ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ಭಾರತಿ ಅಶೋಕ್

ಉ(ಪು)ಬ್ಬೆ ಮಳೆಯ ಸಮಯದಲ್ಲಿ ಸಿಗುವ ಅಣಬೆ

ಅಣಬೆ ಯಾರಿಗೆ ಗೊತ್ತಿಲ್ಲ !? ಎಲ್ಲರಿಗೂ ಗೊತ್ತಿರುವ ತರಕಾರಿ. ಈ ತರಕಾರಿಯನ್ನು ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ನೋಡುತ್ತಿದ್ದೇ(ನೆ)ವೆ, ಈಗ ಪಟ್ಟಣದಲ್ಲಿ ವಾಸಿಸುಸುತ್ತಿರುವುದರಿಂದ ಇದು ನಮಗೆ ಆಗಾಗ ಕಾಣ ಸಿಗುತ್ತಿದೆ. ಆದರೆ ನಾನು ಚಿಕ್ಕವಳಿದ್ದಾಗ  ಕೇವಲ ವರ್ಷಕ್ಕೆ ಒಮ್ಮೆ ನೋಡುತ್ತಿದ್ದೆ, ಇದು ನನ್ನ ಹಾಗೆ ಹಳ್ಳಿಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ಗೊತ್ತು‌.ಯಾಕೆಂದರೆ ಇದು ಮಳೆಗಾಲದ ಪುಬ್ಬ ಅಥವಾ ಉಬ್ಬಿ ಮಳೆ ಅದರಲ್ಲೂ ಗುಡುಗಿನಿಂದ ಕೂಡಿದ ಮಳೆ ಬೀಳುವಾಗ  ನಿಗಧಿತ  ಸ್ಥಳದಲ್ಲಿ ಭೂಮಿಯಿಂದ ಮೇಲೇಳುತ್ತಿದ್ದುದನ್ನು ನಾನು ಗಮನಿಸಿದ್ದೆ.

ಹೀಗೆ‌…
ವರ್ಷದಲ್ಲಿ ಒಂದು ಮಳೆಯಲ್ಲಿ ಮಾತ್ರ ಸಿಗುವ ಈ ತರಕಾರಿಗೆ ಅದೆಷ್ಟು ಕಾಯುತ್ತಿದ್ದೆ, ನನ್ನ ಚಿಕ್ಕಪ್ಪ ಕೂಡ ಆ ಮಳೆಗಾಗಿ ಕಾಯುತ್ತಿದ್ದರು,  ಮಳೆ ಬಂದು ನಿಂತಿತೆಂದರೆ ಒಂದೇ ಓಟ  ಕಪ್ಪು ಮಣ್ಣಿನ ಆ ಭೂಮಿಯ ಕಡೆ. ಒಮ್ಮೊಮ್ಮೆ ನನಗೆ ಈ ಮಳೆಯ ಲೆಕ್ಕಾಚಾರ  ಇರುತ್ತಿರಲಿಲ್ಲ. ಚಿಕ್ಕಪ್ಪ ತಾನುಟ್ಟ ದೋತ್ರದಲ್ಲಿಯೇ ಕಟ್ಟಿಕೊಂಡು ತಂದು ನನ್ನ ಕೈಲಿ ಕೊಟ್ಟು ನಿನ್ನವ್ವನಿಗೆ ಕೊಡು ಎಂದಾಗಲೇ ತಿಳಿಯುತ್ತಿತ್ತು.
ನನಗೋ ಖುಷಿನೋ ಖುಷಿ ಯಾಕೆಂದ್ರೆ ಆ ಅಣಬೆ ಪರಿಮಳ ಘಮ್ ಎನ್ನುತ್ತಿದ್ರೆ ನಾನು ಹಸಿಯಾಗೇ ಅರ್ಧ ಭಾಗ ತಿಂದು ಬಿಡುತ್ತಿದ್ದೆನಲ್ಲ.

ಪಾಪ!ಚಿಕ್ಕಪ್ಪನಿಗೆ ಅದೆಲ್ಲಾ ಗೊತ್ತಿರಲಿಲ್ಲ -ನಾನು ಹಾಗೆ ಅದನ್ನು ಹಸಿ ಹಸಿಯಾಗಿ ತಿನ್ನುವುದು. ಉಳಿದುದನ್ನು ಅವ್ವನ ಕೈಗಿತ್ತು ಕಾಯುವುದು ನನ್ನ ಮುಂದಿನ ಕೆಲಸ! ನನ್ನವ್ವ ಅಣಬೆ ಸಾರು ಮಾಡುವುದರಲ್ಲಿ ನಿಪುಣಳು.ಅವ್ವ ಅಂದು ಮಾಡುತ್ತಿದ್ದ ಅಣಬೆ ಸಾರಿನ ಘಮ ಈಗಲೂ ನನ್ನನ್ನು ಆವರಿಸಿದೆ. ಕಿತ್ತು ತಂದ ಅಣಬೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಬೇಕಾದ ಮಸಾಲೆ ತಯಾರಿಸಿಕೊಂಡು ಸೌದೆ ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಸುರಿದು ಮಾಸಾಲೆ ಹಾಕಿ ಬಾಡಿಸಿ ಅಣಬೆ ಹಾಕಿ ಕೆದಕುತ್ತಿದ್ದರೆ ನನಗೆ ಕಾತರ ಯಾವಾಗ ಕೊಡ್ತಾಳೋ ಅಂತಾ.

ಚಿಕ್ಕಪ್ಪನಿಗೆ ಮೊದಲು ನಂತರ ನಮಗೆ‌. ಅನ್ನ/ಜೋಳದ ರೊಟ್ಟಿಯ ಜೊತೆ  ಅದನ್ನು ಸವಿಯುತ್ತದ್ದರೆ…….
ಹೋಗ್ಲಿ ಬಿಡಿ, ಬಾಯಲ್ಲಿ ಬರೀ ನೀರು ತರಿಸಿಕೊಳ್ಳುವುದೇ ಆಯ್ತು ಈಗೆಲ್ಲಿ ಚಿಕ್ಕಪ್ಪ, ಅಣಬೆ, ಅವ್ವ? ಯಾರೂ ಇಲ್ಲ ಎಲ್ಲವೂ ಖಾಲಿ ಖಾಲಿ!!

ಇನ್ನೊಂದು ವಿಚಾರ ಖಂಡಿತ ಹೇಳ್ಲೇ ಬೇಕು  ಅದೇನಂದ್ರೆ ನಮ್ಮ ಊರಲ್ಲಿ ನಾನ್ ಇಷ್ಟೊತ್ತು ಬಾಯಲ್ಲಿ ನೀರು ತಂದ್ಕೊಂಡು ಹೇಳಿದ್ನೆಲ್ಲಾ ಅದೇ ಅಣಬೆ!  ಹ್ಞೂಂ ಅಣಬೆಯನ್ನು  ಅದೇನೋ ಮೇಲ್ಜಾತಿಯವರಂತೆ ಅವ್ರು ತಿನ್ತಾ ಇರ್ಲಿಲ್ಲ. ತರಕಾರಿ ತಿನ್ನೋದಕ್ಕೂ ಜಾತಿಗೂ ಎನ್ ಸಂಬಂಜ ಅಂತ ಆಗ ಗೊತ್ತಿರ್ಲಿಲ್ಲ! ಈಗ್ಲೂ ಗೊತ್ತಿಲ್ಲ ಅನ್ನಿ. ಇನ್ನೊಂದು ವಿಷ್ಯಾ ಏನಂದ್ರೇ.. ಮೇಷ್ಟ್ರು ಮನೆಯಲ್ಲಿ ಮಾತ್ರ ಈ ಇದನ್ನು ತಿನ್ತಾ ಇದ್ರು.ಅದಕ್ಕಾಗಿ ನನಗೆ ಅವ್ರನ್ನು ಕಂಡ್ರೇ ತುಂಬಾ ಪ್ರೀತಿ! ಅವ್ರೂ ಇಲ್ವೇ ಈಗ.

ಈಗ  ಅಲ್ಲ ಇಷ್ಟೊತ್ತು ಹೇಳಿದ್ನಲ್ಲ ಆ ಅಣಬೆ ಈಗ ನೋಡ್ಲಿಕ್ಕೂ ಸಿಕ್ತಿಲ್ಲ,  ಅದೆಲ್ಲಾ ಭೂಮಿಯ ಆಳದಿಂದ  ತಾನೇ ತಾನಾಗಿ ಬೆಳಿತಿದ್ದ ತರಕಾರಿ, ಅದನ್ನು ಕಿತ್ತಾಗಲೇ ಭೂಮಿಯಿಂದ ಮಣ್ಣಿನ ಘಮಲನ್ನು ಜೊತೆಗೆ ತರ್ತಾ ಇತ್ತು, ಅದರ ಪರಿಮಳವನ್ನು ಆಘ್ರಾಣಿಸುತ್ತಿದ್ದೆವು. ತಿಂದರೆ ಬಾಯ್ ತುಂಬಾ ಪರಿಮಳ.  ತುಂಬಾ ಮೆದು ಆದರೇ  ಎಷ್ಟೇ ಗಟ್ಟಿ ನೆಲವನ್ನೂ ಸೀಳಿಕೊಂಡು ಬರುವ ಗಟ್ಟಿತನವಿದೆ. ಇದರ ಆ ಗಟ್ಟಿತನ ಇತ್ತೀಚೆಗೆ ಗೊತ್ತಾದದ್ದು. ಹೋದ ವರ್ಷದ ಉಬ್ಬಿ ಮಳೆಯ ಸಂದರ್ಭದಲ್ಲಿ  ನಮ್ಮ ಕನ್ನಡ ವಿಶ್ವ ವಿದ್ಯಾಲಯದ ನುಡಿ ಕಟ್ಟಡದ ಮುಂಬಾಗದ ತಾರ್ ರಸ್ತೆಯಲ್ಲಿ ಭೂಮಿಯನ್ನು ಸೀಳಿಕೊಂಡು  ಮೇಲೆದ್ದು ಬಂದಾಗ. ಇದನ್ನು ಕಂಡ ನನ್ನ ಗೆಳತಿ ಅದರ ಗಟ್ಟಿತನವನ್ನೇ ತನ್ನ ಕಾವ್ಯಕ್ಕೆ  ವಸ್ತುವಾಗಿಸಿಕೊಂಡಳು.

ಎಲ್ಲಾ ಸರಿ ಆದರೆ ಈಗ ಎಲ್ಲಾ ಕಾಲದಲ್ಲೂ ಅಣಬೆ ಸಿಗುತ್ತಲ್ಲ ಆದರ ರುಚಿ(?) ಮಾತ್ರ ಕೇಳ್ಬೇಡಿ.ಯಾಕೆ ಅಂತೀರಾ ಅದರದ್ದೇ ಅಂತ  ರುಚಿ ಇದ್ರೆ ತಾನೆ ಹೇಳೋದಕ್ಕೆ, ಅದೇನೊಪ್ಪಾ ಜನ ಆ ಪಾಟಿ ತಿನ್ತಾರೆ ಅದನ್ನ. ಒಮ್ಮೇ ನಾನು ಹೋಟಲಿಂದ ತಂದು ತಿನ್ನುವ ಪ್ರಯತ್ನ ಮಾಡಿದ್ದೆ ಆದ್ರೇ ಅದು ಹಲ್ಲಿಗೆ ಸಿಗದೇ ಜಾರಿಕೊಂಡು ಹೊಟ್ಟೆ ಸೇರಿದಾಗಿನಿಂದ ಆ ಪ್ರಯತ್ನ ಮಾಡಿಲ್ಲ, ಮಾಡಲ್ಲ.


ಭಾರತಿ ಅಶೋಕ್

About The Author

Leave a Reply

You cannot copy content of this page

Scroll to Top