳು
ನೋವಿನ ಕಟ್ಟೆಯೊಡೆದು ಕಣ್ಣ ಹನಿ ಕೆನ್ನೆಗೆ ಜಾರಿತ್ತು
ಕಣ್ಣು ಕೆಂಪಾಗಿ ಒದ್ದೆಯಾಗಿತ್ತು
ಮತ್ತೆ
ಅಳದೆ ನನ್ನ ಮನಸ್ಸು ಒದ್ದೆಯಾಗಿತ್ತು
ಮನಸ್ಸ ಹಿಂಡಿ ಒಣಗಿ ಹಾಕಲು ಎಂದಿನಂತೆ
ಅವಳ ಸೆರಗಿಲ್ಲ
ಮಾತಿಗೆ ಅಲ್ಲಿ ಪ್ರವೇಶವಿರಲಿಲ್ಲ
ಮೌನದ ಕಂದಕ ಬದುಕಿನ ಸಂದೂಕವನ್ನು
ಬೀಗ ಹಾಕಿತ್ತು
ಬೀಗ ತಗೆಯುವ ಯಾವ ಉಮೇದು ಉಳಿದಿಲ್ಲ
ಸಂಜೆ ಕರಗಿದ ಸಮಯ
ಅವಳೆದೆಗೆ ಆತುಕೊಂಡ
ಪ್ರೀತಿ ಸೋತ ಹೃದಯದಲಿ
ಮತ್ತೆ
ಮರಳಿ ಹೊಸ ಚೈತನ್ಯ ಪಡೆಯುವ
ಉಲ್ಲಾಸವು ಇಲ್ಲ
ಮುಂದೊಂದು ದಿನ ಭೇಟಿಯಾದರೆ
ಅಪರಿಚಿತರಂತೆ ಇದ್ದು ಬಿಡೋಣ
ಪ್ರೀತಿಯ ಯಾವ ಗೊಡವೆ ಬೇಡ
ಈಗಿನ ನೋವೆ ಏಳು ಜನ್ಮಕ್ಕಾಗುವಷ್ಟು ಜಮಾವಣೆಯಾಗಿದೆ
ಮತ್ತೊಮ್ಮೆ ಸೋಲುವ ಹುಚ್ಚು ಹಪಾಹಪಿತನವಿಲ್ಲ
ಎದ್ದು ಹೊರಟು ನಿಂತಳು
ಹಾಗೇ ಸುಮ್ಮನೆ ಕೈ ಬೀಸಿದೆ
ಈವಾಗ ನನ್ನ
ಹೃದಯ ಒದ್ದೆಯಾಗಿತ್ತು
ಅಭಿಷೇಕ ಬಳೆ ಮಸರಕಲ್




