ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಕಾವ್ಯ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

ನಾವು ನಿರುದ್ಯೋಗಿಗಳು

ನಾವು ನಿರುದ್ಯೋಗಿಗಳು ಸ್ವಾಮಿ
ನಾವು ನಿರುದ್ಯೋಗಿಗಳು
ಉದ್ಯೋಗ ಸಿಗದೆ
ಅಲೆದಾಡುವ ಅಲೆಮಾರಿಗಳು

ಬಿಟ್ಟಿ ಕೂಳಿಗೆ ಪಾಲುದಾರರಾಗಿ
ತಂದೆ ತಾಯಿಗೆ ಹೊರೆಯಾಗಿ
ದಿಕ್ಕುಗಾಣದೆ ತಲೆ ಮೇಲೆ
ಕೈ ಹೊತ್ತು ಕುಳಿತ ನಾವು
ನಿರುದ್ಯೋಗಿಗಳು ಸ್ವಾಮಿ
ನಾವು ನಿರುದ್ಯೋಗಿಗಳು

ಓದಿದವರ ಗೋಳು ಯಾರಿಗೂ ಬೇಡಾ
ಎಂದು ಒಣ ಉಪದೇಶ ನೀಡುತ್ತಾ
ಅರ್ಜಿ ಫಾರ್ಮ್ ತುಂಬುವುದರಲ್ಲೇ
ವಯಸ್ಸು ಕಳೆದ ನಿರುತ್ಸಾಹಿಗಳು ನಾವು

ಕೆಲಸ ಸಿಗದೆ ಕೈಕೈ ಹಿಸುಕಿಕೊಳ್ಳುತ್ತ
ಹಾದಿ ಬೀದಿಯ ಎಗ್ ರೈಸ್ ತಿಂದು
ಹೆತ್ತವರಿಗೆ ಮುಖ ತೋರದೆ
ಮುಸುಕು ಹಾಕಿಕೊಂಡು ಮಲಗುವ ನಾವು
ನಿರುದ್ಯೋಗಿಗಳು ಸ್ವಾಮಿ
ನಾವು ನಿರುದ್ಯೋಗಿಗಳು

ಸರಿಕರೆದುರು ಸಂಬಂಧಿಗಳೆದುರು
ತಲೆ ಎತ್ತಿ ನಿಲ್ಲಲಾಗದ ಅಸಹಾಯಕರು
ಎಲ್ಲಾ ಇದ್ದೂ ಏನೂ ಇಲ್ಲದಂತಿರುವ ಭಿಕಾರಿಗಳು
ನೌಕರಿ ಇಲ್ಲದೆ ಅವರಿವರ ಚಾಕರಿ ಮಾಡುತ್ತ
ವೃತ್ತಿಯೇ ಇಲ್ಲದೆ ನಿವೃತ್ತಿಯಾದಂತಿರುವ ನಾವು
ನಿರುದ್ಯೋಗಿಗಳು ಸ್ವಾಮಿ ನಾವು ನಿರುದ್ಯೋಗಿಗಳು

ನಮ್ಮೊಳಗಿನ ಕೌಶಲ್ಯಗಳ ಹೊರಹಾಕಲು
ದಾರಿ ಕಾಣದೆ ದಾರಿ ಬದಿ ಕುಂತು
ಮಿರ್ಚಿ ಬಜಿ ಮಾಡಿ ಮಾರುತ್ತ
ಬದುಕಲು ನಮ್ಮದೇ ದಾರಿ ತುಳಿದವರು ನಾವು
ನಿರುದ್ಯೋಗಿಗಳು ಸ್ವಾಮಿ ನಾವು ನಿರುದ್ಯೋಗಿಗಳು

ಉಚಿತವಾಗಿ ದಕ್ಕಿದ್ದು ಅನುಗಾಲವಲ್ಲ
ಎಂಬ ಕಟು ಸತ್ಯದ ನಡುವೆಯೂ
ಸರದಿಯಲ್ಲಿ ನಿಂತು
ಭತ್ಯೆಗಾಗಿ ಕೈ ಚಾಚಿ ನಿಂತ ನಾವು
ಭಂಡ ನಿರುದ್ಯೋಗಿಗಳು ಸ್ವಾಮಿ
ನಾವು ನಿರುದ್ಯೋಗಿಗಳು

ವಿದ್ಯೆಗೆ ತಕ್ಕ ನೌಕರಿ ಇಲ್ಲದೆ
ಅವಕಾಶ ವಂಚಿತರಾದ ನಾವುಗಳು
ಲೋಕದ ದೃಷ್ಟಿಯಲ್ಲಿ ನಿಷ್ಪ್ರಯೋಜಕರು
ಬೇಕಿದ್ದಿಲ್ಲ ನಮಗೆ ಉಚಿತ ಭತ್ಯೆ
ಬೇಕಿತ್ತು ನಮಗೆ ನಿತ್ಯ ದುಡಿಯುವ
ಕೈಗೆ ದುಡಿಮೆ
ಬೇಕಿತ್ತು ನಮಗೆ ತಲೆ ಎತ್ತಿ
ಗೌರವದಿ ಬಾಳುವ ಬದುಕು
ಬೇಕಿತ್ತು ನಮಗೆ ನಮ್ಮ ಹಸಿವಿಗೆ
ನಮ್ಮದೇ ಬೆವರಿನ ಅನ್ನ……


About The Author

2 thoughts on “ನಾವು ನಿರುದ್ಯೋಗಿಗಳು-ಡಾ. ಪುಷ್ಪಾ ಶಲವಡಿಮಠ”

  1. H K Yadahalli

    ನಿಮ್ಮ ಈ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ…ತಮ್ಮ ಸಂದೇಶ ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಮುಟ್ಟಲಿ

    1. Dr.Pushpavati Shalavadimath

      ಹಿರಿಯರಾದ ತಮ್ಮ ಸಲಹೆಗೆ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top