ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಬೆಳಕಿನ ದನಿಗಳು

  1. ಬಲಿದಾನ.!

ಹಣತೆಗೆ ಬೆಳಕು ಕೊಟ್ಟು
ಬೆಂಕಿಕಡ್ಡಿ ಜೀವ ಬಿಟ್ಟಿತು.!

  1. ನಂಟು.!

ಕನ್ನಡಿಯ ಕಂಗಳಿಗೆ
ದೀಪವೇ ಬೆಳಕು.!

  1. ಸಾರ್ಥ.!

ಬತ್ತಿ ತೈಲ ಸೇರಿ
ಹಡೆದವು ಬೆಳಕು
ಕೃತಾರ್ಥ ಬದುಕು.!

  1. ಸಂಘರ್ಷ.!

ಬೆಳಕನ್ನುಳಿಸಲು ಬತ್ತಿ-ತೈಲ
ಸತತ ಜೀವ ತೇಯುತ್ತಿದ್ದರೆ..
ಕತ್ತಲ ಸಂಸ್ಥಾಪಿಸಲು ಗಾಳಿ
ಸದಾ ಸಮಯ ಕಾಯುತ್ತಿತ್ತು.!

  1. ವಿನಂತಿ.!

ದೀಪದ ಬುಡದಲ್ಲಿನ
ಕತ್ತಲು ಹುಡುಕುವ ಬದಲು
ದೀಪದ ಶಿರದಲ್ಲಿನ
ಬೆಳಕಿಗೆ ತಲೆಬಾಗು ಮೊದಲು.!

  1. ಮೂಲ

ಬತ್ತಿ ತೈಲಗಳ ತ್ಯಾಗ
ಬಲಿದಾನಗಳಿಂದಲೇ
ಬೆಳಕಿಗೆ ಬದುಕು.!

  1. ಜೋಕೆ..!

ದೇಹ ಸುಡಲಿಕ್ಕೆ ಕಡ್ಡಿ
ಗೀರುವವರಿಗಿಂತಲೂ
ಜೀವಭಾವ ಉರಿಸಲಿಕ್ಕೆ
ಸದಾ ಬತ್ತಿ ಇಡುವವರು
ನಿತ್ಯ ಎಣ್ಣೆ ಸುರಿವವರು
ಗೆಳೆಯ ಕಂಗಳಿಗೆ ಅಪ್ಯಾಯ
ಬದುಕಿಗೆ ಬಲು ಅಪಾಯ.!

  1. ಫಲಿತಾಂಶ.!

ಎದೆಯಲಿ ತೈಲ ತುಂಬಿಕೊಂಡ
ಬತ್ತಿ ಬೆಳಗಿ ಬೆಳಕಾಯಿತು.!
ಶಿರದಿ ಸಿಡಿಮದ್ದು ತುಂಬಿಕೊಂಡ
ಬೆಂಕಿಕಡ್ಡಿ ಉರಿದು ಬೂದಿಯಾಯಿತು.!

  1. ದೀಪ..!

ದೀಪವೆಂದರೆ
ಅರಿತವರಿಗೆ ಬೆಳಕಿನ ನುಡಿ
ಸಹಸ್ರ ಸಂವೇದನೆ ಭಾವದಾಂಗುಡಿ
ಅರಿಯದವರಿಗೆ ಬರೀ ಬೆಂಕಿ ಕಿಡಿ.!


ಎ.ಎನ್.ರಮೇಶ್. ಗುಬ್ಬಿ.

About The Author

1 thought on “ಎ.ಎನ್.ರಮೇಶ್. ಗುಬ್ಬಿ.-ಬೆಳಕಿನ ದನಿಗಳು”

Leave a Reply

You cannot copy content of this page

Scroll to Top