ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಆನ್ಲೈನ್ ಹಾಲಾಹಲ.!

ಇದು ಪ್ರಸ್ತುತ ವರ್ತಮಾನದ ಬದುಕಿನ ದುರಂತಗಳ ಕವಿತೆ. ಪ್ರಸಕ್ತ ವಿದ್ಯಾಮಾನಗಳಿಂದ ಜರ್ಜರಿತ ಜೀವನಗಳ ವಿಷಾದದ ಭಾವಗೀತೆ. ಇಂದಿನ ಈ ಮಾಲು, ಆನ್ಲೈನ್ ಸಂಸ್ಕೃತಿಗಳು ಸಮಾಜದ ಅಂತಃಕರಣ ಸತ್ವಗಳನ್ನೇ ಕಲುಷಿತಗೊಳಿಸಿ, ಸಮಾನತೆ ಸಮತೆಗಳ ತತ್ವಗಳನ್ನೇ ನಾಶವಾಗಿಸುತ್ತಿವೆ. ಆಧುನೀಕತೆಯ ಭ್ರಮೆಯಲ್ಲಿ ಅಂಧರಾಗುತ್ತಿದ್ದೇವೆ. ಉನ್ನತಿಯ ಉನ್ಮಾದದಲ್ಲಿ ಸಂಕುಚಿತರಾಗುತ್ತಿದ್ದೇವೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಆನ್ಲೈನ್ ಹಾಲಾಹಲ.!

ಬರಲಾರಂಭಿಸಿದ ಮೇಲೆ..
ಆನ್ಲೈನ್‍ನಲ್ಲಿ ಮನೆಮನೆಗೆ
ನೇರ ರೆಡಿಮೇಡ್ ಬಟ್ಟೆ
ಬಿತ್ತು ಬಟ್ಟೆ ಹೊಲಿವವರ
ಹೊಟ್ಟೆಗೆ ತಣ್ಣೀರು ಬಟ್ಟೆ.!

ದೊರೆಯಲಾರಂಭಿಸಿದ ಮೇಲೆ
ಆನ್ಲೈನಿನಲ್ಲಿ ತಿಂಡಿ ತೀರ್ಥ
ಹಾದಿಬೀದಿಯ ಹೋಟೆಲಿಗೆ
ಜಡಿದಂತಾಯ್ತು ಬೀಗದ ಬಲೆ
ಬಾಣಸಿಗರ ಬದುಕು ಮೂರಾಬಟ್ಟೆ.!

ನೋಡಲಾರಂಭಿಸಿದ ಮೇಲೆ
ಆನ್ಲೈನಿನಲ್ಲಿ ಈಗ ಚಲನಚಿತ್ರ
ಖಾಲಿಯಾಗಿ ಚಿತ್ರಮಂದಿರ
ಎಳೆಯಿತು ಮಾಲಿ ಮಾಲಿಕರ
ಹಣೆಗೆ ಮೂರ್ನಾಮದ ಪಟ್ಟೆ.!

ಸಿಗಲಾರಂಭಿಸಿದ ಮೇಲೆ
ಆನ್ಲೈನಿನಲ್ಲಿ ವಿಧವಿಧ ವಸ್ತ್ರ
ಮುಚ್ಚಿ ಬಟ್ಟೆಯಂಗಡಿಗಳು
ಚಿಕ್ಕ ಪುಟ್ಟ ವರ್ತಕರುಗಳ
ಬಾಳಿಗೆ ದಿನವೂ ಖಾಲಿತಟ್ಟೆ.!

ತರಿಸಲಾರಂಭಿಸಿದ ಮೇಲೆ
ಆನ್ಲೈನಿನಲ್ಲಿ ದಿನಸಿ ವಸ್ತು ಎಲ್ಲ
ಕದಬಿತ್ತು ಚಿಲ್ಲರೆಯಂಗಡಿಗಳಿಗೆ
ದಿವಾಳಿಯಾಗಿ ವ್ಯಾಪಾರಿಗಳೆಲ್ಲ
ಒಡೆದಿದೆ ಕಣ್ಣೀರಿನ ಕಟ್ಟೆ.!

ಆರಂಭವಾದ ಮೇಲೆ ಕಡೆಗೆ
ಊರಿನಲ್ಲಿ ದೊಡ್ಡ ಮಾಲು
ಚಿಕ್ಕ ಪುಟ್ಟ ವ್ಯಾಪಾರ ಮಳಿಗೆ
ಎಳೆದುಕೊಂಡವು ಬಾಗಿಲು
ಉಳ್ಳವರೆ ತಿನ್ನುತಿಹರು ಬರಗೆಟ್ಟು.!

ಮರೆಯಾಗುತ ಮುಗಿಯುತಿದೆ
ಹಂಚಿ ತಿನ್ನುವ ಮಹಾಸಂಸ್ಕೃತಿ
ಮದದಿ ಮಾನಗೆಟ್ಟು ಮೆರೆದಿದೆ
ದೋಚಿ ತಿನ್ನುವ ಹೀನವಿಕೃತಿ.!
ಕುಸಿದಿದೆ ಮಾನವೀಯತೆ ನೆಲೆಗಟ್ಟು.!


ಎ.ಎನ್.ರಮೇಶ್. ಗುಬ್ಬಿ.

About The Author

1 thought on “ಎ.ಎನ್.ರಮೇಶ್. ಗುಬ್ಬಿ. ಕವಿತೆ-ಆನ್ಲೈನ್ ಹಾಲಾಹಲ.!”

  1. ವಾಸ್ತವ ಪರಿಸ್ಥಿತಿ ಬಿಂಬಿಸುವ ಕವನ ಚೆನ್ನಾಗಿ ಮೂಡಿ ಬಂದಿದೆ.
    ಹಮೀದಾ ಬೇಗಂ. ಸಂಕೇಶ್ವರ.

Leave a Reply

You cannot copy content of this page

Scroll to Top