ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಭಿಷೇಕ ಬಳೆ ಮಸರಕಲ್

ಅವ್ವನಿಗೆ ರಜೆ ಇಲ್ಲ….

ಅವ್ವನಿಗೆ ರಜೆ ಇಲ್ಲ ಮತ್ತು ಅವ್ವ ಬಂದ್ ಮಾಡುವುದಿಲ್ಲ
ಹೌದು

ಎರಡನೇ ಮತ್ತು ನಾಲ್ಕನೇ ಶನಿವಾರವಾಗಲಿ ,
ಭಾನುವಾರವಾಗಲಿ
ಸಾರ್ವತ್ರಿಕ ರಜೆಯಾಗಲಿ
ಅವ್ವನಿಗೆ ಇಲ್ಲವೇ ಇಲ್ಲ
ಅವ್ವನದು ಎಂದಿಗೂ
ದಣಿವರಿಯದ ದುಡಿತ
ಪಗಾರವಿಲ್ಲದ ದಗದ

ಇಷ್ಟು ವರ್ಷದಲ್ಲಿ ಅವ್ವ ರಜೆ ಮಾಡಿದ್ದು
ತೀರಾ ಹುಷಾರು ತಪ್ಪಿದಾಗ ಮಾತ್ರ
ಅದು ಎರಡು – ಮೂರು ದಿನ
ಮತ್ತೆ ಅವ್ವ ಆರಾಮಾಗಿ ಬಂದಳು ಎಂದಿನಂತೆ ಅದೇ ಲವಲವಿಕೆಯಿಂದ

ಅವ್ವ
ಸೂರ್ಯನಿಗೆ ಅಲಾರಾಮು
ಚಂದಿರನಿಗೆ ಲಾಲಿ ಹಾಡು
ಹೊತ್ತು ಹುಟ್ಟುವ ಮೊದಲೇ ಮುಂಜಾನೆ ಅಂಗಳಕ್ಕೆ ನೀರಾಕಿ ಕಸ ಬಳಿದು ರಂಗೋಲಿ ಚೆಂದವಾಗಿ ಹಾಕುವುದರಿಂದ ಹಿಡಿದು ರಾತ್ರಿ ಅಪ್ಪನ ಗಂಗಳದಲ್ಲಿ ಊಣ್ಣೋವರೆಗೂ ಪುರುಸೊತ್ತಿಲ್ಲ
ಊಂಡ ನಂತರ
ಆಗ ವಿಶ್ರಾಂತಿ
ಅವ್ವನಿಗೆ
ಎಂಟು ತಾಸುಗಳ ಐದಂಕಿ ಸಂಬಳದ ಡ್ಯೂಟಿಯಲ್ಲ ಅವ್ವನದು

ಸಂಬಳ ಹೆಚ್ಚಳಕ್ಕೆ
ಇತರೆ ಅಗತ್ಯ ಬೇಡಿಕೆಗೆ ಸಂಬಂಧಿಸಿದಂತೆ ಬಂದ್ , ಪ್ರತಿಭಟನೆಗಳು ಆಗುತ್ತವೆ ಆಗುತ್ತಲೇ ಇರುತ್ತವೆ
ಆದರೆ
ಅವ್ವ
ಎಂದೂ ಅಡಿಗೆ ಮನೆಯ ಬಾಗಿಲನ್ನು ಬಂದ್ ಮಾಡುವುದಿಲ್ಲ
ಬೀಗ ಹಾಕಿ
ಪ್ರತಿಭಟಿಸುವುದಿಲ್ಲ


ಅಭಿಷೇಕ ಬಳೆ ಮಸರಕಲ್

About The Author

Leave a Reply

You cannot copy content of this page

Scroll to Top