ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಗಝಲ್

ಆಕೆ ದಾರುಣ ಕಥೆ ಹೇಳಿಯಾಳೆಂದು ನಾಲಿಗೆಯ ತೆಗೆದರು
ವ್ಯಥೆಯ ಘಟನೆ ನೆನಪಿಸಿಕೊಂಡಾಳೆಂದು ಮತ್ತು ಬರಿಸಿದರು

ಕಾಮುಕರ ಸಾಮ್ರಾಜ್ಯದಲಿ ಕ್ರೌರ್ಯ ಕುಹಕಗಳ ಅಟ್ಟಹಾಸವಿದೆ
ಆಕೆ ಜ್ವಲಂತಕೆ ಸಾಕ್ಷಿಯಾದಾಳೆಂದು ಬೆನ್ನು ನರಗಳ ಬಗೆದರು

ಮಾನ ಪ್ರಾಣ ಮುಷ್ಠಿಯಲ್ಲಿ ಹಿಡಿದ ಮಗು ಎಷ್ಟು ನರಳಿರಬೇಕು
ಗಗನ ಮುಟ್ಟುವಂತೆ ಕೂಗಿಯಾಳೆಂದು ದನಿಯ ಅಡಗಿಸಿದರು

ಹೆಣ್ಣೆಂದರೆ ಜೊಲ್ಲು ಸುರಿಸುವ ರಕ್ತ ಪಿಪಾಸುಗಳಿಗೆಲ್ಲಿ ಹೃದಯವಿದೆ
ನಡೆದೋಡಿ ರಕ್ಷಿಸಿಕೊಂಡಾಳೆಂದು ಕಾಲುಗಳ ಕಟ್ಟಿಹಾಕಿದರು

ಜರ್ಝರಿತ ದೇಹ ಮನದಲಿ ನೂರೆಂಟು ಹುಣ್ಣಾದ ಗಾಯಗಳಿವೆ
ಕೈ ಜೋಡಿಸಿ ನ್ಯಾಯಬೇಡಿಯಾಳೆಂದು ಕರಗಳ ಬಂಧಿಸಿದರು

ಅನು ಹೃದಯ ಘಾಸಿಗೊಂಡಿದೆ ಭೂತ ವರ್ತಮಾನದ ತಲ್ಲಣಗಳಲಿ
ಕಣ್ಣಾಲಿ ತುಂಬಿ ನಿಡುಸುಯ್ದಾಳೆಂದು ಉಸಿರು ನಿಲ್ಲಿಸಿದರು


ಅನಸೂಯ ಜಹಗೀರದಾರ

About The Author

11 thoughts on “ಅನಸೂಯ ಜಹಗೀರದಾರ-ಗಝಲ್”

  1. Anasuya.Jagirdar.

    ಇಂತಹ ಪ್ರಕರಣ ಹಲವಾರು ವರುಷಗಳಿಂದ ನಡೆಯುತ್ತಲೇ ಇವೆ.ಕೊನೆ ಮೊದಲಿಲ್ಲದ ನೋವುಗಳು ..ಗಜಲ್ ಕುರಿತ ಸ್ಪಂದನೆಗೆ ಧನ್ಯವಾದಗಳು ಮೇಡಮ್.

Leave a Reply

You cannot copy content of this page

Scroll to Top