ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಚನ ಸಂಗಾತಿ

ಪ್ರೊ.ಜಿ ಎ. ತಿಗಡಿ.

ಬಸವಣ್ಣನವರ ವಚನವಿಶ್ಲೇಷಣೆ

ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ:
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ!
ಬಳ್ಳದ ಬಾಯಂತೆ ಒಂದೇ ಮನವ ಮಾಡಿ
ನಿಲ್ಲೆಂದು ನಿಲ್ಲಿಸಯ್ಯಾ, ಕೂಡಲಸಂಗಮದೇವಾ.
*************************

ಪ್ರಾಣಿಗಳನ್ನು ನಾನೆಂದಿಗೂ ಕೊಲ್ಲಲಾರೆನು. ನಾಲಿಗೆ ಚಪಲಕ್ಕಾಗಿ ಬೇಕಾಬಿಟ್ಟಿಯಾಗಿ ಏನನ್ನೂ  ತಿನ್ನಲಾರೆನು.   ಪರಸತಿಯರ ಸಂಗವನ್ನೆಂದಿಗೂ ಮಾಡಲಾರೆನು. ಇದೆಲ್ಲವನ್ನು ಮಾಡಿದರೆ ಮುಂದೆ ತೊಂದರೆ ತಾಪತ್ರಯಗಳು ಬರುವುದೆಂಬುದು ನನಗೆ ಗೊತ್ತಿದೆ.   ಕಾರಣ ಬಳ್ಳದ ಬಾಯಿಯಂತೆ ಚಿತ್ತವನ್ನು ಏಕಾಗ್ರಗೊಳಿಸಿ ಒಮ್ಮನವ ಮಾಡಿ ನಿಲ್ಲಿಸೆಂದು ಬಸವಣ್ಣನವರು ಕೂಡಲಸಂಗಮನಾಥ ನಲ್ಲಿ  ಬೇಡಿಕೊಳ್ಳುತ್ತಾರೆ.

    ಸ್ವಾತ್ಮ ವಿಮರ್ಶೆಯ ಈ ವಚನದಲ್ಲಿ  ಬಸವಣ್ಣನವರು ಪ್ರಾಣಿ ಹಿಂಸೆ, ಬಾಯಿಚ್ಚೆಯ ಚಪಲ, ಹಾಗೂ ಪರಸ್ತ್ರೀ ಸಂಗಗಳಂತಹ ಕುಕರ್ಮಗಳಿಂದ ಭವಿಷ್ಯದ ದಿನಗಳಲ್ಲಿ ತೊಂದರೆ ಕಷ್ಟ ನಷ್ಟಗಳು ಬಂದೇ ಬರುತ್ತವೆ.   ಹೀಗಾಗಿ ಇಂತ ಕೆಟ್ಟ ಕೆಲಸಗಳನ್ನು ನಾನೆಂದಿಗೂ  ಮಾಡಲಾರೆನೆಂದು ನಿರ್ಧಾರ ಮಾಡುತ್ತಾರೆ.   ಮಾಪನಕ್ಕೆ (ಬಳ್ಳಕ್ಕೆ) ಒಂದೇ ಬಾಯಿ.  ಹಾಗೆಯೇ ಎನ್ನ ಮನದ  ಚಾಂಚಲ್ಯವನ್ನು ನಿಗ್ರಹಿಸಿ, ಬಳ್ಳದ ಬಾಯಿಯಂತೆ ಒಂದೇ ಮನವ ಮಾಡಿ ನಿಲಿಸೆಂದು ಬೇಡಿಕೊಳ್ಳುತ್ತಾರೆ.

     ಪಂಚೇಂದ್ರಿಯಗಳು, ಕಾಮ ಕ್ರೋಧಾದಿ ಅರಿಷಡ್ವರ್ಗಗಳು, ಅಷ್ಟಮದಗಳ ಸಹಕಾರದಿಂದ ಸಪ್ತ ವ್ಯಸನಗಳಿಗೆ ಬಲಿಯಾಗಿ,  ಅಂಗ  ಸುಖಕ್ಕಾಗಿ ಮನವನ್ನು ಹಾತೊರೆಯುವಂತೆ ಮಾಡುತ್ತವೆ.   ಹೀಗೆ ರೂಪ, ರಸ, ಗಂಧ,  ಸ್ಪರ್ಶಾದಿ ಕ್ಷಣಿಕ ಸುಖಗಳನ್ನು ಅಂಗಕ್ಕೆ ನೀಡುತ್ತಾ ಮನ ಹುಚ್ಚು ಕುದುರೆ ಕುಣಿಯುವಂತೆ ಮಾಡುತ್ತವೆ.  ಪರಿಣಾಮ ಸಂಕಷ್ಟಗಳ ಸರಮಾಲೆ.  ಹೀಗೆ ಪರಿಣಾಮವನ್ನು ಅರಿಯದೆ ಮಾಡುವ ಕ್ರಿಯೆಗಳೆಲ್ಲವೂ ನಮ್ಮನ್ನು ತೊಂದರೆಗೆ ಸಿಲುಕಿಸಿ ದುಃಖಕ್ಕೀಡು  ಮಾಡುತ್ತವೆ.  ಮನಕ್ಕೆ ನಿಜವಾದ ರುಚಿ ಏನೆಂಬುದರ ಅರಿವಿಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.

   ಮನವೆಂಬುದು ಹೆಣ್ಣು, ಸತಿ.   ತನ್ನ  ಅಂಗ ಸುಖಕ್ಕಾಗಿ ಅದು ಮತ್ತೊಂದು ಅಂಗವನ್ನು (ಹೆಣ್ಣನ್ನು) ಬಯಸುತ್ತದೆ.   ಇದು ಹಾಸ್ಯಸ್ಪದವಲ್ಲವೇ?  ಹೆಣ್ಣು – ಹೆಣ್ಣು ಕೂಡುವ ಕೂಟಕ್ಕೆ ಅರ್ಥವಿದೆಯೇ ?  ಅದೆಂದೂ ಕೂಡುವ ಕೂಟವಲ್ಲ,  ಕೂಡಿ ಅಗಲುವ ಮಾಟವೆಂಬುದು ಮನಕ್ಕೆ ತಿಳಿಯುವುದಿಲ್ಲ.  ಅರಿವೆಂಬುದು ಲಿಂಗ (ಜ್ಞಾನ),  ಪುರುಷ.  ಆತನೇ ಪತಿಯಾಗಿದ್ದಾನೆ.  ಮನವು ಶರಣ ಸತಿಯಾಗಿ, ಲಿಂಗಪತಿಯನ್ನು ಕೂಡುವ ಕೂಟ ಎಂದೆಂದಿಗೂ ಅಗಲದ ಅರಿವಿನ ಕೂಟ.  ಅದು ಕೂಡಿಯೂ ಕೂಡದ ಜ್ಯೋತಿಯಲ್ಲಿ ಜ್ಯೋತಿ ಲೀನವಾದ ರೀತಿಯಂತೆ.  ಈ ರೀತಿಯ ಅರಿವಿನ ಕೂಟವನ್ನು ಬಲ್ಲ ಸತಿ ಮಾತ್ರ ಪರಸ್ತ್ರಿಯರ ಸಂಗವನ್ನು ನಿರಾಕರಿಸುತ್ತಾಳೆ.  ಧಾನ್ಯಗಳನ್ನು ಅಳೆಯುವ ಮಾಪನಗಳಿಗೆ (ಸೇರು,ಪಾವು) ಒಂದೇ ಬಾಯಿ ಇರುತ್ತದೆ.  ಆದರೆ ನಮ್ಮ ಅಜ್ಞಾನಿ ಮನಕ್ಕೆ ಬಾಯಿಗಳು ನೂರಾರು.  ಹೀಗಾಗಿ ಅಳೆಯುವ ಮಾಪನಕ್ಕಿರುವ ಒಂದೇ ಬಾಯಿಯಂತೆ ಒಮ್ಮನವ ಮಾಡಿ ನಿಲಿಸೆಂದು  ಸಂಗಮನಾಥನಲ್ಲಿ ಬೇಡಿಕೊಳ್ಳುತ್ತಾರೆ.
************************************

  ಪ್ರೊ.ಜಿ ಎ. ತಿಗಡಿ. 

About The Author

2 thoughts on “ಬಸವಣ್ಣನವರ ವಚನವಿಶ್ಲೇಷಣೆ-ಪ್ರೊ.ಜಿ ಎ. ತಿಗಡಿ.”

  1. ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ ಗುರುಗಳೇ.

Leave a Reply

You cannot copy content of this page

Scroll to Top