ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕಮಹಾದೇವಿ ಜಯಂತಿ ವಿಶೇಷ

ಉರಿಕೊಂಡ ಕರ್ಪೂರ

ಡಾ. ಪುಷ್ಪಾ ಶಲವಡಿಮಠ

ತನುವಿಗೆ ಸೀರೆ ಭಾರವಾಯಿತೋ!
ಅರಿವಿನ ಮನ ಬೇಸರಿಸಿತೋ!
ಸೀರೆಯ ಸೆಳೆದು ಬಿಸುಟು ಹೊರಟೆ
ಸ್ವಾಭಿಮಾನವನೇ ಹೊದ್ದು
ತನುವಿನಂತೆ ಮನವೂ ಬತ್ತಲೆಯಾಯಿತು
ಬಯಲಾಯಿತು………

ಬಯಲ ಆಲಯಕೆ ತೆರೆದುಕೊಂಡೆ ನೀನು
ಅನಂತತೆಯ ಹುಡುಕಿ ಹೊರಟೆ
ಸೀರೆಯ ಎಳೆದಾಡುವ ಮರುಳಾಟ ಕಡೆಗಣಿಸಿ

ಪತಿಯ ಧಿಕ್ಕರಿಸಿ ಹೊರಟ ಗಯ್ಯಾಳಿ
ಲಜ್ಜೆಗೆಟ್ಟ ಮನೆಹಾಳಿ
ಬಿರುದು ಬಾವಲಿಗಳ ಹೊತ್ತು ಹೊರಟೆ
ಹಸಿವು ತೃಷೆ ನಿದ್ರೆಗಳ ನಿಲ್ಲಿಸಿ
ಅವಸರದ ಓಲೆಯನು ಹಿಡಿದು ಹೊರಟೆ

ನಿನ್ನ ಬದ್ಧತೆಗೆ ನೀನು ತುಡಿಯುವಾಗ
ಗಂಟಿಕ್ಕಿದ್ದ ನೂರಾರು ಹುಬ್ಬುಗಳು
ಸಾವಿರಾರು ಪ್ರಶ್ನೆಗಳು……..
ಸಕಲವನೂ ಸಲೀಸಾಗಿ ತೊರೆದು
ಅವನು ಬುದ್ಧನಾಗಬಹುದು
ಬದ್ಧತೆಗೆ ನೀನು ಎದೆ ಸೆಟಿಸಿ ನಿಂತಾಗ
ಪುಂಖಾನುಪುಂಖ ಶರಗಳ ಧಾಳಿ
ಚುಚ್ಚಿದರೇನು?! ಮೆಚ್ಚಿದರೇನು?!
ಎಲ್ಲಾ ತೊರೆದವಳಿಗೆ…….

ಮೀಸಲು ದೇಹಕ್ಕೆ
ಹಸಿದು ಬರುವ ನೊಣಗಳು
ಹೆಣ್ತನಕ್ಕೆ ಹಂಬಲಿಸಿದ ಮನಗಳು
ಮಾಂಸ ಮುದ್ದೆಯೊಳಗಿನ
ನೆಣವನ್ನೆಲ್ಲಾ ಕರಗಿಸಿಬಿಟ್ಟೆ
ತನು ಮನ ಕದಳಿಯಾಗಿ
ಕದಳಿಯ ಗೆದ್ದು ಕದಳಿ ವನದಲಡಗಿದೆ
ನೀನು ಉರಿಕೊಂಡ ಕರ್ಪೂರ….

ಅನುಭವ ಮಂಟಪವದು
ನಿನ್ನ ಪರೀಕ್ಷೆಯ ಅಗ್ನಿಕುಂಡ
ಪ್ರಭುವೊಡ್ಡಿದ ನಿಗಿನಿಗಿ ಕೆಂಡದಲ್ಲಿ
ನೀನು ಮಾತ್ರ ಪುಟಕಿಟ್ಟ ಚಿನ್ನ
ಸಾವ ಕೆಡುವ ಗಂಡರನ್ನೆಲ್ಲ
ಒಲೆಯೊಳಗಿಕ್ಕಿದ ನಿನಗೆ
ಬಹು ಪರಾಕ್ ಬಹು ಪರಾಕ್

ನಾಮದಲ್ಲಿ ಹೆಂಗೊಸಾದಡೇನು?!
ಭಾವಿಸಲು ಗಂಡುರೂಪ ನಿನ್ನದು!
ಅರಮನೆಯಿತ್ತು ವೈಭೋಗವಿತ್ತು!
ರೂಪು ಯೌವನವಿತ್ತು….!
ಎಲ್ಲವನ್ನೂ ತೊರೆಯುವುದು ಬೇಕಿತ್ತೇ?!
ಲೋಕದಂತೆ ತಣ್ಣಗಿರಬಹುದಿತ್ತು…..!

ಸುಮ್ಮನಿರಲಿಲ್ಲ ನೀನು ಛಲಗಾರ್ತಿ!
ಮಿಕ್ಕುಮೀರಿ ಹೋಹನ ಬೆಂಬತ್ತಿ
ಕೈ ಹಿಡಿದ ಅನುಪಮ ಸಾಧಕಿ
ಸಾವಿಲ್ಲದ ಕೇಡಿಲ್ಲದ ಚಲುವನಿಗಾಗಿ
ಹಂಗಿನರಮನೆಯ ತೊರೆದಾಕೆ
ಪ್ರೀತಿಯಿಂದಲೇ ಜಗವ ಜಯಿಸಿದಾಕೆ
ನೀನು ಉರಿಕೊಂಡ ಕರ್ಪೂರ….


ಡಾ. ಪುಷ್ಪಾ ಶಲವಡಿಮಠ

About The Author

10 thoughts on “”

  1. Lalita Prabhu Angadi

    ಅಕ್ಕನ ಅಂತರಾತ್ಮಕೆ ತಟ್ಟಿದ ಅಪ್ರತಿಮ ಕವನ ಮೆಡಮ್ superb

    1. Dr.Pushpavati Shalavadimath

      ಮೇಡಂ ನಿಮ್ಮ ಅಕ್ಕನಿಗೆ ಓಲೆ ಕವಿತೆಯೂ ಚನ್ನಾಗಿದೆ. ಸದಾ ತಮ್ಮ ಪ್ರೀತಿಗೆ ಧನ್ಯವಾದಗಳು

  2. Nagaraja R G halli

    ಅಕ್ಕನ ಕುರಿತ ಅನೇಕ ಕವಿತೆಗಳನ್ನು ಓದಿರುವೆ. ಪುಷ್ಪಾ ಅವರ ಈ ಕವಿತೆ, ಅಕ್ಕನ ಅಲೌಕಿಕ ಬದುಕಿನ ಅನಾವರಣ ಮಾಡುವುದರ ಜೊತೆಗೆ, ಅನುಭಾವಿ ಅಲ್ಲಮನ ಸಮ್ಮುಖದ ಅನುಭವ ಮಂಟಪದ ಘಟನಾವಳಿಯನ್ನು ಚಿತ್ರಿಸುತ್ತದೆ. ವಚನಕಾರರ ಬಗೆಗಿನ ಕಾವ್ಯಾಂಜಲಿಗೆ ಉತ್ತಮ ಸೇರ್ಪಡೆ.
    *ಆರ್ ಜಿ*

    1. Dr.Pushpavati Shalavadimath

      ಓದಿ ಅರ್ಥಪೂರ್ಣ ವಿಚಾರಗನ್ನು ಅಭಿವ್ಯಕ್ತಿಸಿದ್ದಕ್ಕೆ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top