ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಉತ್ತರವಿಲ್ಲದ ಪ್ರಶ್ನೆಗಳು

ಒಂದಲ್ಲ ಎರಡಲ್ಲ ನೂರಾರು
ಸಾವಿರಾರು…ಪ್ರಶ್ನೆಗಳು
ಉತ್ತರವಿಲ್ಲದ ಪ್ರಶ್ನೆಗಳೂ..
ಉತ್ತರವಿರುವ ಪ್ರಶ್ನೆಗಳು…
ಅವುಗಳ ಸಹವಾಸವೇ
ಬೇಡ ಬಿಡು…
ಬೆಂಬತ್ತಿ ಹೋದರೂ..
ಗೋಜಲು ಗೊಂದಲಗಳ ಗೂಡು..
ದಿಕ್ಕು ತಪ್ಪಿದ ಸಿಕ್ಕು ಸಿಕ್ಕಾದ ಪ್ರಶ್ನೆಗಳು…
ಕಾಲಿಗೆ ತೊಡರಿ ಕೊಳ್ಳುವ
ಬಿಡಿಸಲಾಗದ ಕಗ್ಗಂಟುಗಳು..
ಮೂರು ದಿನದ ಬಾಳು..
ಬೇಡ ಬರಿ ಗೋಳು..
ಸಮಯ ವ್ಯರ್ಥವಾಗುವುದು ಬೇಡ
ಇದ್ದುದರಲ್ಲೇ ಆನಂದಿಸಿ
ಎದ್ದು ನಡೆದು ಬಿಡುವ…..

ಉತ್ತರವಿಲ್ಲದ ಯಾವ ಪ್ರಶ್ನೆಯೂ
ಅಸ್ತಿತ್ವದಲ್ಲೇ ಇಲ್ಲ…
ಹಗಲು ರಾತ್ರಿಯಂತೆ
ಜೊತೆ ಜೊತೆಯಾಗಿ
ತಗಲು ಹಾಕಿಕೊಂಡು…
ತೆಕ್ಕೈಸಿಕೊಂಡು ಸಾಗುತಿವೆ..
ಪ್ರಶ್ನೆಗಳು ಜೊತೆಯಲಿ ಉತ್ತರಗಳು….
ಮತ್ತೇಕೆ ಚಿಂತೆ…?
ಉತ್ತರ ಆಲಿಸಿ… ಪ್ರಶ್ನೆಗೆ
ನೀಡು ಪೂರ್ಣ ವಿರಾಮ…
ಹಾಕು ಮುಂದಿನ ಹೆಜ್ಜೆ….
ಹೊಸ ಪಯಣಕೆ ತೊಡಿಸಿ ಗೆಜ್ಜೆ…..

ಅಪಾರ್ಥಗಳ ಸರಮಾಲೆ…
ಮಾತು ಕೇಳುವ ವ್ಯವದಾನವಿಲ್ಲ…
ನಾಣ್ಯಕ್ಕಿರುವ ಎರಡು ಮುಖಗಳು..
ಸರಿಯಾಗಿ ನೋಡಿ ತೀರ್ಮಾನಿಸಿ ನಡೆ….
ಬೇಕಿಲ್ಲ ಮರುಕ ಕರುಣೆಯ ರೀತಿ..
ಹಂಬಲಿಸಿದ್ದು ಹನಿ ಬೆಳಕು ಪ್ರೀತಿ…
ಅದನ್ನೂ ನೀಡದವಳಾದರೆ
ನಿನ್ನಂಥ ಬಡವಿ ಬೇರಾರಿಲ್ಲ….
ಎಲ್ಲಾ ಪ್ರಶ್ನೆಗಳಿಗೂ ಉತ್ತರ
ನಿನ್ನಂತರಂಗದ ಕೋಟೆಯಲ್ಲಿ ಭದ್ರವಾಗಿ
ಅಡಕವಾಗಿ ಕುಳಿತಿವೆ…
ಕೊಂಚ ಹೊರ ಕರೆದು
ಮಾತಾಡಿಸಿ ಆಲಿಸು…
ಕಿವಿಯಾಗು ಗೆಳತಿ…
ಕವಿಯಾಗಿ ಅನುಭವಿಸು…
ಪ್ರಶ್ನೋತ್ತರಗಳ
ಜುಗಲ್ ಬಂಧಿಯ….ಗುಲ್ಲೋ ಗುಲ್ಲು
ಗೆಲ್ಲುವುದು ಹೃದಯದ ಸೊಲ್ಲು….
ಎಲ್ಲ ಪ್ರಶ್ನೆಗಳಿಗೂ ಮುದವಾದ
ಹದವಾದ ಮಧುರ ಉತ್ತರ ಅಲ್ಲುಂಟು..

ಉತ್ತರ ಬಹಳ ಸುಂದರವಾಗಿದೆ
ನಾನ್ಯಾರೆಂಬ ಪ್ರಶ್ನೆಗೆ ಉತ್ತರ….
ನಿನ್ನ ಅರಸುತ್ತಿರುವ ಕಣ್ಣ ನೋಟದಲಿ
ಕವಿತೆಯ ಪದಗಳ ಆಟದಲಿ…
ಹೃದಯ ಹೂ ತೋಟದಲಿ…
ವಚನ ಅನುಭಾವದ ಮಾಟದಲಿ…
ಸ್ನೇಹ ಪ್ರೀತಿಯ ಕೂಟದಲಿ…
ಕೆಂಡ ಸಂಪಿಗೆಯ ಕಡುಪೆಂಪಿನ
ಹುಸಿ ಮುನಿಸ ಕೋಪದಲ್ಲಿ….
ಭಾವ ದೀಪಗಳ ಕಿರು ಬೆಳಕಿನ
ಜೀವ ತೇರಿನಲ್ಲಿ….
ನಿತ್ಯ ಸತ್ಯ ದರ್ಶನ ನೀಡುತ್ತಿವೆ..
ಉತ್ತರಗಳು….
ಆಲಿಸುವ ಕಿವಿ… ಅನುಭವಿಸುವ
ಮನಸು….ವ್ಯಕ್ತಪಡಿಸುವ ಹೃದ್ಯ
ಸೌಂದರ್ಯ.. ಆಂತರ್ಯ.. ಔದಾರ್ಯ
ಹೃದಯ ಸಿರಿ ಬೇಕು..
ತೆರೆದಿಡು ಒಮ್ಮೆಎದೆಯ ಮಿಡಿತ
ತುಡಿತ….ಎಲ್ಲ ಉತ್ತರಗಳೂ ಸುಂದರ….
ಮನಸು ಮಾಡಬೇಕು.ಕನಸು ನನಸು ಮಾಡಲು..


About The Author

Leave a Reply

You cannot copy content of this page

Scroll to Top