ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್ ಜುಗಲಬಂದಿ

ನಯನ ಭಟ್

ವಿಜಯಪ್ರಕಾಶ್ ಸುಳ್ಯ.

ಜುಲ್ ಕಾಫಿಯಾ ಗಜಲ್


ಕಡು ಕಂಬನಿಯ ಧಗೆಯನು ತಣಿಸಿ ಕನಸುಗಳ ಹೆಣೆಯಬೇಕಿದೆ ಇನ್ನು
ಬಡ ಭಾವಗಳ ಬವಣೆಯನು ಅರಿತು ಐಸಿರಿಗಳ ಒಲಿಸಬೇಕಿದೆ ಇನ್ನು

ಬದುಕಿನ ಸಾರೋಟಕೆ ಸಂಕ್ಷೋಭೆಗಳ ನಂಟು ಕಟ್ಟಿಟ್ಟ ಬುತ್ತಿಯಿದು ದಿಟ
ಚರ್ಯೆಗಳ ಮರ್ಜಿಯೊಳು ಹೆಜ್ಜೆಗಳ ಸಂಜ್ಞೆಗಳ ಅರಿಯಬೇಕಿದೆ ಇನ್ನು

ಒಗಟುಗಳ ಸಿಕ್ಕುಗಳಿಗೆ ನೆಚ್ಚುವುದೇಕೆ ಅಚಿಂತ್ಯವಾಗಿರಲು ಬಾಳ್ವೆಯ ಚಕ್ಕಡಿ
ಅಂತರಾತ್ಮದ ಉದ್ಭೋದಕೆ ನತಿಸಿ ಸ್ಮಿತಾಂಶುಗಳ ಜತ್ತಗೊಳಿಸಬೇಕಿದೆ ಇನ್ನು

ಕ್ಷೋಣಿಯ ಚಿರಂತನ ಪರಿಭ್ರಮಣೆಯಲಿ ಪಲ್ಲಟಗಳಿಗೆ ಪಲ್ಲವಗಳ ಪರ್ವವು
ನಿಯತಿಯ ನಿಯಮಿತ ಕರ್ಮದೊಳು ಕ್ಷಣಿಕಾಘಾತಗಳ ಸೈರಿಸಬೇಕಿದೆ ಇನ್ನು

ಸಿಹಿನೀರ ಮಾರ್ಜನದಲೇ ಅಸುವಿಗಕ್ಕರೆಯ ಸವಿಸಬೇಕೆಂದರೆ ಹೇಗೆ ನಯನ
ಹದುಳತೆಯ ತಪದಿ ಮನವ ಮಿಳಿಸಿ ವಿಜಯರವಗಳ ನುಡಿಸಬೇಕಿದೆ ಇನ್ನು.

************

ನಯನ ಭಟ್ .

ಜುಲ್ ಕಾಫಿಯಾ ಗಝಲ್

ಸುಡು ಛಾತಿಯ ತೃಷೆಯನು ತ್ಯಜಿಸಿ ನಾಳೆಗಳ ರೂಪಿಸಬೇಕಿದೆ ಇನ್ನು
ಸುಪ್ತ ಭಾವದ ನುಡಿಯನಾಲಿಸಿ ಮನಕತಗಳ ಮರೆಯಬೇಕಿದೆ ಇನ್ನು

ಎದೆಗುದಿಯ ನಡುವೆ ಸಾಧನೆಯ ಶಿಖರದ ಸ್ವಾಧೀನವೊಂದು ಭ್ರಮೆ
ಮನೋಗತಕೆ ಮನ್ನಣೆಯನ್ನಿತ್ತು ಭರವಸೆಗಳ ಪ್ರಭವಿಸಬೇಕಿದೆ ಇನ್ನು

ತಮಂಧದ ಮಬ್ಬಿನಲ್ಲಿ ಎಡಪುತಿಹುದೇ ವಾಂಛಿತ ಬದುಕಿನ ನಡಿಗೆ
ಅರಕೆಗಳನ್ನು ಅವಗಣಿಸುತ ಅವಕಾಶಗಳ ಅಧಿಕರಿಸಬೇಕಿದೆ ಇನ್ನು

ಅನುಕ್ಷಣವು ಕ್ಷೀಣಿಸುತ್ತಿದೆ ಅಸುವು ಭವಸಾಗರದ ಅಲೆಗಳಿಗೆ ಸಿಲುಕಿ
ಅಭಿಭವವನು ಅನುಭವಿಸಿದಲ್ಲೇ ಪ್ರಶಂಸೆಗಳ ಪಡೆಯಬೇಕಿದೆ ಇನ್ನು

ಗಮನಿಸಿ ಗಮ್ಯದೆಡೆಗೆ ನಡೆಯದಿರೆ ನಿನಗೊಲಿಯುವುದೇ ವಿಜಯ
ಹಿತದ ಕನವರಿಕೆಯಲಿ ಸೊರಗಿದ ನಯನಗಳ ತಣಿಸಬೇಕಿದೆ ಇನ್ನು.


ವಿಜಯಪ್ರಕಾಶ್ ಸುಳ್ಯ

About The Author

Leave a Reply

You cannot copy content of this page

Scroll to Top