ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ವಿಭಾಗ

ಹಾಲಿನ ದುಡ್ಡು ಹಾಲಿಗೆ

ನೀರಿನ ದುಡ್ಡು ನೀರಿಗೆ.ಮಕ್ಕಳ ಕಥೆ-

ಡಾ ಅನ್ನಪೂರ್ಣ ಹಿರೇಮಠ

ಸತ್ಯದ ದುಡಿಮೆಯಿಂದ ಗಳಿಸಿದ್ದು ನಮಗೆ ಸಿಕ್ಕೇ ಸಿಗುತ್ತದೆ. ಮಿಥ್ಯ ಮಾರ್ಗದಿಂದ ಗಳಿಸಿದ್ದು ಉಳಿಯಲಾರದು ಎಂದರ್ಥ. ಶ್ರಮದ ಪಾಲು ನಮಗೆ ,ಶ್ರಮವಿಲ್ಲದೆ ದೊರಕಿದ್ದು ಇತರರ ಪಾಲಾಗುವುದು ಖಂಡಿತ .ನಾವು ವ್ಯಾಪಾರ ಮಾಡುವಾಗ ಕಲಬೆರಕೆ ಮಾಡಿ ವಸ್ತುಗಳನ್ನು ಮಾರಿ ಹೆಚ್ಚು ಹಣ ಪಡೆದೆವೆಂದುಕೊಳ್ಳಿ ಅದು ಅಷ್ಟೂ ಹಣ ನಮಗೆ ದಕ್ಕದು ,ಹಾಲಿನಲ್ಲಿ ನೀರು ಬೆರೆಸಿ ಮಾರಿದರೆ ಹಾಲಿನ ದುಡ್ಡು ಹಾಲಿಗೆ ನೀರಿನ ದುಡ್ಡು ನೀರಿಗೆ, ಯಾವುದಾದರೂ ರೂಪದಲ್ಲಿ ಅದು ಹಾಳಾಗಿ ಹೋಗುವುದು ಎಂದು ಈ ಗಾದೆಯ ಅರ್ಥ.

ಒಬ್ಬ ಹುಡುಗ ಅವರಪ್ಪ ಹಾಕಿಕೊಟ್ಟ ಹಾಲಿನ ಕ್ಯಾನುಗಳನ್ನು ತೆಗೆದುಕೊಂಡು ಹಾಲು ಮಾರಿ ಬಂದ ದುಡ್ಡನ್ನು ಒಂದು ಕೆರೆಯ ದಂಡೆಯ ಮೇಲೆ ನಿಂತು ದುಡ್ಡು ಎಸೆಯುತ್ತಾ ಇದ್ದ ಅಪ್ಪ ಓಡಿ ಬಂದವನೇ ಏನು ಮಾಡುತ್ತಿದ್ದೀಯಾ? ಎಂದು ಅವನ ಕೈಯಲ್ಲಿ ಹಣವನ್ನು ಕಸಿದುಕೊಂಡ, ಆಗ ಮಗ ಹೇಳಿದ, ನೀನು ನನಗೆ ಹಾಲು ಮಾರಲು ಕ್ಯಾನುಗಳನ್ನು ಕೊಡುವಾಗ ನಾನು ನೋಡುತ್ತಿದ್ದೆ ಅರ್ಧ ನೀರು ಅರ್ಧ ಹಾಲು ಬೆರೆಸಿ ಕೊಟ್ಟಿದ್ದೆ .ಅದಕ್ಕೆಂದೆ ಬಂದ ಹಣದಲ್ಲಿ ಅರ್ಧ ನೀರಿಗೆ ಎಸೆಯುತ್ತಿದ್ದೇನೆ ಎಂದ. ಅಪ್ಪ ಮಗನ ಮಾತು ಕೇಳಿ ಬೆಪ್ಪಾಗಿ ನಿಂತ.

ಹೀಗೆ ಒಂದು ಊರಲ್ಲಿ ರಮೇಶ ಎಂಬವನು ಬಹಳ ಓದಿಕೊಂಡಿದ್ದ .ತುಂಬಾ ಬುದ್ಧಿವಂತ ಜಾಣನಾಗಿದ್ದ .ಅವನು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ .ಹಾಗೆ ಪ್ರಮೋಷನ್ ಆಗುತ್ತಾ ಆಗುತ್ತಾ ಬಿ ಇ ಓ ಆದ ಬಹಳ ಪ್ರಯತ್ನಪಟ್ಟು ಅವನಿಗೆ ಈ ಪದವಿ ಸಿಕ್ಕಿತ್ತು.ಆ ಹುದ್ದೆ ಗೌರವದ ಹುದ್ದೆ ಅಷ್ಟೇ ಜವಾಬ್ದಾರಿಯಿಂದ ಕೂಡಿದ ಹುದ್ದೆ .ಒಂದು ತಾಲೂಕಿನ ಎಲ್ಲಾ ಶಾಲೆಗಳ ಆಗುಹೋಗುಗಳು. ಕೆಲಸ ಕಾರ್ಯಗಳನ್ನು ರೂಪಿಸುವುದು, ನಿರ್ದೇಶಿಸುವುದು ,ಮೇಲ್ವಿಚಾರಣೆ ಮಾಡುವುದು ಎಲ್ಲ ಜವಾಬ್ದಾರಿಗಳು ಇರುತ್ತವೆ. ಅದರೊಂದಿಗೆ ಗರ್ವ ಕೂಡ ಜೊತೆ ಬಂದೇ ಬಿಡುತ್ತದೆ .ಸಾಕಷ್ಟು ವ್ಯವಹಾರಗಳು ಇಲ್ಲಿ ಇರುತ್ತವೆ, ಅಂತಹ ಸಂದರ್ಭಗಳಲ್ಲಿ ಅನೇಕ ಕೆಲಸಗಳಿಗೆ ತನ್ನ ಸಂಬಳದೊಂದಿಗೆ ಗಿಂಬಳ ರೂಪದಲ್ಲಿ ಲಂಚ ಪಡೆಯತೊಡಗಿದ ಏನವನ ಹಣದ ದರ್ಪ ?!ಹಾಗೆ ಐದು ಆರು ವರ್ಷಗಳ ಅವಧಿಯಲ್ಲಿ ತುಂಬಾ ಹಣ ಗಳಿಸಿದ, ಶ್ರೀಮಂತನಾದ ಮನೆ ಕಟ್ಟಿಕೊಂಡ ಕಾರು ತೆಗೆದುಕೊಂಡು ಕಾರು ಬಾರು ಜೋರು ಜೋರು ನಡೆಯಿತು. ಎಲ್ಲರ ಜೀವನದಲ್ಲಿ ಬರುವ ಹಾಗೆ ಆ ದಿನ ಬಂದೇ ಬಿಟ್ಟಿತು ಅದೇ ರಿಟೈರ್ಮೆಂಟ್ ನಿವೃತ್ತಿ .ನಿವೃತ್ತಿ ಆಗಿ ಒಂದೆರಡು ತಿಂಗಳು ಕಳೆದಿರಲಿಲ್ಲ ಒಮ್ಮಿಂದೊಮ್ಮೆ ಹಾರ್ಟ್ ಅಟ್ಯಾಕ್ ಹೃದಯದ ನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಸೇರಿದ ದೊಡ್ಡ ಆಸ್ಪತ್ರೆ, ಜೀವ ಉಳಿಸಿಕೊಳ್ಳಲು ಗಳಿಸಿದ ಎಲ್ಲಾ ದುಡ್ಡನ್ನು ಸುರಿಯಬೇಕಾಯಿತು. ಹೃದಯ ಚಿಕಿತ್ಸೆಗೆ ತುಂಬಾ ಹಣ ಖರ್ಚಾದವು, ರಮೇಶ ಬಹಳ ಕಿನ್ನ ಮನಸ್ಕನಾದ ನಾ ಗಳಿಸಿದ ಹಣವೆಲ್ಲ ಪೋಲಾಯಿತಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತ .ಆದರೆ ನ್ಯಾಯದಿಂದ ಗಳಿಸಿದ ಹಣವಾಗಿದ್ದರೆ ಉಳಿದೆ ಉಳಿಯುತ್ತಿತ್ತು. ಆರೋಗ್ಯವು ಚೆನ್ನಾಗಿರುತ್ತಿತ್ತು ಅಲ್ಲವೆ.,?ಅನ್ಯಾಯದ ಹಣ ಹೋಗಲೆಂದೇ ರಮೇಶನಿಗೆ ಆ ಕಾಯಿಲೆ ಬಂದಂತಿತ್ತು. ಅದಕ್ಕೆಂದೇ ದುಡಿದು ತಿಂದದ್ದು ರಕ್ತವಾಗುತ್ತದೆ, ದುಡಿಯದೆ ತಿಂದರೆ ಹೊಟ್ಟೆ ಕೆಡುತ್ತದೆ. ಎಂದು ಹಿರಿಯರು ಹೇಳುತ್ತಾರೆ ನಿಯತ್ತಿಂದಷ್ಟೇ ನಮಗೆ ನಿಲ್ಲುವುದು ,ದೊರಕುವುದು.
ಇಂಥವರಿಗೆ ಈ ಗಾದೆಯನ್ನು ಹಿರಿಯರು ಹೇಳಿದ್ದಾರೆ.
“ಹಾಲಿಂದು ಹಾಲಿಗೆ ನೀರಿಂದು ನೀರಿಗೆ”


ಡಾ ಅನ್ನಪೂರ್ಣ ಹಿರೇಮಠ

About The Author

1 thought on “ಹಾಲಿನ ದುಡ್ಡು ಹಾಲಿಗೆ ,ನೀರಿನ ದುಡ್ಡು ನೀರಿಗೆ.ಮಕ್ಕಳ ಕಥೆ-ಡಾ ಅನ್ನಪೂರ್ಣ ಹಿರೇಮಠ”

  1. ಅನ್ನಪೂರ್ಣ ಅವರರೇ ನಿಮ್ಮ ಕಥೆಗಳು ಚೆನ್ನಾಗಿ ಮೂಡಿಬರುತ್ತಿದೆ ನಮ್ಮ ಮಕ್ಕಳಿಗೆ ಹಾಗೂ ಅನೇಕ ಕಾರ್ಯಕ್ರಗಳಲ್ಲಿ ಹೇಳುತ್ತಿರುತ್ತೇನೆ
    ಧನ್ಯವಾದಗಳು ಮೇಡಂ

Leave a Reply

You cannot copy content of this page

Scroll to Top